
ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿಯಲ್ಲಿ IPL ಪಂದ್ಯ ನಡೆಯುವುದೇ? ವಿಧಾನಸೌಧದಲ್ಲಿ ಇಂದು ನಿರ್ಣಾಯಕ ಸಭೆ
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಯುತ್ತಿರುವ ಈ ಮಹತ್ವದ ಸಭೆಯಲ್ಲಿ, ನಗರದ ಹೃದಯಭಾಗದಲ್ಲಿ ಪಂದ್ಯಾವಳಿ ನಡೆಸುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಯುತ್ತಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ಆಯೋಜಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಯುತ್ತಿರುವ ಈ ಮಹತ್ವದ ಸಭೆಯಲ್ಲಿ, ನಗರದ ಹೃದಯಭಾಗದಲ್ಲಿ ಪಂದ್ಯಾವಳಿ ನಡೆಸುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಯುತ್ತಿದೆ. ಭದ್ರತೆ, ಸಂಚಾರ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಸಭೆ ತೀವ್ರ ಕುತೂಹಲ ಕೆರಳಿಸಿದ್ದು, ಇಂದೇ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಪೊಲೀಸ್ ಇಲಾಖೆ, ಕ್ರಿಕೆಟ್ ಮಂಡಳಿ ಮತ್ತು ನಗರಾಡಳಿತದ ಪ್ರಮುಖರು ಭಾಗವಹಿಸಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ & ಐಜಿಪಿ) ಸಲೀಂ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಭದ್ರತಾ ಆಯಾಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಆರ್‌ಸಿಬಿ ತಂಡದ ಸಿಇಒ ರಾಜೇಶ್ ಮೆನನ್ ಮತ್ತು ಕೆಎಸ್‌ಸಿಎ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಪಂದ್ಯಾವಳಿ ಆಯೋಜನೆಯ ಅಗತ್ಯತೆ ಮತ್ತು ಸಿದ್ಧತೆಗಳ ಬಗ್ಗೆ ಮಂಡನೆ ಮಾಡುತ್ತಿದ್ದು, ನಗರಾಭಿವೃದ್ದಿ ಇಲಾಖೆಯ ಎಸಿಎಸ್ ತುಷಾರ್ ಗಿರಿನಾಥ್ ಮತ್ತು ಜಿಬಿಎ (Greater Bengaluru Authority) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದು, ನಾಗರಿಕ ಸೌಲಭ್ಯಗಳ ಕುರಿತು ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

