
75ಕ್ಕೆ ನಿರ್ಗಮಿಸುವರೇ ಮೋಹನ್ ಭಾಗವತ್? ಅನುಸರಿಸುವರೇ ಮೋದಿ?
ನರೇಂದ್ರ ಮೋದಿ ಜನಪ್ರಿಯತೆ ಹೊರತಾಗಿಯೂ ಅವರು ನಿರಂತರವಾಗಿ ಗದ್ದುಗೆಯಲ್ಲಿ ಮುಂದವರಿಯುವುದು ಸಂಘ ಪರಿವಾರದ ನಾಯಕತ್ವದ ಪಾಲಿಗೆ ಅಹಿತಕರ’ ಎನಿಸಲಿದೆ. 75 ವರ್ಷ ವಯಸ್ಸಿನ ನಿಯಮಕ್ಕೆ ಕಟ್ಟುಬಿದ್ದು ಭಾಗವತ್ ಅವರು ಅಧಿಕಾರ ತೊರೆದು ಹೊರಟುಬಿಟ್ಟರೆ ಮೋದಿ ಅದನ್ನು ಅನುಸರಿಸುತ್ತಾರೆಯೇ?
“ನಿಮಗೆ ಎಪ್ಪತೈದು ವರ್ಷ ತುಂಬಿತು ಎಂದಾದರೆ ನಿಮ್ಮ ಅಧಿಕಾರದ ಆಯುಷ್ಯ ಮುಗಿಯಿತು, ಪಕ್ಕದಲ್ಲಿದ್ದವರಿಗೆ ದಾರಿಮಾಡಿಕೊಡಿ ಎಂಬುದು ಇದರ ಅರ್ಥ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ನೀಡಿದ ಸಾರ್ವಜನಿಕ ಹೇಳಿಕೆಗೆ ವಿಶೇಷ ಅರ್ಥ ಬಂದಿದೆ ಎಂಬುದು ಮಾತ್ರ ಸತ್ಯ.
ಈ ಮೂಲಕ ಆರ್.ಎಸ್.ಎಸ್. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಮುಸುಕಿನ ಗುದ್ದಾಟವನ್ನು ಭಾಗವತ್ ಅವರೇ ಆರಂಭಿಸಿಬಿಟ್ಟಿದ್ದಾರೆ. ಇತ್ತೀಚೆಗೆ ನಾಗಪುರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು ಈ ಹೇಳಿಕೆ ನೀಡಿದ್ದರು.
ನಿರೀಕ್ಷೆಯಂತೆ ಈ ಹೇಳಿಕೆಯು ತೀವ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಯಾಕೆಂದರೆ ಇದೊಂದು ಕೇವಲ ಹೇಳಿಕೆಯಲ್ಲ, ಬದಲಾಗಿ ಒಂದು ‘ಸೂಚನೆ’ ಎಂಬುದು ಬಹುತೇಕರ ಲೆಕ್ಕಾಚಾರ. ಇಷ್ಟುಮಾತ್ರವಲ್ಲದೆ ಕಳೆದ ಐದು ದಶಕಗಳಿಂದ ಸುದೀರ್ಘ ಸೈದ್ಧಾಂತಿಕ ಸಹಪ್ರಯಾಣಿಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೊಟ್ಟಿರುವ ಸೂಚನೆ ಎಂದು ಪರಿಭಾವಿಸಲಾಗಿದೆ.
ಆಕಸ್ಮಿಕ ಮಾತಲ್ಲ: ಒಂದು ಕಾಲದ ಹಿರಿಯ ನಾಯಕರಾಗಿದ್ದ ಮೋರೋಪಂತ್ ಪಿಂಗಳೆ ಅವರನ್ನು ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವತ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಪರಿವಾರದ ಕಾರ್ಯಕ್ರಮದಲ್ಲಿಯೇ ಅವರು ಈ ಹೇಳಿಕೆಯನ್ನು ನೀಡಿರುವುದರಿಂದ ಇದೊಂದು ಆಕಸ್ಮಿಕವಾಗಿ ಹೊರಬಂದ ಮಾತಾಗಿರಲಿಲ್ಲ.
