ಲೋಕಸಮರದಲ್ಲಿ ಮಹಿಳಾ ಪ್ರಾತಿನಿಧ್ಯ:  ಬಿಜೆಪಿಗಿಂತ ಕಾಂಗ್ರೆಸ್‌ ಮುಂದು!
x

ಲೋಕಸಮರದಲ್ಲಿ ಮಹಿಳಾ ಪ್ರಾತಿನಿಧ್ಯ: ಬಿಜೆಪಿಗಿಂತ ಕಾಂಗ್ರೆಸ್‌ ಮುಂದು!

ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಇನ್ನು ಬಿಜೆಪಿ- ಜೆಡಿಎಸ್‌ ಮೈತ್ರಿ ಪಕ್ಷಗಳು ಸೇರಿ 2 ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರಿಗೆ ಟಿಕೆಟ್‌ ನೀಡಿವೆ.


ಮಹಿಳೆಯರಿಗೆ 33% ಮೀಸಲಾತಿ ನೀಡುವ ʻʻಮಹಿಳಾ ಮೀಸಲಾತಿ ಮಸೂದೆʼʼ ಜಾರಿಗೆ ಬರಲು ಇನ್ನೂ ಐದು ವರ್ಷ ಕಾಯಬೇಕು. ಪ್ರಸ್ತುತ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಸಂಬಂಧ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಸೊಲ್ಲೆತ್ತಿಲ್ಲ.

ಆದರೆ ಆ ಮಸೂದೆಯನ್ನು ಮಂಡಿಸಿದ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಟ್ಟಿಗೆ ಹೇಳುವುದಾದರೆ ಕೇವಲ ಶೇ 7 ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದರೆ, ಕುಟುಂಬ ರಾಜಕಾರಣ ಮತ್ತಿತರ ವಿಷಯಗಳಿಗೆ ಕಟ್ಟು ಬಿದ್ದು ಚುನಾವಣಾ ಅಭ್ಯರ್ಥಿಗಳ ಆಯ್ಕೆ ಮಾಡಿದ ಕಾಂಗ್ರೆಸ್‌ ಮಾತ್ರ ಶೇ 21 ಅವಕಾಶ ನೀಡಿದೆ. ಅಂದರೆ ಬಿಜೆಪಿ ಇಬ್ಬರು ಮಹಿಳೆಯರಿಗೆ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ 6 ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಆದರೆ ಮಹಿಳಾ ಅಭ್ಯರ್ಥಿಗಳು ಮುಖಾಮುಖಿಯಾಗುವುದು ಒಂದು ಕ್ಷೇತ್ರದಲ್ಲಿ ಮಾತ್ರ.

ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಈ ಮಸೂದೆಯ ಜಾರಿಗಾಗಿ ಪ್ರಯತ್ನ ಪಟ್ಟರೂ ಸಂಖ್ಯಾಬಲವಿಲ್ಲದೆ ಅಂಗೀಕಾರವಾಗಿರಲಿಲ್ಲ. ಆದರೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬಹುಮತವಿರುವುದರಿಂದ ಈ ಮಸೂದೆಯನ್ನು ಉಭಯ ಸದನಗಳಲ್ಲಿಯೂ ಅಂಗೀಕರಿಸಲಾಗಿದೆ, ಅಷ್ಟೇ ಅಲ್ಲದೇ ರಾಷ್ಟ್ರಪತಿಗಳು ಅಂತಿಮ ಮುದ್ರೆ ಒತ್ತಿದ್ದು 2029ರ ನಂತರ ಜಾರಿಯಾಗುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಮಹಿಳೆಯರು

ಕರ್ನಾಟಕದ ಮೊದಲ ಮಹಿಳಾ ಸಂಸದರನ್ನು ನೀಡಿದ ಖ್ಯಾತಿ ಹಿಂದಿನ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದ ವರದಿಗೆ ಹೆಸರುವಾಸಿಯಾಗಿರುವ ಸರೋಜಿನಿ ಮಹಿಷಿ ಅವರು ಧಾರವಾಡ ಉತ್ತರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 1967, 1971 ಮತ್ತು 1977 ರಲ್ಲಿ ಅವರು ಜಯ ಗಳಿಸಿದ್ದರು.

