
ಮಹಿಳೆಯರ ಅವಹೇಳನ | ಮೈತ್ರಿ ಪಕ್ಷಕ್ಕೆ ಮುಳುವಾಗುತ್ತಾ ಕುಮಾರಸ್ವಾಮಿ ಹೇಳಿಕೆ?
ಉದ್ದೇಶಪೂರ್ವಕವಾಗಿಯೋ, ಅಥವಾ ನಿರುದ್ದೇಶದಿಂದಲೋ ಹೇಳಿದ ಮಾತೊಂದು ಚುನಾವಣೆಯ ಸಂದರ್ಭದಲ್ಲಿ ಮಾಡಬಹುದಾದ ಪರಿಣಾಮ ಏನೆಂಬುದಕ್ಕೆ ಸಾಕ್ಷಿ; ಮಾಜಿ ಮುಖ್ಯಮಂತ್ರಿ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಗ್ಯಾರಂಟಿಯ ಫಲಾನುಭವಿ ಮಹಿಳೆಯರ ಕುರಿತು ಆಡಿದ ಮಾತು.
ಉದ್ದೇಶಪೂರ್ವಕವಾಗಿಯೋ, ಅಥವಾ ನಿರುದ್ದೇಶದಿಂದಲೋ ಹೇಳಿದ ಮಾತೊಂದು ಚುನಾವಣೆಯ ಸಂದರ್ಭದಲ್ಲಿ ಮಾಡಬಹುದಾದ ಪರಿಣಾಮ ಏನೆಂಬುದಕ್ಕೆ ಸಾಕ್ಷಿ; ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ಹಿರಿಯ ನಾಯಕ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಫಲಾನುಭವಿ ಮಹಿಳೆಯರ ಕುರಿತು ಆಡಿದ ಮಾತು.
ಮಾತು ಆಡಿದರೆ ಮುಗಿಯಿತು… ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆ ಮಾತಿನಂತಾಗಿದೆ ಕುಮಾರಸ್ವಾಮಿ ಅವರ ಸ್ಥಿತಿ. ಅವರ ಮಾತಿಗೆ ಪ್ರತಿಭಟನೆ ಆರಂಭವಾದ ನಂತರ ಕುಮಾರಸ್ವಾಮಿ ಕ್ಷಮೆಯನ್ನೇನೋ ಕೇಳಿದ್ದಾರೆ. ಆದರೆ ಅದು ರೈಲು ನಿಲ್ದಾಣ ಬಿಟ್ಟನಂತರ ಟಿಕೆಟ್ ಪಡೆದುಕೊಂಡ ಸ್ಥಿತಿಯಾಗಿದೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಒಂದರ್ಥದಲ್ಲಿ ಐದು ಗ್ಯಾರಂಟಿಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸುತ್ತಿರುವ ಕಾಂಗ್ರೆಸ್‌ಗೆ ಕುಮಾರಸ್ವಾಮಿ ಅವರು ಆಡಿರುವ ಮಾತುಗಳು, ಚುನಾವಣೆಯ ಸಂದರ್ಭದಲ್ಲಿ ಅಸ್ತ್ರವೊಂದು ಸಿಕ್ಕಂತಾಗಿದೆ. ಶನಿವಾರ ತುಮಕೂರಿನ ತರುವೇಕೆರೆಯಲ್ಲಿ ನಡೆದ ಸಮಾವೇಶದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ʻʻಕಾಂಗ್ರೆಸ್ ಗ್ಯಾರಂಟಿಯಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪುತ್ತಿದ್ದಾರೆʼʼ ಎಂದು ಹೇಳಿದ್ದು ಅವರ ಕೊರಳಿಗೆ ಸುತ್ತಿಕೊಂಡಿದೆ. “ಬಹುಶಃ ಕುಮಾರಸ್ವಾಮಿ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಮೋದಿ ಅವರನ್ನು ಹಾಗೂ ಬಿಜೆಪಿಯ ನಾಯಕರನ್ನು ಮೆಚ್ಚಿಸುವ ಭರದಲ್ಲಿ ಅವರು ಮಾತಿನಲ್ಲಿ ಜಾರಿದ್ದು ಮಾತ್ರ, ಸ್ವಲ್ಪ ದುಬಾರಿಯಾಗಬಹುದು” ಎಂದು ಜೆಡಿಎಸ್ ನ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ಹತ್ತು ದಿನಗಳಿರುವಾಗಲೇ ಇಂಥದ್ದೊಂದು ವಿವಾದಕ್ಕೆ ಕುಮಾರಸ್ವಾಮಿ ಸಿಲುಕಿಕೊಂಡದ್ದು, ಬಿಜೆಪಿ ವಲಯದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿಯವರೆ ಒಪ್ಪಿಕೊಳ್ಳುತ್ತಾರೆ.