ಮೋರೋಪಂತ್ ಪಿಂಗಳೆ ಅವರಿಗೆ ಉನ್ನತ ಸ್ಥಾನಕ್ಕೇರುವ ಎಲ್ಲ ಅರ್ಹತೆಯೂ ಇತ್ತು. ಆದರೆ ಅಂತಹ ಉನ್ನತ ಸ್ಥಾನಕ್ಕೆ ಅವರು ಏರಲು ಸಾಧ್ಯವಾಗಲಿಲ್ಲ ಎಂಬ ಮಾತನ್ನು ಭಾಗವತ್ ಆಡಿದ್ದು, ಉದ್ದೇಶಿತ ಪ್ರತಿಕ್ರಿಯೆಯನ್ನು ಪ್ರೇರೇಪಿಸಲು ಯೋಜಿತವಾಗಿಯೇ ನೀಡಿದ ಹೇಳಿಕೆಯಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
“ನಿಮಗೆ 75 ವರ್ಷ ತುಂಬಿದ ಬಳಿಕ ನಿಮ್ಮನ್ನು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ ಎಂದಾದರೆ ನಿಮಗೆ ವಯಸ್ಸಾಯಿತು, ಉಳಿದವರಿಗೆ ದಾರಿ ಮಾಡಿಕೊಡಲು ಇದು ಸಕಾಲ” ಎಂದು ಪಿಂಗಳೆ ಅವರೇ ಹೇಳಿದ ಮಾತನ್ನು ಭಾಗವತ್ ಉಲ್ಲೇಖಿಸಿದ್ದರು. ಇದರ ಹಿಂದಿನ ಕಾರಣ ಮತ್ತು ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಈಗ ಅತ್ಯಗತ್ಯವಾಗಿದೆ.
ಭಾಗವತ್ ಅವರ ಈ ತಿವಿತದ ಬಳಿಕ ಪಕ್ಷದ ನಾಯಕರು ಹಾಗೂ ಆರ್.ಎಸ್.ಎಸ್.ನ ಇತರ ಅಂಗಸಂಸ್ಥೆಗಳ ನಾಯಕರು ಯಾರೇ ಆಗಿದ್ದರೂ ಮತ್ತು ಯಾವುದೇ ಸ್ಥಾನಮಾನವನ್ನು ಹೊಂದಿದ್ದವರಾಗಿದ್ದರೂ ಈ ವರ್ಷದ ಸೆಪ್ಟೆಂಬರ್ 17ರಂದು ಮೋದಿ ಅವರಿಗೆ 75 ವರ್ಷ ತುಂಬಿದಾಗ ಪಿಂಗಳೆ ಪ್ರಸ್ತಾಪಿಸಿದ ಸಂದೇಶವನ್ನು ಸಾರಲು ಶಾಲುಗಳನ್ನು ಹಿಡಿದು ಮೋದಿ ಅವರ ಮನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆಯೇ ಎಂಬುದು ಈಗಿರುವ ಮುಖ್ಯ ಪ್ರಶ್ನೆಯಾಗಿದೆ.
“ಆರ್.ಎಸ್.ಎಸ್. ಮತ್ತು ಬಿಜೆಪಿಯನ್ನು ಒಳಗೊಂಡಂತೆ ಅದರ ಅಂಗಸಂಸ್ಥೆಗಳ ನಾಯಕರಿಗೆ 75 ವರ್ಷ ವಯಸ್ಸು ತುಂಬಿದ ಬಳಿಕ ಸ್ಥಾಂಸ್ಥಿಕ ಮತ್ತು ಸಾರ್ವಜನಿಕ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಎಲ್ಲಿಯೂ ಕೂಡ ಬರೆಯಲಾಗಿಲ್ಲ.”
ಆದರೆ 2009ರಲ್ಲಿ ಭಾಗವತ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮತ್ತು 2014ರಲ್ಲಿ ಮೋದಿ ಅವರು ಬಿಜೆಪಿಯ ಸಂಪೂರ್ಣ ಹಿಡಿತವನ್ನು ಸಾಧಿಸಿದ ನಂತರ ಈ ಸಂಪ್ರದಾಯವು ಹೆಚ್ಚು ಚಾಲ್ತಿಗೆ ಬಂದಿದೆ. ಆದರೆ ಬಿಜೆಪಿಯಲ್ಲಿ ಈ ನಿಯಮವನ್ನು ಮೋದಿ ಅವರು ತಮ್ಮ ನಿಷ್ಠಾವಂತರಿಗೆ ಅನುಕೂಲವಾಗುವಂತೆ ಆಯ್ಕೆ ಮಾಡಿ ಬಳಸಿಕೊಂಡಿದ್ದಾರೆ.
