
ದಿಂಗಾಲೇಶ್ವರ ಸ್ವಾಮೀಜಿ ದುಸ್ಸಾಹಸಕ್ಕೆ ಕೈ ಹಾಕಬಾರದು: ಬಿಎಸ್‌ವೈ
ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಣಕ್ಕಿಳಿಯುವುದಾಗಿ ಘೋಷಿಸಿರುವ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ʻಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮಾತನಾಡುತ್ತೇನೆʼ ಎಂದು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ʻಧಾರವಾಡ ಲೋಕಸಭಾ ಕ್ಷೇತ್ರದಿಂದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಲು ಮುಂದಾಗಿದ್ದಾರೆ. ಸ್ಪರ್ಧಿಸದಂತೆ ಅವರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆʼ ಎಂದು ಹೇಳಿದರು.
ʻಪ್ರಲ್ಹಾದ್ ಜೋಶಿ ಪ್ರಬುದ್ಧ ರಾಜಕಾರಣಿಯಾಗಿದ್ದು, ಧಾರವಾಡ ಕ್ಷೇತ್ರದ ಜನ ಪಕ್ಷದ ಅಭ್ಯರ್ಥಿ ಜೋಶಿ ಪರವಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ಸ್ವಾಮೀಜಿ ಕೈ ಹಾಕಬಾರದು. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಬೇಡಿ ಎಂದು ಅವರಿಗೆ ಮನವಿ ಮಾಡುವೆ. ಮುಂದೆ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣʼ ಎಂದು ಅವರು ಹೇಳಿದ್ದಾರೆ.
ʼಕರ್ನಾಟಕದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರವಾದ ಅಲೆ ಇದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ ಮಾಡಿರುವ ಅಭಿವೃದ್ಧಿ ಕೆಲಸಗಳು ಇಲ್ಲಿನ ಮನೆ ಮನೆಗೂ ತಿಳಿದಿದೆʼ ಎಂದು ಹೇಳಿದರು.
ಪ್ರಲ್ಹಾದ್ ಜೋಶಿ ಅವರು ಕ್ಷೇತ್ರದ ಬಹುಸಂಖ್ಯಾರ ಸಮುದಾಯದ ವಿರುದ್ಧ ದಬ್ಬಾಳಿಕೆ ನಡೆಸಿದ್ದಾರೆ. ಸಮಾಜದ ಎಲ್ಲಾ ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯುವ ಬದಲು ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸಲು ತಾವು ಚುನಾವಣಾ ಕಣಕ್ಕೆ ಇಳಿಯುತ್ತಿರುವುದಾಗಿ ದಿಂಗಾಲೇಶ್ವರ ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಲಿಂಗಾಯತ ಸಮುದಾಯದವೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಪ್ರಭಾವಿ ಲಿಂಗಾಯತ ಸ್ವಾಮೀಜಿ ಒಬ್ಬರು ಹೀಗೆ ಬಂಡಾಯವೆದ್ದಿರುವುದು ಬಿಜೆಪಿ ಮತ್ತು ಅದರ ಅಭ್ಯರ್ಥಿ ಜೋಶಿ ಅವರ ನಿದ್ದೆಗೆಡಿಸಿದೆ.