
ಸಿಎಸ್‌ಕೆ ಹಾಗೂ ಜಿಟಿ ತಂಡದ ಆಟಗಾರರು
IPL 2026: ಗುಜರಾತ್ ಟೈಟನ್ಸ್-ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳ ಬದಲಾವಣೆ
ಮೂಲ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ 26ರಂದು ಗುಜರಾತ್ ಟೈಟನ್ಸ್ ತವರಿನ ಅಂಗಳವಾದ ಅಹಮದಾಬಾದ್‌ನಲ್ಲಿ ಈ ಹೈ-ವೋಲ್ಟೇಜ್ ಪಂದ್ಯ ಆಯೋಜನೆಯಾಗಿತ್ತು.
ಐಪಿಎಲ್ 2026ರ (IPL 2026) ಟೂರ್ನಿಯ ರೋಚಕ ಘಟ್ಟದಲ್ಲಿ ಗುಜರಾತ್ ಟೈಟನ್ಸ್ (GT) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ನಡುವಿನ ಎರಡು ಪ್ರಮುಖ ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಉಭಯ ತಂಡಗಳ ಮುಖಾಮುಖಿಯ ಪಂದ್ಯಗಳ ಸ್ಥಳಗಳನ್ನು ಪರಸ್ಪರ ಅದಲು-ಬದಲು ಮಾಡಿ ಹೊಸ ಪರಿಷ್ಕೃತ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 26ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಮೊದಲ ಮುಖಾಮುಖಿಯನ್ನು ಇದೀಗ ಚೆನ್ನೈಗೆ ಸ್ಥಳಾಂತರಿಸಲಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನು ತವರಿನ ಅಂಗಳದಲ್ಲಿ ಬೆಂಬಲಿಸಲು ಹೊಸ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಮೂಲ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ 26ರಂದು ಗುಜರಾತ್ ಟೈಟನ್ಸ್ ತವರಿನ ಅಂಗಳವಾದ ಅಹಮದಾಬಾದ್‌ನಲ್ಲಿ ಈ ಹೈ-ವೋಲ್ಟೇಜ್ ಪಂದ್ಯ ಆಯೋಜನೆಯಾಗಿತ್ತು. ಆದರೆ, ಹೊಸ ಬದಲಾವಣೆಯ ಅನ್ವಯ ಈ ಪಂದ್ಯವು ಅಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ನಡೆಯಲಿದೆ. ಇದು ಮಧ್ಯಾಹ್ನದ ಪಂದ್ಯವಾಗಿರಲಿದ್ದು, ಅಂದು ಸರಿಯಾಗಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಬದಲಾವಣೆಯ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಡೆ ತನ್ನ ತವರಿನ ಅಭಿಮಾನಿಗಳ ಎದುರು ಮೊದಲು ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದೆ.
ಈ ಎರಡು ಬಲಿಷ್ಠ ತಂಡಗಳ ನಡುವಿನ ಎರಡನೇ ಮುಖಾಮುಖಿಯ (ರಿವರ್ಸ್ ಫಿಕ್ಚರ್) ಸ್ಥಳವನ್ನು ಕೂಡ ಬದಲಾಯಿಸಲಾಗಿದೆ. ಮೇ 21, ರಂದು ಸಂಜೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಇದೀಗ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಗುಜರಾತ್ ಪಡೆಗೆ ಇದು ತವರಿನ ಪಂದ್ಯವಾಗಲಿದ್ದು, ಈ ರೋಚಕ ಪಂದ್ಯವು ಅಂದು ರಾತ್ರಿ 7.30ಕ್ಕೆ ಫ್ಲಡ್ ಲೈಟ್ಸ್ ಬೆಳಕಿನಲ್ಲಿ ಜರುಗಲಿದೆ. ಟೂರ್ನಿಯ ಆಡಳಿತ ಮಂಡಳಿಯು ಈ ಹಠಾತ್ ಬದಲಾವಣೆಗೆ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲವಾದರೂ, ಉಭಯ ತಂಡಗಳ ತವರಿನ ಅಭಿಮಾನಿಗಳಿಗೆ ಈ ಪಂದ್ಯಗಳು ರಸದೌತಣ ನೀಡುವುದು ಖಚಿತವಾಗಿದೆ.