ಹಿರಿಯರ ಕಡೆಗಣನೆ
ಉದಾಹರಣೆಗೆ ಹೇಳುವುದಾದರೆ, 2014ರಲ್ಲಿ ಸಚಿವ ಸಂಪುಟ ರಚನೆ ಮಾಡಿದಾಗ ಪಕ್ಷದ ಹಿರಿಯ ನೇತಾರರಾದ ಎಲ್.ಕೆ.ಆಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿ ಅವರನ್ನು ಪರಿಗಣಿಸಲಾಗಿರಲಿಲ್ಲ. ಯಾಕೆಂದರೆ ಅವರಿಗೆ 75 ವರ್ಷ ತುಂಬಿತ್ತು. ಆದರೆ, ಗುಜರಾತ್ ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಇನ್ನೇನು ಆ ನಿಗದಿತ ವಯಸ್ಸನ್ನು ತಲುಪುವ ಮೂರು ತಿಂಗಳ ಮೊದಲೇ 2016ರ ಆಗಸ್ಟ್ ನಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಬಳಿಕ ಮೋದಿ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಿದರು. ಯಾಕೆಂದರೆ ಆನಂದಿಬೆನ್ ಮೋದಿ ಅವರ ನಿಷ್ಠಾವಂತರಲ್ಲಿ ಒಬ್ಬರಾಗಿದ್ದರು.
ರಾಜಕೀಯ ಅನಿವಾರ್ಯತೆಗೆ ಕಟ್ಟುಬಿದ್ದು ಈ ನಿಯಮವನ್ನು ಉಲ್ಲಂಘಿಸಿದ ಇತರ ನಿದರ್ಶನಗಳೂ ನಮ್ಮ ಮುಂದೆ ಇವೆ. 2019ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿದಾಗ ಅವರಿಗೆ 75 ವರ್ಷ ವಯಸ್ಸು ದಾಟಿತ್ತು. ಅವರು ತಮ್ಮ 78ನೇ ವಯಸ್ಸಿನ ವರೆಗೂ ಅಧಿಕಾರದಲ್ಲಿ ಇದ್ದರು.
ಈ ಅಲಿಖಿತ ನಿಯಮವನ್ನು ಮೋದಿ ಅವರಿಗಾಗಿ ತೆಗೆದುಹಾಕುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅವರು ಕನಿಷ್ಠ 2029ರ ವರೆಗೆ ಅಥವಾ ಆರೋಗ್ಯ ಅನುಮತಿಸಿದರೆ ಅದಕ್ಕಿಂತಲೂ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯಬಹುದು. ಸದ್ಯಕ್ಕಂತೂ ಬಿಜೆಪಿಯಲ್ಲಿ ಮಾತ್ರವಲ್ಲದೆ ಇಡೀ ರಾಷ್ಟ್ರದಲ್ಲಿ ಮೋದಿ ಜನಪ್ರಿಯ ನಾಯಕರಾಗಿದ್ದಾರೆ ಎಂದು ವಾದವನ್ನು ಮಂಡಿಸಬಹುದು.
ಇಷ್ಟು ಮಾತ್ರವಲ್ಲದೆ, ಮೋದಿ ಅವರು ಸಂಘದ ಪರಿವಾರದ ಸೈದ್ಧಾಂತಿಕ ದೃಷ್ಟಿಕೋನದಿಂದ ಹಿಂದುತ್ವದ ಉದ್ದೇಶಗಳು ಮತ್ತು ಗುರಿಗಳನ್ನು ಅನುಸರಿಸುವಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ.
ನಿರ್ಗಮಿಸುವರೇ ಭಾಗವತ್?
