
ತೂಕಡಿಸುತ್ತಿದ್ದ ನಿಕೋಲಸ್ ಮಡುರೊ ಅವರಿಗೆ ಅನಿರೀಕ್ಷಿತವಾಗಿದ್ದರೂ ಇಂತಹುದೊಂದು ಘಟನೆ ಒಂದಲ್ಲ ಒಂದು ದಿನ ನಡೆಯುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವೆನೆಜುವೆಲಾದಲ್ಲಿ ಯಾವತ್ತೂ ಚರ್ಚೆ ನಡೆಯುತ್ತಿತ್ತು.
ಅಂತಾರಾಷ್ಟ್ರೀಯ ಕಾನೂನು ಮತ್ತು ಸಹರಾಷ್ಟ್ರಗಳ ಸಾರ್ವಭೌಮತ್ವದ ಬಗ್ಗೆ ತನಗೆಂಥಾ ತಿರಸ್ಕಾರವಿದೆ ಎಂಬುದನ್ನು ವೆನೆಜುವೆಲಾ ಮೇಲೆ ದಾಳಿ ಮಾಡುವ ಮೂಲಕ ಮತ್ತು ಆ ರಾಷ್ಟ್ರದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಅಪಹರಿಸುವ ಮೂಲಕ ಅಮೆರಿಕ ಮತ್ತೊಮ್ಮೆ ಸಾಬೀತುಪಡಿಸಿದೆ.
ನಿಕೋಲಸ್ ಮಡುರೊ ಅವರ ಅಪಹರಣ ಮತ್ತು ವೆನೆಜುವೆಲಾ ಮೇಲೆ ಆಕ್ರಮಣ ನಡೆಸಿ ಅದರ ತೈಲ ಸಂಪತ್ತನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವ ಟ್ರಂಪ್ ಬಹುಷಃ ವಿಷಕಾರಿ ಕಣಜದ ಗೂಡಿಗೆ ಕೈಹಾಕಿದ್ದಾರೆ (ಶತ್ರುಗಳನ್ನು ಮೈಮೇಲೆ ಕೆಡವಿಕೊಂಡಿದ್ದಾರೆ) ಎಂಬುದು ದಿಟ. ತೈಲ ಸಮೃದ್ಧವಾಗಿರುವ ಈ ಲ್ಯಾಟಿನ್ ಅಮೆರಿಕನ್ ರಾಷ್ಟ್ರದಲ್ಲಿ ಅಶಾಂತಿ ಕಟ್ಟಿಟ್ಟ ಬುತ್ತಿ ಎಂದು ಗೋಚರಿಸುತ್ತಿದೆ.
ಅಮೆರಿಕದ ಬಂಧನ ಕೇಂದ್ರದಲ್ಲಿ ಕೈಗೆ ಕೋಳ ತೊಡಿಸಿದ ಸೆರೆಯಾಳಾದ ಅಧ್ಯಕ್ಷ ನಿಕೋಲಸ್ ಮಡುರೊ ಹಾಲಿವುಡ್ ಸಿನೆಮಾದ ಪರಾಜಿತ ದಗಾಕೋರನಂತೆ ಕಾಣಿಸಬಹುದು. ಆದರೆ ವಾಸ್ತವ ಅದಕ್ಕಿಂತ ಘೋರವೂ ಸಂಕೀರ್ಣವೂ ಆಗಿದೆ. ಮೊದಲನೆಯದಾಗಿ ನಿಕೋಲಸ್ ಅವರು ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ವೆನೆಜುವೆಲಾ ದೇಶದ ಅಧ್ಯಕ್ಷರಾಗಿದ್ದಲ್ಲ. ೨೦೧೩ರಲ್ಲಿ ಅಲ್ಲಿನ ಪ್ರಭಾವಿ ಅಧ್ಯಕ್ಷ ಹ್ಯೂಗೊ ಚಾವೆಜ್ ಅವರು ಕ್ಯಾನ್ಸರ್-ಗೆ ತುತ್ತಾದ ಬಳಿಕ ಮಡುರೊ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆಯಾದವರು.
