ಇಸ್ರೇಲ್ ‘ಗುಮ್ಮ’ನಿಗೆ ಅಂಜದ ಮಮ್ದಾನಿ: ಆದರೂ ದಕ್ಕಿತು ಯಹೂದಿಗಳ ಬೃಹತ್ ಬೆಂಬಲ
x
ಗಾಜಾ ಮೇಲಿನ ದಾಳಿಯ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನಲ್ಲಿರುವ ಯಹೂದಿಗಳ ಕೆಲವು ವರ್ಗ ಇಸ್ರೇಲ್ ಅಥವಾ ನೆತನ್ಯಾಹು ಸರ್ಕಾರವನ್ನು ಬೆಂಬಲಿಸುವುದಿಲ್ಲ. ಇಸ್ರೇಲ್-ನ್ನು ಬೆಂಬಲಿಸುವ ಕೆಲವರು ಮಮ್ದಾನಿಗೆ ಬೆಂಬಲ ನೀಡಿದರು. ಅದಕ್ಕೆ ಕಾರಣವಿಷ್ಟೆ; ಮಮ್ದಾನಿ ಅವರು ನ್ಯೂಯಾರ್ಕ್ ನ್ನು ಜನರ ಕೈಗೆಟಕುವ ನಗರವನ್ನಾಗಿ ಮಾಡುತ್ತೇನೆ ಎಂದು ನೀಡಿದ ಭರವಸೆ. ಇದರಿಂದಾಗಿ ಅವರ ಗೆಲವು ಸುಲಭವಾಯಿತು.

ಇಸ್ರೇಲ್ ‘ಗುಮ್ಮ’ನಿಗೆ ಅಂಜದ ಮಮ್ದಾನಿ: ಆದರೂ ದಕ್ಕಿತು ಯಹೂದಿಗಳ ಬೃಹತ್ ಬೆಂಬಲ

ಬೃಹತ್ ಪ್ರಮಾಣದ ಯಹೂದಿ ಜನಸಂಖ್ಯೆ ಇದ್ದರೂ ನ್ಯೂಯಾರ್ಕ್‌ನ ಜೊಹ್ರಾನ್ ಮಮ್ದಾನಿ ಗೆಲವು ಸಾಧಿಸಿದ್ದಾರೆ. ಮುಸ್ಲಿಂ ಅಭ್ಯರ್ಥಿಯಾಗಿ ಪ್ಯಾಲೆಸ್ತೀನ್‌ ಪರ ನಿಲುವು ತೆಗೆದುಕೊಂಡೂ ಗೆಲುವು ಸಾಧ್ಯ ಎಂದುತೋರಿಸಿಕೊಟ್ಟರು


ಅವರು ಕಟ್ಟಾ ಪ್ಯಾಲೆಸ್ತೀನ್‌ ವಾದಿ. ಅವರಿಗೆ ಯಹೂದಿ ಬೆಂಬಲ ಸಿಗುವುದು ಸಾಧ್ಯವೇ ಇಲ್ಲ. ಹೀಗೆ ಬಾಜಿ ಕಟ್ಟಿದವರಿಗೆ ಅವರ ಗೆಲುವೇ ಉತ್ತರ ನೀಡಿದೆ. ನ್ಯೂಯಾರ್ಕ್‌ನ ಮೇಯರ್ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಜೊಹ್ರಾನ್ ಮಮ್ದಾನಿ ಅವರು ಅನೇಕ ಮಿಥ್ಯೆಗಳನ್ನು ಮುರಿದಿದ್ದಾರೆ. ಅವುಗಳಲ್ಲಿ ಇದು ಅತ್ಯಂತ ಪ್ರಮುಖವಾದುದು ಕೂಡ.

ಅಮೆರಿಕ ರಾಜಕೀಯದಲ್ಲಿ, ಎಲ್ಲ ರಾಜಕೀಯ ಪಕ್ಷದ ಅಭ್ಯರ್ಥಿಗಳು ತಪ್ಪಿಯೂ ಇಸ್ರೇಲ್-ನ್ನು ಟೀಕಿಸುತ್ತಿರಲಿಲ್ಲ. ಇದು ಬಹಳ ದೀರ್ಘಕಾಲದಿಂದ ನಡೆದು ಬಂದಿರುವ ಸಂಗತಿ. ಯಾಕೆಂದರೆ ಅವರಿಗೆ ಚುನಾವಣೆಯಲ್ಲಿ ಸೋತುಬಿಡುತ್ತೇವೆ ಎಂಬ ಭಯ.