ಹಾಗಿದ್ದೂ ಭಾಗವತ್ ಅವರ ಈ ನಿಸ್ಸಂದಿಗ್ದ ಹೇಳಿಕೆ ಮೋದಿ ಅವರನ್ನು ಸಂದಿಗ್ಧದಲ್ಲಿ ಸಿಲುಕಿಸಬಲ್ಲುದು. 2026ರ ದಸರಾ ಸಂದರ್ಭದಲ್ಲಿ ನಡೆಯುವ ಆರ್.ಎಸ್.ಎಸ್.ನ ಶತಮಾನೋತ್ಸವ ಸಮಾರಂಭದ ಮುಕ್ತಾಯದ ಹೊತ್ತಿಗಾದರೂ ಆರ್.ಎಸ್.ಎಸ್. ಮುಖ್ಯಸ್ಥರು ತಮ್ಮ ಸ್ಥಾನವನ್ನು ತ್ಯಜಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಈ ಕಾಲಘಟ್ಟದಲ್ಲಿ ಹೇಳುವುದು ಸೂಕ್ತವೆನಿಸುತ್ತದೆ.
ನರೇಂದ್ರ ಮೋದಿ ಅವರಿಗೆ 75 ತುಂಬುವ ಕೇವಲ ಆರು ದಿನಗಳಿಗೂ ಮೊದಲು ಅಂದರೆ ಸೆಪ್ಟೆಂಬರ್ 11ರಂದು 75ಕ್ಕೆ ಕಾಲಿಡುವ ಭಾಗವತ್ ಅವರು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಹೇಳಿ ಹೊಸಬರಿಗೆ ದಾರಿ ಮಾಡಿಕೊಡಬಹುದು. ಹಾಗಿದ್ದೂ ಅವರು ಈ ವರ್ಷದ ಅಕ್ಟೋಬರ್ 2ರ ದಸರಾ ಆಚರಣೆಯ ಸಂದರ್ಭದಲ್ಲಿಯೇ ಶುರುವಾಗುವ ವಾರ್ಷಿಕೋತ್ಸವದ ಹೊತ್ತಿನಲ್ಲೇ ಅವಸರದಿಂದ ಅಧಿಕಾರ ಹಸ್ತಾಂತರಿಸುವುದು ಅಸಂಭವವೇ ಆಗಿದೆ.
ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ಜನಮಾನಸದ ಮೇಲೆ ಅವರಿಗಿರುವ ಅಚಲ ಪ್ರಭಾವದ ಹೊರತಾಗಿಯೂ ಪ್ರಧಾನಿ ಕಚೇರಿ ಮಾತ್ರವಲ್ಲದೆ ಬಿಜೆಪಿಯನ್ನೂ ಕೂಡ ಆರ್.ಎಸ್.ಎಸ್.ನ ಕ್ರಿಯಾತ್ಮಕ ಸ್ವಾಯತ್ತತೆಗೆ ಒತ್ತು ನೀಡಿದ್ದರಿಂದ ಸಂಘ ಪರಿವಾರದ ನಾಯಕತ್ವಕ್ಕೆ ಪ್ರಧಾನಿ ತಮ್ಮ ಹುದ್ದೆಯಲ್ಲಿ ಇನ್ನೂ ಮುಂದುವರಿಯುವುದು ‘ಅಹಿತಕರ’ ಎನಿಸಲಿದೆ.
2024ರ ಲೋಕಸಭಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಅವುಗಳಲ್ಲಿಯೇ ಅತ್ಯಂತ ಗರ್ವದ ಹೇಳಿಕೆ ಎಂದರೆ, ‘ಬಿಜೆಪಿಗೆ ಇನ್ನು ಆರ್.ಎಸ್.ಎಸ್.ನ ಯಾವ ಅಗತ್ಯವೂ ಇಲ್ಲ. ಅದು ಈಗ ಹೆಚ್ಚು ಸಕ್ಷಮ (ಸಮರ್ಥ)ವಾಗಿದೆ’ ಎಂಬುದು.
ಹಾಗಂತ ನಡ್ಡಾ ಅವರು ಮೋದಿ ಅವರ ತರ್ಕಕ್ಕೆ ವಿರುದ್ಧವಾಗಿ ಏನನ್ನೂ ಹೇಳುವ ಧೈರ್ಯವಿರುವ ದೊಡ್ಡ ಮಟ್ಟಿನ ನಾಯಕರಲ್ಲ. ಅದು ಯಾವ ಮಾನದಂಡದಿಂದ ನೋಡಿದರೂ ಅಷ್ಟೇ. ಈ ಹೇಳಿಕೆಯೂ ಕೂಡ ಅವರ ನಾಯಕನ ಪ್ರೇರಣೆಯಿಂದಲೇ ಹುಟ್ಟಿಕೊಂಡಿದ್ದು ಎಂದು ನಿಶ್ಚಿತವಾಗಿ ಹೇಳಿಬಿಡಬಹುದು.
