
ಚಂಪತ್ ರಾಯ್ ಟಿಪ್ಪಣಿ ಮತ್ತು ನೃಪೇಂದ್ರ ಮಿಶ್ರಾ ಅವರ ನಿರಾಕರಣೆ ಹೊರಬಿದ್ದಿದೆ. ಇದರಿಂದ ಅಯೋಧ್ಯೆ ಮಂದಿರ ಯೋಜನೆ ಸಂಘಟನೆ ಮತ್ತು ಮೋದಿ ಸರ್ಕಾರದ ನಿಯಂತ್ರಣದತಿಕ್ಕಾಟವನ್ನು ಬೆಳಕಿಗೆ ತಂದಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟಿನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಮಾಧ್ಯಮ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ಒಂಭತ್ತು ಪುಟಗಳ ಟಿಪ್ಪಣಿಯ ಬಗ್ಗೆ ಆಗಸ್ಟ್ 21 ರಂದು ಮಾಧ್ಯಮದಲ್ಲಿ ವರದಿಗಳು ಪ್ರಕಟವಾಗಿವೆ. ಟ್ರಸ್ಟ್ನ ಸೆಪ್ಟೆಂಬರ್ ಮೂರರ ಸಭೆಯ ಕೆಲವೇ ಕೆಲವು ದಿನಗಳಿಗೂ ಮುನ್ನ ಇದು ಸಂಘ ಪರಿವಾರದ ಪರಿಸರದಲ್ಲಿ ಮತ್ತೊಂದು ಸುತ್ತಿನ ಕೋಲಾಹಲಕ್ಕೆ ಕಾರಣವಾಗಿದೆ. ದೇಣಿಗೆ ಕಳ್ಳತನದ ವಿವಾದದ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಟ್ರಸ್ಟ್ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.
ದೇವಾಲಯದ ಟ್ರಸ್ಟ್ನ ಆಡಳಿತಾತ್ಮಕ ಮುಖ್ಯಸ್ಥರ ಹುದ್ದೆಗೆ ನಿವೃತ್ತ ಅಧಿಕಾರಿಯೊಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂಬ ವರದಿಗಳ ನಡುವೆಯೇ ಸಂಘ ಪರಿವಾರದ ಈ ಪ್ರಮುಖ ಯೋಜನೆಯಲ್ಲಿ ಹೊಸದೊಂದು ಬಿರುಕು ಮೂಡಿದೆ. ವಿಎಚ್ಪಿ ಬೆಂಬಲವನ್ನು ಹೊಂದಿರುವ ಚಂಪತ್ ರಾಯ್ ಅವರು ಈಗಾಗಲೇ ನಿರ್ಗಮಿಸಿರುವುದರಿಂದ ಅವರಿಗೆ ಯಾವುದೇ ಧ್ವನಿ ಇರುವುದಿಲ್ಲ. ಇದು ಬೀದಿ ಮಟ್ಟದ ಚಳವಳಿಯಿಂದ ಅಧಿಕಾರಶಾಹಿಯ ಸಾಂಸ್ಥೀಕರಣದ ವರೆಗಿನ ರಾಮ ಮಂದಿರದ ದಶಕಗಳ ಪಯಣದಲ್ಲಿ ಅಡಕವಾಗಿರುವ ಪ್ರಮುಖ ಉಪ-ಕಥೆಯನ್ನು ಎತ್ತಿ ತೋರಿಸುತ್ತದೆ.
ಹಾಗಿದ್ದೂ ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿಯೂ, ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರೂ ಮತ್ತು ದೇವಾಲಯದ ಟ್ರಸ್ಟಿಯೂ ಆಗಿರುವ ನೃಪೇಂದ್ರ ಮಿಶ್ರ ಅವರು ಈ ಟಿಪ್ಪಣಿಯನ್ನು ಕಪೋಲಕಲ್ಪಿತ ಎಂದು ತಳ್ಳಿಹಾಕಿದ್ದಾರೆ.