ಇಂಥಹ ಹೊತ್ತಲ್ಲಿ ಕುಮಾರಸ್ವಾಮಿ ಅವರು ರಾಜ್ಯದ ಹೆಣ್ಣುಮಕ್ಕಳ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ರಾಜ್ಯದ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ಮಹಿಳಾ ಹೋರಾಟಗಾರರು ಬೀದಿಗಿಳಿದಿದ್ದಾರೆ. ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್ ನಾಯಕರು ಕೂಡ ಕುಮಾರಸ್ವಾಮಿ ಮೇಲೆ ಮುಗಿಬಿದ್ದಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ʻʻನನ್ನ ತಾಯಂದಿರು, ಅಕ್ಕಂದಿರು, ಅವರ ತಾಯಿಯ ಮನೆಗೆ ಹೋಗೋಕೆ, ಧರ್ಮಸ್ಥಳ, ಕುಕ್ಕೆಗೆ ಹೋಗಲು ಬಸ್ ಹಿಡಿದು ದಾರಿತಪ್ಪಿದ್ದಾರೆ ಎನ್ನತ್ತೀರಾ? ನೀವು ನೀಡಿರುವ ಹೇಳಿಕೆ ಕ್ಷಮೆಗೆ ಅರ್ಹವೇ ಅಲ್ಲ” ಎಂದಿದ್ದಾರೆ. ಈಗಾಗಲೇ ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದಾರೆ. ದೇಶದೆಲ್ಲೆಡೆ ಇವರು ನೀಡಿರುವ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ “ಹೆಣ್ಣು ಮಕ್ಕಳ ಬಗ್ಗೆ ಬಿಜೆಪಿಗಿರುವ ಧೋರಣೆಯೇ, ಈಗ ಕುಮಾರಸ್ವಾಮಿ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಈ ಮಾತುಗಳು ಅವರ ಮನಃಸ್ಥಿತಿಗೆ ಹಿಡಿದ ಕನ್ನಡಿ. ಎರಡು ಬಾರಿ ಮುಖ್ಯಮಂತ್ರಿಯಾದ ರಾಜಕಾರಣಿಯೊಬ್ಬರು ಆಡುವಂಥ ಮಾತುಗಳೇ ಇವು? ” ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತನಾಡಿ ಸಂಸದ ಡಿ. ಕೆ. ಸುರೇಶ್ ಅವರು ʻʻಕುಮಾರಸ್ವಾಮಿ ಅವರು ಪ್ರತಿ ಹಂತದಲ್ಲೂ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಗ್ಯಾರಂಟಿ ಪಡೆಯುತ್ತಿರುವುದನ್ನು ಬೇರೆ ರೀತಿ ವ್ಯಾಖ್ಯಾನ ಮಾಡಿರುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನ. ಸ್ವಾಭಿಮಾನದ ಬದುಕು ಬದುಕಲು ನಾವು ಈ ಯೋಜನೆ ಕೊಟ್ಟಿದ್ದೇವೆ. ಮಹಿಳಾ ಸಬಲೀಕರಣದ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ಅದಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಎಲ್ಲರೂ ತಲೆತಗ್ಗಿಸುವ ವಿಚಾರʼʼ ಎಂದು ಹೇಳಿದ್ದಾರೆ.