ಚಾವಿಸ್ತಾ ಅಧಿಕಾರದ ಬೇರುಗಳು
ಅಷ್ಟಕ್ಕೂ ಈ ಇಬ್ಬರನ್ನೂ ಅಧಿಕಾರದ ಗದ್ದುಗೆಗೆ ಏರಿಸಿದ ಶಕ್ತಿಯಾದರೂ ಎಂತಹುದೆನ್ನುತ್ತೀರಿ? ಅದು ಒಂದು ಬೃಹತ್ ಸಾಮಾಜಿಕ ಚಳವಳಿಯ ಬಳುವಳಿ. ಈ ಚಳವಳಿಗೆ ಮುಖ್ಯ ಕಾರಣವಾದುದು ಇತರ ಎಲ್ಲ ವಿಚಾರಗಳ ಜೊತೆಗೆ ಸಾಮ್ರಾಜ್ಯಶಾಹಿ ವಿರೋಧಿ (ಅಂದರೆ ಅಮೆರಿಕ ವಿರೋಧಿ), ಕಾರ್ಮಿಕರ ಪರ ಮತ್ತು ದುರ್ಬಲರ ಹಕ್ಕುಗಳ ಪರವಾದ ದನಿಗಳಿಂದ. ಚಾವೆಜ್ ಅವರ ಬೆಂಬಲಿಗರನ್ನು ವೆನೆಜುವೆಲಾದಲ್ಲಿ ಜಾವಿಸ್ತಾಗಳು ಎಂದು ಕರೆಯಲಾಗುತ್ತದೆ. ಅವರಲ್ಲಿ ಮಡುರೊ ಕೂಡ ಸೇರಿದ್ದಾರೆ. ಈ ಪ್ರಕ್ರಿಯೆಯ ಫಲವಾಗಿ ಚಾವಿಸ್ತಾಗಳು ವೆನೆಜುವೆಲಾದಲ್ಲಿ ಈಗಾಗಲೇ ರಾಷ್ಟ್ರೀಕೃತಗೊಂಡಿರುವ ತೈಲ ಉದ್ಯಮದಿಂದ ಅಂತಾರಾಷ್ಟ್ರೀಯ ನಿರ್ದೇಶಕರನ್ನು ಹೊರಹಾಕಿದರು. ಆ ಮೂಲಕ ಅಲ್ಲಿನ ಪ್ರಭಾವಿ ಮತ್ತು ಅಮೆರಿಕ ಪರ ಉದ್ಯಮಿಗಳ ಕೋಪಕ್ಕೆ ತುತ್ತಾದರು.
ಚಾವೆಜ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು 1998ರಲ್ಲಿ. ಆ ಮೂಲಕ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ವಾಷಿಂಗ್ಟನ್ ಡಿಸಿ ಪ್ರಾಬಲ್ಯ ಹೊಂದಿದ್ದ ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿ ಪ್ರಬಲ ಅಮೆರಿಕಾ ವಿರೋಧಿ ದನಿಯಾಗಿ ಹೊರಹೊಮ್ಮಿದರು. ಆದ್ದರಿಂದ 2013ರಲ್ಲಿ ಚಾವೆಜ್ ನಂತರ ಯಾವಾಗ ಮಡುರೊ ಅಧಿಕಾರಕ್ಕೆ ಬಂದರೋ ಅದು ಕೇವಲ ಒಬ್ಬ ಸರ್ವಾಧಿಕಾರಿ ಸ್ಥಾನದಲ್ಲಿ ಮತ್ತೊಬ್ಬರು ಅಧಿಕಾರಕ್ಕೆ ಬಂದಂತೆ ಇರಲಿಲ್ಲ. ಒಂದು ಪ್ರಜಾಪ್ರಭುತ್ವ ರಾಜಕೀಯ ಪ್ರಕ್ರಿಯೆಯಲ್ಲಿ ಚಾವೆಜ್ ಬೆಂಬಲಿಗರು ಒಂದು ಆಡಳಿತದಿಂದ ಮತ್ತೊಂದಕ್ಕೆ ಸುಗಮವಾಗಿ ಅಧಿಕಾರ ಹಸ್ತಾಂತರವಾಗುವಂತೆ ಮಾಡಿದ್ದರು.
