
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಗ್ರೀನ್ ಸಿಗ್ನಲ್?
ಕ್ರೀಡಾಂಗಣದ ಸುರಕ್ಷತೆಗೆ ಸಂಬಂಧಿಸಿದಂತೆ ಜಸ್ಟಿಸ್ ಮೈಕಲ್ ಡಿಕುನ್ಹಾ ಸಮಿತಿ ನೀಡಿದ್ದ ಶಿಫಾರಸುಗಳಲ್ಲಿ ಅಲ್ಪಾವಧಿ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ರಾಜಧಾನಿಯ ಕ್ರಿಕೆಟ್ ಅಭಿಮಾನಿಗಳ ಬಹುದಿನಗಳ ಕಾತರಕ್ಕೆ ಇಂದು (ಫೆ. 12) ತೆರೆಬೀಳುವ ಲಕ್ಷಣಗಳು ಗೋಚರಿಸಿವೆ. ಐಪಿಎಲ್ 2026ರ ಉದ್ಘಾಟನಾ ಪಂದ್ಯ ಸೇರಿದಂತೆ ಅಂತರಾಷ್ಟ್ರೀಯ ಪಂದ್ಯಗಳ ಆಯೋಜನೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಸುಸೂತ್ರ ಆಯೋಜನೆಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರಗಳು ಹೊರಬಿದ್ದಿವೆ ಎಂದು ಮೂಲಗಳು ತಿಳಿಸಿವೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ. ಪರಮೇಶ್ವರ್, "ಐಪಿಎಲ್ ನಿಯಮದ ಪ್ರಕಾರ ಯಾವ ತಂಡ ಚಾಂಪಿಯನ್ ಆಗಿರುತ್ತದೆಯೋ, ಆ ತಂಡದ ತವರಿನಲ್ಲೇ ಮುಂದಿನ ಸೀಸನ್‌ನ ಉದ್ಘಾಟನಾ ಪಂದ್ಯ ನಡೆಯಬೇಕು. ಹೀಗಾಗಿ, ಆರ್‌ಸಿಬಿ ಬೆಂಗಳೂರಿನಲ್ಲೇ ಮೊದಲ ಪಂದ್ಯ ಆಯೋಜಿಸಲು ಅನುಮತಿ ಕೋರಿದ್ದು, ಸಚಿವ ಸಂಪುಟದ ತೀರ್ಮಾನದ ನಂತರ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಹೇಳಿದರು.
ಅಲ್ಪಾವಧಿ ಕೆಲಸಗಳು ಪೂರ್ಣ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಪೊಲೀಸ್, ಅಗ್ನಿಶಾಮಕ, ಆರೋಗ್ಯ ಮತ್ತು ಪಿಡಬ್ಲ್ಯೂಡಿ ಇಲಾಖೆಗಳನ್ನೊಳಗೊಂಡ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕಳೆದ ವರ್ಷದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಈ ವರದಿಯ ಸಾಧಕ-ಬಾಧಕಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸುರಕ್ಷತೆಗೆ ಸಂಬಂಧಿಸಿದಂತೆ ಜಸ್ಟಿಸ್ ಮೈಕಲ್ ಡಿಕುನ್ಹಾ ಸಮಿತಿ ನೀಡಿದ್ದ ಶಿಫಾರಸುಗಳಲ್ಲಿ ಅಲ್ಪಾವಧಿ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಮೂಲಭೂತ ಸೌಕರ್ಯ ಬದಲಾವಣೆಗಳಂತಹ ದೀರ್ಘಾವಧಿ ಕೆಲಸಗಳಿಗೆ ಸಮಯ ಬೇಕಾಗಲಿದ್ದು, ಅವುಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಕೆಎಸ್‌ಸಿಎ ತಿಳಿಸಿದೆ ಎಂದರು.
