ಆರ್‌ಸಿಬಿಯ ಭಾವುಕ ನಿರ್ಧಾರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳು ಶಾಶ್ವತ ಖಾಲಿ
x

ಆರ್‌ಸಿಬಿಯ ಭಾವುಕ ನಿರ್ಧಾರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳು ಶಾಶ್ವತ ಖಾಲಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹಾಗೂ ಆರ್‌ಸಿಬಿ ಫ್ರಾಂಚೈಸಿಯು ಜಂಟಿಯಾಗಿ ಮಹತ್ವದ ಮತ್ತು ಭಾವುಕ ನಿರ್ಧಾರವೊಂದನ್ನು ಪ್ರಕಟಿಸಿವೆ.


Click the Play button to hear this message in audio format

ಆರ್‌ಸಿಬಿ ತಂಡದ ಚೊಚ್ಚಲ ಕಪ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ ಚಿನ್ನಸ್ವಾಮಿ ಕ್ರೀಡಾಂಗಣದ 11 ಸೀಟುಗಳನ್ನು ಶಾಶ್ವತವಾಗಿ ಖಾಲಿ ಬಿಡಲು ಕೆಎಸ್‌ಸಿಎ ಮತ್ತು ಆರ್‌ಸಿಬಿ ನಿರ್ಧರಿಸಿವೆ. ಇದರ ಜೊತೆಗೆ, ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಡಿಜಿಟಲ್ ಪ್ರವೇಶ ನಿಯಮಗಳನ್ನು ಜಾರಿಗೆ ತರಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹಾಗೂ ಆರ್‌ಸಿಬಿ ಫ್ರಾಂಚೈಸಿಯು ಜಂಟಿಯಾಗಿ ಮಹತ್ವದ ಮತ್ತು ಭಾವುಕ ನಿರ್ಧಾರವೊಂದನ್ನು ಪ್ರಕಟಿಸಿವೆ. ಕಳೆದ ವರ್ಷ ಜೂನ್ 4ರಂದು ಆರ್‌ಸಿಬಿ ತಂಡವು ಚೊಚ್ಚಲ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಆ ಕರಾಳ ದಿನದಂದು ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಮುಖ ಸ್ಟ್ಯಾಂಡ್‌ನಲ್ಲಿರುವ 11 ಸೀಟುಗಳನ್ನು ಸಾರ್ವಜನಿಕ ಮಾರಾಟದಿಂದ ಶಾಶ್ವತವಾಗಿ ಹಿಂಪಡೆಯಲಾಗಿದೆ.

ಮುಂಬರುವ ಐಪಿಎಲ್ ಪಂದ್ಯಗಳು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಪಂದ್ಯಗಳಿಗೂ ಈ ಆಸನಗಳು ಖಾಲಿಯಾಗಿಯೇ ಇರಲಿವೆ. ಇಂಗ್ಲೆಂಡ್‌ನ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ಹಿಲ್ಸ್‌ಬರೋ ದುರಂತದ ಸಂತ್ರಸ್ತರನ್ನು ಸ್ಮರಿಸುವ ಮಾದರಿಯಲ್ಲೇ ಈ ಸ್ಮಾರಕ ಗೌರವವನ್ನು ಸಲ್ಲಿಸಲಾಗುತ್ತಿದೆ.

ಉದ್ಘಾಟನಾ ಪಂದ್ಯದಲ್ಲಿ ವಿಶೇಷ ಶ್ರದ್ಧಾಂಜಲಿ

ಈ ಕುರಿತು ಮಾತನಾಡಿರುವ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಮೃತಪಟ್ಟ ಅಭಿಮಾನಿಗಳಿಗೆ ಗೌರವ ಸಲ್ಲಿಸುವುದು ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 28ರಂದು ನಡೆಯಲಿರುವ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಪ್ರವೇಶದ್ವಾರದ ಬಳಿ ವಿಶೇಷ ಸ್ಮಾರಕ ಫಲಕವೊಂದನ್ನು ಅನಾವರಣಗೊಳಿಸಲಾಗುತ್ತಿದೆ. ಪಂದ್ಯದ ದಿನ ಕ್ರೀಡಾಂಗಣದ ಬೃಹತ್ ಪರದೆಗಳ ಮೇಲೆ ಮೃತ 11 ಅಭಿಮಾನಿಗಳ ಹೆಸರುಗಳನ್ನು ಪ್ರದರ್ಶಿಸಿ, ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಭಾವುಕ ಕ್ಷಣದಲ್ಲಿ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಕೂಡ ಜೊತೆಯಾಗಲಿದ್ದಾರೆ.

ಭದ್ರತಾ ವ್ಯವಸ್ಥೆಯ ಸಂಪೂರ್ಣ ಮೇಲ್ದರ್ಜೆ

ಕಳೆದ ವರ್ಷದ ಭೀಕರ ಕಾಲ್ತುಳಿತದ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಕ್ರೀಡಾಂಗಣದ ಆಡಳಿತ ಮಂಡಳಿಯು, ಈ ಬಾರಿ ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. ವೆಂಕಟೇಶ್ ಪ್ರಸಾದ್ ನೇತೃತ್ವದ ಹೊಸ ಸಮಿತಿಯು 2026ರ ಟೂರ್ನಿಗಾಗಿ ಕ್ರೀಡಾಂಗಣದ ಸುರಕ್ಷತೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಿದೆ. ಕ್ರೀಡಾಂಗಣದ ಪ್ರವೇಶ ದ್ವಾರಗಳ ಬಳಿ ಯಾವುದೇ ರೀತಿಯ ನೂಕುನುಗ್ಗಲು ಉಂಟಾಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಂ-ಟಿಕೆಟ್ ಹೊಂದಿರುವ ಪ್ರತಿಯೊಬ್ಬ ವೀಕ್ಷಕರಿಗೂ ಕಡ್ಡಾಯವಾಗಿ ಡಿಜಿಟಲ್ ತಪಾಸಣೆ ಮಾಡುವ ಕಟ್ಟುನಿಟ್ಟಿನ ನಿಯಮವನ್ನು ಈ ಬಾರಿ ಜಾರಿಗೆ ತರಲಾಗಿದೆ.

Read More
Next Story