
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಹೆಚ್ಚಿದ ಅಪಸ್ವರ: ಈಗ 'ಸಮನ್ವಯ' ಕಸರತ್ತು..!
ಬಿಜೆಪಿ-ಜೆಡಿಎಸ್ ಸಿದ್ಧಾಂತಗಳಲ್ಲಿ ಭಿನ್ನತೆಗಳಿದ್ದರೂ, ಕಾಂಗ್ರೆಸ್ ವಿರೋಧಿ ನೆಲೆಗಟ್ಟಿನಲ್ಲಿ ಒಂದಾಗಿವೆ. ಆದರೆ, ಸ್ಥಳೀಯ ಮಟ್ಟದಲ್ಲಿ ನಾಯಕತ್ವದ ಪ್ರಶ್ನೆಯಿಂದಾಗಿ ಭಿನ್ನಾಭಿಪ್ರಾಯಗಳು ತಲೆದೋರುತ್ತಿವೆ.
2024ರ ಲೋಕಸಭಾ ಚುನಾವಣೆಯಲ್ಲಿ ಮೂಡಿಬಂದ ಬಿಜೆಪಿ-ಜೆಡಿಎಸ್ ಮೈತ್ರಿಯ ಅಡಿಪಾಯಕ್ಕೆ ಇತ್ತೀಚಿನ ದಿನಗಳಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಸೃಷ್ಟಿಯಾಗಿರುವ ಗೊಂದಲಗಳು, ಬಹಿರಂಗ ಹೇಳಿಕೆಗಳು ಮತ್ತು ಆಂತರಿಕ ಶೀತಲ ಸಮರವು ಧಕ್ಕೆ ತರುವ ಭೀತಿ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಾಯಕರು ಸಮನ್ವಯ ಸಭೆ ನಡೆಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿ-ಜೆಡಿಎಸ್ ಸಿದ್ಧಾಂತಗಳಲ್ಲಿ ಭಿನ್ನತೆಗಳಿದ್ದರೂ, ಕಾಂಗ್ರೆಸ್ ವಿರೋಧಿ ನೆಲೆಗಟ್ಟಿನಲ್ಲಿ ಒಂದಾಗಿವೆ. ಆದರೆ, ಸ್ಥಳೀಯ ಮಟ್ಟದಲ್ಲಿ ನಾಯಕತ್ವದ ಪ್ರಶ್ನೆಯಿಂದಾಗಿ ಭಿನ್ನಾಭಿಪ್ರಾಯಗಳು ತಲೆದೋರುತ್ತಿವೆ. ಮುಂಬರುವ ಗ್ರೇಟರ್ ಬೆಂಗಳೂರು (ಜಿಬಿಎ), ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸೀಟು ಹಂಚಿಕೆ ದೊಡ್ಡ ಸವಾಲಾಗಿದೆ.
ಹಳೆ ಮೈಸೂರು ಭಾಗದಲ್ಲಿ ಎರಡೂ ಪಕ್ಷಗಳೂ ಬಲಿಷ್ಠವಾಗಿರುವುದರಿಂದ, ಕ್ಷೇತ್ರ ಅಥವಾ ವಾರ್ಡ್‌ಗಳನ್ನು ಬಿಟ್ಟುಕೊಡುವ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ನಾಯಕರು ಒಬ್ಬರ ಪಕ್ಷದ ಆಂತರಿಕ ವಿಚಾರದಲ್ಲಿ ಇನ್ನೊಬ್ಬರು ಹಸ್ತಕ್ಷೇಪ ಮಾಡುವುದು ಮತ್ತು ಮಾಧ್ಯಮಗಳ ಮುಂದೆ ಪರಸ್ಪರ ವಿರುದ್ಧವಾಗಿ ಮಾತನಾಡುವುದು ಮೈತ್ರಿಗೆ ಮುಜುಗರ ತರುತ್ತಿದೆ. ಜೆಡಿಎಸ್ ತನ್ನ ಪ್ರಾದೇಶಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಬಿಜೆಪಿ ರಾಜ್ಯದಲ್ಲಿ ಮರಳಿ ಅಧಿಕಾರ ಹಿಡಿಯಲು ಜೆಡಿಎಸ್ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿದೆ. ಈ ಪರಸ್ಪರ ಅವಲಂಬನೆಯೇ ಸಂಘರ್ಷಕ್ಕೂ ಕಾರಣವಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಸಮನ್ವಯ ಸಭೆಯ ಮಹತ್ವ
