ಐಸಿಸಿ ಕ್ರಿಕೆಟ್‌ ಪಂದ್ಯ : ಇತಿಹಾಸ ನಿರ್ಮಿಸಲು ಸಜ್ಜಾದ ಮಹಿಳಾ ಕ್ರಿಕೆಟ್‌ ತಂಡ
x

ಐಸಿಸಿ ಕ್ರಿಕೆಟ್‌ ಪಂದ್ಯ : ಇತಿಹಾಸ ನಿರ್ಮಿಸಲು ಸಜ್ಜಾದ ಮಹಿಳಾ ಕ್ರಿಕೆಟ್‌ ತಂಡ

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಕ್ರಿಕೆಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರೀ ನಗದು ಬಹುಮಾನ ನೀಡಲು ಬಿಸಿಸಿಐ ಸಿದ್ಧವಾಗಿದೆ. ಪುರುಷರ ತಂಡಕ್ಕೆ 125 ಕೋಟಿ ರೂ. ನೀಡಿದಂತೆ ಮಹಿಳಾ ತಂಡಕ್ಕೂ ನೀಡಲು ಚಿಂತನೆ


Click the Play button to hear this message in audio format

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಭಾನುವಾರ (ಇಂದು) ನಡೆಯುವ ಮಹಿಳಾ ಏಕದಿನ ವಿಶ್ವಕಪ್ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಕ್ರಿಕೆಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರೀ ನಗದು ಬಹುಮಾನ ನೀಡಲು ಬಿಸಿಸಿಐ ಸಿದ್ಧವಾಗಿದೆ. ಮೂಲಗಳ ಪ್ರಕಾರ ಸಮಾನ ವೇತನ ನೀತಿಯನ್ನು ಅನುಸರಿಸಲು ಮುಂದಾಗಿದೆ. ಪುರುಷರ ತಂಡಕ್ಕೆ ನೀಡಿದಂತೆ ಮಹಿಳಾ ತಂಡಕ್ಕೆ ಅದೇ ಪ್ರಮಾಣ ಬಹುಮಾನ ನೀಡುವ ಚಿಂತನೆ ನಡೆಸಿದೆ. ಹಿಂದಿನ ವರ್ಷ ಟಿ–20 ವಿಶ್ವಕಪ್ ಜಯಿಸಿದ ನಂತರ ರೋಹಿತ್ ಶರ್ಮಾ ನೇತೃತ್ವದ ಪುರುಷರ ತಂಡಕ್ಕೆ 125 ಕೋಟಿ ರೂ. ಬಹುಮಾನ ನೀಡಲಾಗಿತ್ತು. ಅದೇ ರೀತಿಯಲ್ಲಿ ಈ ಬಾರಿ ಮಹಿಳಾ ಕ್ರಿಕೆಟ್ ತಂಡ ಹಾಗೂ ಸಹಾಯಕ ಸಿಬ್ಬಂದಿಗೂ ಸಮಾನ ಪ್ರಮಾಣದ ನಗದು ಬಹುಮಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಕಳೆದ ದಶಕಗಳಲ್ಲಿ ತ್ಯಾಗದ ಪಯಣವನ್ನು ಕಂಡಿದೆ. ಒಮ್ಮೆ ರೈಲುಗಳಲ್ಲಿ ಅಸಂರಕ್ಷಿತ ಬೋಗಿಗಳಲ್ಲಿ ಪ್ರಯಾಣಿಸಿ, ವಸತಿಗೃಹದ ನೆಲದಲ್ಲಿ ಮಲಗುತ್ತಿದ್ದ ಈ ಕ್ರಿಕೆಟಿಗರು ಈಗ ಸಮಾನ ವೇತನ ಕುರಿತು ಚರ್ಚೆ ನಡೆಯುವ ಮಟ್ಟಕ್ಕೆ ಬಂದಿದ್ದಾರೆ ಎಂಬುದು ದೇಶದ ಕ್ರೀಡಾ ಪ್ರಗತಿಯ ಸಾಕ್ಷಿಯಾಗಿದೆ.

1998 ಮತ್ತು 2017ರಲ್ಲಿ ಎರಡು ಬಾರಿ ಫೈನಲ್‌ನಲ್ಲಿ ಸೋಲಿನ ಕಹಿ ಅನುಭವಿಸಿದ ಭಾರತದ ಮಹಿಳಾ ತಂಡವು ಇದೀಗ ಮೂರನೇ ಬಾರಿ ವಿಶ್ವಕಪ್ ಕಿರೀಟದ ಹೋರಾಟಕ್ಕೆ ಕಾಲಿಡುತ್ತಿದೆ. ಭಾರತೀಯ ಕ್ರೀಡಾಭಿಮಾನಿಗಳೆಲ್ಲರೂ ಈ ಬಾರಿ ಹರ್ಮನ್‌ಪ್ರೀತ್ ಕೌರ್‌ ನೇತೃತ್ವದ ತಂಡ ಇತಿಹಾಸ ನಿರ್ಮಿಸಲಿದೆ ಎಂಬ ಭರವಸೆಯಲ್ಲಿ ಕಾದಿದ್ದಾರೆ.

ಮಾಜಿ ನಾಯಕಿ, ಕಾಮೆಂಟೇಟರ್ ಶಾಂತಾ ರಂಗಸ್ವಾಮಿ ಅವರು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ತಂಡಕ್ಕೆ ಜಯ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ನಾವು ಅಸುರಕ್ಷಿತ ಬೋಗಿಗಳಲ್ಲಿ ಪ್ರಯಾಣ ಮಾಡುತ್ತಿದ್ದೆವು. ವಸತಿಗೃಹದ ನೆಲದಲ್ಲಿ ಮಲಗುತ್ತಿದ್ದೇವು. ನಮ್ಮ ಸ್ವಂತ ಹಾಸಿಗೆ ಹೊತ್ತೊಯ್ಯಬೇಕಾಗುತ್ತಿತ್ತು. ಕ್ರಿಕೆಟ್ ಕಿಟ್‌ನ್ನು ಬೆನ್ನಿಗೆ ಬ್ಯಾಕ್‌ಪ್ಯಾಕ್‌ನಂತೆ ಹೊತ್ತುಕೊಂಡು, ಮತ್ತೊಂದು ಕೈಯಲ್ಲಿ ಸೂಟ್‌ಕೇಸ್ ಹಿಡಿದು ಪ್ರಯಾಣಿಸುತ್ತಿದ್ದೆವು ಎಂದು ಮೆಲುಕು ಹಾಕಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದು, ಜಯಿಸಿದರೆ ಅದು ದೇಶದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ.

Read More
Next Story