ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಗಂಭೀರ ಆರೋಪ
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಈ ಹಿಂದೆ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ತೆಗಳುತ್ತಿದ್ದರು. ಈಗ ದಿಂಗಾಲೇಶ್ವರ ಅವರನ್ನು ಒಳ್ಳೆಯ ಸ್ವಾಮೀಜಿ ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಸ್ವಾಮೀಜಿಗೆ ಪೇಮೆಂಟ್ ಆಗಿದೆ ಎಂಬುದು ಖಚಿತ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಬಿಜೆಪಿಯ ಲಿಂಗಾಯತ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ದುಸ್ಸಾಹಸಕ್ಕೆ ಕೈ ಹಾಕಬಾರದು: ಬಿಎಸ್‌ವೈ
ಧಾರವಾಡ ಕ್ಷೇತ್ರದ ಜನ ಪಕ್ಷದ ಅಭ್ಯರ್ಥಿ ಜೋಶಿ ಪರವಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ಸ್ವಾಮೀಜಿ ಕೈ ಹಾಕಬಾರದು ಎಂದು ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದರು. ಇದೀಗ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಾಮೀಜಿ ವಿರುದ್ಧ ರಂಗ ಪ್ರವೇಶ ಮಾಡಿದ್ದು, ಸ್ವಾಮೀಜಿಗೆ ಪೇಮೆಂಟ್ ಬಂದಿದೆ, ಅದಕ್ಕಾಗಿ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ. ಯಾರಿಂದ ಎಷ್ಟು ಪೇಮೆಂಟ್ ಬಂದಿದೆ ಎಂದು ಮೇ 7 ರ ನಂತರ ಬಹಿರಂಗಪಡಿಸುವೆ” ಎಂದು ಹೇಳಿದ್ದಾರೆ.
“ದೇಶದ ವಿಚಾರ ಬಂದಾಗ ಲಿಂಗಾಯತರು, ವೀರಶೈವರು ಬಿಜೆಪಿ ಜೊತೆಗೆ ನಿಲ್ಲುತ್ತಾರೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ನಮಗೆ ಮತ್ತು ನಮ್ಮ ಅಭ್ಯರ್ಥಿಗೆ ಯಾವುದೇ ಸಮಸ್ಯೆಯಿಲ್ಲ. ಈ ಹಿಂದೆ ಮಾತೆ ಮಹಾದೇವಿ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅವರು ಎಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ದಿಂಗಾಲೇಶ್ವರ ಸ್ವಾಮೀಜಿ ಒಂದು ಐದು ಸಾವಿರ ಮತಗಳನ್ನು ಪಡೆಯಬಹುದು” ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ವೀರಶೈವ-ಲಿಂಗಾಯತ ಪಂಥದ ಅಸ್ಮಿತೆಗಾಗಿ ಚುನಾವಣಾ ಅಖಾಡಕ್ಕಿಳಿದ ದಿಂಗಾಲೇಶ್ವರ ಶ್ರೀ
“ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಈ ಹಿಂದೆ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ತೆಗಳುತ್ತಿದ್ದರು. ಈಗ ದಿಂಗಾಲೇಶ್ವರ ಅವರನ್ನು ಒಳ್ಳೆಯ ಸ್ವಾಮೀಜಿ ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಸ್ವಾಮೀಜಿಗೆ ಪೇಮೆಂಟ್ ಆಗಿದೆ ಎಂಬುದು ಖಚಿತ” ಎಂದು ಯತ್ನಾಳ್ ಹೇಳಿದ್ದಾರೆ.
ಸತತ ಐದನೇ ಬಾರಿ ಬಿಜೆಪಿಯಿಂದ ಚುನಾವಣಾ ಕಣದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಚುನಾವಣೆಯಲ್ಲಿ ʼಪಾಠʼ ಕಲಿಸಬೇಕೆಂದೇ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಚುನಾವಣಾ ಕಣಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸ್ವಾಮೀಜಿ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಬಿಜೆಪಿಗೆ ತಾನು ನಂಬಿಕೊಂಡಿರುವ ಲಿಂಗಾಯತ ಮತಗಳು ವಿಭಜನೆಯಾಗುವ ಆತಂಕ ಎದುರಾಗಿದೆ.