ಮಹಿಳಾ ಆಯೋಗದಿಂದ ಕುಮಾರಸ್ವಾಮಿಗೆ ನೋಟೀಸ್
ಈ ಬಗ್ಗೆ ʻದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ʻʻಕುಮಾರಸ್ವಾಮಿ ಅವರು ಏಳು ದಿನಗಳಲ್ಲಿ ಆಯೋಗಕ್ಕೆ ಹಾಜರಾಗಿ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ವಿವರಣೆ ನೀಡಬೇಕು ಎಂದು ನೋಟೀಸ್ ನೀಡಲಾಗಿದೆ. ಸ್ವಯಂ ದೂರು ದಾಖಲು ಮಾಡಿಕೊಂಡು ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕಳಿಸಿಕೊಟ್ಟಿದ್ದೇವೆ. ಅವರು ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕಿದೆʼʼ ಎಂದು ತಿಳಿಸಿದರು.
ಅಕ್ಷಮ್ಯ ಅಪರಾಧ
“ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಹೆಣ್ಣುಮಕ್ಕಳನ್ನು ಆ ಕೀಳುಮಟ್ಟಕ್ಕೆ ಇಳಿಸಿ, ಆಕ್ಷೇಪಾರ್ಹ ಪದಗಳನ್ನ ಬಳಸಲಿಕ್ಕೆ ಅವರಿಗೆ ಯಾವುದೇ ರೀತಿಯ ಹಕ್ಕಿಲ್ಲ. ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ಹೆಣ್ಣುಮಕ್ಕಳಿಗೆ ಅವಮಾನ ಮಾಡುವಂಥ ಮಾತುಗಳನ್ನಾಡಿದ್ದಾರೆ. ಇದು ಕಾನೂನು ಪ್ರಕಾರ ಅಪರಾಧ, ಐಪಿಸಿ 509ರ ಪ್ರಕಾರ ಅಂತವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಇದೆ. ಈ ರೀತಿ ಯಾವುದೇ ರಾಜಕೀಯ ಪಕ್ಷದವರೂ ಮಾತನಾಡಬಾರದು, ಇದು ಇಲ್ಲಿಗೆ ಕೊನೆಯಾಗಬೇಕು ಎನ್ನುವ ಆಶಯದಿಂದ ನಾನು ಈ ಪ್ರಕರಣವನ್ನು ಬಹಳ ಗಂಭೀರವಾಗಿ ತಗೆದುಕೊಂಡಿದ್ದೇವೆ” ಎಂದು ಹೇಳಿದರು.
“ಕುಮಾರಸ್ವಾಮಿ ಅವರ ರೀತಿಯಲ್ಲಿಯೇ ಬೆಳಗಾವಿಯಲ್ಲಿ ಒಬ್ಬ ಶಾಸಕ ಮಾತನಾಡಿದ್ದಾರೆ. ಸಂಜಯ್ ಪಾಟೀಲ್ ಎನ್ನುವ ಬಿಜೆಪಿ ನಾಯಕರೊಬ್ಬರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಮಾನಕರ ಪದಗಳನ್ನ ಬಳಸಿ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ್ದಾರೆ. ಅವರಿಗೂ ನೋಟಿಸ್ ಕಳುಹಿಸಲಾಗಿದೆ, ಅವರು ಕೂಡ ಏಳು ದಿನಗಳೊಳಗೆ ಆಯೋಗಕ್ಕೆ ಬಂದು ವಿವರಣೆ ನೀಡಬೇಕು. ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕಿದೆ” ಎಂದು ನಾಗಲಕ್ಷ್ಮಿ ಅವರು ಹೇಳಿದರು.
ಕುಮಾರಸ್ವಾಮಿ ಹೇಳಿಕೆ ಕುರಿತು ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರು, ʻʻಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದು ದೊಡ್ಡತಪ್ಪು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ಒಂದು ಪಕ್ಷದ ಅಧ್ಯಕ್ಷರಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಘನತೆ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನಾಡಿದ್ದಾರೆ. ಬಿಜೆಪಿಯವರ ಸಹವಾಸದಿಂದ ಕುಮಾರಣ್ಣ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ನನಗೆ ಅನಿಸುತ್ತಿದೆʼʼ ಎಂದು ಹೇಳಿದರು.