ಕಳೆದ 17 ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕವು ಒಟ್ಟು 15 ಮಹಿಳಾ ಸಂಸದರನ್ನು ಗೆಲ್ಲಿಸಿ ಕಳಿಸಿದೆ. ಅದರಲ್ಲಿ, ಇಂದಿರಾ ಗಾಂಧಿ ಅವರು 1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದರು. ಆ ಮೂಲಕ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರು ತಮ್ಮ ರಾಜಕೀಯ ಪುನರ್ಜನ್ಮ ಪಡೆದಿದ್ದರು.

ಒಟ್ಟು ಎಂಟು ಮಹಿಳೆಯರು

ಇದೀಗ ಕಾಂಗ್ರೆಸ್‌ನಿಂದ ಆರು, ಬಿಜೆಪಿಯಿಂದ ಇಬ್ಬರು ಲೋಕಸಮರದ ಕಣದಲ್ಲಿದ್ದಾರೆ. ಈ ಎಂಟು ಜನ ಅಭ್ಯರ್ಥಿಗಳಲ್ಲಿ ಒಂದೇ ಕ್ಷೇತ್ರದಲ್ಲಿ ಇಬ್ಬರು ಮಹಿಳೆಯರು ಸ್ಪರ್ಧೆ ಮಾಡುತ್ತಿರುವುದು ವಿಶೇಷ ಹಾಗೂ ರೋಚಕತೆ ಪಡೆದುಕೊಂಡಿದೆ. ಇನ್ನು ಆರು ಮಹಿಳೆಯರು ಪುರುಷ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ನಡೆಸಿದ್ದಾರೆ.

ದಾವಣಗೆರೆಗೆ ಮಹಿಳೆಯರ ಐತಿಹಾಸಿಕ ಚುನಾವಣಾ ಪ್ರವೇಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಮಹತ್ವದ ಚುನಾವಣಾ ಹಣಾಹಣಿಗೆ ಮುಂದಾಗಿದೆ.

ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ ಮತ್ತು ಕಾಂಗ್ರೆಸ್‌ನ ಡಾ ಪ್ರಭಾ ಮಲ್ಲಿಕಾರ್ಜುನ್ ಅವರು ಅಭ್ಯರ್ಥಿಗಳಾಗಿದ್ದು, ಚುನಾವಣಾ ಕಣದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇಬ್ಬರು ಸ್ಪರ್ಧಿಗಳಿಗೆ ಇದು ಮೊದಲ ಚುನಾವಣಾ ಪ್ರಯಾಣವಾಗಿದೆ.

ಗಾಯತ್ರಿ ಅವರು ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿಯಾಗಿದ್ದು, ಈ ಕ್ಷೇತ್ರದಲ್ಲಿ ಕುಟುಂಬದ ಏಳನೇ ಪೀಳಿಗೆಯನ್ನು ಪ್ರತಿನಿಧಿಸುವ ಮೂಲಕ ಸತತ ನಾಲ್ಕು ಬಾರಿ (2004, 2009, 2014 ಮತ್ತು 2019) ಈ ಕುಟುಂಬ ಆಯ್ಕೆಯಾಗುತ್ತಿದೆ. ತಮ್ಮ ಪತಿಯ ನಿರಂತರ ಗೆಲುವಿನ ಓಟ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ತನಗೆ ವರವಾಗುವ ವಿಶ್ವಾಸದಲ್ಲಿದ್ದಾರೆ.