ಟ್ರಸ್ಟ್ ಒಳಗಿನ ಅಪಸ್ವರ ಬಯಲು
ಮಿಶ್ರಾ ಅವರು ಚಂಪತ್ ರಾಯ್ ಅವರ ಟಿಪ್ಪಣಿಯನ್ನು ತಿರಸ್ಕರಿಸಿದ ಹೊರತಾಗಿಯೂ (ಮಾಧ್ಯಮ ವರದಿಗಳ ಪ್ರಕಾರ, ರಾಯ್ ಅವರು ತಾವು ಟಿಪ್ಪಣಿ ಬರೆದಿರುವುದನ್ನು ಪತ್ರಕರ್ತರಿಗೆ ದೃಢಪಡಿಸಿದ್ದರು), 2020ರ ಆರಂಭದಲ್ಲಿ ಕೇಂದ್ರ ಸರ್ಕಾರವು ಈ ಟ್ರಸ್ಟ್ ಸ್ಥಾಪಿಸಿದಾಗಿನಿಂದ ಅದರೊಳಗೆ ಉಂಟಾಗಿರುವ ತೀವ್ರ ಭಿನ್ನಾಭಿಪ್ರಾಯವನ್ನು ಈ ಘಟನೆಯು ಬಯಲು ಮಾಡಿದೆ.
ಪ್ರಮುಖವಾಗಿ ವಿಎಚ್ಪಿಗೆ ಸೇರಿದ ಸಿದ್ಧಾಂತ ಆಧಾರಿತ ಸಂಘ ಪರಿವಾರದ ಕಾರ್ಯಕರ್ತರು ಮತ್ತು ಪ್ರಧಾನಮಂತ್ರಿ ಕಚೇರಿಯಿಂದ ಸೃಷ್ಟಿಸಲ್ಪಟ್ಟ ಕೇಂದ್ರೀಕೃತ, ಅಧಿಕಾರಶಾಹಿ ಹಾಗೂ ಕಾರ್ಪೊರೇಟ್ ಮಾದರಿಯ ರಚನೆಯ ನಡುವೆ, ಟ್ರಸ್ಟ್ನ ಆರಂಭಿಕ ದಿನಗಳಿಂದಲೂ ಅಪಸ್ವರದ ಅಂಶವು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ರಾಮಮಂದಿರ ಕಳವು ಜನಸಾಮಾನ್ಯರ ಹಾಗೂ ಬೀದಿಗಳಲ್ಲಿನ ಚಳವಳಿಯಿಂದ ಬೆಳೆದು, ಅಧಿಕಾರಶಾಹಿ ಸಂಸ್ಥೆಯಂತೆ ಕಾರ್ಯನಿರ್ವಹಿಸುವ ಹಂತಕ್ಕೆ ಅಷ್ಟು ಪರಿಪೂರ್ಣವಾಗಿ ರೂಪುಗೊಳ್ಳದೇ ಇರುವುದರಿಂದ ಈ ಎರಡು ವಿಭಿನ್ನ ವ್ಯವಸ್ಥೆಗಳ ನಡುವಿನ ಕಂದರವು ಸ್ಪಷ್ಟವಾಗಿ ಕಾಣುತ್ತಿತ್ತು. ಆದಾಗ್ಯೂ, ದೇಣಿಗೆ ಹಗರಣವು ತೋರಿಸಿಕೊಟ್ಟಂತೆ, ಅದರ ರಚನೆ ಮತ್ತು ಕಾರ್ಯನಿರ್ವಹಣೆಯಲ್ಲಿ ಇನ್ನೂ ಅನೇಕ ಲೋಪದೋಷಗಳು ಉಳಿದುಕೊಂಡಿವೆ.
ದೇವಾಲಯದ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಪರಸ್ಪರ ವಿರೋಧಾಭಾಸದ ನಿರೂಪಣೆಗಳಿಗೆ ಸಂಪೂರ್ಣ ಭಿನ್ನವಾಗಿ ಚಂಪತ್ ರಾಯ್ ಅವರ ಟಿಪ್ಪಣಿಯು ಬಯಲಾದ ಅದೇ ದಿನ ಅಯೋಧ್ಯೆಯ ದೇವಾಲಯ ಯೋಜನೆಯು ತನ್ನ ಅಂತಿಮ ನಿರ್ಮಾಣದ ಮೈಲಿಗಲ್ಲನ್ನು ಕೂಡ ತಲುಪಿತು. ಈಗಾಗಲೇ ಅನುಮೋದಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಂಬ ಕಂಚಿನ ಲಾಂಛನವನ್ನು ʼಪೂರ್ಣ ಸ್ಮೃತಿ ಸ್ತಂಭʼದ ಮೇಲೆ ಅನಾವರಣ ಮಾಡುವುದು ಮಾತ್ರ ಬಾಕಿ ಉಳಿದಿದೆ. ರಾಮ ಮಂದಿರ ಆವರಣದೊಳಗಿನ ನಿರ್ಮಾಣ ಕಾರ್ಯವು ಈಗ ಪೂರ್ಣಗೊಂಡಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಪ್ರತಿಷ್ಠಾಪನೆ ನಡೆದಾಗ ಅದನ್ನು ಕೇವಲ ಆಧ್ಯಾತ್ಮಿಕ ಆಕಾಂಕ್ಷೆಯ ಸಾಕ್ಷಾತ್ಕಾರವಾಗಿ ಮಾತ್ರವಲ್ಲದೆ ದಶಕಗಳಷ್ಟು ಹಳೆಯದಾದ ರಾಜಕೀಯ ಐೋಜನೆಯ ಕಿರೀಟಪ್ರಾಯವಾದ ಸಾಧನೆಯಾಗಿ ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಎಂಬುದನ್ನು ಸ್ಮರಿಸಿಕೊಳ್ಳಬೇಕು.
