IPL 2026: Namma Metro Rail service extended for night matches on April 15 and 24
x

ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಮೆಟ್ರೊ ರೈಲು 

ಐಪಿಎಲ್ 2026: ಏಪ್ರಿಲ್ 15 ಮತ್ತು 24ರ ರಾತ್ರಿ ಪಂದ್ಯಗಳಿಗಾಗಿ ನಮ್ಮ ಮೆಟ್ರೊ ರೈಲು ಸೇವೆ ವಿಸ್ತರಣೆ

ಸ್ಟೇಡಿಯಂ ಬಳಿಯ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ, ಬಿಎಂಆರ್‌ಸಿಎಲ್ ನಗರದ 44 ಆಯ್ದ ಮೆಟ್ರೊ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ (Parking) ವಿಶೇಷ ವ್ಯವಸ್ಥೆ ಕಲ್ಪಿಸಿದೆ.


Click the Play button to hear this message in audio format

ಐಪಿಎಲ್ 2026ರ (IPL 2026) ಕ್ರಿಕೆಟ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳ ಅನುಕೂಲಕ್ಕಾಗಿ, ಬೆಂಗಳೂರು ಮೆಟ್ರೊ ರೈಲು ನಿಗಮವು (BMRCL) ಏಪ್ರಿಲ್ 15 ಮತ್ತು ಏಪ್ರಿಲ್ 24 ರಂದು ರಾತ್ರಿ 2. 00 ಗಂಟೆಯವರೆಗೆ ಮೆಟ್ರೊ ರೈಲು ಸೇವೆಯನ್ನು ವಿಸ್ತರಿಸಿದೆ.

ಪಂದ್ಯ ಮುಗಿದ ಬಳಿಕ ಅಭಿಮಾನಿಗಳು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಮರಳಲು ಅನುಕೂಲವಾಗುವಂತೆ ಈ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ಬೆಳಗಿನ ಜಾವ 12. 30ಕ್ಕೆ, ಚಲ್ಲಘಟ್ಟ, ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಮಾದಾವರ ನಿಂದ 12:45ಕ್ಕೆ ಹಾಗೂ ಬೊಮ್ಮಸಂದ್ರದಿಂದ 1.00 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ. ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ) ನಿಲ್ದಾಣದಿಂದ ಎಲ್ಲಾ ನಾಲ್ಕೂ ಮಾರ್ಗಗಳಿಗೆ ಬೆಳಗಿನ ಜಾವ 1:30ಕ್ಕೆ ಕೊನೆಯ ರೈಲುಗಳು ಸಂಚರಿಸಲಿವೆ. ಆದರೆ ಏಪ್ರಿಲ್ 18ರಂದು ನಡೆಯುವ ಪಂದ್ಯಕ್ಕೆ ಯಾವುದೇ ಹೆಚ್ಚುವರಿ ಸೇವೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ವಾಹನ ನಿಲುಗಡೆಗೆ ವ್ಯವಸ್ಥೆ

ಸ್ಟೇಡಿಯಂ ಬಳಿಯ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ, ಬಿಎಂಆರ್‌ಸಿಎಲ್ ನಗರದ 44 ಆಯ್ದ ಮೆಟ್ರೊ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ (Parking) ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಪಂದ್ಯದ ದಿನದಂದು ಅಭಿಮಾನಿಗಳು ತಮ್ಮ ದ್ವಿಚಕ್ರ ವಾಹನಗಳಿಗೆ 30 ರೂ. ಹಾಗೂ ಕಾರುಗಳಿಗೆ ಕೇವಲ 60 ರೂ. ಪಾವತಿಸಿ ಮೆಟ್ರೊ ಕಾರ್ಯಾಚರಣೆ ಮುಗಿಯುವವರೆಗೆ ತಮ್ಮ ವಾಹನಗಳನ್ನು ನಿಲ್ಲಿಸಬಹುದಾಗಿದೆ. ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ಸ್ಟೇಡಿಯಂನ ಗೇಟ್‌ಗಳಿಗೆ ಅನುಗುಣವಾಗಿ, ಸಮೀಪದ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ (ವಿಧಾನಸೌಧ) ಹಾಗೂ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣಗಳನ್ನು ಬಳಸಿಕೊಳ್ಳುವಂತೆ ನಿಗಮವು ಮನವಿ ಮಾಡಿದೆ.

ಅಭಿಮಾನಿಗಳ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ, ಐಪಿಎಲ್ ಡಿಜಿಟಲ್ ಟಿಕೆಟ್‌ಗಳಲ್ಲೇ (Digital Tickets) ನಮ್ಮ ಮೆಟ್ರೊದ ಕ್ಯೂಆರ್ ಕೋಡ್ (QR Code) ಅನ್ನು ಅಳವಡಿಸಲಾಗಿದೆ. ಈ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಭಿಮಾನಿಗಳು ಕ್ರೀಡಾಂಗಣದತ್ತ ಹೋಗಲು ಹಾಗೂ ಮರಳಿ ಬರಲು (ಎರಡೂ ಬದಿಯ ಪ್ರಯಾಣ) ಟಿಕೆಟ್ ಕೌಂಟರ್‌ಗಳ ಮುಂದೆ ಸರದಿಯಲ್ಲಿ ನಿಲ್ಲುವ ಕಿರಿಕಿರಿಯಿಲ್ಲದೆ ಸುಲಭವಾಗಿ ಪ್ರಯಾಣಿಸಬಹುದಾಗಿದೆ.

Read More
Next Story