
ಜನಪ್ರತಿನಿಧಿಗಳ ಬಗ್ಗೆ ಕಿಮ್ಮತ್ತೇ ಇಲ್ಲದ ಅಧಿಕಾರಿಗಳು: ಸಿಎಂಗೆ ಶಾಸಕರ ದೂರು, ಸಿಎಸ್ ಗರಂ!
ಅಧಿಕಾರಿಗಳು ಜನಪ್ರತಿನಿಧಿಗಳ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು, ಇದು ಆಡಳಿತಾತ್ಮಕ ಶಿಸ್ತು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ.
ಹಗರಣ, ಆಡಳಿತ ವೈಫಲ್ಯದಂತಹ ಆರೋಪಗಳ ಜತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಪ್ರಮುಖ ಆರೋಪವನ್ನು ಎದುರಿಸುತ್ತಿದೆ. ಅಡಳಿತಯಂತ್ರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗವಾಗಿದೆ!
ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ತಿಕ್ಕಾಟಕ್ಕೆ ಹಲವು ಐಎಎಸ್ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಬೆಲೆ ನೀಡುತ್ತಿಲ್ಲ ಎಂಬುದು ಕಾರಣವಾಗಿದೆ. ಈ ಬಗ್ಗೆ ದೂರುಗಳು ಕೇಳಿಬಂದಿದ್ದು, ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, "ಕರೆಗಳಿಗೆ ಸ್ಪಂದನೆ ಇಲ್ಲ, ಶಾಸಕರು ಮಾಡುವ ಫೋನ್ ಕರೆಗಳನ್ನು ಅಧಿಕಾರಿಗಳು ಸ್ವೀಕರಿಸುತ್ತಿಲ್ಲ, ತುರ್ತು ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ಅಭಿವೃದ್ಧಿ ಕಾಮಗಾರಿಗಳ ವಿಳಂಬವಾಗುತ್ತಿದೆ, ಸಾರ್ವಜನಿಕ ಕೆಲಸಗಳ ಕುರಿತಾದ ಫಾಲೋ-ಅಪ್‌ಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಇದರಿಂದಾಗಿ ಫೈಲ್‌ಗಳು ಧೂಳು ಹಿಡಿಯುತ್ತಿವೆ," ಎಂಬಿತ್ಯಾದಿ ಅಸಮಾಧಾನಗಳನ್ನು ಪಕ್ಷಾತೀತವಾಗಿ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಹಸ್ತಕ್ಷೇಪ:
ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಪ್ರತಿನಿಧಿಗಳೊಂದಿಗೆ ಸಮನ್ವಯ ಕಾಯ್ದುಕೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಈ ಪರಿಸ್ಥಿತಿಯನ್ನು ಸರಿಪಡಿಸುವಂತೆ ಅವರು ನಿರ್ದೇಶಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದು ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಜನಪ್ರತಿನಿಧಿಗಳ ದೂರು ಆಡಳಿತದ ಹಿನ್ನಡೆಗೆ ಸಾಕ್ಷಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಮುಖ್ಯ ಕಾರ್ಯರ್ದಶಿಗಳ ಎಚ್ಚರಿಕೆಯ ಪತ್ರವು ಕೇವಲ ಆಡಳಿತಾತ್ಮಕ ಪತ್ರವಲ್ಲ, ಬದಲಿಗೆ ಅದು ರಾಜ್ಯದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸರ್ಕಾರಿ ಸೇವಾ ನಿಯಮಗಳ ಪ್ರಕಾರ, ಜನಪ್ರತಿನಿಧಿಗಳಿಗೆ ಸೂಕ್ತ ಗೌರವ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ವಿಧಾನಸಭೆ, ವಿಧಾನಪರಿಷತ್ ಅಥವಾ ಸಂಸತ್ತಿನ ಸದಸ್ಯರು ಕರೆ ಮಾಡಿದಾಗ ಅದು ವೈಯಕ್ತಿಕ ಕೆಲಸಕ್ಕಾಗಿ ಇರುವುದಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗಾಗಿ ಇರುತ್ತದೆ. ಶಾಸಕರು ಅಥವಾ ಸಂಸದರು ಕರೆ ಮಾಡಿದಾಗ ಸ್ವೀಕರಿಸದಿರುವುದು ಅಥವಾ ನಂತರವೂ ಅವರನ್ನು ಸಂಪರ್ಕಿಸದಿರುವುದು ಕೇವಲ ಶಿಷ್ಟಾಚಾರದ ಉಲ್ಲಂಘನೆಯಲ್ಲ, ಬದಲಿಗೆ ಅದು ಆ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ನಿಯಮಗಳಿವೆ.