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿಯೂ ನಡ್ಡಾ ಅವರು ಆರ್.ಎಸ್.ಎಸ್. ಕುರಿತ ತಮ್ಮ ಆಕ್ಷೇಪಣೆಗಳನ್ನು ಹೊರಹಾಕುತ್ತ ಬಂದವರು. 2001ರ ಅಕ್ಟೋಬರ್ ತಿಂಗಳಿನಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾಲದಿಂದಲೂ ಮೋದಿ ಅವರ ವ್ಯಕ್ತಿ ಕೇಂದ್ರಿತ ಕಾರ್ಯನಿರ್ವಹಣೆಯ ಶೈಲಿಯ ಬಗ್ಗೆ ಆರ್.ಎಸ್.ಎಸ್.ಗೆ ಆಕ್ಷೇಪಣೆ ಇದ್ದೇ ಇತ್ತು.
ಆರ್.ಎಸ್.ಎಸ್. ಹೊಂದಿರುವ ಭಾರೀ ದೊಡ್ಡ ನೆಟ್-ವರ್ಕ್ ಮೋದಿ ಅವರ ನಿರಂತರ ಚುನಾವಣಾ ಯಶಸ್ಸಿನ ಓಟಕ್ಕೆ ‘ಅತ್ಯಗತ್ಯ ಬೆಂಬಲದ ಬಾಹು’ ಎಂದು ಮೋದಿ ಅವರಿಗೆ ಅನೇಕಾನೇಕ ಬಾರಿ ಮನವರಿಕೆ ಮಾಡಲು ಸಂಘ ಪರಿವಾರವು ಪ್ರಯತ್ನಿಸಿದ್ದು ನಿಜ. ಆದರೆ ಅದಕ್ಕೆ ಯಾವುದೇ ಫಲ ದೊರೆಯಲಿಲ್ಲ.
ಬೆಂಬಲಕ್ಕೆ ನಿಂತ ಪರಿವಾರ
ಇವೆಲ್ಲವನ್ನೂ ಒತ್ತಟ್ಟಿಗಿಟ್ಟು 2014ರ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದ ಒಳಗೆ ಮತ್ತು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆರ್.ಎಸ್,ಎಸ್. ಮೋದಿಗೆ ಬೆಂಬಲವನ್ನು ನೀಡಿತು. ಆ ಚುನಾವಣೆ ಪ್ರಚಾರವನ್ನೂ ಮೋದಿ ವೈಯಕ್ತಿಕ ವರ್ಚಸ್ಸನ್ನು ಬೆಳೆಸಿಕೊಳ್ಳುವುದಕ್ಕೇ ಗಮನ ಕೊಟ್ಟರು. ಉದಾಹರಣೆಗೆ, ‘ಮೆ ದೇಶ್ ನಹಿ ಮಿಟನೆ ದೂಂಗಾ’ (ನಾನು ದೇಶವನ್ನು ನಾಶವಾಗಲು ಎಂದಿಗೂ ಬಿಡುವುದಿಲ್ಲ) ಎಂಬ ಹೇಳಿಕೆಗಳು. ಈ ಘೋಷವಾಕ್ಯದ ಟ್ಯಾಗ್ ಲೈನ್ ಜೊತೆಗೆ ಮೋದಿ ಅವರ ವಿಡಿಯೊ ಪ್ರಚಾರಗಳು ವೈರಲ್ ಆದವು.