ಅಮೆರಿಕದಲ್ಲಿ ಇಸ್ರೇಲ್ ಪರ ಲಾಬಿ ವಹಿಸುವವರೆಲ್ಲರೂ ಸಿರಿವಂತರು ಮತ್ತು ಶಕ್ತಿಶಾಲಿಗಳು. ಆದರೆ ಭಯಗ್ರಸ್ಥರು. ದಿ ಅಮೆರಿಕನ್ ಇಸ್ರೇಲ್ ಪಬ್ಲಿಕ್ ಅಫೇರ್ಸ್ ಕಮಿಟಿ ಮತ್ತು ದಿ ಆ್ಯಂಟಿ ಡಿಫಮೇಷನ್ ಲೀಗ್ (ADL)ನಂತಹ ಸಂಸ್ಥೆಗಳಿಂದ ಪ್ರತಿನಿಧಿಸಲ್ಪಡುವ ಇವರಲ್ಲಿ ಯಾರೊಬ್ಬರೂ ಯಹೂದಿ ವಿರುದ್ಧ ಸೊಲ್ಲೆತ್ತುವುದಿಲ್ಲ. ಯಾಕೆಂದರೆ ಹಾಗೆ ಸೆಡ್ಡುಹೊಡೆದು ನಿಂತರೆ ಉಳಿಗಾಲ ಎಂಬುದು ಅವರಿಗೂ ಗೊತ್ತಿದೆ. ಇಂತಹುದೊಂದು ನಿರೂಪಣೆಯನ್ನು ಅತ್ಯಂತ ಎಚ್ಚರಿಕೆಯಿಂದ ಕಾಯ್ದುಕೊಂಡು ಬರಲಾಗಿದೆ ಎಂಬುದಂತೂ ದಿಟ.

ಇಂತಹುದೊಂದು ‘ಗುಮ್ಮ’ ಕಾಡಿದ್ದರಿಂದಲೇ ಹಿಂದಿನ ಜೋ ಬಿಡೆನ್ ಆಡಳಿತ ಮತ್ತು 2024ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್, ಗಾಜಾದಲ್ಲಿ ಇಸ್ರೇಲ್ ಅತಿ ಘೋರ ನರಮೇಧ ನಡೆಸುತ್ತಿದ್ದರೂ ಕಣ್ಣು ಮುಚ್ಚಿಕೊಂಡವರಂತೆ ನಟಿಸಿದರು. ಅಷ್ಟೇ ಅಲ್ಲ, ಅಕ್ಟೋಬರ್ 7, 2023ರ ಹಮಾಸ್ ದಾಳಿಯ ನಂತರದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಾಜಾದಲ್ಲಿ ಸುಮಾರು 65 ಸಾವಿರ ಪ್ಯಾಲೆಸ್ತೀನಿಯರ ಕಗ್ಗೊಲೆ ಮಾಡಿದ ಬೆಂಜಮಿನ್ ನೆತನ್ಯಾಹು ಸರ್ಕಾರದ ಕ್ರಮಗಳನ್ನು ಅವರು ಮತ್ತೆ ಮತ್ತೆ ಬೆಂಬಲಿಸುತ್ತ ಬಂದರು.

ಇಷ್ಟೆಲ್ಲ ಆದರೂ ನೆತನ್ಯಾಹು ಸರ್ಕಾರ ಮಾಡುತ್ತಿದ್ದ ಸಮರ್ಥನೆಯನ್ನು ಅಮೆರಿಕ ಆಡಳಿತವೂ ಗಿಣಿಪಾಠ ಒಪ್ಪಿಸುತ್ತಿತ್ತು. ಅಂದರೆ ಹಮಾಸ್ ಉಗ್ರರು ಮಾಡಿದ ದಾಳಿಗೆ ಕೊಟ್ಟ ಪ್ರತ್ಯುತ್ತರವಾಗಿದೆ ಎಂಬ ಸಮರ್ಥನೆಯ ಮಾತು. ಹಮಾಸ್ ದಾಳಿಯಲ್ಲಿ ಸುಮಾರು 1200 ಇಸ್ರೇಲಿಗಳು ಹತರಾಗಿದ್ದರು, ಸುಮಾರು 250 ಜನರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳಲಾಯಿತು ಮತ್ತು ಅನೇಕರು ಗಾಯಗೊಂಡಿದ್ದರು. ಬಿಡನ್ ಆಡಳಿತವು ಇಸ್ರೇಲ್‌ಗಾಗಿ ಸಾರ್ವಜನಿಕವಾಗಿ ಕಣ್ಣೀರಿಟ್ಟಿತು. ಬಿಡೆನ್ ಯಾವ ಮಟ್ಟಕ್ಕೆ ಇಳಿದುಬಿಟ್ಟರೆಂದರೆ ಇಸ್ರೇಲ್‌ಗೆ ತಮ್ಮ ಐಕ್ಯಮತ್ಯ ಘೋಷಿಸಲು ತಮ್ಮನ್ನು ತಾವೇ ‘ಯಹೂದಿ’ ಎಂದು ಘೋಷಿಸಿಕೊಂಡರು.