ಜನಪ್ರತಿನಿಧಿಗಳು ಕೇವಲ ವ್ಯಕ್ತಿಗಳಾಗಿರದೆ, ಒಂದು ಕ್ಷೇತ್ರದ ಲಕ್ಷಾಂತರ ಜನರ ಧ್ವನಿಯಾಗಿರುತ್ತಾರೆ. ಅಧಿಕಾರಿಗಳು ಅವರ ಫೋನ್ ಕರೆಯನ್ನು ಸ್ವೀಕರಿಸುವುದಿಲ್ಲ ಎಂದರೆ ಆ ಕ್ಷೇತ್ರದ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಸಿದ್ಧರಿಲ್ಲ ಎಂಬರ್ಥ ವ್ಯಕ್ತಪಡಿಸುತ್ತದೆ. ಮುಖ್ಯಕಾರ್ಯದರ್ಶಿಯವರು ಪತ್ರ ಬರೆಯಬೇಕಾದ ಅನಿವಾರ್ಯತೆ ಬಂದಿದೆ ಎಂದರೆ, ಪರಿಸ್ಥಿತಿ ಮಿತಿ ಮೀರಿದೆ ಮತ್ತು ಅಧಿಕಾರಿಗಳಲ್ಲಿ ಉತ್ತರದಾಯಿತ್ವ ಮರೆಯಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಹೇಳಲಾಗಿದೆ.
ಜನಪ್ರತಿನಿಧಿಗಳನ್ನು ಕಡೆಗಣಿಸುವ ಪ್ರವೃತ್ತಿ
ರಾಜ್ಯದಲ್ಲಿ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳ ಮಾತುಗಳಿಗೆ ಬೆಲೆ ಇಲ್ಲ ಎಂಬ ಆರೋಪಗಳು ಆಗಾಗ್ಗೆ ಕೇಳಿಬರುತ್ತವೆ. ಈ ಪರಿಸ್ಥಿತಿಗೆ ಹಲವಾರು ಕಾರಣಗಳಿವೆ. ಅನುಭವಿ ಅಧಿಕಾರಿಗಳು ರಾಜಕೀಯ ನಾಯಕರನ್ನು ಕಡೆಗಣಿಸುವ ಪ್ರವೃತ್ತಿ ಬೆಳೆಸಿಕೊಂಡಿರಬಹುದು. ಅಧಿಕಾರಿಗಳು ತಮ್ಮ ವರ್ಗಾವಣೆಗೆ ರಾಜಕಾರಣಿಗಳೇ ಕಾರಣ ಎಂದು ಭಾವಿಸಿದಾಗ ಅಥವಾ ರಾಜಕೀಯ ಒತ್ತಡಗಳಿಗೆ ಸಿಲುಕಿದಾಗ ಸಂವಹನವನ್ನು ಕಡಿತಗೊಳಿಸುವ ತಂತ್ರ ಅನುಸರಿಸುತ್ತಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸದಿದ್ದರೆ, ಸಾಮಾನ್ಯ ಜನರ ಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಜನಸೇವಕ ಎಂಬ ಪರಿಕಲ್ಪನೆಯಿಂದ ದೊರೆ ಎಂಬ ಮನಸ್ಥಿತಿಗೆ ಅಧಿಕಾರಿಗಳು ಜಾರುತ್ತಿರುವುದರ ಸಂಕೇತವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬರೆದಿರುವ ಪತ್ರದಲ್ಲಿ ಎರಡು ಮುಖ್ಯ ಅಂಶಗಳಿವೆ. ಒಂದು ಅಧಿಕಾರಿಗಳ ಇಂತಹ ವರ್ತನೆಯು ಶೋಭೆ ತರುವುದಿಲ್ಲ ಎಂದು ಹೇಳುವ ಮೂಲಕ ನೇರ ಎಚ್ಚರಿಕೆ ನೀಡಿದ್ದಾರೆ. "ತುರ್ತು ಕೆಲಸದಲ್ಲಿದ್ದರೆ ಕನಿಷ್ಠ ಪಕ್ಷ ಆ ಕೆಲಸ ಮುಗಿದ ಬಳಿಕ ಹಿಂತಿರುಗಿಸಿ ಕರೆ ಮಾಡಬೇಕು," ಎಂಬ ಕನಿಷ್ಠ ಸೌಜನ್ಯದ ಪಾಠವೂ ಪತ್ರದಲ್ಲಿದೆ. ಮುಖ್ಯಕಾರ್ಯದರ್ಶಿಗಳೇ ಪತ್ರ ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು, ಅಧಿಕಾರಿಗಳಲ್ಲಿನ ಶಿಸ್ತಿನ ಕೊರತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎನ್ನಲಾಗಿದೆ.
ಅಧಿಕಾರಿಗಳು ಶಾಸಕಾಂಗಕ್ಕೆ ಗೌರವ ನೀಡದಿದ್ದರೆ, ಅದು ರಾಜ್ಯದಲ್ಲಿ ಆಡಳಿತಾತ್ಮಕ ಶಿಸ್ತು ಕುಸಿದಿದೆ ಎಂಬುದಕ್ಕೆ ನೇರ ಸಾಕ್ಷಿಯಾಗುತ್ತದೆ. ಇದು ರಾಜ್ಯದ ಹಿತಾಸಕ್ತಿಗೆ ದೊಡ್ಡ ಧಕ್ಕೆಯಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.
