
Naxalism in India| ನಕ್ಸಲಿಸಂ ಅಂತ್ಯದತ್ತ! ನಕ್ಸಲ್ಬರಿ ದಂಗೆಯಿಂದ ಪ್ರಾರಂಭವಾದ ಸಶಸ್ತ್ರ ಹೋರಾಟದ ಸಮಗ್ರ ನೋಟ
ಭಾರತದಲ್ಲಿ ನಕ್ಸಲಿಸಂನ ಉಗಮ, ಹಂತಗಳು, ಪ್ರಮುಖ ದಾಳಿಗಳು ಮತ್ತು ಸರ್ಕಾರದ 'ಸಮಾಧಾನ್' ಯೋಜನೆ ಬಗ್ಗೆ ಇಲ್ಲಿದೆ ಸವಿವರ ಮಾಹಿತಿ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಘೋಷಿಸಿರುವಂತೆ, ದಶಕಗಳಿಂದ ಭಾರತದ ಆಂತರಿಕ ಭದ್ರತೆಗೆ ಸವಾಲಾಗಿದ್ದ ನಕ್ಸಲ್ ಸಮಸ್ಯೆಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದ್ದು, ದೇಶವು ಈಗ ಬಹುತೇಕ ನಕ್ಸಲ್ ಮುಕ್ತವಾಗಿದೆ. 2026ರ ಮಾರ್ಚ್ 31ರೊಳಗೆ ದೇಶವನ್ನು ಸಂಪೂರ್ಣವಾಗಿ ನಕ್ಸಲ್ ಮುಕ್ತಗೊಳಿಸುವ ಗುರಿಯೊಂದಿಗೆ ಕೈಗೊಳ್ಳಲಾದ ಕಾರ್ಯಾಚರಣೆಯು ಇದೀಗ ಅಂತಿಮ ಘಟ್ಟದಲ್ಲಿದ್ದು, ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ಇದು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ ಭಾರತದಲ್ಲಿ ನಕ್ಸಲಿಸಂ ಶುರುವಾಗಿದ್ದು ಯಾವಾಗ? ಇಲ್ಲಿದೆ ಸವಿವರ
ಭಾರತದಲ್ಲಿ ನಕ್ಸಲಿಸಂ ಎಂಬುದು ಕೇವಲ ಒಂದು ಭದ್ರತಾ ಸಮಸ್ಯೆಯಲ್ಲ; ಇದು ಆಳವಾದ ಸಾಮಾಜಿಕ-ಆರ್ಥಿಕ ಅಸಮಾನತೆಗಳು, ಭೂ ವಿವಾದಗಳು ಮತ್ತು ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳ ಆಕ್ರೋಶದ ಪ್ರತಿಫಲನವಾಗಿದೆ. ನಕ್ಸಲ್ ಅಥವಾ ನಕ್ಸಲೈಟ್ ಎಂದು ಕರೆಯಲ್ಪಡುವ ಈ ಚಳವಳಿಯು ಭಾರತದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿರುವ ಎಡಪಂಥೀಯ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ.
ನಕ್ಸಲಿಸಂ ಎಂದರೇನು?
ನಕ್ಸಲಿಸಂ ಎಂಬುದು ಕಮ್ಯುನಿಸ್ಟ್ ಸಿದ್ಧಾಂತಗಳಲ್ಲಿ ಬೇರೂರಿರುವ ಒಂದು ಸಶಸ್ತ್ರ ಹೋರಾಟವಾಗಿದೆ. ಸಮಾಜದಲ್ಲಿರುವ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಕ್ರಾಂತಿಯ ಮೂಲಕ ಸರ್ಕಾರವನ್ನು ಉರುಳಿಸಿ 'ಜನತಾ ಸರ್ಕಾರ' ಸ್ಥಾಪಿಸುವ ಪ್ರಯತ್ನವೇ ಇದರ ಮೂಲ ಉದ್ಧೇಶ.
