
ರಾಹುಲ್ ಚಹರ್ ಮತ್ತು ಇಶಾನಿ ಜೋಹರ್
ಪತ್ನಿ ಇಶಾನಿ ಜೋಹರ್ ಜೊತೆಗಿನ ವಿಚ್ಛೇದನ ಘೋಷಿಸಿದ ಕ್ರಿಕೆಟಿಗ ರಾಹುಲ್ ಚಹರ್
ರಾಹುಲ್ ಚಹರ್ ಮತ್ತು ಇಶಾನಿ ಜೋಹರ್ ಸುದೀರ್ಘ ಕಾಲದ ಪ್ರೇಮ ಸಂಬಂಧದ ನಂತರ ಮಾರ್ಚ್ 2022ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, ವಿವಾಹವಾದ ಕೆಲವೇ ತಿಂಗಳಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎನ್ನಲಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಯುವ ಲೆಗ್ ಸ್ಪಿನ್ನರ್ ಮತ್ತು ಐಪಿಎಲ್ ತಾರೆ ರಾಹುಲ್ ಚಹರ್ ತಮ್ಮ ವೈಯಕ್ತಿಕ ಜೀವನದ ಮಹತ್ವದ ನಿರ್ಧಾರವೊಂದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಅವರು, ಪತ್ನಿ ಇಶಾನಿ ಜೋಹರ್ ಅವರಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರುವುದನ್ನು ಇಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಖಚಿತಪಡಿಸಿದ್ದಾರೆ. ಯಾವುದೇ ಕಹಿ ಘಟನೆಗಳಿಲ್ಲದೆ, ಪರಸ್ಪರ ಗೌರವದೊಂದಿಗೆ ಈ ಸಂಬಂಧದಿಂದ ಹೊರಬಂದಿರುವುದಾಗಿ ಅವರು ತಿಳಿಸಿದ್ದಾರೆ.
ರಾಹುಲ್ ಚಹರ್ ಮತ್ತು ಇಶಾನಿ ಜೋಹರ್ ಸುದೀರ್ಘ ಕಾಲದ ಪ್ರೇಮ ಸಂಬಂಧದ ನಂತರ ಮಾರ್ಚ್ 2022ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, ವಿವಾಹವಾದ ಕೆಲವೇ ತಿಂಗಳಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎನ್ನಲಾಗಿದೆ. ವರದಿಗಳ ಪ್ರಕಾರ, ಕುಟುಂಬದ ಒಳಗಿನ ಆಂತರಿಕ ಸಮಸ್ಯೆಗಳು ಮತ್ತು ಹೊಂದಾಣಿಕೆಯ ಕೊರತೆಯಿಂದಾಗಿ ಸುಮಾರು 15 ತಿಂಗಳುಗಳ ಹಿಂದೆಯೇ ವಿಚ್ಛೇದನ ಪ್ರಕ್ರಿಯೆಗಳು ಆರಂಭವಾಗಿದ್ದವು. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಚಹರ್, ಕೇವಲ 22ನೇ ವಯಸ್ಸಿನಲ್ಲಿ ಪ್ರಬುದ್ಧತೆಯ ಕೊರತೆಯಿಂದ ವಿವಾಹ ಜೀವನಕ್ಕೆ ಕಾಲಿಟ್ಟಿದ್ದನ್ನು ಸ್ಮರಿಸಿಕೊಂಡಿದ್ದಾರೆ.
ಕಹಿ ನೆನಪುಗಳಿಲ್ಲದ ಕಾನೂನುಬದ್ಧ ವಿದಾಯ
ತಮ್ಮ ಇನ್‌ಸ್ಟಾಗ್ರಾಮ್ ಹೇಳಿಕೆಯಲ್ಲಿ ರಾಹುಲ್ ಚಹರ್ ಅತ್ಯಂತ ಗೌರವಯುತವಾಗಿ ವಿಷಯವನ್ನು ಮಂಡಿಸಿದ್ದಾರೆ. "ನಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಮತ್ತು ಉತ್ತಮ ಭವಿಷ್ಯಕ್ಕಾಗಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಈ ಪ್ರಕ್ರಿಯೆಯು ಯಾವುದೇ ದ್ವೇಷ ಅಥವಾ ಕಹಿ ಭಾವನೆಗಳಿಲ್ಲದೆ ಕಾನೂನುಬದ್ಧವಾಗಿ ಮುಕ್ತಾಯಗೊಂಡಿದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜೀವನದ ಈ ಕಠಿಣ ಘಟ್ಟದಲ್ಲಿ ಸ್ವಯಂ ಅರಿವು ಮತ್ತು ಮಾನಸಿಕ ಶಾಂತಿಗೆ ಆದ್ಯತೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ದಾನದ ಹೊರಗಿನ ಬದಲಾವಣೆ: ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ
2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್ ಚಹರ್, ಮುಂಬೈ ಇಂಡಿಯನ್ಸ್ ಸೇರಿದಂತೆ ಐಪಿಎಲ್‌ನ ವಿವಿಧ ತಂಡಗಳ ಪರ ಯಶಸ್ವಿ ಪ್ರದರ್ಶನ ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿದಿರುವ ಅವರು, ಈಗ ತಮ್ಮ ಜೀವನದ ಈ 'ರೀಸೆಟ್' ಮೂಲಕ ಮೈದಾನದ ಪ್ರದರ್ಶನದತ್ತ ಹೆಚ್ಚಿನ ಗಮನ ಹರಿಸಲು ಮುಂದಾಗಿದ್ದಾರೆ. ದೇಶೀಯ ಕ್ರಿಕೆಟ್ ಮತ್ತು ಮುಂಬರುವ ಐಪಿಎಲ್ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಗುರಿಯನ್ನು ಅವರು ಹೊಂದಿದ್ದಾರೆ.