ಕಮಲಾ ಹ್ಯಾರಿಸ್ ತಮ್ಮ ಪ್ರಚಾರದ ಸಮಯದಲ್ಲಿ ತಕ್ಕಮಟ್ಟಿಗೆ ಮಧ್ಯಮ ನಿಲುವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಇಸ್ರೇಲ್‌ನ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಸಂಪೂರ್ಣವಾಗಿ ಬೆಂಬಲಿಸುತ್ತಲೇ, ಗಾಜಾದಲ್ಲಿನ “ಯುದ್ಧವನ್ನು” ನಿಲ್ಲಿಸಲು ನೆತನ್ಯಾಹು ಮನವೊಲಿಸುವುದಾಗಿ ಅವರು ಹೇಳಿದ್ದರು.

ಹ್ಯಾರಿಸ್ ಅವರು ಇಸ್ರೇಲ್‌ನ ದಾಳಿಯನ್ನು ಟೀಕಿಸಲಿಲ್ಲ. ಈ ದಾಳಿಯನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣದಲ್ಲಿ ನರಮೇಧ ಎಂದು ವ್ಯಾಪಕವಾಗಿ ಕರೆಯಲಾಗಿದೆ. ಇದು ಅರಬ್ ಅಮೆರಿಕನ್ನರು ಸೇರಿದಂತೆ ಸಾವಿರಾರು ಡೆಮಾಕ್ರಟಿಕ್ ಬೆಂಬಲಿಗರು ಅವರನ್ನು ತೊರೆಯಲು ದಾರಿ ಮಾಡಿಕೊಟ್ಟಿತು. ಅಷ್ಟು ಮಾತ್ರವಲ್ಲದೆ ಚುನಾವಣಾ ದಿನದಂದು ಮತದಾನವನ್ನು ಬಹಿಷ್ಕರಿಸಿದ್ದು ಅವರ ಸೋಲಿಗೆ ಒಂದು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಒಬಾಮಾ ದುರ್ಬಲ ಧೋರಣೆ

ಅಮೆರಿಕ ಅಧ್ಯಕ್ಷರಾಗಲು ಹೊರಟ ಬರಾಕ್ ಒಬಾಮಾ ಅವರು ಚುನಾವಣಾ ಪ್ರಚಾರ ಮಾಡುವಾಗ ಪ್ಯಾಲೆಸ್ತೀನ್ ಪರವಾದ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದರೂ, ಅಧಿಕಾರಕ್ಕೆ ಬಂದ ನಂತರ ಆ ನಿಲುವು ಬದಲಾಗಿ ಹೋಯಿತು. ಅದು ಅತ್ಯಂತ ದುರ್ಬಲವಾಗಿತ್ತು. ಅಧ್ಯಕ್ಷರಾಗಿ, ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್‌ನ ಕಾನೂನುಬಾಹಿರ ವಸಾಹತುಗಳ ಬಗ್ಗೆ ಮೃದು ಧೋರಣೆ ತೋರಿಸಿದರು ಮತ್ತು ಈ ವಿಷಯವನ್ನು ಬಹುತೇಕ ಮುಟ್ಟದೇ ಬಿಟ್ಟುಬಿಟ್ಟರು. ಇದರಿಂದಾಗಿ 'ಎರಡು-ರಾಷ್ಟ್ರ ಪರಿಹಾರದ' ಕಲ್ಪನೆಯು ಅವರ ಆಡಳಿತದೊಂದಿಗೆ ಕೊನೆಗೊಂಡಿತು ಎಂದು ಕೆಲವರು ತೀರ್ಮಾನಿಸಿದರು.

"ಇಸ್ರೇಲ್-ಪ್ಯಾಲೆಸ್ತೀನ್ ವಿಷಯಕ್ಕೆ ಸಂಬಂಧಿಸಿದಂತೆ ಒಬಾಮಾ ಅವರಷ್ಟು ಭರವಸೆ ನೀಡಿ ಅಲ್ಪ ಸಾಧನೆ ಮಾಡಿದ ಅಮೆರಿಕ ಅಧ್ಯಕ್ಷರು ಬೇರೊಬ್ಬರಿಲ್ಲ,” ಎಂದು ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸದಸ್ಯರಾದ ಖಾಲಿದ್ ಎಲ್ಗಿಂಡಿ ಅವರು ಬರೆದಿದ್ದಾರೆ.