ಪಕ್ಷಗಳ ನಡುವೆ ಮೂಡಿರುವ ಬಿರುಕನ್ನು ಹೋಗಲಾಡಿಸಲು ಬೆಂಗಳೂರಿನಲ್ಲಿ ಸಮನ್ವಯ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಣಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ಪಕ್ಷದ ಆಂತರಿಕ ನಿರ್ಧಾರಗಳು ಅಥವಾ ನಾಯಕತ್ವದ ಬದಲಾವಣೆಗಳ ಬಗ್ಗೆ ಮತ್ತೊಂದು ಪಕ್ಷದವರು ಟೀಕೆ ಮಾಡಬಾರದು ಎಂಬ ಲಕ್ಷ್ಮಣ ರೇಖೆ ಎಳೆಯುವುದು ಈ ಸಭೆಯ ಮುಖ್ಯ ಉದ್ದೇಶ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬೀದಿಗಿಳಿದು ಹೋರಾಡುವಾಗ ಉಭಯ ಪಕ್ಷಗಳು ಒಗ್ಗಟ್ಟಿನಿಂದ ಕಾಣಿಸಿಕೊಳ್ಳುವಂತೆ ತಂತ್ರ ರೂಪಿಸುವುದು. ರಾಜ್ಯಮಟ್ಟದ ನಾಯಕರ ನಡುವೆ ಇರುವ ಸಂವಹನ ಕೊರತೆಯನ್ನು ನೀಗಿಸಲು ಜಿಲ್ಲಾವಾರು ಸಮನ್ವಯ ಸಮಿತಿಗಳನ್ನು ರಚಿಸುವ ಸಾಧ್ಯತೆ ಇದೆ ಎಂದುಹೇಳಲಾಗಿದೆ.
ಜೆಡಿಎಸ್-ಬಿಜೆಪಿ ನಾಯಕರ ಹೇಳಿಕೆಗಳು
ಬಿಜೆಪಿ-ಜೆಡಿಎಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ವಾಸ್ತವಿಕ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ನಾರಾಯಣಗೌಡ, ಪ್ರೀತಂಗೌಡ ಸೇರಿದಂತೆ ಇತರರು ನೀಡುತ್ತಿರುವ ಹೇಳಿಕೆಗಳು ಒಂದೆಡೆಯಾದರೆ, ಜೆಡಿಎಸ್ ಮುಖಂಡರಾದ ಹರೀಶ್‌ಗೌಡ, ಎ.ಮಂಜು ಸೇರಿದಂತೆ ಇತರರ ಹೇಳಿಕೆಗಳು ಮತ್ತೊಂದೆಡೆ ಮೈತ್ರಿಯ ಆಂತರಿಕ ಬಿಕ್ಕಟ್ಟಿನ ಕೇಂದ್ರಬಿಂದುವಾಗಿವೆ. ಮಾಜಿ ಸಚಿವ ನಾರಾಯಣಗೌಡ ಕೆ.ಆರ್. ಪೇಟೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಅವರಿಗೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತಂಕವಿದೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಬಾರದು. ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಹೀಗಾಗಿ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂಬುದು ಅವರ ವಾದವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಬಾರದು. ಶೇ. 50ರಷ್ಟು ಸ್ಥಾನಗಳನ್ನು ಬಿಜೆಪಿಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ವಿರುದ್ಧ ಟೀಕೆ, ಜೆಡಿಎಸ್ ಅಸಮಾಧಾನ
ಇನ್ನು, ಮಾಜಿ ಶಾಸಕ ಪ್ರೀತಂಗೌಡ ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಮೊದಲಿನಿಂದಲೂ ಆಕ್ರಮಣಕಾರಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಸತತವಾಗಿ ಸೋತಿರುವವರಿಗೆ ಅಭ್ಯರ್ಥಿಗಳನ್ನು ಘೋಷಿಸುವ ಅಧಿಕಾರವಿಲ್ಲ ಎಂದು ಜೆಡಿಎಸ್ ಯುವಘಟಕ ರಾಜ್ಯ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಜೆಡಿಎಸ್ ನಾಯಕರನ್ನು ಕೆರಳಿಸುವಂತೆ ಮಾಡಿದೆ.