ʻʻಬಿಜೆಪಿ ಶಾಸಕರಲ್ಲಿಯೇ ಈ ಮನಃಸ್ಥಿತಿಯವರು ಬಹಳಷ್ಟು ಮಂದಿ ಇದ್ದಾರೆ. ಕೆಲವು ಸಂಸದರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳಿವೆ. ಅಂತಹ ಬಿಜೆಪಿ ಪಕ್ಷದ ಜೊತೆ ಸೇರಿರುವುದರಿಂದ ಕುಮಾರಸ್ವಾಮಿ ಅವರಿಗೂ ʼಮನುವಾದʼ ದ ಸೋಂಕು ತಗುಲಿದೆ ಎಂದೆನಿಸುತ್ತದೆʼʼ ಎಂದು ಅವರು ಕಿಡಿಕಾರಿದರು.
“ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುತ್ತಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೇ ಇಂತಹ ಹೇಳಿಕೆಗಳನ್ನು ನೀಡುತ್ತಿರಬಹುದು ಅನಿಸುತ್ತದೆ. ಹೆಣ್ಣುಮಕ್ಕಳು ಅಡುಗೆ ಮನೆಗೆ ಸೀಮಿತ ಆಗಿರಬೇಕು ಎನ್ನುವ ಮನಸ್ಥಿತಿ ಇವರದ್ದು, ಬಿಜೆಪಿಯವರಿಗೆ ಹೆಣ್ಣುಮಕ್ಕಳು ಹೊರಗೆ ಬಂದು ರಾಜಕೀಯ ರಂಗದಲ್ಲಿ ಬೆಳೆಯುವುದು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಅಭದ್ರತೆ ಕಾಡುತ್ತಿದೆ” ಎಂದು ಹೇಳಿದರು.
ಇದೇ ಮೊದಲಲ್ಲ
ಕುಮಾರಸ್ವಾಮಿ ಹಾಗೂ ಎಚ್ ಡಿ ರೇವಣ್ಣ ಅವರು ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2019ರ ಲೋಕಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಅವರ ವಿರುದ್ಧ ರೇವಣ್ಣ ಕೀಳಮಟ್ಟದ ಹೇಳಿಕೆ ನೀಡಿದ್ದರು. ʻʻಗಂಡ ಸತ್ತು ಇನ್ನೂ ಎರಡು ತಿಂಗಳುಗಳೂ ಕಳೆದಿಲ್ಲ. ಆಗಲೇ ನಟಿ ಸುಮಲತಾ ಅವರು ರಾಜಕೀಯಕ್ಕೆ ಏಕೆ ಬರಬೇಕಿತ್ತೆ?ʼʼ ಎಂದು ಪ್ರಶ್ನೆ ಮಾಡಿದ್ದರು. ಇದು ಅಂದು ಚುನಾವಣೆ ಮೇಲೆ ಬಹಳ ದೊಡ್ಡ ಪರಿಣಾಮ ಉಂಟು ಮಾಡಿತ್ತು. 2013ರ ಮಂಡ್ಯ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಟಿ ರಮ್ಯಾ ವಿರುದ್ಧವೂ ಜೆಡಿಎಸ್ ಪಕ್ಷದ ಮುಖಂಡ ಎಂ ಶ್ರೀನಿವಾಸ್ ಅವರು ವೈಯಕ್ತಿಕ ತೇಜೋವಧೆಗೆ ಮುಂದಾಗಿದ್ದರು. ಇದು ಮತದಾರರ ಮೇಲೆ ಪ್ರಭಾವ ಬೀರಿತ್ತು. ಆ ಚುನಾವಣೆಯಲ್ಲಿ ಮತದಾರರು ರಮ್ಯಾ ಅವರನ್ನು ಗೆಲ್ಲಿಸಿ, ಸಂಸತ್ತಿಗೆ ಕಳುಹಿಸಿದರು.