ಮತ್ತೊಂದೆಡೆ, ಡಾ.ಪ್ರಭಾ ಅವರು ತಮ್ಮ ಪತಿ ಎಸ್‌ಎಸ್ ಮಲ್ಲಿಕಾರ್ಜುನ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ತೋಟಗಾರಿಕಾ ಸಚಿವರಾಗಿದ್ದಾರೆ ಅದರ ಬಲ ಅವರಿಗೆ ವರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಪ್ರಭಾ ಅವರು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷ ಮತ್ತು 92 ವರ್ಷದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆಯೂ ಹೌದು ಈ ಎಲ್ಲ ಲೆಕ್ಕಾಚಾರದಿಂದ ಕಾಂಗ್ರೆಸ್‌ ಪ್ರಭಾ ಅವರಿಗೆ ಟಿಕೆಟ್‌ ನೀಡಿದೆ.

ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಗಳ ನಡುವಿನ ರಾಜಕೀಯ ಪೈಪೋಟಿ ಮೂರು ದಶಕಗಳಷ್ಟು ಹಳೆಯದು.

1998 ರಿಂದ ಲೋಕಸಭೆ ಚುನಾವಣೆಯಲ್ಲಿ ಎರಡು ಕುಟುಂಬಗಳು ಕದನ ನಡೆಸುತ್ತಿವೆ. 1998 ರಲ್ಲಿ ಹೊರತುಪಡಿಸಿ, ಸಂಸದೀಯ ಚುನಾವಣೆಯಲ್ಲಿ ಶಾಮನೂರು ಕುಟುಂಬವನ್ನು ಸಿದ್ದೇಶ್ವರ‌ ಕುಟುಂಬ ಸೋಲಿಸುತ್ತಾ ಬಂದಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ವೀರಶೈವ ಲಿಂಗಾಯತ ಸಮುದಾಯದ ಪ್ರಾಬಲ್ಯ ಹೆಚ್ಚಾಗಿದೆ. ಎರಡೂ ಕುಟುಂಬಗಳು ಲಿಂಗಾಯತ ಸಮುದಾಯದ ಉಪಜಾತಿಗೆ ಸೇರಿವೆ ಮತ್ತು ಅವರು ಸಂಬಂಧಿಕರೂ ಆಗಿದ್ದಾರೆ.

ಸತತ ನಾಲ್ಕು ಸೋಲುಗಳಿಗೆ ಸಿದ್ದೇಶ್ವರ ಕುಟುಂಬದ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಶಾಮನೂರು ಕುಟುಂಬ ಇದೇ ಸರಿಯಾದ ಅವಕಾಶ ಎಂದು ಪರಿಗಣಿಸುತ್ತಿದೆ. ಮತ್ತೊಂದೆಡೆ, ಸಿದ್ದೇಶ್ವರ ಕುಟುಂಬ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಲು ಪ್ರಯತ್ನ ನಡೆಸಿದೆ.

73 ವರ್ಷಗಳಲ್ಲಿ ಒಬ್ಬ ಮಹಿಳೆಯೂ ಬೆಂಗಳೂರಿನಿಂದ ಸಂಸದೆಯಾಗಿಲ್ಲ!

ಕಳೆದ 73 ವರ್ಷಗಳಲ್ಲಿ ಬೆಂಗಳೂರಿನಿಂದ ಒಬ್ಳೆ ಒಬ್ಬಳು ಮಹಿಳೆ ಸಂಸದೆಯಾಗಿ ಆಯ್ಕೆಯಾಗಿಲ್ಲ. ಈ ಬಾರಿ ಬೆಂಗಳೂರು ವ್ಯಾಪ್ತಿಯ ಎರಡು ಕ್ಷೇತ್ರದಲ್ಲಿ ಪ್ರಬಲ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಈ ಬಾರಿಯಾದರೂ ಬೆಂಗಳೂರಿನಿಂದ ಸಂಸತ್‌ಗೆ ಮಹಿಳೆಯೊಬ್ಬರನ್ನು ಗೆಲ್ಲಿಸಿ ಕಳಿಸುವ ಮೂಲಕ ಬೆಂಗಳೂರು ಹೊಸ ಇತಿಹಾಸ ಬರೆಯುವುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವೆ ಹಾಗೂ ಒಕ್ಕಲಿಗರ ಪ್ರಬಲ ನಾಯಕಿಯಾಗಿರುವ ಶೋಭಾ ಕರಂದ್ಲಾಜೆ ಸ್ಪರ್ಧಿಸಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ.

