ಗ್ರೀನ್ ಸಿಟಿ ಈಗ ಗಲೀಜು ಸಿಟಿ! ವಿಧಾನಸೌಧದ ಕೂಗಳತೆ ದೂರದಲ್ಲಿ ಕೊಚ್ಚೆ ಭಾಗ್ಯ
x

ಫ್ರೀಡಂ ಪಾರ್ಕ್ ಸರ್ಕಲ್, ಮಹಾರಾಣಿ ಕಾಲೇಜು ಮತ್ತು ಚುನಾವಣಾ ಆಯೋಗದ ಕಚೇರಿ ಇರುವ ಮುಖ್ಯ ರಸ್ತೆಯಲ್ಲೇ ಕಳೆದ 30 ದಿನಗಳಿಂದ ಕೊಳಚೆ ನೀರು ಹರಿಯುತ್ತಿದೆ.

ಗ್ರೀನ್ ಸಿಟಿ ಈಗ 'ಗಲೀಜು ಸಿಟಿ'! ವಿಧಾನಸೌಧದ ಕೂಗಳತೆ ದೂರದಲ್ಲಿ 'ಕೊಚ್ಚೆ ಭಾಗ್ಯ'

Bengaluru Sewage Flows| ಸಿಲಿಕಾನ್ ಸಿಟಿಯ ಮಾನ ಹರಾಜಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಸರ್ಕಲ್ ಬಳಿ ಕಳೆದ ಒಂದು ತಿಂಗಳಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.


Click the Play button to hear this message in audio format

ಗ್ರೀನ್ ಸಿಟಿ ಐಟಿ ಸಿಟಿ ಎಂದು ಖ್ಯಾತಿ ಹೊಂದಿರುವ ರಾಜ್ಯ ರಾಜಧಾನಿ ಬೆಂಗಳೂರು ನಗರದ ಹೃದಯ ಭಾಗದ ಮುಖ್ಯ ರಸ್ತೆಯಲ್ಲಿ ಬೆಂಗಳೂರಿನ ಮಾನ ಮರ್ಯಾದೆ ಹರಾಜು ಆಗುವ ದೃಶ್ಯ ರಾರಾಜಿಸುತ್ತಿದೆ. ವಿಧಾನಸೌಧ ಕೂಗಳತೆ ದೂರದಲ್ಲಿರುವ ಪ್ರತಿ ದಿನಾ ಸಾವಿರಾರು ಜನ ಓಡಾಡುವ ರಸ್ತೆಯಲ್ಲಿ 1 ತಿಂಗಳಿಂದ ಕೊಳಚೆ ನೀರು ಹರಿಯುತ್ತಿದೆ. ದಿನ‌ ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು ಈ ಕೊಚ್ಚೆ ನೀರನ್ನು ದಾಟಿಕೊಂಡೇ ಓಡಾಡಬೇಕಾದ ಸ್ಥಿತಿ ಇದೆ.

ಇದು ‍ಫ್ರೀಡಂ ಪಾರ್ಕ್ ಸರ್ಕಲ್ ಬಳಿ ಕಾಣುವ ದೃಶ್ಯ. ಮಹಾರಾಣಿ, ಎಸ್ ಜೆಪಿ, ಹೋಮ್ ಸೈನ್ಸ್ ಕಾಲೇಜು, ಚುನಾವಣಾ ಆಯೋಗದ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳು ಇದರ ಪಕ್ಕದಲ್ಲೇ ಇವೆ. ಕಳೆದ ಒಂದು ತಿಂಗಳಿಂದ ಕೊಚ್ಚೆ ನೀರು ರಸ್ತೆಯ ಮೇಲೆ ಹರಿದು ಹೋಗುತ್ತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ನೀರು ನಿಂತು ಪಾಚಿ ಕಟ್ಟಿಕೊಂಡಿದೆ. ಪ್ರತಿ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ವಿದ್ಯಾರ್ಥಿಗಳು ದಿನಾ ಇದೇ ಜಾಗದಲ್ಲಿ ಓಡಾಡುತ್ತಾರೆ. ಮೂಗು ಮುಚ್ಚಿಕೊಂಡು ಕೊಚ್ಚೆ ನೀರನ್ನು ದಾಟಿಕೊಂಡು ಓಡಾಡುವ ಪರಿಸ್ಥಿತಿ.