ಆ ಹಂತದಲ್ಲಿ ಸಂಘ ಪರಿವಾರವು ಸ್ಥಳೀಯ ಮಟ್ಟದ ವಿವಾದವನ್ನು ಆಧುನಿಕ ಭಾರತೀಯ ರಾಜಕೀಯದ ಪ್ರಾಥಮಿಕ ಸಿದ್ಧಾಂತದ ಎಂಜಿನ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ನರೇಂದ್ರ ಮೋದಿ ಅವರು ಯಾವುದೇ ಮುನ್ಸೂಚನೆ ಇಲ್ಲದೆ ʼಹಿಂದೂ ವ್ಯಾಟಿಕನ್ʼ ಮಾದರಿಯಲ್ಲಿ ರೂಪಿಸಲು ಬಯಸಿದ್ದ ರಾಮ ಮಂದಿರಕ್ಕೆ ಕಳಂಕ ತರುತ್ತಿರುವ ವಿವಾದಗಳ ಸರಣಿಯಲ್ಲಿ ಉದ್ಭವಿಸಿದ ಇತ್ತೀಚಿನ ಘಟನೆಯು ರಾಯ್ ಮತ್ತು ಮಿಶ್ರಾ ಅವರ ನಡುವಿನ ಸಂಘರ್ಷವನ್ನು ಮತ್ತಷ್ಟು ತಾರಕಕ್ಕೆ ಏರಿಸಿದೆ.
ಇಷ್ಟಾಗಿಯೂ ಇದನ್ನು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಘರ್ಷಣೆ ಎಂದಷ್ಟೇ ನೋಡಲು ಸಾಧ್ಯವಿಲ್ಲ. ಮೋದಿಯವರ ಮತ್ತು ಸಂಘ ಪರಿವಾರದ ಒಳಗೆ ವಿಶ್ವ ಹಿಂದೂ ಪರಿಷತ್ ನೇತೃತ್ವದ ಗುಂಪುಗಳ ವಿಭಿನ್ನ ಕಾರ್ಯ ವೈಖರಿಗಳ ನಡುವಿನ ವಿಶಾಲ ಹಿನ್ನೆಲೆಯಲ್ಲಿ ಇದನ್ನು ಗ್ರಹಿಸಬೇಕಾದ ಅಗತ್ಯವಿದೆ.
ಮೋದಿಯ ವಿಶೇಷ ಪ್ರತಿನಿಧಿ ಮಿಶ್ರ
2024ರ ಲೋಕಸಭಾ ಚುನಾವಣೆಗೆ ಇನ್ನೂ ತಿಂಗಳುಗಳು ಬಾಕಿ ಇರುವ ಹೊತ್ತಿನಲ್ಲಿ ನಡೆದ ಪ್ರತಿಷ್ಠಾಪನಾ ಸಮಾರಂಭದ ನಂತರ, ಬೀದಿಗಳಲ್ಲಿ ಹೋರಾಡಿ ಗಟ್ಟಿಗೊಂಡ ಸ್ವಯಂಸೇವಕರಿಗೂ ಮತ್ತು ಮೃದುಧೋರಣೆಯ ಅಧಿಕಾರಶಾಹಿಗಳಿಗೂ ನಡುವೆ ಐತಿಹಾಸಿಕ ಸಂಘರ್ಷವು ಅನಿವಾರ್ಯ ಎಂಬುದು ಸ್ಪಷ್ಟವಾಗಿತ್ತು. 2014 ಮತ್ತು 2019ರ ಚುನಾವಣೆಗಳಲ್ಲಿ ಸಂಪೂರ್ಣ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್), 2024ರ ಸಂಸತ್ ಚುನಾವಣೆಯಲ್ಲಿ ತುಸು ನಿರ್ಲಿಪ್ತ ಧೋರಣೆ ತೋರಲು ಇದು ಕೂಡ ಒಂದು ಕಾರಣವಾಗಿರಬಹುದು.
