Here is the complete schedule of Indias T20 World Cup, IPL and bilateral series!
x

ಎಐ ಆಧಾರಿತ ಚಿತ್ರ

ಭಾರತ ತಂಡದ ಟಿ20 ವಿಶ್ವಕಪ್, ಐಪಿಎಲ್ ಹಾಗೂ ದ್ವಿಪಕ್ಷೀಯ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

ಮಾರ್ಚ್ 26 ರಿಂದ ಮೇ 31 ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿದ್ದು, ಈ ವೇಳೆ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಿರುವುದಿಲ್ಲ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.


Click the Play button to hear this message in audio format

ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ 2026ರಲ್ಲಿ ರಸದೌತಣ ಉಣಬಡಿಸಲು ಬಿಸಿಸಿಐ ಹಾಗೂ ಐಸಿಸಿ ಸಿದ್ಧತೆ ನಡೆಸಿವೆ. ಭಾರತದ ಪುರುಷ ಹಾಗೂ ಮಹಿಳಾ ತಂಡಗಳಿಗೆ ಈ ಸಾಲಿನಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಸಿದ್ಧಪಡಿಸಿದ್ದು ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಲಿವೆ.

ಭಾರತದ ಪುರುಷರ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್‌, ಐಪಿಎಲ್‌ ಹಾಗೂ ಹಲವು ದ್ವಿಪಕ್ಷೀಯ ಸರಣಿಗಳಲ್ಲಿ ಭಾಗವಹಿಸಲಿದೆ. ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಈಗಾಗಲೇ ಎರಡೂ ತಂಡಗಳು ಸದಸ್ಯರನ್ನೂ ಪ್ರಕಟಿಸಿವೆ. ಜನವರಿ 11ರಿಂದ 31ರವರೆಗೆ ನಡೆಯಲಿರುವ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳಲ್ಲಿ ಭಾಗವಹಿಸಲಿದೆ.

ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿವೆ. ಭಾರತದ ಗುಂಪು ಹಂತದಲ್ಲಿ ಫೆ.7ರಂದು ಯುಎಸ್ಎ, ಫೆ.12ರಂದು ನಮೀಬಿಯಾ, ಫೆ.15ರಂದು ಪಾಕಿಸ್ತಾನ, ಫೆ. 18ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯಗಳನ್ನು ಆಡಲಿದ್ದು, ಪಾಕಿಸ್ತಾನದ ವಿರುದ್ದದ ಪಂದ್ಯಕ್ಕೆ ಅಭಿಮಾನಿಗಳೂ ಕಾಯುತ್ತಿದ್ದಾರೆ.

ಮಾರ್ಚ್‌ 26ಕ್ಕೆ ಐಪಿಎಲ್‌ ಆರಂಭ

ಮಾರ್ಚ್ 26 ರಿಂದ ಮೇ 31 ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿದ್ದು ಈ ವೇಳೆ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಿರುವುದಿಲ್ಲ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಲಿದ್ದು ಎರಡು ತಿಂಗಳು ನಿರಂತರವಾಗಿ ಪಂದ್ಯಗಳು ನಡೆಯಲಿವೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣ

ಜೂನ್‌ನಲ್ಲಿ ಅಫ್ಘಾನಿಸ್ತಾನ ತಂಡ ಭಾರತದಲ್ಲಿ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳು ಆಡಲಿದೆ. ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಟಿ20 ಸರಣೆ, ಮೂರು ಪಂದ್ಯಗಳ ಏಕದಿನ ಸರಣಿಯಾಡಲಿದೆ. ನಂತರ ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಭಾಗವಾಗಿ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಬಾಂಗ್ಲಾ ಸರಣಿ ಮೇಲೆ ಕಾರ್ಮೋಡ

ಸೆಪ್ಟೆಂಬರ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶಕ್ಕೆ ಪ್ರವಾಸ ಮಾಡಲಿದ್ದು, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಾಡಲಿದೆ. ಆದರೆ ಇದೀಗ ಐಪಿಎಲ್‌ನಲ್ಲಿ ಬಾಂಗ್ಲಾ ಆಟಗಾರ ಮುಸ್ತಿಫಿಜುರ್‌ ರೆಹಮಾನ್‌ ಅವರನ್ನು ಆಡಿಸದಂತೆ ಬಿಸಿಸಿಐ ಸೂಚಿಸಿದ್ದು, ಐಪಿಎಲ್‌ ಪ್ರಸಾರ ಮಾಡುವುದಿಲ್ಲ ಎಂದು ಬಾಂಗ್ಲಾ ತಿಳಿಸಿದೆ. ಇದು ಎರಡೂ ದೇಶಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದು, ಈ ಸರಣಿ ಮೇಲೆ ಕಾರ್ಮೋಡ ಕವಿದಿದೆ.

