ಭಾರತವೀಗ ಬಹುತೇಕ ನಕ್ಸಲ್ ಮುಕ್ತ: ಲೋಕಸಭೆಯಲ್ಲಿ ಅಮಿತ್ ಶಾ ಹೇಳಿಕೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
x

'ಭಾರತವೀಗ ಬಹುತೇಕ ನಕ್ಸಲ್ ಮುಕ್ತ': ಲೋಕಸಭೆಯಲ್ಲಿ ಅಮಿತ್ ಶಾ ಹೇಳಿಕೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ನಕ್ಸಲರು ಹಿಂಸಾಚಾರದ ಹಾದಿ ಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಮರಳಬೇಕು ಎಂದು ಸರ್ಕಾರ ನಿರಂತರವಾಗಿ ಕರೆ ನೀಡುತ್ತಲೇ ಬಂದಿದ್ದು, ಅದನ್ನು ಪಾಲಿಸಬೇಕು ಎಂದು ಶಾ ಹೇಳಿದ್ದಾರೆ.


Click the Play button to hear this message in audio format

ದೇಶದ ಆಂತರಿಕ ಭದ್ರತೆಗೆ ದಶಕಗಳಿಂದ ದೊಡ್ಡ ಕಂಟಕವಾಗಿದ್ದ ನಕ್ಸಲ್ ಸಮಸ್ಯೆಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದ್ದು, ಭಾರತವು ಇದೀಗ ಬಹುತೇಕ ನಕ್ಸಲ್ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

2026ರ ಮಾರ್ಚ್ 31ರೊಳಗೆ ದೇಶವನ್ನು ಸಂಪೂರ್ಣವಾಗಿ ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿತ್ತು. ಈ ಕಾರ್ಯಾಚರಣೆ ಬಹುತೇಕ ಅಂತಿಮ ಘಟ್ಟದಲ್ಲಿದ್ದು, ಪ್ರಕ್ರಿಯೆ ಸಂಪೂರ್ಣಗೊಂಡ ತಕ್ಷಣವೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ಇದು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಅತಿ ದೊಡ್ಡ ಮೈಲಿಗಲ್ಲಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ವಿಪಕ್ಷಗಳ ಓಲೈಕೆ ರಾಜಕಾರಣವೇ ಅಶಾಂತಿಗೆ ಕಾರಣ

ನಕ್ಸಲಿಸಂ ನಿರ್ಮೂಲನೆ ಕುರಿತು ಮಾತನಾಡುವಾಗ ವಿರೋಧ ಪಕ್ಷಗಳ ವಿರುದ್ಧ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದರು. ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ವಿಪಕ್ಷಗಳು ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಿವೆ ಎಂದು ಅವರು ನೇರ ಆರೋಪ ಮಾಡಿದರು. ಎಡಪಂಥೀಯ ಸಿದ್ಧಾಂತದ ಪ್ರಭಾವದಿಂದಲೇ ನಕ್ಸಲಿಸಂ ವ್ಯಾಪಕವಾಗಿ ಹರಡಿತು. ದಶಕಗಳ ಕಾಲ ದೇಶವನ್ನು ಆಳಿದರೂ ವಿರೋಧ ಪಕ್ಷಗಳು ಈ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ ಎಂಬುದು ಅವರ ಪ್ರಶ್ನೆಯಾಗಿತ್ತು. ನಕ್ಸಲ್ ಸಿದ್ಧಾಂತವನ್ನು ಈಗಲೂ ಬೆಂಬಲಿಸುವವರು ನಿಜಕ್ಕೂ ಭಾರತೀಯ ಸಂವಿಧಾನವನ್ನು ಗೌರವಿಸುತ್ತಾರೆಯೇ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಬಸ್ತಾರ್ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಪರ್ವ

ಕೇವಲ ಬಂದೂಕಿನ ಮೂಲಕವಲ್ಲದೆ, ಅಭಿವೃದ್ಧಿಯ ಮೂಲಕವೂ ನಕ್ಸಲ್ ಸಮಸ್ಯೆಗೆ ಅಂತ್ಯ ಹಾಡಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಗೃಹ ಸಚಿವರು ವಿವರಿಸಿದರು. ಒಂದು ಕಾಲದಲ್ಲಿ ನಕ್ಸಲರ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢದ ಬಸ್ತಾರ್‌ನಂತಹ ಪ್ರದೇಶಗಳಲ್ಲಿ ಇಂದು ಹಿಂಸಾಚಾರ ಬಹುತೇಕ ಅಂತ್ಯಗೊಂಡಿದೆ. ಹಿಂದೆ ಸೂಕ್ತ ಮೂಲಸೌಕರ್ಯಗಳಿಲ್ಲದೆ ಲಕ್ಷಾಂತರ ಜನರು ಬಡತನದ ಬೇಗೆಯಲ್ಲಿ ನರಳುತ್ತಿದ್ದರು. ಹಿಂಸಾಚಾರಕ್ಕೆ ಸಿಲುಕಿ ಸಾವಿರಾರು ಯುವಕರು ಪ್ರಾಣ ಕಳೆದುಕೊಂಡಿದ್ದರು. ಆದರೆ, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಭದ್ರತೆಯ ಜೊತೆಗೆ ಈ ಹಿಂದಿನ ನಿರ್ಲಕ್ಷಿತ ಪ್ರದೇಶಗಳಿಗೂ ಅಭಿವೃದ್ಧಿ ಯೋಜನೆಗಳನ್ನು ಸಮರೋಪಾದಿಯಲ್ಲಿ ತಲುಪಿಸಲಾಗುತ್ತಿದೆ ಎಂದು ಶಾ ತಿಳಿಸಿದರು.

ಶಸ್ತ್ರ ತ್ಯಜಿಸಿದರೆ ಪುನರ್ವಸತಿ, ಇಲ್ಲದಿದ್ದರೆ ತಕ್ಕ ಶಾಸ್ತಿ

ನಕ್ಸಲರು ಹಿಂಸಾಚಾರದ ಹಾದಿ ಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಮರಳಬೇಕು ಎಂದು ಸರ್ಕಾರ ನಿರಂತರವಾಗಿ ಕರೆ ನೀಡುತ್ತಲೇ ಬಂದಿದೆ. ಶರಣಾಗುವವರಿಗೆ ಗೌರವಾನ್ವಿತ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಎಲ್ಲ ರೀತಿಯ ಪುನರ್ವಸತಿ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವರು ಭರವಸೆ ನೀಡಿದರು. ಆದರೆ, ಈ ಕರೆಯ ನಡುವೆಯೂ ಹಿಂಸಾಚಾರ ಮುಂದುವರಿಸುವವರಿಗೆ ಅದೇ ಭಾಷೆಯಲ್ಲಿಯೇ ಕಠಿಣ ಉತ್ತರ ನೀಡಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲೊಡ್ಡುವವರ ವಿರುದ್ಧ ಭದ್ರತಾ ಪಡೆಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿವೆ ಎಂದು ಅವರು ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದರು.

Read More
Next Story