ರಾಮಮಂದಿರ ಟ್ರಸ್ಟ್ ಸ್ಥಾಪಿಸಲು ಮತ್ತು ತಮ್ಮಿಚ್ಛೆಯ ಸದಸ್ಯರನ್ನು ನಾಮನಿರ್ದೇಶನ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದ ಸುಪ್ರೀಂ ಕೋರ್ಟ್ನ ತೀರ್ಪನ್ನು ದೊಡ್ಡ ಮಟ್ಟದಲ್ಲಿ ಒಪ್ಪಿಕೊಳ್ಳಲು ವಿಶ್ವ ಹಿಂದೂ ಪರಿಷತ್ಗೆ ಸಂಬಂಧಿಸಿದ ವ್ಯಕ್ತಿಗಳು ಸಿದ್ಧರಿರಲಿಲ್ಲ. ಇದರ ಪರಿಣಾಮವಾಗಿ, ಈ ಟ್ರಸ್ಟ್ ಕೇಂದ್ರ ಸರ್ಕಾರದಂತೆ ಅತ್ಯಂತ ಕೇಂದ್ರೀಕೃತ ಮಾದರಿಯಲ್ಲಿ ಕಾರ್ಯನಿರ್ವಹಿಸಿತು; ಇಲ್ಲಿ ಬಹುತೇಕ ನಿರ್ಧಾರಗಳು ಮೋದಿಯವರ ಪ್ರತಿನಿಧಿಯಂತೆ ವರ್ತಿಸುತ್ತಿದ್ದ ಮಿಶ್ರ ಅವರ ಇಚ್ಛೆಯಂತೆ ನಡೆಯುತ್ತಿದ್ದವು. ರಾಯ್ ಅವರು ತಮ್ಮ ನಿರ್ಗಮನದ ನಂತರ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ತಳಮಟ್ಟದಲ್ಲಿ ನಿಜವಾದ ಹೋರಾಟ ನಡೆಸಿದ ಸೈನಿಕರು ಹಾಗೂ ಅವರ ನಾಯಕರು ಈ ನಿರ್ಧಾರವನ್ನು ಅನುಕೂಲಕರವಾಗಿ ಪರಿಗಣಿಸಿರಲಿಲ್ಲ. 1980ರ ದಶಕದ ಆರಂಭದಿಂದಲೂ ಆರ್ಎಸ್ಎಸ್ನ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ವಿಎಚ್ಪಿ ಮೂಲಕ ಶ್ರೀ ರಾಮಜನ್ಮಭೂಮಿಯ ವಿಮೋಚನಾ ಚಳವಳಿಯನ್ನು ನಡೆಸಲಾಗಿತ್ತು ಎಂಬುದನ್ನು ಸ್ಮರಿಸಿಕೊಳ್ಳಬೇಕು.
ಹಿಂದೂ ಪರ ಪಕ್ಷಗಳ ಪರವಾಗಿ ತೀರ್ಪು ಬಂದ ನಂತರ, ಧಾರ್ಮಿಕ ಆಶಯಗಳನ್ನು ಬಿಜೆಪಿಗೆ ಚುನಾವಣಾ ಲಾಭವಾಗಿ ಪರಿವರ್ತಿಸುವ ನಿಯಂತ್ರಣಾ ಅಧಿಕಾರ ತಮಗೆ ಸಿಗಲಿದೆ ಎಂಬುದು ಅವರ ನಿರೀಕ್ಷೆಯಾಗಿತ್ತು. ಆದರೆ 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಅವರ ನಿರೀಕ್ಷೆಗಳು ಹುಸಿಯಾದವು.
ಸೆಪ್ಟೆಂಬರ್ 1990ರಲ್ಲಿ ಎಲ್.ಕೆ. ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯೆಯವರೆಗಿನ ರಥಯಾತ್ರೆಯ ಗುಜರಾತ್ ವಿಭಾಗವನ್ನು ನಿರ್ವಹಿಸುವುದನ್ನು ಹೊರತುಪಡಿಸಿ ಮೋದಿ ಅವರು ಎಂದಿಗೂ ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಆದರೂ ರಾಮಮಂದಿರ ನಿರ್ಮಾಣ ಪ್ರಕ್ರಿಯೆ ಮತ್ತು ಅಂತಿಮವಾಗಿ ಅದರ ಆಡಳಿತದ ಮೇಲೂ ಕೇಂದ್ರ ಸರ್ಕಾರದ (ಪ್ರಧಾನಮಂತ್ರಿ ಕಚೇರಿ) ನಿಯಂತ್ರಣವಿದ್ದುದು ಒಂದು ವಿಪರ್ಯಾಸವೇ ಸರಿ.