ಇದು ಆರ್.ಎಸ್.ಎಸ್.ಗೆ ಬೇಸರ ತಂದಿದ್ದು ನಿಜ. ಆದರೆ ದಶಕ ಕಾಲ ಅಧಿಕಾರದಿಂದ ಹೊರಗಿದ್ದ ಬಳಿಕ ಸರ್ಕಾರವನ್ನು ನಿಯಂತ್ರಿಸುವ ವಾಸನೆಯನ್ನು ಗ್ರಹಿಸಿದ್ದರಿಂದ ಮೋದಿ ಅವರನ್ನು ಸಾಧ್ಯವಾದಷ್ಟು ಸಹಿಸಿಕೊಂಡಿರುವುದೇ ಸರಿಯಾದ ನಡೆ ಎಂಬ ತೀರ್ಮಾನಕ್ಕೆ ಬಂದಿತು.
ಸಿದ್ಧಾಂತವಲ್ಲ, ನಂಬರ್ ಮುಖ್ಯ
ಮೋದಿ ಅವರಿಗೆ ಆರಂಭದಲ್ಲಿಯೇ ತಿಳಿದ ಒಂದು ಸಂಗತಿ ಎಂದರೆ ಸಂಘ ಪರಿವಾರದ ಸೈದ್ಧಾಂತಿಕ ಗುರಿಗಳನ್ನು ಪೂರೈಸುವುದಕ್ಕಿಂತ ತಮಗಿರುವ ಸಂಖ್ಯಾಬಲವನ್ನು ಖಾತರಿ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂಬುದು. ಹಾಗಿದ್ದೂ ಅವರು ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಆರ್.ಎಸ್.ಎಸ್ ಬೆಂಬಲಿಗರು ಹಾಗೂ ಸಂಘದ ನಾನಾ ಅಂಗಸಂಸ್ಥೆಗಳ ಅಸಂಖ್ಯಾತ ಕಾರ್ಯಕರ್ತರನ್ನು ನೇಮಕ ಮಾಡಿದರು. ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳ ಹೊರತಾಗಿಯೂ ದೇಶದಾದ್ಯಂತ ಹಿಂದು ಬಹುಸಂಖ್ಯಾತ ಸ್ವರೂಪವನ್ನು ಯಾವುದೇ ಮುಚ್ಚುಮರೆ ಕೂಡ ಇಲ್ಲದೆ ಪ್ರದರ್ಶಿಬಹುದು ಎನ್ನುವುದು ಇನ್ನೊಂದು ಬಹುಮುಖ್ಯ ಅಂಶವಾಗಿದೆ.
ಅಧಿಕಾರ ಕೈಗೆ ಸಿಕ್ಕ ಬಳಿಕ ಸಂಘ ಮತ್ತು ಅದರ ನಾಯಕರಿಗೆ ಭೌತಿಕ ಸೌಲಭ್ಯಗಳ ಸುರಿಮಳೆಯನ್ನು ಸುರಿಸುವ ಮೂಲಕ ಮೋದಿ ಅವರು ಚಾಣಾಕ್ಷ ನಡೆಯನ್ನು ಪ್ರದರ್ಶಿಸಿದರು. ಕೆಳ ಮಧ್ಯಮವರ್ಗದಿಂದ ಮೇಲ್-ಸ್ತರದವರೂ ಐಷಾರಾಮಿ ಜೀವನದ ಏಣಿಯನ್ನು ಹತ್ತಿದರು. ದೆಹಲಿಯಲ್ಲಿ ಆರಂಭವಾದ ಆರ್.ಎಸ್.ಎಸ್.ನ ಹೊಸ ಕಚೇರಿ ಇದಕ್ಕೆ ಅತ್ಯುತ್ತಮ ಉದಾಹರಣೆ.
ಆರ್.ಎಸ್.ಎಸ್. ‘ಮೋದಿಕೃತ’ ಮಾರ್ಗದಲ್ಲಿ ಸಾಗುತ್ತಿದೆ ಎಂಬುದಕ್ಕೆ 2014ರಿಂದೀಚೆಗೆ ನಡೆದ ಘಟನೆಗಳು ಸಾಕ್ಷಿಯಾಗಿವೆ ಎಂಬ ಬಗ್ಗೆ ರಾಜಕೀಯ ಪಂಡಿತರಿಗೆ ಯಾವುದೇ ಅನುಮಾನವಿರಲಿಲ್ಲ. ಅಷ್ಟಾದರೂ ಬಿಜೆಪಿಯ ವ್ಯಕ್ತಿ ಕೇಂದ್ರಿತ ಘೋಷಣೆಗಳು 2024ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿಯೂ ಮುಂದುವರಿಯಿತು. ಇದರಿಂದಾಗಿ ಆರ್.ಎಸ್.ಎಸ್. ಚುನಾವಣಾ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿತು.