ಇವು ಬಲಶಾಲಿ ಎಂದುಕೊಳ್ಳುವ ವ್ಯಕ್ತಿಗಳ ಇತ್ತೀಚಿನ ಎರಡು ನಿದರ್ಶನಗಳಾಗಿವೆ. ಇವರು ಬಹುಶಃ ಪ್ಯಾಲೆಸ್ತೀನ್ ಪರವಾದ ಕಾರಣಗಳಿಗೆ ಹೆಚ್ಚು ಬೆಂಬಲ ನೀಡಲು ಬಯಸಿದ್ದರೂ, ಹೆಚ್ಚು ಭಯಪಡುವ ಇಸ್ರೇಲ್-ಪರ ಲಾಬಿಗೆ ಹೆದರಿ ಅದರಿಂದ ಹಿಂದೆ ಸರಿದರು.

ಯಹೂದಿ ಮತದಾರರ ಬೆಂಬಲಕ್ಕಿಂತ ಹೆಚ್ಚಾಗಿ, ಅಭ್ಯರ್ಥಿಗಳು ಇಸ್ರೇಲ್-ಪರ ನಿಲುವುಗಳನ್ನು ತಳೆಯುವುದರಿಂದ ಬರುವ ಬೃಹತ್ ಪ್ರಮಾಣದ ಪ್ರಚಾರ ದೇಣಿಗೆಗಾಗಿ ಪೈಪೋಟಿ ನಡೆಸುತ್ತಾರೆ. ಇತ್ತೀಚಿನ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ, ಮಮ್ದಾನಿ ಅವರ ವಿರುದ್ಧ ಸೆಡ್ಡುಹೊಡೆದವರು ಇಸ್ರೇಲ್-ಪರ ಲಾಬಿ ಮಾಡಿದ್ದಕ್ಕಾಗಿಯೇ ಭಾರೀ ಪ್ರಮಾಣದ ದೇಣಿಗೆಗಳನ್ನು ಪಡೆದರು. ಆದರೆ ವಿಪರ್ಯಾಸದ ಸಂಗತಿ ಎಂದರೆ ಮಮ್ದಾನಿಯವರಿಗೆ ಹಣವು ಹರಿದು ಬಂದಿದ್ದು ಸಾಮಾನ್ಯ ಮತದಾರರಿಂದ.

ಮಮ್ದಾನಿ ವಿರುದ್ಧ ಹಣದ ರಾಶಿ ಸುರಿದರು!

ಸ್ವತಂತ್ರ ಕ್ರಿಯಾಶೀಲ ಗುಂಪಾದ ಅಮೆರಿಕನ್ಸ್ ಫಾರ್ ಟ್ಯಾಕ್ಸ್ ಫೇರ್‌ನೆಸ್ ಆಕ್ಷನ್ ಫಂಡ್ (ATFAF) ಅನ್ನು ಉಲ್ಲೇಖಿಸಿದ ವರದಿಗಳು ಹೇಳುವಂತೆ, ಕನಿಷ್ಠ ಐದು ಡಜನ್ ಬಿಲಿಯನೇರ್‌ಗಳು (ಕೋಟ್ಯಧಿಪತಿಗಳು) ನೇರವಾಗಿ ಅಭ್ಯರ್ಥಿಗಳ ಪ್ರಚಾರಕ್ಕೆ ಹಣ ನೀಡಿದ 6೦,೦೦೦ ಸಣ್ಣ ಸಣ್ಣ ಡಾಲರ್ ದೇಣಿಗೆದಾರರಿಗಿಂತ ಹೆಚ್ಚು ಹಣವನ್ನು ಚುನಾವಣೆಗಾಗಿ ಸುರಿದಿದ್ದಾರೆ. ಆಂಡ್ರ್ಯೂ ಕುವೋಮೊ ಸೇರಿದಂತೆ ಈ ಬಿಲಿಯನೇರ್‌ಗಳು ಮಮ್ದಾನಿ ಅವರ ಎದುರಾಳಿಗಳ ಬೆಂಬಲಕ್ಕೆ ನಿಂತರು.