ಮಡುರೊ ಅವರ ಬಂಧನ (ಅಪಹರಣ ಎಂದು ಓದಿಕೊಳ್ಳಿ)ದ ಬಳಿಕ ಮಾತನಾಡಿದ ಡೋನಾಲ್ಡ್ ಟ್ರಂಪ್, ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿರುವ ಕಾರ್ಯಕಾರಿ ಉಪಾಧ್ಯಕ್ಷೆ ಡೆಲ್ಫಿ ರೊಡ್ರಿಗಸ್ ಅವರು ಸುಗಮ ಅಧಿಕಾರ ಹಸ್ತಾಂತರಕ್ಕಾಗಿ ಅಮೆರಿಕದ ಜೊತೆಗೆ ಸಹಕರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯದ ಡೆಲ್ಫಿ
ಆದರೆ ಡೆಲ್ಫಿ ಅವರು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಟ್ರಂಪ್ ಅವರಿಗೆ ವ್ಯತಿರಿಕ್ತವಾಗಿಯೇ ಮಾತನಾಡಿದ್ದಾರೆ. ಅಮೆರಿಕದ ಕ್ರಮಗಳ ಬಗ್ಗೆ ಅಷ್ಟೇ ಪ್ರಬಲ ಮತ್ತು ವಿಮರ್ಶಾತ್ಮಕವಾಗಿ ಅವರ ಮಾತುಗಳಿದ್ದವು ಎಂಬುದು ನಿಚ್ಚಳವಾಗಿ ಗೊತ್ತಾಗುತ್ತದೆ. ನಿಕೋಲಸ್ ಮಡುರೊ ಮತ್ತವರ ಪತ್ನಿಯನ್ನು ತತಕ್ಷಣವೇ ಬಿಡುಗಡೆ ಮಾಡಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸಿರುವ ಅವರು ಅಮೆರಿಕಾ ಕೈಗೊಂಡಿರುವ ಈ ಕ್ರಮವು ಅಂತಾರಾಷ್ಟ್ರೀಯ ಕಾನೂನು ಮತ್ತು ವೆನೆಜುವೆಲಾದ ಸಾರ್ವಭೌಮತ್ವದ ಘನಘೋರ ಉಲ್ಲಂಘನೆಯಾಗಿದೆ ಎಂದೂ ಕರೆದಿರುವುದು ಗಮನಾರ್ಹ.
ಈ ಹಂತದಲ್ಲಿ ವೆನೆಜುವೆಲಾ ಸ್ಥಿತಿ ಅತ್ಯಂತ ಕಠಿಣವಾಗಿದೆ. ಸುಮಾರು ಎರಡು ತಿಂಗಳ ಹಿಂದೆ ವೆನೆಜುವೆಲಾ ಬಂದರುಗಳ ಸಮೀಪದಲ್ಲಿರುವ ಹಡಗುಗಳನ್ನು ಟಾರ್ಗೆಟ್ ಮಾಡಲಾಗಿತ್ತು. ಹಾಗೆ ಶುರುವಾದ ಟ್ರಂಪ್ ಹಸ್ತಕ್ಷೇಪವು ಈಗ ಮಡುರೊ ಅವರ ಅಪಹರಣದೊಂದಿಗೆ ಮುಂದಿನ ಹಂತಕ್ಕೆ ಹೆಜ್ಜೆ ಇಟ್ಟಿದೆ. ಆದರೆ ಇಲ್ಲಿಂದ ಮುಂದಿನ ಹಾದಿಯನ್ನು ಹೀಗೇ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
ಯಾಕೆಂದರೆ ಆಡಳಿತಾರೂಢ ಚಾವಿಸ್ತಾಗಳ ಆರಂಭಿಕ ಪ್ರತಿಕ್ರಿಯೆಯನ್ನು ಗಮನಿಸಿದ್ದೇ ಹೌದಾದರೆ ಆಡಳಿತ ಬದಲಾವಣೆಗೆ ತೀವ್ರ ಪ್ರತಿರೋಧ ವ್ಯಕ್ತವಾಗುವುದು ಖಚಿತ ಎಂಬುದು ಸ್ಪಷ್ಟವಾಗುತ್ತದೆ. ಹಾಗೇನಾದರೂ ಡೆಲ್ಫಿ ರೋಡ್ರಿಗಸ್ ಅವರು ಅನಿವಾರ್ಯತೆಗೆ ಕಟ್ಟುಬಿದ್ದು ಟ್ರಂಪ್ ಅವರ ಜೊತೆಗೆ ಸಹಕರಿಸಿದರೆ ಆಡಳಿತ ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದಲೂ ಅವರಿಗೆ ತೀವ್ರ ಪ್ರತಿರೋಧ ಎದುರಾಗುವುದು ನಿಶ್ಚಿತ. ಯಾಕೆಂದರೆ ಇಂತಹ ಕಾರ್ಯಕರ್ತರ ಸಂಖ್ಯೆಯೇನೂ ಕಡಿಮೆ ಎಂದು ಕಡೆಗಣಿಸಬೇಕಾಗಿಲ್ಲ.
