ICC books separate flights for West Indies, South Africa cricketers stranded in Kolkata
x

ವೆಸ್ಟ್‌ ಇಂಡಿಸ್‌ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು

ಕೋಲ್ಕತ್ತಾದಲ್ಲಿ ಸಿಲುಕಿದ್ದ ವಿಂಡೀಸ್, ದಕ್ಷಿಣ ಆಫ್ರಿಕಾ ಕ್ರಿಕೆಟ್​ ಆಟಗಾರರಿಗೆ ಪ್ರತ್ಯೇಕ ವಿಮಾನ ಬುಕ್ ಮಾಡಿದ ಐಸಿಸಿ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ಬಳಿಕ ಪಶ್ಚಿಮ ಏಷ್ಯಾದ ವಾಯುಪ್ರದೇಶದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ವಿಮಾನಯಾನದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.


Click the Play button to hear this message in audio format

'ಲಾಜಿಸ್ಟಿಕ್' ಸಮಸ್ಯೆಗಳಿಂದಾಗಿ ಚಾರ್ಟರ್ಡ್ ವಿಮಾನ ರದ್ದಾದ ಹಿನ್ನೆಲೆಯಲ್ಲಿ, ಕೋಲ್ಕತ್ತಾದಲ್ಲಿ ಸಿಲುಕಿದ್ದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇದೀಗ ಪ್ರತ್ಯೇಕ ವಾಣಿಜ್ಯ (ಕಮರ್ಷಿಯಲ್) ವಿಮಾನಗಳನ್ನು ಬುಕ್ ಮಾಡಿದೆ.

"ಎಲ್ಲಾ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರಿಗೆ ಪ್ರತ್ಯೇಕ ವಾಣಿಜ್ಯ ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಲಾಗಿದೆ. ಎಲ್ಲರಿಗೂ ಒಂದೇ ವಿಮಾನದಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದ ಕಾರಣ ಐಸಿಸಿ ವೈಯಕ್ತಿಕ ಬುಕ್ಕಿಂಗ್‌ಗಳ ಜವಾಬ್ದಾರಿ ವಹಿಸಿಕೊಂಡಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಖುದ್ದಾಗಿ ಆಟಗಾರರೊಂದಿಗೆ ಮಾತನಾಡಿ, ಸುರಕ್ಷಿತ ಪ್ರಯಾಣದ ಭರವಸೆ ನೀಡಿದ್ದಾರೆ" ಎಂದು ಐಸಿಸಿ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ. ವಿಂಡೀಸ್ ಕೋಚ್ ಡ್ಯಾರೆನ್ ಸಮ್ಮಿ ಈಗಾಗಲೇ ಸೋಮವಾರ ರಾತ್ರಿ ತವರಿಗೆ ಪ್ರಯಾಣ ಬೆಳೆಸಿದ್ದಾರೆ.

ಆಟಗಾರರು ಭಾರತದಲ್ಲೇ ಸಿಲುಕಿದ್ದೇಕೆ?

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ಬಳಿಕ ಪಶ್ಚಿಮ ಏಷ್ಯಾದ ವಾಯುಪ್ರದೇಶದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ವಿಮಾನಯಾನದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಐಸಿಸಿಯ ಅಧಿಕೃತ ಏರ್‌ಲೈನ್ ಪಾಲುದಾರ 'ಎಮಿರೇಟ್ಸ್', ದುಬೈ ವಾಯುಪ್ರದೇಶದ ಸ್ಥಗಿತದಿಂದಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರ್ಚ್ 1ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ಭಾರತದ ವಿರುದ್ಧ ಸೋತು ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್ ಹಾಗೂ ಮಾರ್ಚ್ 4ರಂದು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ದಕ್ಷಿಣ ಆಫ್ರಿಕಾ ತಂಡಗಳು ಕೋಲ್ಕತ್ತಾದಲ್ಲೇ ಉಳಿಯಬೇಕಾಯಿತು.

