
ರಾಜ್ಯ ರಾಜಕೀಯದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಎನ್‌ಡಿಎ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬುದು ತಮ್ಮ ಉದ್ದೇಶವಾಗಿದ್ದು, ರಾಜ್ಯದಲ್ಲಿ ಉತ್ತಮ ಸರ್ಕಾರ ತರುವುದೇ ತಮ್ಮ ವೈಯಕ್ತಿಕ ಗುರಿ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ತಾವು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತಾರೆ ಎಂಬ ವದಂತಿಗಳಿಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೆರೆ ಎಳೆದಿದ್ದಾರೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯುವುದಿಲ್ಲ, ನಾನು ಎಲ್ಲಿರಬೇಕು ಎಂಬುದನ್ನು ರಾಜ್ಯದ ಜನತೆ ತೀರ್ಮಾನಿಸುತ್ತಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಎನ್‌ಡಿಎ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬುದು ತಮ್ಮ ಉದ್ದೇಶವಾಗಿದ್ದು, ರಾಜ್ಯದಲ್ಲಿ ಉತ್ತಮ ಸರ್ಕಾರ ತರುವುದೇ ತಮ್ಮ ವೈಯಕ್ತಿಕ ಗುರಿ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ವಿಶೇಷಚೇತನ ನೌಕರರೊಂದಿಗೆ ಸಂಕ್ರಾತಿ ಆಚರಿಸಿಕೊಂಡ ಎಚ್ ಡಿ ಕುಮಾರಸ್ವಾಮಿ.
ಶಿಡ್ಲಘಟ್ಟ ಪ್ರಕರಣ: ಅಧಿಕಾರಿಗಳ ಮೇಲಿನ ದೌರ್ಜನ್ಯಕ್ಕೆ ಬೇಸರ
ಇದೇ ವೇಳೆ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಅವರು ದೂರಿದರು. ಈ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದರೂ, ಅವರಿಂದ ಇದುವರೆಗೆ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. "ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾನೂನುಬಾಹಿರ ಕೆಲಸ ಮಾಡಿಸುವುದು ಸರಿಯಲ್ಲ. ಒಂದೆರಡು ಪ್ರಕರಣಗಳಲ್ಲಿ ಸರ್ಕಾರ ಕಠಿಣ ಕ್ರಮ ಜರುಗಿಸಿದರೆ ಉಳಿದವರಿಗೆ ಅದು ಪಾಠವಾಗುತ್ತದೆ" ಎಂದು ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಅಧಿಕಾರಿಗಳಿಗೆ ಆತ್ಮಸಾಕ್ಷಿಯ ಎಚ್ಚರಿಕೆ
ಬಡ್ತಿ ಅಥವಾ ಆಯಕಟ್ಟಿನ ಜಾಗದ ಪೋಸ್ಟಿಂಗ್ ಆಸೆಗೆ ಬಿದ್ದು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದಂತೆ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ವಿಕಾಸಸೌಧದ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಎಂಟು ವರ್ಷಗಳ ಬಳಿಕ ಇಂಜಿನಿಯರ್‌ಗಳ ಮೇಲೆ ಕ್ರಮಕ್ಕೆ ಲೋಕಾಯುಕ್ತ ಸೂಚಿಸಿರುವುದನ್ನು ಉಲ್ಲೇಖಿಸಿದ ಅವರು, "ತಪ್ಪು ಮಾಡಿದರೆ ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸದೆ ಅಧಿಕಾರಿಗಳು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು" ಎಂದು ಸಲಹೆ ನೀಡಿದರು. ಸರ್ಕಾರದಲ್ಲಿ ಮೇಲ್ಮಟ್ಟದ ಆಡಳಿತ ಸರಿ ಇಲ್ಲದಿದ್ದಾಗ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ನಾಡಿನ ಜನತೆಗೆ ಮಣ್ಣಿನ ಮಕ್ಕಳ ಹಬ್ಬದ ಶುಭಾಶಯ
ಮಾತು ಮುಕ್ತಾಯಗೊಳಿಸುವ ಮುನ್ನ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ಶುಭಾಶಯ ಕೋರಿದ ಕುಮಾರಸ್ವಾಮಿ, ಇದು ಸುಗ್ಗಿ ಮತ್ತು ಸಮೃದ್ಧಿಯ ಸಂಕೇತ ಎಂದರು. "ಸಂಕ್ರಾಂತಿ ಮಣ್ಣಿನ ಮಕ್ಕಳ ಸಂಭ್ರಮದ ಹಬ್ಬ. ಕಾಲಕಾಲಕ್ಕೆ ಪ್ರಕೃತಿಯೂ ಸಹಕರಿಸಿ, ರೈತರಿಗೆ ನೆಮ್ಮದಿ ಸಿಗಲಿ. ಎಳ್ಳು ಬೆಲ್ಲದ ಸವಿಯಂತೆ ಎಲ್ಲರ ಮನೆ ಮನಗಳಲ್ಲಿ ಸುಖ-ಸಂತೋಷ ಮತ್ತು ಆಯುರಾರೋಗ್ಯ ನೆಲೆಸಲಿ" ಎಂದು ಪ್ರಾರ್ಥಿಸಿದರು. ಪ್ರಧಾನಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಲೇ, ಜನತೆಯ ಆಶಯದಂತೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆ ತೀರ್ಮಾನಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.