ಯುನೈಟೆಡ್ ಸೋಶಿಯಲಿಸ್ಟ್ ಪಾರ್ಟಿ ಆಫ್ ವೆನೆಜುವೆಲಾ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಡುರೊ ಆಡಳಿತವು ಅಪಹರಣಕ್ಕೆ ಒಳಗಾದ ಅಧ್ಯಕ್‌ಷರ ಸುತ್ತಲಿರುವ ಕೆಲವೇ ಕೆಲವು ಅಧಿಕಾರಿಗಳ ಬೆಂಬಲವನ್ನು ಪಡೆದಿರುವ ಸರ್ವಾಧಿಕಾರ ಎಂದು ವೆನೆಜುವೆಲಾದ ಅಮೆರಿಕ ಪರ ಬಲಪಂಥೀಯ ವಿರೋಧ ಪಕ್ಷಗಳು ಬಿಂಬಿಸುತ್ತಿವೆ.
ಅಮೆರಿಕದ ತಪ್ಪು ಲೆಕ್ಕಾಚಾರ
ಆದರೆ ಇತಿಹಾಸವು ಬೇರೆಯದೇ ಆದ ಪಾಠವನ್ನು ಹೇಳುತ್ತದೆ,. ಚಾವೆಜ್ ಮತ್ತು ಮಡುರೊ ಅವರನ್ನು ಶತಾಯಗತಾಯ ಅಧಿಕಾರದಿಂದ ಕೆಳಗಿಸಬೇಕು ಎಂದು ಪದೇ ಪದೇ ಪ್ರಯತ್ನಿಸಿ ವಿಫಲವಾಗಿರುವುದು ಇದರಿಂದ ತಿಳಿದುಬರುತ್ತದೆ. ಇದಕ್ಕೆ ಕಾರಣವೇನೆಂದರೆ ಚಾವೆಜ್ ಮತ್ತು ಮಡುರೊ ಅವರನ್ನು ಚುನಾವಣೆಯ ಮೂಲಕ ಅಧಿಕಾರಕ್ಕೆ ತಂದ ರಾಜಕೀಯದ ವಿಶಿಷ್ಟ ಸ್ವರೂಪ.
ಅಜಮಾಸು ಮೂರು ದಶಕಗಳಿಂದ ಅಧಿಕಾರದಲ್ಲಿರುವ ಚಾವೆಜ್ ಮತ್ತು ಮಡುರೊ ಸರ್ಕಾರಗಳು ಹೊಂದಿರುವ ಬೆಂಬಲ ಅಗಾಧವಾದುದು. ನಗರ ಪ್ರದೇಶದ ನೆರೆಹೊರೆ ಮತ್ತು ಗ್ರಾಮೀಣ ಭಾಗಗಳಲ್ಲಿ ಹರಡಿಕೊಂಡಿರುವ ಸುಸಂಘಟಿತ ತಳಮಟ್ಟದ ಜಾಲ ಸರ್ಕಾರದ ಬೆಂಬಲಕ್ಕಿದೆ.
ಈ ಜನ ಹೊಂದಿರುವ ರಾಜಕೀಯ ಪ್ರಜ್ಞೆ ಕೂಡ ಗಹನವಾದುದು. ಚಾವಿಸ್ತಾಗಳ ಪರವಾಗಿ ನಿಲ್ಲುವವರ ದೊಡ್ಡ ಪಡೆಯೇ ಅಲ್ಲಿದೆ. ಸಹಕಾರ ಸಂಘಗಳು, ಸ್ಥಳೀಯ ಉತ್ಪಾದನೆ ಮತ್ತು ಪೂರೈಕೆ ಜಾಲಗಳು, ರೈತ ಚಾಲಿತ ಮಾರುಕಟ್ಟೆಗಳು ಹೀಗೆ ಹಲವಾರು ಸರ್ಕಾರೇತರ ಸಂಸ್ಥೆಗಳು ಇವರಲ್ಲಿ ಸೇರಿದ್ದಾರೆ. ಈ ಜಾಲಗಳು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳ ದೊಡ್ಡ ಕೋಠಿಯನ್ನೇ ಇಟ್ಟುಕೊಂಡಿವೆ ಎಂಬುದೂ ಉತ್ಪ್ರೇಕ್ಷೆಯ ಮಾತಲ್ಲ.
