
IPL 2026: ಆರ್‌ಸಿಬಿ ಅಬ್ಬರಕ್ಕೆ ತತ್ತರಿಸಿದ ಮುಂಬೈ ಇಂಡಿಯನ್ಸ್; ಹಾರ್ದಿಕ್ ಪಡೆಗೆ ಹ್ಯಾಟ್ರಿಕ್ ಸೋಲು
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 241 ರನ್‌ಗಳ ಗುರಿಯನ್ನು ತಲುಪಲಾಗದೆ ಮುಂಬೈ ಇಂಡಿಯನ್ಸ್ 18 ರನ್‌ಗಳಿಂದ ಸೋತಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧ 18 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ತನ್ನ ಮೂರನೇ ಗೆಲುವನ್ನು ಸಂಭ್ರಮಿಸಿದ್ದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಸತತ ಮೂರನೇ ಸೋಲಿನ ಆಘಾತಕ್ಕೆ ಒಳಗಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ, ಫಿಲ್ ಸಾಲ್ಟ್ ಮತ್ತು ರಜತ್ ಪಾಟಿದಾರ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು.
241 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭದಲ್ಲೇ ಹಿನ್ನಡೆಯಾಯಿತು. ರೋಹಿತ್ ಶರ್ಮಾ (19 ರನ್) ಗಾಯಗೊಂಡು 'ರಿಟೈರ್ಡ್ ಹರ್ಟ್' ಆಗಿ ಮೈದಾನ ತೊರೆದದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ರಯಾನ್ ರಿಕೆಲ್ಟನ್ (37) ಮತ್ತು ಸೂರ್ಯಕುಮಾರ್ ಯಾದವ್ (33) ಉತ್ತಮ ಆರಂಭ ನೀಡಿದರೂ ಅದನ್ನು ಗೆಲುವನ್ನಾಗಿ ಬದಲಾಯಿಸಲು ವಿಫಲರಾದರು.
ನಾಯಕ ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ಭರವಸೆ ಮೂಡಿಸಿದರೂ, ಜೇಕಬ್ ಡಫಿ ಎಸೆತದಲ್ಲಿ ಔಟ್ ಆಗುವ ಮೂಲಕ ಮುಂಬೈನ ಗೆಲುವಿನ ಆಸೆ ಕ್ಷೀಣಿಸಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಶೆರ್ಫೆನ್ ರುದರ್‌ಫೋರ್ಡ್ ಕೇವಲ 31 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಸಿಡಿಸಿ ಅಜೇಯ 71 ರನ್ ಗಳಿಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರ್‌ಸಿಬಿ ಬೌಲಿಂಗ್ ಮಿಂಚು
ಬೆಂಗಳೂರು ಪರ ಸುಯಶ್ ಶರ್ಮಾ ಎರಡು ವಿಕೆಟ್ ಕಿತ್ತು ಗಮನ ಸೆಳೆದರೆ, ಕೃಣಾಲ್ ಪಾಂಡ್ಯ, ಜೇಕಬ್ ಡಫಿ ಮತ್ತು ರಸಿಖ್ ದಾರ್ ಸಲಾಮ್ ತಲಾ ಒಂದು ವಿಕೆಟ್ ಪಡೆದು ಮುಂಬೈ ಓಟಕ್ಕೆ ಬ್ರೇಕ್ ಹಾಕಿದರು.
ಸೋಲಿನ ಬಳಿಕ ಹಾರ್ದಿಕ್ ಅಸಮಾಧಾನ
ಸತತ ಮೂರನೇ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾವು ಚೇಸಿಂಗ್ ವೇಳೆ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡೆವು ಮತ್ತು ಬೌಲಿಂಗ್‌ನಲ್ಲೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೆವು. ಇದು ಪಂದ್ಯದ ಮೇಲೆ ಭಾರಿ ಪ್ರಭಾವ ಬೀರಿತು. ನಾವು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸುಧಾರಿಸಬೇಕಿದೆ. ತಂಡದಲ್ಲಿರುವ ಇತರ ಆಯ್ಕೆಗಳನ್ನು ಪರಿಗಣಿಸುವ ಸಮಯ ಬಂದಿದೆ. ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಮರಳಿ ಬರುತ್ತೇವೆ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