ಆಯೋಜಕರೇ ಹೊಣೆ
ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಆರ್‌ಸಿಬಿ ಹಾಗೂ ಕೆಎಸ್‍ಸಿಎ ಆಯೋಜಕರೇ ನೇರ ಹೊಣೆಯಾಗಿರುತ್ತಾರೆ. "ಇಂದು ನಡೆದ ಎರಡು ಗಂಟೆಗಳ ಸುದೀರ್ಘ ಸಭೆಯ ಸಾರಾಂಶವನ್ನು ಸಂಜೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸುತ್ತೇನೆ. ಪಂದ್ಯಕ್ಕೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಅಂತಿಮ ತೀರ್ಮಾನವನ್ನು ಸಚಿವ ಸಂಪುಟ ತೆಗೆದುಕೊಳ್ಳಲಿದೆ. ಬೆಂಗಳೂರು ಜನರ ಸುರಕ್ಷತೆ ನಮಗೆ ಮುಖ್ಯ. ಮೂಲಭೂತ ಸೌಕರ್ಯಗಳಾದ ಗೇಟ್ ಅಗಲೀಕರಣ, ಪಾರ್ಕಿಂಗ್ ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದ್ದೇವೆ. ಕ್ಯಾಬಿನೆಟ್ ಸಭೆಯ ನಂತರ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಸಮಬಲ ಜವಾಬ್ಧಾರಿ
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತನಾಡಿ, "ಐಪಿಎಲ್ ಪಂದ್ಯಗಳ ಯಶಸ್ವಿ ಆಯೋಜನೆಗಾಗಿ ಕೆಎಸ್‌ಸಿಎ ಮತ್ತು ಆರ್‌ಸಿಬಿ ಫ್ರಾಂಚೈಸಿ ಒಟ್ಟಾಗಿ ಕೆಲಸ ಮಾಡಬೇಕೆಂದು ಗೃಹ ಸಚಿವರು ಸೂಚಿಸಿದ್ದಾರೆ. ಭದ್ರತೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಎರಡೂ ಸಂಸ್ಥೆಗಳು ಸಮಬಲದ ಜವಾಬ್ದಾರಿ ಹೊರಲಿವೆ. ಕಳೆದ ಬಾರಿ ಆರ್‌ಸಿಬಿ ತಂಡ ಚಾಂಪಿಯನ್ ಆಗಿದ್ದರಿಂದ, ಐಪಿಎಲ್ ಪದ್ಧತಿಯಂತೆ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯಬೇಕು ಎಂಬುದು ಅಭಿಮಾನಿಗಳ ಮತ್ತು ಸಂಸ್ಥೆಯ ಇಚ್ಛೆಯಾಗಿದೆ" ಎಂದರು.
ಪಂದ್ಯ ಉದ್ಘಾಟನೆಗೂ ಮುನ್ನವೇ ಕೆಲಸ ಪೂರ್ಣ
ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಗಿದ್ದು, ಅಭಿಮಾನಿಗಳ ಸುರಕ್ಷತೆಗಾಗಿ ಮೊದಲ ಹಂತದ ಕೆಲಸಗಳನ್ನು ಉದ್ಘಾಟನೆಗೂ ಮುನ್ನವೇ ಮುಗಿಸುವ ಭರವಸೆಯಿದೆ. "ಎಲ್ಲವೂ ಸಕಾರಾತ್ಮಕವಾಗಿ ಕಾಣಿಸುತ್ತಿದೆ. ನಮ್ಮ ಬದ್ಧತೆ ಕೇವಲ ಕ್ರಿಕೆಟ್ ಮಾತ್ರವಲ್ಲ, ಬೆಂಗಳೂರಿನ ಜನರ ಸುರಕ್ಷತೆಯೂ ಆಗಿದೆ. ವಿನಯ್ ಮೃತ್ಯುಂಜಯ, ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆಯಂತಹ ದಿಗ್ಗಜರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ." ಎಂದು ಹೇಳಿದರು.