ಇಷ್ಟೆಲ್ಲ ಹಿನ್ನೆಲೆಯನ್ನು ಹೊಂದಿರುವ ವೆನೆಜುವೆಲಾ ಮೇಲೆ ಟ್ರಂಪ್ ಮುಗಿಬಿದ್ದಿದ್ದಾರೆ. ಸಾಲದೆನ್ನುವಂತೆ ಮಡುರೊ ಅವರನ್ನು ಅಪಹರಿಸಿದ್ದಾರೆ. ಟ್ರಂಪ್ ಅವರ ಈ ನಡೆ ವೆನೆಜುವೆಲಾ ಅಧ್ಯಕ್ಷರು ಮತ್ತು ಅವರ ಬೆಂಬಲಿಗರನ್ನು ಅಚ್ಚರಿಯಲ್ಲಿ ಸಿಲುಕಿಸಿದೆ ಎಂಬುದು ನಿಜವಾದರೂ ಒಂದಲ್ಲ ಒಂದು ದಿನ ಇಂತಹುದೊಂದು ಘಟನೆ ಸಂಭವಿಸಬಹುದು ಎಂಬ ಚರ್ಚೆ ವೆನೆಜುವೆಲಾದಲ್ಲಿ ಯಾವತ್ತಿನಿಂದಲೂ ನಡೆದೇ ಇತ್ತು.
ಇದೊಂದು ಆರಂಭಿಕ ಆಘಾತ. ಅಮೆರಿಕ ಕೈಗೊಂಡಿರುವ ಈ ಕ್ರಮಗಳ ವಿರುದ್ಧ ಚಾವಿಸ್ತಾಗಳು ಸಂಘಟಿತರಾಗಿ ತಿರುಗಿ ಬೀಳಲು ತಕ್ಕ ಸಮಯಕ್ಕಾಗಿ ಕಾಯುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹಾದಿಗಳೆರಡು ಅಪಾಯಗಳು ನೂರಾರು
ಈಗ ಎದುರಾಗಿರುವ ಸಂದರ್ಭವು ಪ್ರಮುಖವಾಗಿ ಎರಡು ಸಾಧ್ಯತೆಗಳನ್ನು ನಮ್ಮ ಮುಂದೆ ತಂದು ನಿಲ್ಲಿಸಿವೆ. ಮೊಟ್ಟ ಮೊದಲನೆಯದೆಂದರೆ ಉಪಾಧ್ಯಕ್ಷೆ ಡೆಲ್ಫಿ ರೋಡ್ರಿಗಸ್ ಅವರು ಟ್ರಂಪ್ ಜೊತೆ ಯಾವುದಾದರೊಂದು ರೀತಿಯ ಒಪ್ಪಂದಕ್ಕೆ ಬಂದು ಮಾತುಕತೆ ನಡೆಸಲು ಮುಂದಾಗುವುದು. ಸದ್ಯದ ಮಟ್ಟಿಗೆ ಶಾಂತಿಯುತ ಅಧಿಕಾರ ಹಸ್ತಾಂತರ ಕೈಗೊಳ್ಳುವುದು ವೆನೆಜುವೆಲಾ ಹಿತದೃಷ್ಟಿಯಿಂದ ಒಳ್ಳೆಯದು ಎಂದು ತಮ್ಮ ಕಾರ್ಯಕರ್ತರ ಮನವೊಲಿಕೆ ಮಾಡುವುದು.