ಇದೇ ರೀತಿ "ಜೆಡಿಎಸ್ ನಾಯಕರು ಮಹಿಳಾ ಅಭ್ಯರ್ಥಿಗಳ ಬಗ್ಗೆ ಅಥವಾ ಮಹಿಳೆಯರ ಬಗ್ಗೆ ಕೀಳು ಹೇಳಿಕೆ ಕೊಟ್ಟಾಗಲೆಲ್ಲ ಪೆಟ್ಟು ತಿಂದಿದ್ದಾರೆ. ಇದೀಗ ʼರಾಜ್ಯದ ಗ್ರಾಮೀಣ ಹೆಣ್ಣುಮಕ್ಕಳು ಗ್ಯಾರಂಟಿಗಳಿಂದ ದಾರಿ ತಪ್ಪುತ್ತಿದ್ದಾರೆʼ ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಜೆಡಿಎಸ್ ಜೊತೆ ಬಿಜೆಪಿಗೂ ದೊಡ್ಡಮಟ್ಟದ ಹಾನಿ ಉಂಟು ಮಾಡಬಹುದು” ಎಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ.
ಸಂಜಯ್ ಪಾಟೀಲ್ ಪೆಗ್ ಹೇಳಿಕೆ
“ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲ ನೋಡಿದರೆ ‘ಅಕ್ಕ’ ನಿದ್ದೆಗೆಡುತ್ತಾರೆ. ಸುಖ ನಿದ್ರೆಗೆ ಇಂದು ನಿದ್ದೆ ಮಾತ್ರೆ ಇಲ್ಲವೇ ಒಂದು ಪೆಗ್ ಎಕ್ಸ್ಟ್ರಾ ಹಾಕಬೇಕಾಗುತ್ತದೆʼʼ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೆಸರು ಹೇಳದೇ ನಾಲಿಗೆ ಹರಿಬಿಟ್ಟಿದ್ದರು. ಇದು ಕೀಳುತನದ ಹೇಳಿಕೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನೊಂದು ನುಡಿದಿದ್ದಾರೆ.
ʻʻಬರೀ ಮಾತಲ್ಲಿ ರಾಮ ಅಂತಾರೆ. ಭೇಟಿ ಬಚಾವೋ, ಭೇಟಿ ಪಡಾವೋ ಅಂತಾರೆ. ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡುವುದು ಹಿಂದೂ ಸಂಸ್ಕ್ರತಿ. ಸಂಜಯ್ ಪಾಟೀಲ್ ಅವರು ನೀಡಿರುವ ಈ ಹೇಳಿಕೆ ಕೇವಲ ಲಕ್ಷ್ಮಿ ಹೆಬ್ಬಾಳಕರ್‌ಗೆ ಮಾತ್ರ ಅಲ್ಲ, ರಾಜ್ಯದ ಹಾಗೂ ದೇಶದ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ಇದು ಬಿಜೆಪಿಯ ಹಿಡನ್ ಅಜೆಂಡಾವನ್ನು ತೋರಿಸುತ್ತೆ" ಎಂದು ಲಕ್ಷ್ಮಿ ಹೇಬ್ಬಾಳಕರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.
ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಹೆಣ್ಣುಮಕ್ಕಳ ಕುರಿತಾದ ಹೇಳಿಕೆ ಹಾಗೂ ಬೆಳಗಾವಿ ಲೋಕಸಭಾ ಚುನಾವಣಾ ಕ್ಷೇತ್ರದ ಬಿಜೆಪಿ ಉಸ್ತವಾರಿ ಸಂಜಯ್ ಪಾಟೀಲ್ ಅವರ ಹೇಳಿಕೆಗಳು ಮೈತ್ರಿ ಪಕ್ಷಕ್ಕೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆಯೇ? ಅಥವಾ ಇಂಥ ಮಾತುಗಳೇ ಮತಗಳನ್ನು ತಂದುಕೊಡುತ್ತವೆಯೇ? ಎಂಬ ಪ್ರಶ್ನೆಗೆ ಜೂನ್ 4 ರಂದು ಉತ್ತರ ದೊರಕಲಿದೆ.