Messi Received ₹89 Crore for 22-Minute Appearance on India Tour
x

ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ 

ಇಂಡಿಯಾ ಟೂರ್​ನಲ್ಲಿ 22 ನಿಮಿಷಕ್ಕೆ 89 ಕೋಟಿ ರೂ. ಪಡೆದಿದ್ದ ಫುಟ್ಬಾಲ್ ತಾರೆ ಮೆಸ್ಸಿ

ಡಿಸೆಂಬರ್ 13 ರಂದು ನಡೆದ ಈ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ, ಅಭಿಮಾನಿಗಳು ಮೈದಾನಕ್ಕೆ ಬಾಟಲಿ ಮತ್ತು ಕುರ್ಚಿಗಳನ್ನು ಎಸೆದಿದ್ದರಿಂದ, ವಿಶ್ವಕಪ್ ವಿಜೇತ ಆಟಗಾರ ಮೆಸ್ಸಿ ಕೇವಲ 22 ನಿಮಿಷಗಳಲ್ಲಿ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಿ ನಿರ್ಗಮಿಸಿದ್ದರು.


Click the Play button to hear this message in audio format

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಇತ್ತೀಚಿನ ಭಾರತ ಪ್ರವಾಸದ ವೇಳೆ ಕೊಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ಮೆಸ್ಸಿ ಬರೋಬ್ಬರಿ 89 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ, ಕಾರ್ಯಕ್ರಮದ ವೇಳೆ ಅವರನ್ನು ಮುಟ್ಟಿದ್ದು ಮತ್ತು ತಬ್ಬಿಕೊಂಡಿದ್ದು ಅವರಿಗೆ ತೀವ್ರ ಅಸಮಾಧಾನ ತಂದಿತ್ತು ಎಂದು ಬಂಧಿತ ಮುಖ್ಯ ಸಂಘಟಕ ಸತದ್ರು ದತ್ತಾ ಬಹಿರಂಗಪಡಿಸಿದ್ದಾರೆ.

ಡಿಸೆಂಬರ್ 13 ರಂದು ನಡೆದ ಈ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ, ಅಭಿಮಾನಿಗಳು ಮೈದಾನಕ್ಕೆ ಬಾಟಲಿ ಮತ್ತು ಕುರ್ಚಿಗಳನ್ನು ಎಸೆದಿದ್ದರಿಂದ, ವಿಶ್ವಕಪ್ ವಿಜೇತ ಆಟಗಾರ ಮೆಸ್ಸಿ ಕೇವಲ 22 ನಿಮಿಷಗಳಲ್ಲಿ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಿ ನಿರ್ಗಮಿಸಿದ್ದರು.

ಮೈ ಮುಟ್ಟಿದ್ದಕ್ಕೆ ಗರಂ ಆದ ಮೆಸ್ಸಿ

ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳ ವಿಚಾರಣೆ ವೇಳೆ ದತ್ತಾ ಈ ವಿಷಯಗಳನ್ನು ಬಾಯಿಬಿಟ್ಟಿದ್ದಾರೆ. "ಮೆಸ್ಸಿ ಅವರನ್ನು ಬೆನ್ನಿನ ಮೇಲೆ ಮುಟ್ಟುವುದು ಅಥವಾ ತಬ್ಬಿಕೊಳ್ಳುವುದನ್ನು ಅವರು ಇಷ್ಟಪಡುವುದಿಲ್ಲ ಎಂದು ಅವರ ವಿದೇಶಿ ಭದ್ರತಾ ಸಿಬ್ಬಂದಿ ಮೊದಲೇ ಎಚ್ಚರಿಸಿದ್ದರು. ಜನಸಂದಣಿಯನ್ನು ನಿಯಂತ್ರಿಸಲು ಮೈಕ್‌ನಲ್ಲಿ ಪದೇ ಪದೇ ಘೋಷಣೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೆಸ್ಸಿ ಅವರನ್ನು ಸುತ್ತುವರಿದು ತಬ್ಬಿಕೊಂಡ ರೀತಿ ಅವರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಸರಿಗಾಣಲಿಲ್ಲ," ಎಂದು ದತ್ತಾ ಹೇಳಿದ್ದಾರೆ.