ಎರಡನೆಯ ಮಾರ್ಗವೆಂದರೆ ಜನಸಾಮಾನ್ಯರ ಒತ್ತಡಕ್ಕೆ ಮಣಿದು ರೋಡ್ರಿಗಸ್ ಅವರು ಅಮೆರಿಕವನ್ನು ಸಂಪೂರ್ಣವಾಗಿ ಪ್ರತಿರೋಧಿಸುವ ನಿಲುವು ತಳೆಯಬಹುದು. ಹಾಗೇನಾದರೂ ಆಯಿತೆಂದರೆ ವೆನೆಜುವೆಲಾ ಬಹಳ ದೊಡ್ಡ ಅರಾಜಕತೆಗೆ ಗುರಿಯಾಗುವುದು ನಿಶ್ಚಿತ. ಯಾಕೆಂದರೆ ಮಡುರೊ ಸರ್ಕಾರ ದುರ್ಬಲವಾಗಿರುವಂತೆ ಕಾಣುವ ಇಂತಹ ಹೊತ್ತಿನಲ್ಲಿ ಅಧಿಕಾರವನ್ನು ವಶಕ್ಕೆ ತೆಗೆದುಕೊಳ್ಳುವ ಅವಕಾಶವನ್ನು ಅಲ್ಲಿನ ಬಲಪಂಥೀಯರು ಕಳೆದುಕೊಳ್ಳಲಾರರು.
ವೆನೆಜುವೆಲಾವೆಂಬ ರಾಷ್ಟ್ರವನ್ನು ಹೆದರಿಸಿ-ಗದರಿಸಿ ಹತೋಟಿಗೆ ತೆಗೆದುಕೊಳ್ಳುವುದು ಅಮೆರಿಕಕ್ಕೆ ಸುಲಭವಲ್ಲ ಎಂಬ ಅಭಿಪ್ರಾಯಕ್ಕೆ ಪುಷ್ಟಿ ನೀಡುವುದು ಏನೆಂದರೆ, ಕಳೆದ ಇಪ್ಪತೈದೂ ವರ್ಷಗಳ ಅವಧಿಯಲ್ಲಿ ಮೊದಲು ಚಾವೆಜ್ ಮತ್ತು ನಂತರ ಮಡುರೊ ಅವರ ಅಧಿಕಾರವನ್ನು ಕಸಿದುಕೊಳ್ಳಲು ನಡೆಸಿದ ಪ್ರಯತ್ನಗಳ ದೊಡ್ಡ ಪಟ್ಟಿ.
ಹೊರದಬ್ಬಲು ಸತತ ಪ್ರಯತ್ನ
ಮೊದಲನೆಯದಾಗಿ 2002ರಲ್ಲಿ ಮಿಲಿಟರಿಯ ಒಂದು ಬಣದ ಬೆಂಬಲವನ್ನು ಪಡೆದು ವೆನೆಜುವೆಲಾದ ಉದ್ಯಮಿಗಳು ದಂಗೆಯ ಮೂಲಕ ಚಾವೆಜ್ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು. ಆದರೆ ಅದು ಬಹಳ ಕಾಲ ಉಳಿಯಲಿಲ್ಲ. ಜನ ಮತ್ತೆ ದಂಗೆ ಎದ್ದರು. ಬೃಹತ್ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸಿ ಪದಚ್ಯುತರಾಗಿದ್ದ ಅಧ್ಯಕ್ಷರು ಮತ್ತೆ ಅಧಿಕಾರದ ಗದ್ದುಗೆ ಹಿಡಿದರು. ಇದಾದ ಬೆನ್ನಲ್ಲೇ ಮತ್ತೊಂದು ಪ್ರಯತ್ನ ನಡೆಯಿತು. ದೇಶದ ಅರ್ಥ ವ್ಯವಸ್ಥೆ ಕುಸಿಯುವಂತೆ ಮಾಡಿ ಚಾವೆಜ್ ಅವರನ್ನು ಹೊರದಬ್ಬಲು ವೆನೆಜುವೆಲಾದಲ್ಲಿರುವ ಅಮೆರಿಕದ ತೈಲ ಕಂಪನಿಗಳು ಮುಷ್ಕರ ಹೂಡಿದವು. ಆದರೆ ಅದೂ ಕೂಡ ಕೈಗೂಡಲಿಲ್ಲ.