ನಕ್ಸಲಿಸಂನ ಉಗಮ ಮತ್ತು ಇತಿಹಾಸ
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬಾರಿ ಎಂಬ ಗ್ರಾಮದಲ್ಲಿ ಉಗಮಿಸಿದ ಈ ಚಳವಳಿಯು 1967 ರಲ್ಲಿ ಸ್ಥಳೀಯ ಜಮೀನ್ದಾರರ ವಿರುದ್ಧ ಚಾರು ಮಜುಂದಾರ್, ಜಂಗಲ್ ಸಂತಾಲ್ ಮತ್ತು ಕಾನು ಸನ್ಯಾಲ್ ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಈ ದಂಗೆಯು ಶೋಷಣೆಯ ವಿರುದ್ಧ ಪ್ರತಿಭಟಿಸಿತು ಮತ್ತು ಭೂ ಸುಧಾರಣೆಗಳಿಗೆ ಒತ್ತಾಯಿಸಿತು.
• ಸಿಪಿಐ (ಮಾರ್ಕ್ಸ್ವಾದಿ-ಲೆನಿನಿಸ್ಟ್) ರಚನೆ (1969): ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ಸಿದ್ಧಾಂತ) ಒಳಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಂತರ, ಚಾರು ಮಜುಂದಾರ್ ಮತ್ತು ಕಾನು ಸನ್ಯಾಲ್ ಅವರಂತಹ ನಾಯಕರು ಸಶಸ್ತ್ರ ಕ್ರಾಂತಿಯನ್ನು ಮುಂದುವರಿಸಲು ಸಿಪಿಐ (ಎಂಎಲ್) ಅನ್ನು ಸ್ಥಾಪಿಸಿದರು.
• ಇತರ ರಾಜ್ಯಗಳಿಗೆ ವಿಸ್ತರಣೆ (1970ರ ದಶಕ): ನಕ್ಸಲೈಟ್ ಚಳವಳಿಯು ಪಶ್ಚಿಮ ಬಂಗಾಳದಿಂದ ಆಂಧ್ರಪ್ರದೇಶ, ಬಿಹಾರ, ಒಡಿಶಾ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿತು ಮತ್ತು ನಿರ್ಲಕ್ಷಿತ ಸಮುದಾಯಗಳ ಬೆಂಬಲವನ್ನು ಪಡೆಯಿತು.
• ಸರ್ಕಾರದ ನಿಗ್ರಹ ಮತ್ತು ಆಪರೇಷನ್ ಸ್ಟೀಪಲ್‌ಚೇಸ್ (1971-1972): ಭಾರತ ಸರ್ಕಾರವು ನಕ್ಸಲೈಟ್ ಚಟುವಟಿಕೆಗಳನ್ನು ಹತ್ತಿಕ್ಕಲು ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಇದರ ಪರಿಣಾಮವಾಗಿ 1972 ರಲ್ಲಿ ಚಾರು ಮಜುಂದಾರ್ ಸೇರಿದಂತೆ ಪ್ರಮುಖ ನಾಯಕರ ಬಂಧನ ಮತ್ತು ಸಾವು ಸಂಭವಿಸಿತು.
• ಹೊಸ ಗುಂಪುಗಳ ಉಗಮ (1980-1990ರ ದಶಕ): ಹಿನ್ನಡೆಗಳ ಹೊರತಾಗಿಯೂ, ಪೀಪಲ್ಸ್ ವಾರ್ ಗ್ರೂಪ್ (PWG) ಮತ್ತು ಮಾವೋಯಿಸ್ಟ್ ಕಮ್ಯುನಿಸ್ಟ್ ಸೆಂಟರ್ (MCC) ನಂತಹ ಬಣಗಳು ಹೊರಹೊಮ್ಮಿದವು, ಮಾವೋವಾದಿ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ ದಂಗೆಯನ್ನು ಮುಂದುವರಿಸಿದವು.
• ಸಿಪಿಐ (ಮಾವೋವಾದಿ) ರಚನೆ (2004): PWG ಮತ್ತು MCC ವಿಲೀನಗೊಂಡು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ರಚನೆಯಾಯಿತು. ಇದು ದಂಗೆಯ ಪ್ರಯತ್ನಗಳನ್ನು ತೀವ್ರಗೊಳಿಸಿತು.
• ಸರ್ಕಾರದ ಪ್ರತಿಕ್ರಮಗಳು (2000 ರಿಂದ ಪ್ರಸ್ತುತ): ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಮೂಲಭೂತ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರವು ಭದ್ರತಾ ಕಾರ್ಯಾಚರಣೆಗಳು ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಜಾರಿಗೆ ತಂದಿದೆ.