ಮೋದಿ ಅವರು ಎಲ್ಲಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಸಂಘ ಪರಿವಾರದೊಳಗೆ ಗುಸುಗುಸು ಕೇಳಿಬಂದ ಹೊರತಾಗಿಯೂ, 2020ರ ಆಗಸ್ಟ್ನಲ್ಲಿ ನಡೆದ ಭೂಮಿ ಪೂಜೆಯಿಂದ ಹಿಡಿದು, 2024ರ ಜನವರಿಯಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಮತ್ತು ಶ್ರೀ ರಾಮಜನ್ಮಭೂಮಿ ಮಂದಿರದ ಶಿಖರದ ಮೇಲೆ ನಡೆದ ಅಂತಿಮ ಧ್ವಜಾರೋಹಣದವರೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳನ್ನು ಮೋದಿ ಅವರೇ ನೆರವೇರಿಸಿದರು.
ಅಯೋಧ್ಯೆ ರಾಮಮಂದಿರ ನಿರ್ಮಾಣದ ಅಂತಿಮ ಹಂತಗಳಲ್ಲಿ ಮೋದಿಯವರ ಪಾತ್ರವು, 2019ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಫಲಿತಾಂಶವಾಗಿದೆ. ಈ ತೀರ್ಪಿನ ಫಲವಾಗಿ ಟ್ರಸ್ಟ್ ರಚನೆ ಮತ್ತು ಅದರ ವ್ಯವಹಾರಗಳನ್ನು ನಡೆಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಹೆಗಲು ಏರಿತ್ತು. ಈ ತೀರ್ಪು ಮತ್ತು ಅದರ ಅಂತಿಮ ಆದೇಶವು, ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯ ಪ್ರಧಾನ ಕಚೇರಿಯನ್ನು ದೆಹಲಿಯ ಆರ್.ಕೆ. ಪುರಂನಲ್ಲಿರುವ ಸಂಕಟ ಮೋಚನ ಹನುಮಾನ್ ಮಂದಿರ ಆಶ್ರಮದಲ್ಲಿರುವ ವಿಎಚ್ಪಿಯ ಕೇಂದ್ರ ಕಚೇರಿಯಿಂದ ನೇರವಾಗಿ ಪ್ರಧಾನಮಂತ್ರಿ ಕಚೇರಿಗೆ ಸ್ಥಳಾಂತರಿಸಿದಂತಾಗಿತ್ತು.
ತಾಂತ್ರಿಕ ಪ್ರವೀಣರು ಬಂದರು
ಟ್ರಸ್ಟ್ ಸ್ಥಾಪನೆಯಾದ ಕೆಲವೇ ವಾರಗಳಲ್ಲಿ ಮಿಶ್ರ ಅವರನ್ನು ದೇವಾಲಯ ನಿರ್ಮಾಣ ಸಮಿತಿಯ ಮುಖ್ಯಸ್ಥರಾಗಿ ನೇಮಕ ಮಾಡಿದಾಗ, ಇದು ಭಾರತವು ತನ್ನ ಆಧುನಿಕ ಕಾರ್ಯಾಂಗದ ರೂಪದಲ್ಲಿ ಹಿಂದುತ್ವದ ಪ್ರಮುಖ ಯೋಜನೆಯ ಭೌತಿಕ ಸಾಕ್ಷಾತ್ಕಾರವನ್ನು ತಾನೇ ಮೇಲ್ವಿಚಾರಣೆ ಮಾಡುತ್ತದೆ ಎಂಬುದಕ್ಕೆ ಸ್ಪಷ್ಟ ಸೂಚನೆಯನ್ನು ಒದಗಿಸಿತ್ತು.
ಇದರಿಂದಾಗಿ ಸಿದ್ಧಾಂತ ಆಧಾರಿತ ಕಾರ್ಯಕರ್ತರ ಬದಲಿಗೆ ತಾಂತ್ರಿಕ ಪ್ರವೀಣರ ಸರ್ಕಾರದ ಪ್ರವೇಶವಾದಂತಾಗಿತ್ತು.
