ಜಾತಿಗಣತಿ ವರದಿ ಸಲ್ಲಿಕೆ: ಮತ್ತೆ ʼವಿಳಂಬ ತಂತ್ರʼ!
x

ಜಾತಿಗಣತಿ ವರದಿ ಸಲ್ಲಿಕೆ: ಮತ್ತೆ ʼವಿಳಂಬ ತಂತ್ರʼ!

ಸಮೀಕ್ಷಾ ವರದಿಯ ಅಂಕಿ ಸಂಖ್ಯೆಗಳ ಕ್ರೋಢೀಕರಣ ಇನ್ನೂ ಮುಗಿಯದ ಕಾರಣ ಸರ್ಕಾರಕ್ಕೆ ವರದಿ ಸಲ್ಲಿಸಲು ಇನ್ನೂ ಎರಡು ತಿಂಗಳು ತಡವಾಗುವ ಸಾಧ್ಯತೆ ಇದೆ.


Click the Play button to hear this message in audio format

ರಾಜ್ಯದಲ್ಲಿ ಕೈಗೊಂಡಿರುವ ಸಾಮಾಜಿಕ ಮತ್ತು ಆರ್ಥಿಕ ಹಗೂ ಶೈಕ್ಷಣಿಕ ಸಮೀಕ್ಷೆಯನ್ನು ಹಿಂದುಳಿದ ವರ್ಗಗಳ ಆಯೋಗವು ಮುಕ್ತಾಯಗೊಳಿಸಿದರೂ, ಸರ್ಕಾರಕ್ಕೆ ವರದಿ ಸಲ್ಲಿಕೆಗೆ ಮತ್ತಷ್ಟು ವಿಳಂಬವಾಗಲಿದೆ!

ತಾಂತ್ರಿಕ ವಿಳಂಬ, ತೆರೆಮರೆಯಲ್ಲಿನ ರಾಜಕೀಯ ಲೆಕ್ಕಾಚಾರಗಳು ಪ್ರಕ್ರಿಯೆಯನ್ನು ಮಂದಗತಿಗೊಳಿಸುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಹೀಗಾಗಿ ಬಜೆಟ್‌ ಅಧಿವೇಶನ ಮುಕ್ತಾಯದ ಬಳಿಕ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ ತಿಂಗಳಲ್ಲಿ ವರದಿಯನ್ನು ಪಡೆಯಲು ಸರ್ಕಾರ ಚಿಂತನೆ ನಡೆಸಿದೆ. ಆಥವಾ ಇನ್ನೂ ತಡವಾಗುವ ಲಕ್ಷಣಗಳೂ ಇವೆ ಎನ್ನಲಾಗಿದೆ.

ರಾಜ್ಯದ ಹಿಂದುಳಿದ ವರ್ಗಗಳ ಕುಟುಂಬಗಳ ಜಾತಿ, ಆರ್ಥಿಕ ಸ್ಥಿತಿ, ಶಿಕ್ಷಣ ಮತ್ತು ವೃತ್ತಿಯಂತಹ ವಿವರಗಳನ್ನು ಸಂಗ್ರಹಿಸಿ ಕಲ್ಯಾಣ ಯೋಜನೆಗಳನ್ನು ರೂಪಿಸಲು ಹಾಗೂ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲು ಸರ್ಕಾರ, ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆ ಕೈಗೊಂಡಿತ್ತು. ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ತಮ್ಮ ವರದಿಯನ್ನು ಸಲ್ಲಿಸಿದ್ದರು. ಆದರೆ, ಕೆಲವು ಕಾರಣಗಳಿಂದಾಗಿ ಈ ವರದಿಯನ್ನು ಸರ್ಕಾರ ಜಾರಿಗೆ ತರಲು ಹಿಂದೇಟು ಹಾಕಿತ್ತು. ಜಯಪ್ರಕಾಶ್‌ ಹೆಗ್ಡೆ ಮಾತ್ರವಲ್ಲದೇ, ಎಚ್‌.ಕಾಂತರಾಜ್‌ ಅವಧಿಯಲ್ಲಿ ನಡೆದ ಸಮೀಕ್ಷೆಗಳು ಸಹ ಹಲವು ವಿವಾದಗಳಿಗೆ ಕಾರಣವಾಗಿದ್ದರಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮಧುಸೂದನ್‌ ನಾಯಕ್‌ ನೇತೃತ್ವದ ಆಯೋಗ ನೇಮಕ ಮಾಡಲಾಗಿದ್ದು, ಆಯೋಗವು ಡಿಜಿಟಲ್‌ ಆಧಾರಿತ ಸಮೀಕ್ಷೆ ನಡೆಸಿದೆ.

ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಗೊಳಿಸಿದ ತಂತ್ರಾಂಶ, ಆಧಾರ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ ಮೂಲಕ ದೃಢೀಕರಣ ಸೇರಿದಂತೆ ಇತರೆ ನಿಖರತೆಯ ದತ್ತಾಂಶದ ಮಾಹಿತಿಯೊಂದಿಗೆ ಕಲೆ ಹಾಕಿದೆ. ಸಮೀಕ್ಷೆಯ ಅಂಕಿ-ಅಂಶಗಳ ಕ್ರೋಢೀಕರಣ ನಡೆಯುತ್ತಿದ್ದು, ಇದೇ ಕಾರ್ಯವೇ ಕಾಲಾವಕಾಶ ತೆಗೆದುಕೊಳ್ಳಲಿದೆ. ಸಮಗ್ರವಾಗಿ ಕ್ರೋಢೀಕರಣ ಹಾಕಿದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂಬುದು ಆಯೋಗದ ಸ್ಪಷ್ಟನೆಯಾಗಿದೆ. ಈ ನಡುವೆ, ವರದಿ ಸಲ್ಲಿಕೆಗೆ ಸರ್ಕಾರವು ಸಹ ತಡ ಮಾಡುತ್ತಿದ್ದು, ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದೆ. ಮುಸ್ಲಿಂ, ದಲಿತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಲಿಂಗಾಯತ, ಒಕ್ಕಲಿಗ ಸಮುದಾಯಗಳು ಕಡಿಮೆ ಜನಸಂಖ್ಯೆ ಹೊಂದಿರುವ ಬಗ್ಗೆ ಮಾಹಿತಿ ಇರುವುದರಿಂದ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗಬಹುದು. ಇದು ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಬಹುದು ಎಂಬ ನಿರೀಕ್ಷೆ ಇದೆ. ಈ ಕಾರಣಕ್ಕಾಗಿ ಸರ್ಕಾರವು ವರದಿಯನ್ನು ಪಡೆಯಲು ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯಗೆ ಕೆಲ ಸಮುದಾಯಗಳನ್ನು ಎದುರಿಸಬೇಕಾದ ಅನಿವಾರ್ಯತೆ