2009 ರವರೆಗೆ ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದ ಬೆಂಗಳೂರು, ನಂತರ ಮೂರು ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ಬಿಜೆಪಿ ಬೆಂಗಳೂರು ಉತ್ತರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸಿದ್ದು, ಬೆಂಗಳೂರು ದಕ್ಷಿಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಬೆಂಗಳೂರಿನ ಮತದಾರರು ಮೊದಲ ಬಾರಿಗೆ ಸಂಸದೆಯನ್ನು ಆಯ್ಕೆ ಮಾಡುತ್ತಾರೆಯೇ ಎಂದು ಕಾದು ನೋಡೋಣ.

ಶಿವಮೊಗ್ಗದಲ್ಲಿ ಮಾಜಿ ಸಿಎಂಗಳ ಮಕ್ಕಳ ಫೈಟ್:

ಶಿವಮೊಗ್ಗ ಬಿಜೆಪಿಯ ಭದ್ರಕೋಟೆಯಾಗಿದ್ದು, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಅವರ ವಿರುದ್ಧ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಗೀತಾ ಶಿವರಾಜಕುಮಾರ್‌ ಅವರು ರಾಘವೇಂದ್ರ ಅವರಿಗೆ ನೆಕ್‌ ಟು ನೆಕ್‌ ಫೈಟ್‌ ಕೊಡಬಲ್ಲ ಅಭ್ಯರ್ಥಿಯಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಜೆಡಿಎಸ್ ನಿಂದ ಸ್ಪರ್ಧಿಸಿ ಗಮನ ಸೆಳೆದಿದ್ದ ಗೀತಾ ಶಿವರಾಜ್ ಕುಮಾರ್ ಅವರಿಗೆ ಈಗ ದೊಡ್ಡ ಪಕ್ಷ ಮತ್ತು ದೊಡ್ಡ ವೇದಿಕೆ ಸಿಕ್ಕಿದೆ. ಜೆಡಿಎಸ್ ನ ಸೀಮಿತ ಕಾರ್ಯಕರ್ತರನ್ನೇ ಇಟ್ಟುಕೊಂಡು ಸ್ಪರ್ಧಿಸಿದ್ದ ಗೀತಾ ಅವರು ಇದೀಗ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಮಧು ಬಂಗಾರಪ್ಪ ಅವರು ಹಳೆಯ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಗೀತಾರವರನ್ನು ಗೆಲ್ಲಿಸಿಯೇ ಗೆಲ್ಲಿಸುತ್ತೇನೆಂದು ಪಣ ತೊಟ್ಟಿರುವ ಮಧು ಬಂಗಾರಪ್ಪರವರ ಈ ಪ್ರತಿಜ್ಞೆಯ ಹಿಂದೆ ಬೇರೆಯದೇ ಚುನಾವಣಾ ಲೆಕ್ಕಾಚಾರಗಳಿವೆ.

ಜೆಡಿಎಸ್ ಈಗ ಬಿಜೆಪಿಯ ಮೈತ್ರಿ ಪಕ್ಷವಾಗಿರುವುದರಿಂದ ಅಲ್ಪಸಂಖ್ಯಾತರು ಕಾಂಗ್ರೆಸ್ ನಲ್ಲಿ ಗಟ್ಟಿಯಾಗಿ ಉಳಿಯುವ ಸಾಧ್ಯತೆ ಹೆಚ್ಚಿದೆ. ಈಡಿಗರ ಮತಗಳು ಗೀತಾರವರ ಪರ ವಾಲಿಬಿಟ್ಟರೆ ಬಿಜೆಪಿ ಅಭ್ಯರ್ಥಿಯ ಗೆಲುವು ಕಷ್ಟವಾಗಲಿದೆ. ಇನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳು, ಶಿವರಾಜ್ ಕುಮಾರ್ ರವರ ಅಭಿಮಾನಿಗಳು ಕೂಡ ಈ ಚುನಾವಣೆಯಲ್ಲಿ ಗೀತಾರಿಗೆ ಮತ ಚಲಾಯಿಸುವ ಸಾಧ್ಯತೆ ಇದೆ. ಇದು ಗೀತಾ ಶಿವರಾಜಕುಮಾರ್ ಅವರು ಹೆಚ್ಚಿನ ಮತ ಗಳಿಸಲು ಸಹಾಯವಾಗಲಿವೆ.