ಮುಖ್ಯವಾಗಿ, ರಾಯ್ ಅವರ ವಿವಾದಾತ್ಮಕ ಟಿಪ್ಪಣಿಯಲ್ಲಿ ಅವರ ಅಸಮಾಧಾನವು ತುಸು ಮೃದುವಾಗಿ ಗೋಚರಿಸುತ್ತದೆ. ದೇವಾಲಯದ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಂತಹ ಅತ್ಯಂತ ಮಹತ್ವದ ಕಾರ್ಯಗಳಲ್ಲಿ ಮಿಶ್ರ ಅವರು ಟ್ರಸ್ಟ್ನಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದರು ಎಂಬುದು ಅದರಲ್ಲಿ ಸ್ಪಷ್ಟವಾಗಿದೆ.
ರಾಯ್ ಅವರು ತಮ್ಮ ಟಿಪ್ಪಣಿಯ ಮೂಲಕ ಎಲ್ಲಾ ಅಸ್ಪಷ್ಟ ಸಂಗತಿಗಳನ್ನು ದೂರಗೊಳಿಸಿದರು. ಲಾರ್ಸೆನ್ ಅಂಡ್ ಟೂಬ್ರೊನಂತಹ ಎಂಜಿನಿಯರಿಂಗ್ ದಿಗ್ಗಜರಿಗೆ ದೊಡ್ಡ ಒಪ್ಪಂದಗಳನ್ನು ನೀಡುವುದರಿಂದ ಹಿಡಿದು, ವಾಸ್ತುಶಿಲ್ಪಿಗಳನ್ನು ನೇಮಿಸುವುದು ಮತ್ತು ಪ್ರಮುಖ ಸಮಿತಿಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವವರೆಗೆ ಪ್ರತಿ ಪ್ರಮುಖ ಕಾರ್ಯಾಚರಣೆಯ ನಿರ್ಧಾರವನ್ನು ಮಿಶ್ರ ಅವರೇ ಏಕಪಕ್ಷೀಯವಾಗಿ ನಿರ್ವಹಿಸಿದರು ಎಂಬುದನ್ನು ಅವರು ತಮ್ಮ ಟಿಪ್ಪಣಿಯಲ್ಲಿ ಅತ್ಯಂತ ವಿಸ್ತೃತವಾಗಿ ವಿವರಿಸಿದ್ದಾರೆ.
ಚಂಪತ್ ರಾಯ್ ಅವರಿಗೆ ಎಸ್ಐಟಿ ಪ್ರಾಥಮಿಕ ವರದಿಯಲ್ಲಿ ಕ್ಲೀನ್ ಚಿಟ್ ದೊರೆತಿದೆ ಎಂದು ವರದಿಯಾಗಿದ್ದರೂ, ಸಾರ್ವಜನಿಕರ ದೃಷ್ಟಿಯಲ್ಲಿ ಅವರು "ದೋಷಿ"ಯಂತೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮಾತ್ರ ಸತ್ಯ. ದೇವಾಲಯದ ಟ್ರಸ್ಟ್ನಲ್ಲಿ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಲು ಅಥವಾ ನಾಮನಿರ್ದೇಶನಗೊಳ್ಳಲು ಅವರಿಗಾಗಲಿ ಅಥವಾ ವಿಶ್ವ ಹಿಂದೂ ಪರಿಷತ್ತಿನ ಬೇರೆ ಯಾವುದೇ ಪ್ರಭಾವಿ ನಾಯಕರಿಗಾಗಲಿ ಸಾಧ್ಯತೆಯಿಲ್ಲ ಎಂಬುದು ಕೂಡ ಈಗ ಸ್ಪಷ್ಟವಾಗಿದೆ.
ಇದರಲ್ಲಿ ಅಡಕವಾಗಿರುವ ಅರ್ಥವೇನೆಂದರೆ: ಮನ್ನಣೆಗಳು ಅಥವಾ ಪ್ರಶಂಸೆಗಳು ಸಿಕ್ಕಾಗ ತಾಂತ್ರಿಕ ಪ್ರವೀಣರ ಸರ್ಕಾರವು ಮುಂಚೂಣಿಗೆ ಬಂತು; ಆದರೆ ದೇಣಿಗೆ ಕಾಣೆಯಾದ ಬಗ್ಗೆ ವಿವಾದಗಳು ಭುಗಿಲೆದ್ದಾಗ, ಸಾರ್ವಜನಿಕರ ಆಕ್ರೋಶವನ್ನು ಎದುರಿಸಲು ಸಿದ್ಧಾಂತ ಆಧಾರಿತ ಟ್ರಸ್ಟ್ನ್ನು ಮಾತ್ರ ಒಂಟಿಯಾಗಿ ಬಿಡಲಾಯಿತು.