ನಕ್ಸಲಿಸಂನ ವಿವಿಧ ಹಂತಗಳು
ಮೊದಲ ಹಂತ (1967–1974): ನಕ್ಸಲ್ಬಾರಿ ದಂಗೆ ಮತ್ತು ಸಿಪಿಐ (ಎಂಎಲ್) ಸ್ಥಾಪನೆ. 1972ರಲ್ಲಿ ಚಾರು ಮಜುಂದಾರ್ ಅವರ ಸಾವಿನ ನಂತರ ಚಳವಳಿಯು ತುಸು ಹಿನ್ನಡೆ ಅನುಭವಿಸಿತು.
ಎರಡನೇ ಹಂತ (1980ರ ದಶಕ): ಆಂಧ್ರಪ್ರದೇಶದಲ್ಲಿ 'ಪೀಪಲ್ಸ್ ವಾರ್ ಗ್ರೂಪ್' (PWG) ಸ್ಥಾಪನೆಯೊಂದಿಗೆ ಚಳವಳಿಯು ಹೆಚ್ಚು ಹಿಂಸಾತ್ಮಕ ರೂಪ ಪಡೆಯಿತು.
ಮೂರನೇ ಹಂತ (2004 ರಿಂದ ಪ್ರಸ್ತುತ): PWG ಮತ್ತು MCC ಸಂಘಟನೆಗಳು ವಿಲೀನಗೊಂಡು ಸಿಪಿಐ (ಮಾವೋವಾದಿ) ಎಂಬ ಪ್ರಬಲ ಸಂಘಟನೆ ಅಸ್ತಿತ್ವಕ್ಕೆ ಬಂದಿತು. ಇದು "ರೆಡ್ ಕಾರಿಡಾರ್" (ಕೆಂಪು ಕಾರಿಡಾರ್) ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿತು.
ಭಾರತದಲ್ಲಿನ ಪ್ರಮುಖ ನಕ್ಸಲ್ ದಾಳಿಗಳು
• ದಂತೇವಾಡ ದಾಳಿ (ಏಪ್ರಿಲ್ 6, 2010): 76 ಸಿಆರ್‌ಪಿಎಫ್ ಸಿಬ್ಬಂದಿಗಳ ಸಾವು.
• ದಂತೇವಾಡ ಬಸ್ ಬಾಂಬ್ ಸ್ಫೋಟ (ಮೇ 17, 2010): ನಾಗರಿಕ ಬಸ್ ಗುರಿಯಾಗಿಸಿ ನಡೆಸಿದ ಸ್ಫೋಟದಲ್ಲಿ 31 ರಿಂದ 44 ಜನರ ಸಾವು.
• ಜಹಾನಾಬಾದ್ ಜೈಲು ಭೇಟಿ (ನವೆಂಬರ್ 13, 2005): ಸಾವಿರಕ್ಕೂ ಹೆಚ್ಚು ನಕ್ಸಲರು ಜೈಲಿನ ಮೇಲೆ ದಾಳಿ ಮಾಡಿ 300ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಿದರು.
• ಇಂದ್ರಾವತಿ ಅರಣ್ಯ ಸಂಘರ್ಷ (ಫೆಬ್ರವರಿ 9, 2025): 31 ಬಂಡುಕೋರರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಸಾವು.
ನಕ್ಸಲಿಸಂಗೆ ಮುಖ್ಯ ಕಾರಣಗಳು
• ಭೂ ಸುಧಾರಣೆಯ ವೈಫಲ್ಯ: ಕೃಷಿ ಭುಮಿ ಇಲ್ಲದ ರೈತರಿಗೆ ಭೂಮಿ ಸಿಗದಿರುವುದು ಮತ್ತು ಜಮೀನ್ದಾರಿ ಪದ್ಧತಿಯ ಶೋಷಣೆ.
• ಬುಡಕಟ್ಟು ಸಮುದಾಯಗಳ ಸ್ಥಳಾಂತರ: ಗಣಿಗಾರಿಕೆ ಮತ್ತು ಕೈಗಾರಿಕೀಕರಣದ ಹೆಸರಿನಲ್ಲಿ ಆದಿವಾಸಿಗಳನ್ನು ಅವರ ಮೂಲ ನೆಲೆಯಿಂದ ಒಕ್ಕಲೆಬ್ಬಿಸುವುದು.
