
ರಾಜಸ್ಥಾನ್ ರಾಯಲ್ಸ್ ತಂಡವನ್ನು ಖರೀದಿಸಿದ ವಾಲ್‌ಮಾರ್ಟ್
ಐಪಿಎಲ್ 2026: ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬರೋಬ್ಬರಿ 1.6 ಬಿಲಿಯನ್ ಡಾಲರ್‌ಗೆ ಮಾರಾಟ
ಫ್ರಾಂಚೈಸಿಯ ಹಾಲಿ ಪಾಲುದಾರರಾಗಿರುವ ಕಾಲ್ ಸೋಮಾನಿ ಅವರ ನೇತೃತ್ವದ ಹಾಗೂ ಅಮೆರಿಕದ ದೈತ್ಯ ರೀಟೇಲ್ ಕಂಪನಿ ವಾಲ್‌ಮಾರ್ಟ್ ಒಳಗೊಂಡಿರುವ ಒಕ್ಕೂಟವು ಒಟ್ಟು 1.6 ಬಿಲಿಯನ್ ಡಾಲರ್‌ಗೆ ಖರೀದಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದ ಚೊಚ್ಚಲ ಚಾಂಪಿಯನ್ ಆಗಿರುವ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಫ್ರಾಂಚೈಸಿಯ ಸಂಪೂರ್ಣ ಮಾಲೀಕತ್ವವು ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಫ್ರಾಂಚೈಸಿಯ ಹಾಲಿ ಪಾಲುದಾರರಾಗಿರುವ ಕಾಲ್ ಸೋಮಾನಿ ಅವರ ನೇತೃತ್ವದ ಹಾಗೂ ಅಮೆರಿಕದ ದೈತ್ಯ ರೀಟೇಲ್ ಕಂಪನಿ ವಾಲ್‌ಮಾರ್ಟ್ ಒಳಗೊಂಡಿರುವ ಒಕ್ಕೂಟವು ಒಟ್ಟು 1.6 ಬಿಲಿಯನ್ ಡಾಲರ್‌ಗೆ (ಅಂದಾಜು 13 ಸಾವಿರ ಕೋಟಿ ರೂ.) ರಾಜಸ್ಥಾನ್ ರಾಯಲ್ಸ್ ತಂಡವನ್ನು ಖರೀದಿಸಿದೆ. ಪ್ರಸ್ತುತ ಐಪಿಎಲ್ 2026ರ ಟೂರ್ನಿಯು ನಡೆಯುತ್ತಿದ್ದು, ಟೂರ್ನಿ ಮುಕ್ತಾಯಗೊಂಡ ನಂತರ ಈ ವ್ಯವಹಾರದ ಸಂಪೂರ್ಣ ಪ್ರಕ್ರಿಯೆಯು ಅಧಿಕೃತವಾಗಿ ಪೂರ್ಣಗೊಳ್ಳಲಿದೆ.
ವಾಲ್‌ಮಾರ್ಟ್ ಮಾರುಕಟ್ಟೆ ವಿಸ್ತರಣೆ
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ಅನ್ನು 16 ಬಿಲಿಯನ್ ಡಾಲರ್‌ಗೆ ಖರೀದಿಸಿ ಭದ್ರ ಬುನಾದಿ ಹಾಕಿರುವ ವಾಲ್‌ಮಾರ್ಟ್ ಕಂಪನಿಯು ಇದೀಗ ಐಪಿಎಲ್ ಮೂಲಕ ಕ್ರೀಡಾ ವಲಯಕ್ಕೂ ಲಗ್ಗೆ ಇಟ್ಟಿದೆ. ವಾಲ್‌ಮಾರ್ಟ್‌ನ ಈ ಪಾಲ್ಗೊಳ್ಳುವಿಕೆಯು ರಾಜಸ್ಥಾನ್ ರಾಯಲ್ಸ್ ತಂಡದ ಮರ್ಚಂಡೈಸಿಂಗ್ (ಜೆರ್ಸಿ, ಲೋಗೊ ಇತ್ಯಾದಿ ಉತ್ಪನ್ನಗಳ ಮಾರಾಟ) ಮತ್ತು ಡಿಜಿಟಲ್ ವ್ಯಾಪ್ತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಭಾರಿ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರಿದಂತೆ ಇತರೆ ಐಪಿಎಲ್ ತಂಡಗಳ ಮೌಲ್ಯವು ಇದಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ ಎಂಬ ವದಂತಿಗಳ ನಡುವೆಯೇ, ತಂಡದ ಸ್ಥಿರತೆ ಹಾಗೂ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ.
1.7 ಬಿಲಿಯನ್ ಡಾಲರ್ ಬಿಡ್ ತಿರಸ್ಕರಿಸಿದ್ದ ಫ್ರಾಂಚೈಸಿ
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಖರೀದಿಸಲು ಒಟ್ಟು ನಾಲ್ಕು ಭಾರಿ ಮೊತ್ತದ ಪ್ರಸ್ತಾವನೆಗಳು ಬಂದಿದ್ದವು. ವಿಶೇಷವೆಂದರೆ, ಕೊಲಂಬಿಯಾ ಪಾರ್ಟ್‌ನರ್ಸ್ ಎಂಬ ಸಂಸ್ಥೆಯು ಬರೋಬ್ಬರಿ 1.7 ಬಿಲಿಯನ್ ಡಾಲರ್ ಮೊತ್ತದ ಬಿಡ್ ಸಲ್ಲಿಸಿದ್ದರೂ ಆರ್‌ಆರ್ ಆಡಳಿತ ಮಂಡಳಿಯು ಅದನ್ನು ತಿರಸ್ಕರಿಸಿ, ಕಾಲ್ ಸೋಮಾನಿ ಅವರ ಒಕ್ಕೂಟವನ್ನು ಆಯ್ಕೆ ಮಾಡಿಕೊಂಡಿದೆ. ಐಪಿಎಲ್ ಟೂರ್ನಿಯ ಪ್ರಸಾರ ಹಕ್ಕುಗಳ ಮೌಲ್ಯವು ಇತ್ತೀಚೆಗೆ ಬರೋಬ್ಬರಿ 15 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿರುವುದು, ಫ್ರಾಂಚೈಸಿಗಳ ಮಾರುಕಟ್ಟೆ ಮೌಲ್ಯ (Valuation) ಈ ಮಟ್ಟಕ್ಕೆ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ. 2008ರಲ್ಲಿ ಮೊದಲ ಬಾರಿ ಕಪ್ ಗೆದ್ದಿದ್ದ ಆರ್‌ಆರ್ ತಂಡವು ತನ್ನ ಬ್ರ್ಯಾಂಡ್ ಮೌಲ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಾ ಬಂದಿದೆ.