ಜೆಡಿಎಸ್ ಮುಖಂಡ ಸಾ.ರಾ. ಮಹೇಶ್, ಬಿಜೆಪಿಯ ಪ್ರೀತಂಗೌಡ ಅವರು ಮೈತ್ರಿಗೆ ಕಂಟಕವಾಗಿದ್ದಾರೆ. ಅವರು ಹಾಸನದಲ್ಲಿ ಜೆಡಿಎಸ್ ಸೋಲಿಸಲು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರೆ, ಹರೀಶ್‌ಗೌಡ, ಜೆಡಿಎಸ್ ಬೆಂಬಲದಿಂದ ಬಿಜೆಪಿಗೆ ಅನುಕೂಲವಾಗಿದೆ. ಜೆಡಿಎಸ್ ಪ್ರಭಾವ ಇರುವ ಹಳೆ ಮೈಸೂರು ವ್ಯಾಪ್ತಿಯಲ್ಲಿ ಬಿಜೆಪಿ ಸಂಸದರು ಗೆಲ್ಲಲು ಕಾರಣ ಜೆಡಿಎಸ್. ಇಲ್ಲವಾದರೆ ಉತ್ತರ ಕರ್ನಾಟಕದಲ್ಲಿ ನೆಲಕಚ್ಚಿದಂತೆ ದಕ್ಷಿಣ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಅಲೆಯ ಬಿಜೆಪಿ ಎದುರು ತತ್ತಿರಿಸುತ್ತಿತ್ತು ಎಂದು ಹೇಳಿದ್ದರು. ಇಂತಹ ಹೇಳಿಕೆಗಳು ಉಭಯ ಪಕ್ಷಗಳ ನಡುವೆ ಭಿನ್ನಮತ ಮೂಡಲು ಕಾರಣವಾಗಿವೆ. ಅಲ್ಲದೇ, ಸಣ್ಣದಾದ ಕಂದಕವು ರಾಜ್ಯಮಟ್ಟದಲ್ಲಿ ಮೈತ್ರಿಯಲ್ಲಿ ಬಿರುಕಿಗೆ ಪೂರಕವಾಗಲಿದೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಲು ಸಮನ್ವಯ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ಗೆ ರಾಜಕೀಯ ಅಸ್ತ್ರ
ಬಿಜೆಪಿ-ಜೆಡಿಎಸ್ ನಡುವಿನ ಕಿತ್ತಾಟವು ಕಾಂಗ್ರೆಸ್‌ಗೆ ವರದಾನವಾಗಿ ಪರಿಣಮಿಸಿದೆ. ಪ್ರತಿಪಕ್ಷಗಳಲ್ಲಿಯೇ ಒಮ್ಮತವಿಲ್ಲದಿದ್ದರೆ, ಅವರು ಆಡಳಿತ ಪಕ್ಷವನ್ನು ಹೇಗೆ ಪ್ರಶ್ನಿಸುತ್ತಾರೆ? ಎಂಬ ಲೆಕ್ಕಾಚಾರವಾಗಿದೆ. ಒಂದು ವೇಳೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಈ ಗೊಂದಲ ಮುಂದುವರಿದರೆ, ಪ್ರತಿಪಕ್ಷದ ಮತಗಳು ವಿಭಜನೆಯಾಗಿ ಕಾಂಗ್ರೆಸ್‌ಗೆ ಸುಲಭ ಜಯ ಸಿಗುವ ಸಾಧ್ಯತೆ ಹೆಚ್ಚಿದೆ. ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಸುಲಭವಲ್ಲ.