ಈ ಸಾಂಸ್ಥಿಕ ಘರ್ಷಣೆಯು ಸಮಕಾಲೀನ ಭಾರತೀಯ ರಾಜಕಾರಣದ ವಿಶಾಲ ಚಿತ್ರಣವನ್ನು ಎತ್ತಿ ತೋರಿಸುತ್ತದೆ. ರಾಜಕೀಯ ಕಾರ್ಯಕರ್ತರ ಸ್ವಾಯತ್ತತೆಗಿಂತ ಆಡಳಿತ ಯಂತ್ರವು ಯಾವಾಗಲೂ ವ್ಯವಸ್ಥಾಪನಾ ಕೇಂದ್ರೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಯಾವುದೇ ರಾಜಕೀಯ ಚಳವಳಿಯು ತನ್ನ ಮುಖ್ಯ ಗುರಿಯನ್ನು ಸಾಧಿಸಿದ ನಂತರ, ಅಧಿಕಾರಶಾಹಿಯ ದಕ್ಷತೆಗೆ ಮಣಿದು ಹೋರಾಟಗಾರ ನಾಯಕರು ಮೂಲೆಗುಂಪಾಗುತ್ತಾರೆ. ತಮ್ಮದೇ ಪರಿಸರದಲ್ಲಿ ನೈತಿಕ ಅಧಿಕಾರ ಹೊಂದಿದ್ದ ಕಾರ್ಯಕರ್ತರು, ಇದ್ದಕ್ಕಿದ್ದಂತೆ ಆಡಳಿತಾತ್ಮಕ ಪ್ರಕ್ರಿಯೆಗಳು ಮತ್ತು ಕಾರ್ಯಾಂಗದ ಮೇಲ್ವಿಚಾರಣೆಯ ಅಡಿಯಲ್ಲಿ ಅಧೀನರಾಗಬೇಕಾಗುತ್ತದೆ.
ಹಣಕಾಸಿನ ಹಗರಣದ ನಂತರ ರಾಯ್ ಅವರ ಟಿಪ್ಪಣಿಯು ಕೇವಲ ವೈಯಕ್ತಿಕ ಆತ್ಮರಕ್ಷಣೆಗಾಗಿ ಬರೆದಿದ್ದಲ್ಲ ಎಂಬುದು ಖಚಿತ. ಬದಲಿಗೆ, ಇದು ಒಂದು ಪ್ರಮುಖ ಐತಿಹಾಸಿಕ ದಾಖಲೆಯೂ ಹೌದು ಎಂಬುದನ್ನು ಒಪ್ಪಿಕೊಳ್ಳಬೇಕು.
ಮೇಲ್ನೋಟಕ್ಕೆ, ದೇವಾಲಯ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರ ಅವರು ಒಮ್ಮೆ ಕರೆದಂತೆ, ದೇಣಿಗೆ ಅಕ್ರಮಗಳ ಕುರಿತಾದ ತನಿಖೆಯ ("ಕಳಂಕ") ಹಿನ್ನೆಲೆಯಲ್ಲಿ ಈ ಟಿಪ್ಪಣಿ ಬಂದಿದೆ. ಆದರೆ ಆನ್ಲೈನ್ ವರ್ಗಾವಣೆ, ಆಂತರಿಕ ಲೆಕ್ಕಪರಿಶೋಧನೆಗಳು ಮತ್ತು ಮಾರಾಟಗಾರರ ಆಯ್ಕೆಯ ಆಡಳಿತಾತ್ಮಕ ಶಬ್ದಕೋಶದ ಹಿಂದೆ, ಸಿದ್ಧಾಂತ ಆಧಾರಿತ ಕಾರ್ಯಕರ್ತರನ್ನು ತಾಂತ್ರಿಕ ಪ್ರವೀಣರ ಸರ್ಕಾರವು ಬದಿಗೆ ಸರಿಸಿದೆ ಎಂಬ ಆಳವಾದ ಸೈದ್ಧಾಂತಿಕ ಅಳಲು ಕೂಡ ಅಡಗಿದೆ.