ಸಂವಹನ ಇಲ್ಲದ ಕಡೆ ಕಾರ್ಯಕ್ಷಮತೆ ಕುಂಠಿತಗೊಳ್ಳುತ್ತದೆ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಸಾಧ್ಯವಾಗದಿದ್ದರೆ, ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತದೆ. ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ದೂರು ನೀಡಲು ಆರಂಭಿಸಿದಾಗ, ಅದು ಸರ್ಕಾರದ ಪ್ರತಿಷ್ಠೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ವಿಷಯಗಳು ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಧ್ವನಿಸಿ, ಅಮೂಲ್ಯ ಸಮಯ ಹಾಳಾಗಲು ಕಾರಣವಾಗುತ್ತವೆ. ಹೀಗಾಗಿ ಇವುಗಳನ್ನು ತಡೆಯಬೇಕಾದ ಅಗತ್ಯತೆ ಇದೆ ಎಂಬ ಒತ್ತಾಯಗಳು ಕೇಳಿಬಂದಿವೆ.
ರಾಜಕೀಯ ಆಯಾಮ, ಪ್ರತಿಪಕ್ಷಗಳ ಟೀಕೆ
ರಾಜ್ಯದ ಆಡಳಿತದಲ್ಲಿ ಇಂತಹ ಬೆಳವಣಿಗೆಗಳು ನಡೆದಾಗ ಪ್ರತಿಪಕ್ಷಗಳಿಗೆ ದೊಡ್ಡ ಆಹಾರ ಸಿಕ್ಕಂತಾಗುತ್ತದೆ. ಸರ್ಕಾರ ಅಸ್ತಿತ್ವದಲ್ಲಿದೆಯೇ? ಅಥವಾ ಮುಖ್ಯಮಂತ್ರಿಗಳ ಮಾತು ಅಧಿಕಾರಿಗಳಿಗೆ ಕೇಳಿಸುತ್ತಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ. ಆಡಳಿತ ಪಕ್ಷದ ಶಾಸಕರೇ ಅಧಿಕಾರಿಗಳ ವಿರುದ್ಧ ದೂರು ನೀಡುತ್ತಿದ್ದಾರೆ ಎಂದರೆ, ಅದು ಆಡಳಿತಾರೂಢ ಸರ್ಕಾರದ ಒಳಗಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಇದು ಮುಂದಿನ ಚುನಾವಣೆಗಳಲ್ಲಿ ಅಥವಾ ಸದನದಲ್ಲಿ ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಕೆಯಾಗುವುದರಲ್ಲಿ ಸಂಶಯವಿಲ್ಲ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಅಧಿಕಾರಿಗಳ ನಡೆಯನ್ನು ಸುಧಾರಿಸಲು ಕೇವಲ ಪತ್ರವೊಂದೇ ಸಾಲದು. ಶಿಷ್ಟಾಚಾರ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ತಕ್ಷಣದ ಶಿಸ್ತು ಕ್ರಮ ಜರುಗಿಸಬೇಕು. ಇದು ಇತರರಿಗೆ ಎಚ್ಚರಿಕೆಯಾಗಬೇಕು. ಪ್ರತಿಯೊಂದು ಇಲಾಖೆಯಲ್ಲೂ ಜನಪ್ರತಿನಿಧಿಗಳ ಅಹವಾಲುಗಳನ್ನು ಸ್ವೀಕರಿಸಲು ಮತ್ತು ಅವುಗಳ ವಿಲೇವಾರಿಯ ಬಗ್ಗೆ ಗಮನಹರಿಸಲು ಪ್ರತ್ಯೇಕ ಕೋಶ ಮಾಡಬೇಕು. ಉನ್ನತ ಅಧಿಕಾರಿಗಳಿಗೆ ಸಾರ್ವಜನಿಕ ಸಂಪರ್ಕ ಮತ್ತು ಜನಪ್ರತಿನಿಧಿಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ನಾಯಕತ್ವ ತರಬೇತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ಅಧಿಕಾರ ಎನ್ನುವುದು ಜನಸೇವೆಗೆ ಇರುವ ಒಂದು ಸಾಧನವೇ ಹೊರತು, ಅದು ದರ್ಪ ಪ್ರದರ್ಶಿಸುವ ವೇದಿಕೆಯಲ್ಲ. ರಾಜ್ಯದ ಹಿತದೃಷ್ಟಿಯಿಂದ ಕಾರ್ಯಾಂಗ ಮತ್ತು ಶಾಸಕಾಂಗ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು. ಅಧಿಕಾರಿಗಳು ಜನಪ್ರತಿನಿಧಿಗಳ ಕರೆಯನ್ನು ಸ್ವೀಕರಿಸುವುದಿಲ್ಲ ಎನ್ನುವುದು ಒಳ್ಳೆಯ ಬೆಳವಣಿಗೆಯಲ್ಲ. ಅಧಿಕಾರಿಗಳು ತಮ್ಮ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ, ಅದು ರಾಜ್ಯದ ಪ್ರಗತಿಗೆ ಮಾರಕವಾಗುವುದಲ್ಲದೆ, ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡಲಿದೆ ಎಂದು ಹೇಳಿದರು.