ಸಮೀಕ್ಷೆಯ ಮೂಲ ಉದ್ದೇಶವು ಸಾಮಾಜಿಕ ನ್ಯಾಯವಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳಿಗೆ ಸಲ್ಲಬೇಕಾದ ಸೌಲಭ್ಯಗಳು ಸರಿಯಾಗಿ ತಲುಪುತ್ತಿದ್ದವೆಯೇ ಎಂಬುದನ್ನು ತಿಳಿಯಲು ಸಮೀಕ್ಷೆ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಎಷ್ಟು ಜಾತಿಗಳಿವೆ? ಯಾವ ಜಾತಿಗಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿವೆ? ಮೀಸಲಾತಿಯ ಲಾಭ ಯಾರಿಗೆ ಲಭ್ಯವಾಗುತ್ತಿದೆ? ಎಂಬುದಕ್ಕೆ ಉತ್ತರ ಸಿಕ್ಕಾಗ ಸರ್ಕಾರವು ಪರಿಣಾಮಕಾರಿ ಕಲ್ಯಾಣ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವರದಿಯು ರಾಜಕೀಯ ಸಿದ್ಧಾಂತದ ದೊಡ್ಡ ಗೆಲುವಾಗಬಹುದು. ಆದರೆ, ಅದನ್ನು ಜಾರಿಗೊಳಿಸಿದರೆ ಸ್ವಪಕ್ಷೀಯರಿಂದಲೇ ವಿರೋಧ ಇದೆ. ಕೆಲವು ಸಮುದಾಯಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗುವ ಕಾರಣ ಆ ಸಮುದಾಯಗಳ ವಿರೋಧ ಎದುರಿಸಬೇಕಾಗುತ್ತದೆ. ಇದು ರಾಜಕೀಯವಾಗಿ ಪೆಟ್ಟು ಬೀಳುವ ಆಂತಕ ಇದೆ. ಹೀಗಾಗಿ ಸಿದ್ದರಾಮಯ್ಯ ಅವರು ವರದಿಯಲ್ಲಿನ ಅಂಶಗಳ ಕುರಿತು ಅವಲೋಕನ ನಡೆಸಿ ಮುಂದಿನ ಯಾವುದೇ ಸಮುದಾಯಗಳ ವಿರೋಧ ಹಾಕಿಕೊಳ್ಳದೆ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾವ ಕಾರಣಕ್ಕಾಗಿ ತಡ?

ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಯನ್ನು ಮುಗಿಸಿದೆ. ಆದರೆ, ಸಮೀಕ್ಷಾ ವರದಿಯ ಅಂಕಿ ಸಂಖ್ಯೆಗಳ ಕ್ರೋಢೀಕರಣ ಇನ್ನೂ ಮುಗಿಯದ ಕಾರಣ ಸರ್ಕಾರಕ್ಕೆ ವರದಿ ಸಲ್ಲಿಸಲು ಇನ್ನೂ ಎರಡು ತಿಂಗಳು ತಡವಾಗುವ ಸಾಧ್ಯತೆ ಇದೆ. ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ತಂದಿರುವ ಮಾಹಿತಿಯನ್ನು ಆಯೋಗಕ್ಕೆ ತಲುಪಿಸಲಾಗಿದೆ. ಅವುಗಳ ಬಗ್ಗೆ ನಿಖರವಾಗಿ ಕ್ರೋಢೀಕರಣ ಮಾಡಬೇಕಾಗಿದೆ. ಇದು ಸಾಕಾಷ್ಟು ಸಮಯ ತೆಗೆದುಕೊಳ್ಳಲಿದೆ. ಆಯೋಗ ಸಿಬ್ಬಂದಿಯಿಂದ ಈ ಎಲ್ಲಾ ಕೆಲಸಗಳನ್ನು ಮಾಡಲು ಕಷ್ಟಕರ. ಈ ಹಿನ್ನೆಲೆಯಲ್ಲಿ ಪೂರಕವಾಗಿರುವ ಇಲಾಖೆಗಳ ನೆರವಿನಿಂದ ಕ್ರೋಢೀಕರಣ ಮಾಡಲಾಗುತ್ತಿದೆ. ಇದು ತಡವಾಗುತ್ತಿದೆ. ಹೆಚ್ಚು ಕಡಿಮೆ ಕ್ರೊಢೀಕರಣ ಕಾರ್ಯವು ಮುಕ್ತಾಯ ಹಂತದಲ್ಲಿದೆ. ಸರ್ಕಾರ ಗಡುವು ನೀಡಿರುವ ಕಾಲಾವಕಾಶದಲ್ಲಿ ಮುಕ್ತಾಯಗೊಳಿಸಲು ಸಾಧ್ಯವಾಗಿಲ್ಲ. ಇನ್ನು ಒಂದೆರಡು ತಿಂಗಳಲ್ಲಿ ಆ ಕಾರ್ಯವು ಮುಗಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ಹೇಳಿವೆ.