ಭಾರತ ಕ್ರಿಕೆಟ್‌ ತಂಡ

ವರ್ಷಾಂತ್ಯಕ್ಕೆ ನ್ಯೂಜಿಲೆಂಡ್‌ ಪ್ರವಾಸ

ಸೆಪ್ಟೆಂಬರ್ ಅಂತ್ಯ ಹಾಗೂ ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ನಡೆಯುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡ ಪಾಲ್ಗೊಳ್ಳಲಿದ್ದು, ನಂತರ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಸರಣಿಯಾಡಲಿದೆ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಎರಡು ಟೆಸ್ಟ್‌, ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನು ಆಡಲಿದ್ದು, ವರ್ಷದ ಕೊನೆಗೆ ಶ್ರೀಲಂಕಾ ತಂಡ ಭಾರತಕ್ಕೆ ಪ್ರವಾಸ ಕೈಗೊಂಡು ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಾಡಲಿದೆ.

ಇಂಗ್ಲೆಂಡ್‌ನಲ್ಲಿ ಮಹಿಳಾ ವಿಶ್ವಕಪ್‌

2026ರ ಸಾಲಿನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಟೂರ್ನಿ ಮತ್ತು ಪ್ರಮುಖ ದ್ವಿಪಕ್ಷೀಯ ಸರಣಿಗಳನ್ನು ಆಡಲಿದ್ದು, ಇದರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪ್ರಮುಖವಾಗಿದೆ. ವರ್ಷದ ಆರಂಭದಲ್ಲಿ ಐರ್ಲೆಂಡ್ ಮಹಿಳಾ ತಂಡವು ಭಾರತಕ್ಕೆ ಭೇಟಿ ನೀಡಲಿದ್ದು, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿ ಐಸಿಸಿ ವುಮೆನ್ಸ್ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ.

ಏಕದಿನ ವಿಶ್ವಕಪ್‌ ಗೆದ್ದಿದ್ದ ಭಾರತ ಮಹಿಳಾ ತಂಡ

ಫೆಬ್ರವರಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್

ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಸುಮಾರು ಒಂದು ತಿಂಗಳ ಕಾಲ ಭಾರತದ ಸ್ಟಾರ್ ಆಟಗಾರ್ತಿಯರು ವಿವಿಧ ಫ್ರಾಂಚೈಸಿಗಳ ಪರ ಆಡಲಿದ್ದಾರೆ. ಜೂನ್ ಹಾಗೂ ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸ ಮಾಡಲಿದ್ದು, ಒಂದು ಟೆಸ್ಟ್, ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿ ಆಡಲಿದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಅಥವಾ ಅವರನ್ನು ತವರಿನಲ್ಲಿ ಎದುರಿಸುವ ಸಾಧ್ಯತೆಯಿದ್ದು ಇನ್ನಷ್ಟೇ ವೇಳಾಪಟ್ಟಿ ಅಂತಿಮವಾಗಬೇಕಿದೆ.

ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದು, ಕಳೆದ ಬಾರಿಯ ಸೆಮಿಫೈನಲ್ ಸೋಲಿನ ಕಹಿ ನೆನಪು ಮರೆತು ಚಾಂಪಿಯನ್ ಆಗುವ ಗುರಿ ಹೊಂದಿದೆ. ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಸೀಮಿತ ಓವರ್‌ಗಳ ಸರಣಿಯಾಡಲಿದೆ.

ಯುವ ಭಾರತಕ್ಕೆ ಅಗ್ನಿಪರೀಕ್ಷೆ

ಐಸಿಸಿ ಅಂಡರ್‌ 19 ಏಕದಿನ ವಿಶ್ವಕಪ್‌ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಈ ವರ್ಷ ನಡೆಯಲಿದೆ. ಭಾರತ ಅಂಡರ್‌ 19 ಪುರುಷರ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಈ ಟೂರ್ನಿ ನಡೆಯಲಿದೆ. ವಿಶ್ವಕಪ್ ಪೂರ್ವ ಸಿದ್ಧತೆಗಾಗಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತ್ರಿಕೋನ ಅಥವಾ ದ್ವಿಪಕ್ಷೀಯ ಸರಣಿಗಳನ್ನು ಆಡಲಿದೆ.

Read More
Next Story