25 ವರ್ಷಗಳ ಬಳಿಕ ಉ.ಕನ್ನಡ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ

ಉತ್ತರ ಕನ್ನಡ ಲೋಕಸಭಾ ಚುನಾವಣಾ ಕ್ಷೇತ್ರದಿಂದ 1999ರಲ್ಲಿ ಮಾರ್ಗರೇಟ್ ಆಳ್ವ ಅವರು ಕಾಂಗ್ರೆಸ್ ಸಂಸದೆಯಾಗಿ ಆಯ್ಕೆಯಾಗಿದ್ದರು. ತದನಂತರ ಈ ಕ್ಷೇತ್ರದಲ್ಲಿ ಯಾವ ಪಕ್ಷದಲ್ಲೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಈ ಬಾರಿ ಕಾಂಗ್ರೆಸ್‌ ಪಕ್ಷದ ನಾಯಕಿ ಅಂಜಲಿ ನಿಂಬಾಳ್ಕರ್ ಅವರು ಸ್ವರ್ಧಿಸುವ ಮೂಲಕ ದಶಕಗಳ ನಂತರ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಸಲಾಗಿದೆ.

ಅಂಜಲಿ ನಿಂಬಾಳ್ಕರ ಅವರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರ, ಕಿತ್ತೂರು, ಹಳಿಯಾಳ, ಕಾರವಾರ ಕ್ಷೇತ್ರದಲ್ಲಿ ಕ್ಷತ್ರಿಯ ಮರಾಠಾ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದ ಮತಗಳನ್ನು ನಿಂಬಾಳ್ಕರ್ ಅವರು ಸೆಳೆಯಬಲ್ಲವರು. ಜೊತೆಗೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಒಟ್ಟುಗೂಡಿಸಬಲ್ಲವರು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಇವರನ್ನು ಕಣಕ್ಕಿಸಿದೆ.

ಬೆಳಗಾವಿ ಜಿಲ್ಲೆಯ ಭಾಗವನ್ನೂ ಈ ಕ್ಷೇತ್ರ ಒಳಗೊಂಡ ಕಾರಣ, ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ, ಈ ಕ್ಷೇತ್ರಕ್ಕೆ ಪರಿಚಿತರು. ಲೋಕಸಭೆಗೆ ಹೊಸಮುಖ ಮತ್ತು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲ್ಲುವ ಸಾಧ್ಯತೆ ಎಂದು ಡಾ. ಅಂಜಲಿ ಅವರನ್ನು ಕಣಕ್ಕಿಳಿಸಿದೆ.

ಈ ಕ್ಷೇತ್ರದಲ್ಲಿ ಮಹಿಳಾ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಕಾರಣ, ಗ್ಯಾರಂಟಿ ಯೋಜನೆಯಾದ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳಿಂದ ಮಹಿಳಾ ಸಬಲೀಕರಣದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣದಿಂದ ಮಹಿಳಾ ಮತದಾರರರು ಕೈ ಹಿಡಿಯುತ್ತಾರೆ ಎಂಬ ಲೆಕ್ಕಚಾರವಿದೆ.

ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ, ಪ್ರಿಯಾಂಕಾ ಅವರು ಬಿಜೆಪಿಯ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಅವರು ಗೆದ್ದರೆ ಅವರು ದೇಶದ ಕಿರಿಯ ಸಂಸದರಲ್ಲಿ ಒಬ್ಬರಾಗಲಿದ್ದಾರೆ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ದೊಡ್ಡ ಭಾಗದ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕವಾಗುತ್ತವೆ. ಕಳೆದ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಸಾಧಿಸಿರುವ ಕಾಂಗ್ರೆಸ್ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭಾರೀ ಬೆಂಬಲ ಪಡೆದಿದ್ದಾರೆ.