ಸುಮಾರು 300 ಮೀಟರ್‌ಗೂ ಹೆಚ್ಚು ರಸ್ತೆಯ ಉದ್ದ ಈ ಕೊಳಚೆ ‌ನೀರು ಹರಿಯುತ್ತಿದೆ. ರಸ್ತೆಯಿಂದ ಪುಟ್‌ಪಾತ್‌ಗೆ ಹೋಗಬೇಕಾದರೆ ಕೊಚ್ಚೆ ನೀರಿನ ಮಧ್ಯೆ ಹರಸಾಹಸ ಪಡಬೇಕಾಗಿದೆ. ಕೊಚ್ಚೆ ನೀರಿನಲ್ಲಿ ಕಲ್ಲುಗಳನ್ನು ಹಾಕಿದ್ದು ಕಲ್ಲಿನ ಮೇಲೆ ಕಾಲಿಟ್ಟು ಜೋಪಾನವಾಗಿ ಕೊಚ್ಚೆ ನೀರು ತಾಗದಂತೆ ದಾಟಿ ಪುಟ್ ಪಾತ್ ಗೆ ಹೋಗಬೇಕಾಗುತ್ತದೆ.

ಕೊಚ್ಚೆ ನೀರು ನಿಂತು ಪಾಚಿ ಕಟ್ಟಿ ಹರಿಯುತ್ತಿದೆ.

ʻದ ಫೆಡರಲ್ ಕರ್ನಾಟಕʼ ಈ ಬಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಸಾರ್ವಜನಿಕರು ಹಾಗು ವಿದ್ಯಾರ್ಥಿಗಳು ಕೊಚ್ಚೆ ನೀರಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ವಕೀಲರಾದ ನಾಗಭೂಷಣ್ ಮಾತನಾಡಿ, "ಒಂದು ತಿಂಗಳಿಂದ ಹೆಚ್ಚು ಕಾಲ ಕೊಚ್ಚೆ ನೀರು ಹರಿಯುತ್ತಿದೆ ಅಧಿಕಾರಿಗಳು ಈ ಕಡೆ ಗಮನ ಹರಿಸಿಲ್ಲ ಈ ಸಮಸ್ಯೆ ಬಗ್ಗೆ ವಿಡಿಯೋ ಸಹಿತ ಗ್ರೇಟರ್ ಬೆಂಗಳೂರು ಅಧಿಕಾರಿಗಳ ಗಮನಕ್ಕೆ ಆಪ್ ಒಂದರಲ್ಲಿ ದೂರು ನೀಡಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ ನಮ್ಮ ದೂರಿಗೆ ಸ್ಪಂದನೆ ಸಿಕ್ಕಿಲ್ಲ. ಈ ಜಾಗದಲ್ಲಿ ಓಡಾಡಲು ಕಷ್ಟವಾಗುತ್ತಿದೆ,'' ಎಂದು ಅವರು ದೂರಿದರು.

ಸಾರ್ವಜನಿಕರು ಹಾಗು ವಿದ್ಯಾರ್ಥಿಗಳು ಕೊಚ್ಚೆ ನೀರಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಚಿತ್ರಶ್ರೀ ಮಾತನಾಡಿ ಸುಮಾರು ದಿನಗಳಿಂದ ಕೊಚ್ಚೆ ನೀರು ಇದೇ ರೀತಿ ರಸ್ತೆ ಮೇಲೆ ಹರಿಯುತ್ತಿದೆ. ನಾವು ಕಾಲೇಜಿಗೆ ಹೋಗಬೇಕಾದರೆ ಕೊಚ್ಚೆ ನೀರು ದಾಟಿ ಹೋಗಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು. ವಾಹನ ಸವಾರ ಮಲ್ಲೇಶ್ ಗೌಡ ಮಾತನಾಡಿ, ʻʻಸಾವಿರಾರು ಜನ ಓಡಾಡುತ್ತಾರೆ ಈ ಜಾಗದಲ್ಲಿ. ಈ ರೀತಿ ಕೊಚ್ಚೆ ನೀರು ಸಾಕಷ್ಟು ದಿನಗಳಿಂದ ಹರಿಯುತ್ತಿದ್ದರು ಕ್ರಮಕೈಗೊಂಡಿಲ್ಲ ಅಂದರೆ ಸರ್ಕಾರದ ಬಳಿ ದುಡ್ಡಿಲ್ಲ ಅನ್ನಿಸುತ್ತದೆ ಎಂದರು. ಇದೇ ರೀತಿ ಸದಾಶಿವನಗರ ಡಾಲರ್ಸ್‌ ಕಾಲೋನಿಯಲ್ಲಿ ಕೊಚ್ಚೆ ನೀರು ಹರಿದಿದ್ದರೆ ಇಷ್ಟು ದಿನ ಬಿಡುತ್ತಿದ್ದರಾ ಎಂದು ಪ್ರಶ್ನಿಸಿದರು.

Read More
Next Story