ಸಂಗ್ರಹವಾದ ಕೋಟ್ಯಂತರ ದತ್ತಾಂಶಗಳನ್ನು ವರ್ಗೀಕರಿಸುವುದು, ಉಪಜಾತಿಗಳನ್ನು ಗುರುತಿಸುವುದು ಮತ್ತು ಜಿಲ್ಲಾವಾರು ವರದಿ ಸಿದ್ಧಪಡಿಸುವ ಕೆಲಸ ಅಂತಿಮ ಹಂತದಲ್ಲಿದೆ. ಸುಮಾರು ಶೇ.90 ರಿಂದ 95 ರಷ್ಟು ವರದಿ ಸಿದ್ಧವಾಗಿದೆ. ಉಳಿದಿರುವ ಕೆಲಸವು ಅತ್ಯಂತ ನಿರ್ಣಾಯಕವಾಗಿದೆ. ಇದರಲ್ಲಿ ತಾಂತ್ರಿಕ ತಪ್ಪುಗಳ ತಿದ್ದುಪಡಿ, ಅಂಕಿ-ಅಂಶಗಳ ಮರುಪರಿಶೀಲನೆ ಮತ್ತು ಸರ್ಕಾರಕ್ಕೆ ಸಲ್ಲಿಸಬೇಕಾದ ಅಧಿಕೃತ ವರದಿಯ ಅಂತಿಮ ಪ್ರತಿ ಸಿದ್ಧಪಡಿಸುವುದು ಸೇರಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಶೇ.97ಕ್ಕಿಂತ ಹೆಚ್ಚಾಗಿದ್ದು,ರಾಜ್ಯದಲ್ಲಿ 6.13 ಕೋಟಿಗಿಂತ ಹೆಚ್ಚು ಜನರು ಸಮೀಕ್ಷೆಗೊಳಗಾಗಿದ್ದಾರೆ. ಒಟ್ಟು 4.22 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, 34.49 ಮನೆಗಳು ಖಾಲಿ ಇದ್ದು ಅಥವಾ ಮನೆಗಳಿಗೆ ಬೀಗ ಹಾಕಿದ್ದವು ಎಂದು ಆಯೋಗವು ಹೇಳಿವೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಕೆ.ದಯಾನಂದ, ರಾಜ್ಯದಲ್ಲಿ ಸಾವಿರಾರು ಉಪಜಾತಿಗಳಿವೆ. ಜನರು ಒಂದೇ ಜಾತಿಯನ್ನು ಬೇರೆ ಬೇರೆ ಹೆಸರಿನಲ್ಲಿ ನಮೂದಿಸುತ್ತಾರೆ. ಇವುಗಳನ್ನು ಒಂದೇ ವರ್ಗಕ್ಕೆ ತರುವ ಕೆಲಸಕ್ಕೆ ಸಮಯಕ್ಕೆ ತೆಗೆದುಕೊಳ್ಳುತ್ತದೆ. ಶೀಘ್ರದಲ್ಲಿಯೇ ಸಮೀಕ್ಷಾ ವರದಿಯನ್ನು ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಈಗಾಗಲೇ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಅಂತಿಮ ಹಂತದ ಸಿದ್ದತಾ ಕಾರ್ಯಗಳು ನಡೆದಿದೆ. ಸಂಗ್ರಹಣೆಯಾಗಿರುವ ಅಂಕಿ-ಸಂಖ್ಯೆ ಸೇರಿದಂತೆ ಇತರೆ ಮಾಹಿತಿಗಳ ಕ್ರೋಢೀಕರಣ ನಡೆಯುತ್ತಿದೆ. ಶೀಘ್ರದಲ್ಲಿಯೇ ಸರ್ಕಾರಕ್ಕೆ ಆಯೋಗವು ವರದಿಯನ್ನು ಸಲ್ಲಿಕೆ ಮಾಡಲಿದೆ. ಬಳಿಕ ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Read More
Next Story