
ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಮೊಬೈಲ್ ಬಳಸುತ್ತಿರುವುದು.
ಐಪಿಎಲ್ 2026: ಡಗೌಟ್‌ನಲ್ಲಿ ಮೊಬೈಲ್ ಬಳಕೆ; ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್‌ಗೆ ಬಿಸಿಸಿಐ ಶೋಕಾಸ್ ನೋಟಿಸ್
ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಬಿಸಿಸಿಐ 48 ಗಂಟೆಗಳ ಒಳಗೆ ಸೂಕ್ತ ವಿವರಣೆ ನೀಡುವಂತೆ ಸೂಚಿಸಿ ತನಿಖೆ ಆರಂಭಿಸಿದೆ.
ಗುವಾಹಟಿಯಲ್ಲಿ ಏಪ್ರಿಲ್ 10ರಂದು ನಡೆದ ಐಪಿಎಲ್ 2026ರ ರಾಜಸ್ಥಾನ್ ರಾಯಲ್ಸ್ (RR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ ಆರೋಪದ ಮೇಲೆ, ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಬಿಸಿಸಿಐ 48 ಗಂಟೆಗಳ ಒಳಗೆ ಸೂಕ್ತ ವಿವರಣೆ ನೀಡುವಂತೆ ಸೂಚಿಸಿ ತನಿಖೆ ಆರಂಭಿಸಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪಕ್ಕದಲ್ಲೇ ಕುಳಿತು ಭಿಂದರ್ ಅವರು ಮೊಬೈಲ್ ಬಳಸುತ್ತಿರುವುದು ನೇರಪ್ರಸಾರದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಐಪಿಎಲ್‌ನ 'ಪ್ಲೇಯರ್ಸ್ ಆ್ಯಂಡ್ ಮ್ಯಾಚ್ ಅಫಿಷಿಯಲ್ಸ್ ಏರಿಯಾ' (PMOA) ನಿಯಮಾವಳಿಗಳ ಪ್ರಕಾರ, ಭ್ರಷ್ಟಾಚಾರ ನಿಗ್ರಹ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಪಂದ್ಯ ನಡೆಯುವಾಗ ಡಗೌಟ್‌ನಲ್ಲಿ ಮೊಬೈಲ್ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತಂಡದ ಮ್ಯಾನೇಜರ್‌ಗಳಿಗೆ ಕೇವಲ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತ್ರ ಫೋನ್ ಬಳಸಲು ಅವಕಾಶವಿರುತ್ತದೆ. ಡಗೌಟ್‌ನಲ್ಲಿ ಫೋನ್ ಬಳಸುವ ಮೂಲಕ ರೋಮಿ ಭಿಂದರ್ ಅವರು ಐಪಿಎಲ್‌ನ ಭ್ರಷ್ಟಾಚಾರ ನಿಗ್ರಹ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ತುರ್ತು ಚಿಕಿತ್ಸೆಗೆ
ನಿಯಮ ಉಲ್ಲಂಘನೆ ಸ್ಪಷ್ಟವಾಗಿದ್ದರೂ, ರೋಮಿ ಭಿಂದರ್ ಅವರ ಫೋನ್ ಬಳಕೆಯ ಹಿಂದಿನ ವೈದ್ಯಕೀಯ ಕಾರಣಗಳೂ ಈಗ ಬಹಿರಂಗವಾಗಿವೆ. ಇತ್ತೀಚೆಗಷ್ಟೇ ಅವರ ಎರಡೂ ಶ್ವಾಸಕೋಶಗಳು ಕುಸಿದು ನಾಗ್ಪುರದ ಆಸ್ಪತ್ರೆಯಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ವೆಂಟಿಲೇಟರ್ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಪ್ರಸ್ತುತ ಅಸ್ತಮಾದಿಂದ ಬಳಲುತ್ತಿರುವ ಅವರಿಗೆ ಹೆಚ್ಚು ನಡೆಯದಂತೆ ಅಥವಾ ಮೆಟ್ಟಿಲುಗಳನ್ನು ಹತ್ತದಂತೆ ವೈದ್ಯರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಡಗೌಟ್‌ನಿಂದ ಡ್ರೆಸ್ಸಿಂಗ್ ರೂಮ್‌ಗೆ ಹೋಗಲು ಹಲವಾರು ಮೆಟ್ಟಿಲುಗಳನ್ನು ಹತ್ತಬೇಕಾಗಿರುವುದರಿಂದ ಹಾಗೂ ತುರ್ತು ವೈದ್ಯಕೀಯ ಸಂಪರ್ಕದ ಅಗತ್ಯವಿದ್ದ ಕಾರಣ ಅವರು ತಮ್ಮ ಬಳಿ ಫೋನ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಈ ಘಟನೆಯ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಕಠಿಣ ಕ್ರಮಕ್ಕೆ ಆಗ್ರಹಿಸಿದರೆ, ಇನ್ನು ಕೆಲವರು ಅವರ ಗಂಭೀರ ಅನಾರೋಗ್ಯದ ಸ್ಥಿತಿಯನ್ನು ಪರಿಗಣಿಸುವಂತೆ ಮನವಿ ಮಾಡುತ್ತಿದ್ದಾರೆ. ಭಿಂದರ್ ಅವರ ವಿವರಣೆಯ ಬಳಿಕವಷ್ಟೇ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