ಅಲ್ಲಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಮತ್ತು ಸ್ಥಳೀಯ ಪೈಪೋಟಿ ಮುಖ್ಯವಾಗಿರುತ್ತದೆ. ಹಲವು ದಶಕಗಳಿಂದ ಗ್ರಾಮ ಮಟ್ಟದಲ್ಲಿ ಪರಸ್ಪರ ಕಾದಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಈಗ ಒಟ್ಟಾಗಿ ಕೆಲಸ ಮಾಡುವುದು ಕಷ್ಟಕರವಾಗಿದೆ. ಸಮನ್ವಯ ಸಭೆಯಲ್ಲಿ ಈ ಕೆಳಮಟ್ಟದ ಕಾರ್ಯಕರ್ತರ ಮನವೊಲಿಸುವ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಇಲ್ಲದಿದ್ದರೆ ಮೇಲ್ಮಟ್ಟದಲ್ಲಿ ನಾಯಕರು ಕೈಕುಲುಕಿದರೂ, ಕೆಳಮಟ್ಟದಲ್ಲಿ ಪರಸ್ಪರ ಕಾಲೆಳೆಯುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.
ಜೆಡಿಎಸ್ ಪಕ್ಷದ ಹಿರಿಯ ಮುಖಂಡರೊಬ್ಬರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ರಾಜ್ಯಮಟ್ಟದಲ್ಲಿ ಮಾಡಿಕೊಳ್ಳುವ ಮೈತ್ರಿ ಸ್ಥಳೀಯವಾಗಿ ಕೆಲಸ ಮಾಡುವುದಿಲ್ಲ. ರಾಜ್ಯದ ಹಲವು ಕಡೆಗಳಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ಉಭಯ ನಾಯಕರು ಕೈ ಜೋಡಿಸುವುದು ಹೇಗೆ ಸಾಧ್ಯ? ಮೊದಲಿನಿಂದಲೂ ಎರಡು ಪಕ್ಷಗಳ ನಾಯಕರ ನಡುವೆ ಜಿದ್ದಾಜಿದ್ದಿ ಇರುವಾಗ ರಾಜ್ಯಮಟ್ಟದ ನಾಯಕರು ಮುಂದಿನ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕೈ ಜೋಡಿಸುವಂತೆ ಹೇಳಿದರೂ ಮುಸುಕಿನ ಗುದ್ದಾಟಕ್ಕೆ ಕಾರಣವಾಗಲಿದೆ. ಸಹಜವಾಗಿ ಇದು ಕಾಂಗ್ರೆಸ್‌ಗೆ ಲಾಭವಾಗಲಿದೆ. ಹೀಗಾಗಿ ಮೈತ್ರಿಯನ್ನು ಸ್ಥಳೀಯ ಮಟ್ಟದಲ್ಲಿ ಮಾಡದೆ, ಅಲ್ಲಿನ ನಾಯಕರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಒಳ್ಳೆಯದು. ಈ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ಮುಂದಿನ ದಿನದಲ್ಲಿಯೂ ಮತ್ತೊಮ್ಮೆ ವರಿಷ್ಠರಿಗೆ ತಿಳಿಸಲಾಗುವುದು ಎಂದು ಹೇಳಿದರು.
ರಾಜ್ಯಮಟ್ಟದ ನಾಯಕರ ಸೂಚನೆ
ಮೂಲಗಳ ಪ್ರಕಾರ ಎರಡು ಪಕ್ಷಗಳ ನಾಯಕರು ತಮ್ಮ ಪಕ್ಷದ ಸ್ಥಳೀಯ ನಾಯಕರಿಗೆ ಕಠಿಣ ಸೂಚನೆ ನೀಡಲು ಮುಂದಾಗಿದ್ದಾರೆ. ಮೈತ್ರಿ ಧರ್ಮಕ್ಕೆ ಚ್ಯುತಿ ತರುವಂತೆ ಮಾತನಾಡುವ ಎರಡೂ ಪಕ್ಷದ ಎರಡನೇ ಹಂತದ ನಾಯಕರ ಮೇಲೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಕುಮಾರಸ್ವಾಮಿ, ವಿಜಯೇಂದ್ರ ಮತ್ತು ಆರ್. ಅಶೋಕ್ ಜಂಟಿಯಾಗಿ ಪ್ರವಾಸ ಕೈಗೊಂಡು ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೇ, ಕೇವಲ ಕಾಂಗ್ರೆಸ್ ವಿರೋಧ ಮಾತ್ರವಲ್ಲದೆ, ರಾಜ್ಯದ ಅಭಿವೃದ್ಧಿಗೆ ಮೈತ್ರಿಕೂಟದ ದೂರದೃಷ್ಟಿ ಏನು ಎಂಬುದನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ನಾಯಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