ಸಚಿವರ ಅತಿರೇಕ ಮತ್ತು ರಾಜೀನಾಮೆ

ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ಕಾರ್ಯಕ್ರಮದುದ್ದಕ್ಕೂ ಮೆಸ್ಸಿ ಅವರ ಹತ್ತಿರವೇ ಇದ್ದರು. ಫೋಟೋ ತೆಗೆಸಿಕೊಳ್ಳುವಾಗ ಮೆಸ್ಸಿ ಅವರ ಸೊಂಟದ ಮೇಲೆ ಕೈಹಾಕಿ ಹಿಡಿದುಕೊಂಡಿದ್ದ ದೃಶ್ಯಗಳು ವೈರಲ್ ಆಗಿದ್ದವು. ತಮ್ಮ ಪ್ರಭಾವ ಬಳಸಿ ಸಂಬಂಧಿಕರಿಗೆ ಮತ್ತು ಪರಿಚಯಸ್ಥರಿಗೆ ಮೆಸ್ಸಿಯನ್ನು ಭೇಟಿ ಮಾಡಿಸಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ. ಈ ಅವ್ಯವಸ್ಥೆ ಮತ್ತು ಟೀಕೆಗಳ ನಂತರ, ತನಿಖೆ ಪೂರ್ಣಗೊಳ್ಳುವವರೆಗೆ ಅವರು ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

100 ಕೋಟಿ ರೂ. ವೆಚ್ಚದ ಪ್ರವಾಸ!

ದತ್ತಾ ಅವರು ಮೆಸ್ಸಿ ಪ್ರವಾಸದ ಆರ್ಥಿಕ ವಿವರಗಳನ್ನೂ ನೀಡಿದ್ದಾರೆ. ಮೆಸ್ಸಿ ಅವರ ಈ 'G.O.A.T ಇಂಡಿಯಾ ಟೂರ್'ಗಾಗಿ ಒಟ್ಟು 100 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ 89 ಕೋಟಿ ರೂ.ಗಳನ್ನು ಮೆಸ್ಸಿಗೆ ಸಂಭಾವನೆಯಾಗಿ ನೀಡಲಾಗಿದ್ದು, 11 ಕೋಟಿ ರೂ. ತೆರಿಗೆ ರೂಪದಲ್ಲಿ (Tax) ಭಾರತ ಸರ್ಕಾರಕ್ಕೆ ಪಾವತಿಸಲಾಗಿದೆ. ಈ ಮೊತ್ತದಲ್ಲಿ ಶೇ.30ರಷ್ಟು ಪ್ರಾಯೋಜಕರಿಂದ ಮತ್ತು ಶೇ.30ರಷ್ಟು ಟಿಕೆಟ್ ಮಾರಾಟದಿಂದ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

'ಪ್ರಭಾವಿ ವ್ಯಕ್ತಿ'ಯಿಂದ ಹದಗೆಟ್ಟ ವ್ಯವಸ್ಥೆ

ಆರಂಭದಲ್ಲಿ ಕೇವಲ 150 ಗ್ರೌಂಡ್ ಪಾಸ್‌ಗಳನ್ನು ನೀಡಲು ನಿರ್ಧರಿಸಲಾಗಿತ್ತು. ಆದರೆ, ಒಬ್ಬರು "ಅತ್ಯಂತ ಪ್ರಭಾವಿ ವ್ಯಕ್ತಿ" ಕ್ರೀಡಾಂಗಣಕ್ಕೆ ಬಂದು ಒತ್ತಡ ಹೇರಿದ ನಂತರ ಈ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಾಯಿತು. ಆ ವ್ಯಕ್ತಿಯ ಆಗಮನದ ನಂತರ ಇಡೀ ಕಾರ್ಯಕ್ರಮದ ನೀಲನಕ್ಷೆಯೇ ಬದಲಾಯಿತು ಮತ್ತು ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ದತ್ತಾ ಆರೋಪಿಸಿದ್ದಾರೆ.

ಸದ್ಯ ಪಶ್ಚಿಮ ಬಂಗಾಳ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಭದ್ರತಾ ವೈಫಲ್ಯ ಮತ್ತು ಆಯೋಜಕರ ಪಾತ್ರದ ಬಗ್ಗೆ ತನಿಖೆ ಮುಂದುವರಿಸಿದೆ.

Read More
Next Story