ಚಳವಳಿಯ ಪ್ರಮುಖ ವಾರಸುದಾರರು
ಮೋದಿ ಅವರು ಸಿದ್ಧಾಂತ ಆಧಾರಿತ ಕಾರ್ಯಕರ್ತರೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ, ಮುಂದಿನ ದಾರಿ ಹೇಗೆ ಎಂಬುದು ಕಷ್ಟಕರ. ಸೈದ್ಧಾಂತಿಕ ಏಕತೆಯ ಛತ್ರಿಯಡಿಯಲ್ಲಿ ಆಂತರಿಕ ವಿರೋಧಾಭಾಸಗಳನ್ನು ಸರಿಪಡಿಸುವ ತಮ್ಮದೇ ಆದ ಸಾಮರ್ಥ್ಯದಿಂದ ಸಂಘ ಪರಿವಾರದ ನಾಯಕತ್ವವು ಬಲವನ್ನು ಗಳಿಸಿತ್ತು. ಆದರೆ ವಿರೋಧ ಪಕ್ಷದಲ್ಲಿದ್ದ ಚಳವಳಿಯು ಅಧಿಕಾರದಲ್ಲಿರುವ ಸಿದ್ಧಾಂತ ಆಧಾರಿತ ಸಂಸ್ಥೆಯಾಗಿ ಪರಿವರ್ತನೆಯಾದಾಗ ಈ ಸಮೀಕರಣವು ಬದಲಾಗುತ್ತದೆ.
ಮೋದಿ ಅವರು ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಬರುವಂತೆ ಒತ್ತಡ ಹೇರಿದ ಸಮಯದಿಂದ ಮತ್ತು ರಾಮಮಂದಿರ ನಿರ್ಮಾಣವು ಖಚಿತವಾದಾಗಿನಿಂದ, ಈ ವಿಷಯವು ಒಡೆತನದ ಪ್ರಶ್ನೆಯಾಗಿ ಮಾರ್ಪಟ್ಟಿತು. 2020ರಿಂದಲೂ ಒಂದು ಪ್ರಶ್ನೆ ಸ್ಪಷ್ಟವಾಗಿತ್ತು: ರಾಮ ಜನ್ಮಭೂಮಿ ಚಳವಳಿಯ ಪ್ರಮುಖ ವಾರಸುದಾರರು ಯಾರು? ಅದು ತಳಮಟ್ಟದಲ್ಲಿ ಹೋರಾಟ ಮಾಡಿದ ಕಟ್ಟಾಳುಗಳು ಮತ್ತು ಅವರ ನಾಯಕರೇ ಅಥವಾ ಮೋದಿಯವರ ನೇತೃತ್ವದ ಸರ್ಕಾರಿ ವ್ಯವಸ್ಥೆಯೇ?
ಚಂಪತ್ ರಾಯ್ ಅವರು ದೇವಾಲಯ ನಿರ್ಮಾಣ ಸಮಿತಿಯತ್ತ ಸ್ಪಷ್ಟವಾಗಿ ಬೊಟ್ಟು ಮಾಡಿದ್ದಾರೆ. ಅದರ ಮುಖ್ಯಸ್ಥರಾಗಿ, ರಾಯ್ ಅವರು ಪಟ್ಟಿ ಮಾಡಿದ ನಿರ್ಧಾರಗಳನ್ನು ಮಿಶ್ರ ಕೈಗೊಂಡಿದ್ದಾರೆ. ಆದರೆ ಇವು ಕೇವಲ ಅವರೊಬ್ಬರ ನಿರ್ಧಾರಗಳಾಗಿರಲಿಲ್ಲ, ಏಕೆಂದರೆ ಈ ಹಿಂದೆ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ವ್ಯಕ್ತಿಯೊಬ್ಬರು ಅವರ ಇಚ್ಛೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಿರಲಿಲ್ಲ ಎಂಬುದನ್ನು ಊಹಿಸುವುದು ಕಷ್ಟ.
ತಮ್ಮ ಟಿಪ್ಪಣಿಯ ಮೂಲಕ, ಚಂಪತ್ ರಾಯ್ ಅವರು ಚಳವಳಿ ಮತ್ತು ಆಡಳಿತ ಯಂತ್ರದ ನಡುವಿನ ಸಂಘರ್ಷದಲ್ಲಿ, ಯಾವಾಗಲೂ ಯಂತ್ರವೇ ಮೇಲುಗೈ ಸಾಧಿಸುತ್ತದೆ ಎಂಬುದನ್ನು ಅರಿಯದೆಯೆ ಹೊರಹಾಕಿದ್ದಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