ಕೆಲವು ವರ್ಷಗಳ ಬಳಿಕ ಅಂದರೆ 2019ರಲ್ಲಿ ವೆನೆಜುವೆಲಾ ಸೇನೆಯಿಂದ ಪಲಾಯನ ಮಾಡಿದವರು ಮತ್ತು ಕೂಲಿ ಸೈನಿಕರನ್ನು ಬಳಸಿಕೊಂಡು ಮಡುರೊ ಸರ್ಕಾರವನ್ನು ಕೆಳಕ್ಕಿಳಿಸಲು ಅಮೆರಿಕ ಸಂಚು ರೂಪಿಸಿದೆ ಎಂಬ ಆರೋಪಗಳು ಕೇಳಿಬಂದವು. ಆದರೆ ಅದಕ್ಕೂ ಸೋಲಾಯಿತು. ಒಂದು ವರುಷದ ತರುವಾಯ ʼಅಪರೇಷನ್ ಗಿಡಿಯನ್ʼ ಮೂಲಕ ಅಮೆರಿಕದಿಂದ ತರಬೇತಿಯನ್ನು ಪಡೆದ ವೆನೆಜುವೆಲಾ ಬಂಡುಕೋರ ಸೈನಿಕರನ್ನು ಛೂಬಿಟ್ಟು ಮಡುರೊ ಅವರನ್ನು ಪದಚ್ಯುತಗೊಳಿಸಲು ಮತ್ತೊಂದು ಪ್ರಯತ್ನ ನಡೆಯಿತು. ಅದೂ ಕೂಡ ವಿಫಲವಾಯಿತು.
ಕಳೆದ ವರ್ಷ ಟ್ರಂಪ್ ಆಡಳಿತವು ಅಮೆರಿಕದ ಬೃಹತ್ ಮಿಲಿಟರಿ ಪಡೆಯನ್ನು ಜಮಾವಣೆ ಮಾಡಿ ಸಮರಾಭ್ಯಾಸಗಳಲ್ಲಿ ತೊಡಗಿಸಿ ಮಡುರೊ ಸರ್ಕಾರದ ವಿರುದ್ಧ ದಬಾವಣೆ ನಡೆಸುವ ಪ್ರಯತ್ನ ನಡೆಸಿತ್ತು. ಇದಾದ ಬೆನ್ನಲ್ಲೇ ಮಾದಕ ವಸ್ತು ಸಾಗಣೆಯ ನೆಪವನ್ನು ಮುಂದಿಟ್ಟುಕೊಂಡು ವೆನೆಜುವೆಲಾದ ಹಡಗುಗ:ಳ ಮೇಲೆ ಮುಗಿಬಿದ್ದರು. ಇದು ಅಂತಿಮವಾಗಿ ಜನವರಿ ಮೂರರಂದು ಮಡುರೊ ಅವರ ಅಪಹರಣಕ್ಕೆ ನಾಂದಿಯಾಯಿತು.
ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ವೆನೆಜುವೆಲಾದಲ್ಲಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಏಕೈಕ ಉದ್ದೇಶದಿಂದ ಅಮೆರಿಕವು ಕಳೆದ ಕನಿಷ್ಠ ೨೫ ವರ್ಷಗಳಿಂದ ಅಲ್ಲಿನ ವಿರೋಧ ಪಕ್ಷಕ್ಕೆ ಉದಾರವಾಗಿ ಧನ ಸಹಾಯ ಮಾಡುತ್ತ ಬಂದಿದೆ. ವೆನೆಜುವೆಲಾದ ತೈಲ ವಲಯದ ಮೇಲೆ ನಿಯಮಿತವಾಗಿ ನಿರ್ಬಂಧಗಳನ್ನು ಹೇರುತ್ತ ಬಂದಿದೆ. ನಿರ್ದಿಷ್ಟ ಅಧಿಕಾರಿಗಳನ್ನು ಗುರಿಯಾಗಿ ಮಾಡಿಕೊಂಡಿದೆ. ಆದರೆ ಇದರಿಂದ ಅಮೆರಿಕಕ್ಕೆ ಚಿಕ್ಕಾಸಿನ ಪ್ರಯೋಜನವಾಗಿಲ್ಲ.
ಈಗ ಅಮೆರಿಕದ ವಿಶೇಷ ಪಡೆಗಳೇನೋ ಮಡುರೊ ಅವರನ್ನು ಅಪಹರಿಸುವ ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರಬಹುದು. ಆದರೆ ಇದು ಕೇವಲ ಇನ್ನೊಂದು ಆರಂಭ ಎನ್ನುವುದನ್ನು ಮರೆಯಬಾರದು. ಅಷ್ಟಿದ್ದೂ ವೆನೆಜುವೆಲಾ ಸರ್ಕಾರವು ಇಸ್ಪೀಟು ಎಲೆಗಳಂತೆ ಪಟಪಟನೆ ಕುಸಿದು ಬೀಳುತ್ತದೆ ಎಂದು ನೀರೀಕ್ಷಿಸುವುದು ಹಗಲುಗನಸಾದೀತು.