ರದ್ದಾದ ಚಾರ್ಟರ್ಡ್ ವಿಮಾನ

ಮೊದಲಿನ ಯೋಜನೆಯಂತೆ, ಮಂಗಳವಾರ ಮಧ್ಯಾಹ್ನ ಎರಡೂ ತಂಡಗಳು ಜಂಟಿಯಾಗಿ ಚಾರ್ಟರ್ಡ್ ವಿಮಾನದ ಮೂಲಕ ಕೋಲ್ಕತ್ತಾದಿಂದ ಜೋಹಾನ್ಸ್‌ಬರ್ಗ್‌ಗೆ ತೆರಳಲು ನಿರ್ಧರಿಸಲಾಗಿತ್ತು. ಅಲ್ಲಿಂದ ವಿಂಡೀಸ್ ತಂಡ ಆಂಟಿಗುವಾಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, 'ಲಾಜಿಸ್ಟಿಕ್ ಸಮಸ್ಯೆ'ಯ ಕಾರಣ ನೀಡಿ ಕೊನೆ ಕ್ಷಣದಲ್ಲಿ ವಿಮಾನಯಾನವನ್ನು ರದ್ದುಗೊಳಿಸಲಾಗಿತ್ತು. ಈ ವಿಳಂಬದ ಬಗ್ಗೆ ಕೋಚ್ ಡ್ಯಾರೆನ್ ಸಮ್ಮಿ ಸಾಮಾಜಿಕ ಜಾಲತಾಣದಲ್ಲಿ "ನನಗೆ ಮನೆಗೆ ಹೋಗಬೇಕಿದೆ" ಎಂದು ಅಸಮಾಧಾನವನ್ನೂ ಹೊರಹಾಕಿದ್ದರು.

ಭಾರತದಲ್ಲೇ ಉಳಿಯಲಿರುವ ಐಪಿಎಲ್ ಆಟಗಾರರು!

ಸದ್ಯ 12 ವಿಂಡೀಸ್ ಆಟಗಾರರು ಹಾಗೂ 10 ಸಿಬ್ಬಂದಿ, ದಕ್ಷಿಣ ಆಫ್ರಿಕಾದ 12 ಆಟಗಾರರು ಹಾಗೂ ಇಬ್ಬರು ಸಿಬ್ಬಂದಿ ಭಾರತದಲ್ಲೇ ಇದ್ದಾರೆ. ಈ ಮಧ್ಯೆ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್, ಜಾರ್ಜ್ ಲಿಂಡೆ ಮತ್ತು ಜೇಸನ್ ಸ್ಮಿತ್ ಮುಂಬರುವ ದ್ವಿಪಕ್ಷೀಯ ಸರಣಿಗಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದಾರೆ.

ಐಪಿಎಲ್ ಟೂರ್ನಿ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಕಾರಣ, ಕೆಲವು ವಿಂಡೀಸ್ ಆಟಗಾರರು ಭಾರತದಲ್ಲೇ ಉಳಿಯುವ ಸಾಧ್ಯತೆಯಿದೆ. ರೋವ್‌ಮನ್ ಪೊವೆಲ್ (ಕೋಲ್ಕತ್ತಾ ನೈಟ್ ರೈಡರ್ಸ್ - ಕ್ಯಾಂಪ್ ಮಾ. 18ಕ್ಕೆ ಆರಂಭ), ಶೆರ್ಫೇನ್ ರುದರ್‌ಫೋರ್ಡ್ (ಮುಂಬೈ ಇಂಡಿಯನ್ಸ್), ಶಿಮ್ರಾನ್ ಹೆಟ್ಮೆಯರ್ (ರಾಜಸ್ಥಾನ್ ರಾಯಲ್ಸ್) ಮತ್ತು ರೊಮಾರಿಯೊ ಶೆಫರ್ಡ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು - ಕ್ಯಾಂಪ್ ಮಾ. 15ಕ್ಕೆ ಆರಂಭ) ತಮ್ಮ ಫ್ರಾಂಚೈಸಿಗಳನ್ನು ಸೇರಿಕೊಳ್ಳಲಿದ್ದಾರೆ.

Read More
Next Story