• ಬಡತನ ಮತ್ತು ನಿರುದ್ಯೋಗ: ಮೂಲಭೂತ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಯುವಕರು ನಕ್ಸಲ್ ಸಿದ್ಧಾಂತಕ್ಕೆ ಆಕರ್ಷಿತರಾಗುವುದು.
• ಆಡಳಿತಾತ್ಮಕ ವೈಫಲ್ಯ: ಸರ್ಕಾರಿ ಸೌಲಭ್ಯಗಳು ಜನರಿಗೆ ತಲುಪದಿರುವುದು ಮತ್ತು ಭ್ರಷ್ಟಾಚಾರ.
ಸವಾಲುಗಳು ಮತ್ತು ಅಡ್ಡಿಗಳು
ನಕ್ಸಲಿಸಂಅನ್ನು ಹತ್ತಿಕ್ಕುವಲ್ಲಿ ಸರ್ಕಾರಕ್ಕೆ ಹಲವಾರು ಗಂಭೀರ ಅಡೆತಡೆಗಳಿದ್ದು, ವಿಶೇಷವಾಗಿ ದಟ್ಟವಾದ ಅರಣ್ಯ ಪ್ರದೇಶಗಳ ಕಠಿಣ ಭೌಗೋಳಿಕ ಪರಿಸ್ಥಿತಿಯು ನಕ್ಸಲರಿಗೆ ಸುರಕ್ಷಿತ ಅಡಗುದಾಣವಾಗಿ ಪರಿಣಮಿಸಿದೆ. ಇದರೊಂದಿಗೆ, ನಕ್ಸಲರು ಅನುಸರಿಸುವ ಹೊಂಚು ಹಾಕಿ ದಾಳಿ ಮಾಡುವ 'ಗೆರಿಲ್ಲಾ ಯುದ್ಧತಂತ್ರ'ವು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿದ್ದರೆ, ಮತ್ತೊಂದೆಡೆ ವ್ಯವಸ್ಥೆಯ ಮೇಲಿನ ಅಸಮಾಧಾನ ಅಥವಾ ನಕ್ಸಲರ ಭೀತಿಯಿಂದಾಗಿ ಸ್ಥಳೀಯರು ಅವರಿಗೆ ಗುಪ್ತಚರ ಮಾಹಿತಿ ನೀಡಿ ಬೆಂಬಲಿಸುವುದು ಕಾರ್ಯಾಚರಣೆಯ ಯಶಸ್ಸಿಗೆ ಪ್ರಬಲ ಅಡ್ಡಿಯಾಗಿದೆ.
ಸರ್ಕಾರದ ಕ್ರಮಗಳು ಮತ್ತು ಪ್ರಚಲಿತ ಸ್ಥಿತಿ
ಭಾರತ ಸರ್ಕಾರವು ನಕ್ಸಲಿಸಂ ವಿರುದ್ಧ 'ಸಮಾಧಾನ್' (SAMADHAN) ಎಂಬ ಸಮಗ್ರ ಕಾರ್ಯತಂತ್ರವನ್ನು ಜಾರಿಗೆ ತಂದಿದೆ.
S - ಸ್ಮಾರ್ಟ್ ನಾಯಕತ್ವ (Smart Leadership)
A - ಆಕ್ರಮಣಕಾರಿ ಕಾರ್ಯತಂತ್ರ (Aggressive Strategy)
M - ಪ್ರೇರಣೆ ಮತ್ತು ತರಬೇತಿ (Motivation and Training)
A - ಕ್ರಿಯಾಶೀಲ ಗುಪ್ತಚರ ಮಾಹಿತಿ (Actionable Intelligence)
D - ಡ್ಯಾಶ್‌ಬೋರ್ಡ್ ಆಧಾರಿತ ಮೇಲ್ವಿಚಾರಣೆ
H - ತಂತ್ರಜ್ಞಾನದ ಬಳಕೆ (Harnessing Technology)
A - ಆಕ್ಷನ್ ಪ್ಲಾನ್ (Action Plan)
N - ಹಣಕಾಸು ಮೂಲಗಳ ಕಡಿತ (No financial access)