ಮೋದಿ ಅವರು ಮೂರನೇ ಬಾರಿಗೆ ಬಿಜೆಪಿಗೆ ಸಂಸತ್ತಿನಲ್ಲಿ ಬಹುಮತ ದಕ್ಕಿಸಿಕೊಡುವಲ್ಲಿ ವಿಫಲರಾಗಿದ್ದು ಇದೇ ಕಾರಣಕ್ಕೆ ಎಂಬುದು ಸ್ಪಷ್ಟ. ಇವೆಲ್ಲ ಬೆಳವಣಿಗೆಗಳ ಬಳಿಕ ಮೋಹನ್ ಭಾಗವತ್ ಅವರು ಹಲವಾರು ಬಾರಿ ಪರೋಕ್ಷವಾಗಿ ಕಟು ಹೇಳಿಕೆಗಳನ್ನು ನೀಡಿದ್ದರು. ಅನೇಕ ತಿಂಗಳುಗಳ ಕಾಲ ಮುಸುಕಿನ ಗುದ್ದಾಟವೇ ನಡೆಯಿತು. ಆನಂತರ 2024ರ ಕೊನೆಯ ಭಾಗದಲ್ಲಿ ತಕ್ಕಮಟ್ಟಿನ ರಾಜಿಸೂತ್ರವನ್ನು ಏರ್ಪಡಿಸಲಾಯಿತು.
ತರುವಾಯ ಹರ್ಯಾಣ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸತತ ಚುನಾವಣೆಗಳು ನಡೆದವು. ಈ ಮೂರು ರಾಜ್ಯಗಳಲ್ಲಿ ಆರ್.ಎಸ್.ಎಸ್. ತನ್ನ ಮೊದಲಿನ ಉತ್ಸಾಹದಲ್ಲಿಯೇ ಪ್ರಚಾರದಲ್ಲಿ ಪಾಲ್ಗೊಂಡಿತು. ಅಲ್ಲಿ ಬಂದ ಫಲಿತಾಂಶಗಳು ಕೂಡ ಅದರ ಸಾಮರ್ಥ್ಯವನ್ನು ಪ್ರದರ್ಶಿಸಿತು.
ನರೇಂದ್ರ ಮೋದಿ ಅವರು ನಾಗಪುರಕ್ಕೆ ಭೇಟಿ ಕೊಟ್ಟರು. ಸಂಘ ಪರಿವಾರದ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೇವಾರ್ ಅವರ ಸ್ಮಾರಕವಿರುವ ಆರ್.ಎಸ್.ಎಸ್. ಕಟ್ಟಡಕ್ಕೂ ತೆರಳಿದರು. ಅಲ್ಲಿ ಭಾಗವತ್ ಅವರ ಜೊತೆ ಏಕಾಂತದಲ್ಲಿ ಮಾತನಾಡಿದರು. ಅವರ ಪಕ್ಕದಲ್ಲಿ ಕುಳಿತುಕೊಂಡೇ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದರು. ಇದರಿಂದ ಕೇಸರಿ ಸಂಘಟನೆಯ ಅಣ್ತಮ್ಮನಂತಿರುವ ಎರಡೂ ಘಟಕಗಳು ರಾಜಿಮಾಡಿಕೊಂಡಿವೆ ಎಂಬುದು ಸ್ಪಷ್ಟವಾಯಿತು.
ಕಗ್ಗಂಟಾದ ಅಧ್ಯಕ್ಷರ ಆಯ್ಕೆ
ಅಷ್ಟಾಗಿಯೂ ಅವರ ಭಿನ್ನಾಭಿಪ್ರಾಯ ಮುಗಿದವೇ? ಇಲ್ಲ. ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರು ಇನ್ನೂ ಬಗೆಹರಿಯದ ಪ್ರಶ್ನೆಯಾಗಿರುವುದೇ ಅವರ ಕಾರ್ಯವೈಖರಿಗಳಲ್ಲಿ ಭಿನ್ನಾಭಿಪ್ರಾಯಗಳು ಇನ್ನೂ ಉಳಿದುಕೊಂಡಿವೆ ಎಂಬುದರ ಸ್ಪಷ್ಟ ಸೂಚನೆ. ಸದ್ಯಕ್ಕೆ ಪಕ್ಷವು ನಡ್ಡಾ ಅವರ ಉತ್ತರಾಧಿಕಾರಿಯನ್ನು ಯಾವಾಗ ಹೆಸರಿಸುತ್ತದೆ ಎಂಬುದು ಯಾರಿಗೂ ತಿಳಿಯದಾಗಿದೆ.