ಗಡಿ ಪ್ರದೇಶದ ಮರಾಠಿ ಜನರೊಂದಿಗೆ ಅವರ ಸಂಪರ್ಕವಿದೆ, ಇದು ಜಾರಕಿಹೊಳಿ ಮಗಳಿಗೆ ಹೆಚ್ಚುವರಿ ಪ್ರಯೋಜನವಾಗಿದೆ. ಅವರ ಇಬ್ಬರು ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಹಾಲಿ ಶಾಸಕರಾಗಿರುವುದರಿಂದ ಅನೇಕ ಸಾಂಪ್ರದಾಯಿಕ ಬಿಜೆಪಿ ಮತಗಳು ಕಾಂಗ್ರೆಸ್ ಗೆ ಹೋಗುವ ಸಾಧ್ಯತೆಯೂ ಇದೆ.

ಬಾಗಲಕೋಟೆ: ಹ್ಯಾಟ್ರಿಕ್ ಗೆಲುವಿನ ಸರದಾರನ ವಿರುದ್ಧ ಸಂಯುಕ್ತಾ ಪಾಟೀಲ್‌ ಕಣಕ್ಕೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಬಸವನ ಬಾಗೇವಾಡಿಯ ಶಾಸಕರಾದ ಶಿವಾನಂದ ಪಾಟೀಲ್ ಅವರ ಮಗಳು ಸಂಯುಕ್ತ ಪಾಟೀಲ್ ಸ್ಪರ್ಧೆಗಿಳಿದಿದ್ದಾರೆ. ಸಂಯುಕ್ತ ಪಾಟೀಲ್ ತಂದೆಯಂತೆಯೇ ತಮ್ಮದೇ ಆದ ಪ್ರಭಾವಳಿಯನ್ನು ಬೆಳೆಸಿಕೊಂಡು ಪಕ್ಷದಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ.

ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ಶಿವಾನಂದ ಪಾಟೀಲ ಪ್ರಭಾವಿ ನಾಯಕರಾಗಿದ್ದಾರೆ. ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎಂಬುದು ಶಿವಾನಂದ ಪಾಟೀಲರಿಗೆ ನೀರು ಕುಡಿದಷ್ಟು ಸಲೀಸು. ವಿಧಾನಸಭೆ ಚುನಾವಣೆ ಬಂದಾಗ ಸ್ವಪಕ್ಷೀಯರಲ್ಲದೆ ಬಿಜೆಪಿ ಅಭ್ಯರ್ಥಿಗಳೂ ಪಾಟೀಲರ ಬೆಂಬಲ ಕೋರುತ್ತಾರೆ. ಈಗ ತಮ್ಮ ಮಗಳೇ ಚುನಾವಣೆಗೆ ಸ್ಪರ್ಧಿಸುತ್ತಿರುವಾಗ ಪಾಟೀಲರು ತಮ್ಮ ಬತ್ತಳಿಕೆಯ ಎಲ್ಲ ಅಸ್ತ್ರಗಳನ್ನು ಹೊರತೆಗೆಯುವುದು ನಿಶ್ಚಿತ.

“ಈ ಬಾರಿಯ ಚುನಾವಣೆಯಲ್ಲಿ ಸಂಯುಕ್ತ ಪಾಟೀಲ್ ಅವರಿಗೆ ತಂದೆ ಹಣಬಲವು ಸಹ ಕೆಲಸ ಮಾಡುವ ಸಾಧ್ಯತೆಗಳಿವೆ. ಮತ್ತೊಂದೆಡೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್‌ ಕೈತಪ್ಪಿರುವುದರಿಂದ ಸಂಯುಕ್ತಾ ಪಾಟೀಲರಿಗೆ ಬಂಡಾಯದ ಬಿಸಿ ಸೋಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Read More
Next Story