ನಾಯಕರು ಯಾರೇ ಆಗಿದ್ದರೂ 75 ವರ್ಷ ವಯಸ್ಸಿನ ಬಳಿಕ ಅಧಿಕಾರವನ್ನು ಯಾವ ಮುಲಾಜೂ ಇಲ್ಲದೆ ಬಿಟ್ಟುಕೊಡಬೇಕು ಎಂದು ಭಾಗವತ್ ಅವರು ಹೇಳಿದ್ದಾಗಿದೆ. ಹಾಗಾಗಿ ಮುಂದಿನ ಬಿಜೆಪಿ ಮುಖ್ಯಸ್ಥರ ಆಯ್ಕೆಯ ಮೇಲೂ ಈ ಹೇಳಿಕೆ ಪರಿಣಾಮ ಬಿದ್ದೇ ಬೀಳುತ್ತದೆ. ಒಂದು ವೇಳೆ ಅಧ್ಯಕ್ಷರ ಆಯ್ಕೆಯು ಕೂಡ ಮೋದಿ ಅವರ ‘ಅವಿರೋಧ ಆಯ್ಕೆ’ಯಾದರೆ 2026ರ ಹೊತ್ತಿಗೆ ಆರ್.ಎಸ್.ಎಸ್. ಮುಖ್ಯಸ್ಥರು ‘ಪದತ್ಯಾಗ’ ಮಾಡುವುದು ಬಾಕಿ ಉಳಿಯುತ್ತದೆ.
ಸಂಘ ಪರಿವಾರದಲ್ಲಿನ ಕಳೆದ 15 ತಿಂಗಳ ಬೆಳವಣಿಗೆಗಳನ್ನು ಗಮನಿಸಿದರೆ ರೋಲರ್ ಕೋಸ್ಟರ್ ಸವಾರಿಯನ್ನು ಹಿಂಬಾಲಿಸಿದ ಅನುಭವವಾಗುತ್ತದೆ. ಎರಡೂ ಪಾಳಯಗಳಲ್ಲಿ ಏರಿಳಿತಗಳು ನಿರಂತರವಾಗಿ ನಡೆಯುತ್ತಿವೆ. ಭಾಗವತ್ ಅವರ ಹೇಳಿಕೆಯಿಂದ ಖಚಿತವಾಗಿ ಊಹಿಸಬಹುದಾದ ಸಂಗತಿ ಎಂದರೆ ಭವಿಷ್ಯದ ಬೆಳವಣಿಗೆಯನ್ನು ಸಮಗ್ರವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲ.
ಇವೆಲ್ಲದರ ನೇಪಥ್ಯದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥರು ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟು ಕೇಂದ್ರ ಸ್ಥಾನದಿಂದ ದೂರ ಸರಿಯಲು ನಿರ್ಧರಿಸಿದಂತೆ ಕಾಣುತ್ತಿದೆ. ಅಂತಹ ಸಂದಿಗ್ಧ ಪರಿಸ್ಥಿತಿ ಏನಾದರೂ ಉದ್ಭವಿಸಿದರೆ ‘ಫಾಲೋ ದಿ ಲೀಡರ್’ ಕ್ರಮವನ್ನು ಅನುಸರಿಸಬೇಕಾದ ಒತ್ತಡಕ್ಕೆ ಮೋದಿ ಅವರು ಸಿಲುಕುತ್ತಾರೆ. ಅಷ್ಟಿದ್ದೂ ರಾಜಕೀಯವೆಂದರೆ ಅನಿಶ್ಚಿತತೆ ತಾನೆ?
(ಮೂಲ ಲೇಖನ The Federal ನಲ್ಲಿ ಪ್ರಕಟವಾಗಿದೆ. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)