ಅಂತಿಮವಾಗಿ, ಈ ಫಲಿತಾಂಶದಲ್ಲಿ ಹಣವು ಯಾವುದೇ ಪಾತ್ರ ವಹಿಸಲಿಲ್ಲ ಎಂಬುದು ಹದಿನಾರಾಣೆ ಸತ್ಯ. ಮಮ್ದಾನಿಯವರಿಗೆ ಸಿಕ್ಕ ಬೃಹತ್ ಜನಬೆಂಬಲವೇ ಅವರನ್ನು ಗೆಲ್ಲಿಸಲು ಸಾಕಾಗಿತ್ತು.

ಈ ಹಿಂದಿನ ಚುನಾವಣೆಯಲ್ಲಿ ಕೇವಲ ಶೇ.21ರಷ್ಟು ಮತದಾನವಾಗಿತ್ತು, ಮತ್ತು ಮೂರು ಹಿಂದಿನ ಚುನಾವಣೆಗಳಲ್ಲಿ ಶೇ.30ಕ್ಕಿಂತ ಕಡಿಮೆ ಮತದಾನವಾಗಿತ್ತು. ಆದರೆ, ಈ ಬಾರಿ 1969ರ ನಂತರದ ಅತಿ ದೊಡ್ಡ ಮತದಾನದ ಶೇಕಡಾವಾರು ಪ್ರಮಾಣ ದಾಖಲಾಗಿದೆ. (1950ರ ದಶಕದಲ್ಲಿ ಶೇ 90 ಮತ್ತು ಅದಕ್ಕಿಂತ ಹೆಚ್ಚಿನ ಮತದಾನಕ್ಕೆ ಹೋಲಿಸಿದರೆ ಈ ಹಿಂದಿನ ಚುನಾವಣೆಗಳಲ್ಲಿ ಇಳಿಕೆಯಾಗಿತ್ತು).

ಜನಬೆಂಬಲವೇ ಶ್ರೀರಕ್ಷೆ

ಸ್ಪಷ್ಟವಾಗಿ, ಈ ಬಾರಿ ಹೆಚ್ಚಿನ ಮತದಾನವು ಸಾಂಪ್ರದಾಯಿಕ ಸ್ಥಾಪಿತ ರಾಜಕಾರಣಿಗಳ ವಿರುದ್ಧದ ಕೋಪ ಮತ್ತು ಭರವಸೆಯ ಪ್ರತಿಬಿಂಬವಾಗಿತ್ತು. ಈ ಬೃಹತ್ ಜನಬೆಂಬಲವು ಮಮ್ದಾನಿ ಅವರನ್ನು ಗೆಲುವಿನತ್ತ ತಳ್ಳಿತು. ಇದು ಅಮೆರಿಕದ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಹಲವಾರು ಪರಿಕಲ್ಪನೆಗಳನ್ನು ನುಚ್ಚುನೂರು ಮಾಡಿತು.

ಇಸ್ರೇಲ್‌ನ ಟೆಲ್ ಅವಿವ್ ನಂತರ ವಿಶ್ವದಲ್ಲೇ ಅತಿ ದೊಡ್ಡ ಯಹೂದಿ ಜನಸಂಖ್ಯೆಯನ್ನು ಹೊಂದಿರುವ ನ್ಯೂಯಾರ್ಕ್‌ನಲ್ಲಿ, ಒಬ್ಬ ಅಭ್ಯರ್ಥಿಯು ಪ್ಯಾಲೆಸ್ತೀನ್ ಪರ ನಿಲುವು ತೆಳೆದು ಗೆಲ್ಲಲು ಸಾಧ್ಯವಾಗುತ್ತದೆ ಎಂದರೆ ಯಾರಾದರೂ ನಂಬಬಹುದೇ? ಅದನ್ನು ಮಮ್ದಾನಿ ತೋರಿಸಿಕೊಟ್ಟರು.

ವರದಿಗಳ ಪ್ರಕಾರ, ನ್ಯೂಯಾರ್ಕ್ ನಗರದಲ್ಲಿರುವ ಹತ್ತು ಲಕ್ಷಕ್ಕೂ ಹೆಚ್ಚು ಯಹೂದಿಗಳಲ್ಲಿ, ಮಮ್ದಾನಿಯವರು ಸಮುದಾಯದ ಗಮನಾರ್ಹ ಭಾಗದ ಮತಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹು ಸರ್ಕಾರವನ್ನು ಟೀಕಿಸಿದರೂ, ಯುದ್ಧ ಅಪರಾಧಗಳ ಆರೋಪದ ಮೇಲೆ ನೆತನ್ಯಾಹು ನ್ಯೂಯಾರ್ಕ್‌ಗೆ ಕಾಲಿಟ್ಟರೆ ಅವರನ್ನು ಬಂಧಿಸುವುದಾಗಿ ಎಚ್ಚರಿಸಿದ್ದರೂ, ಇಸ್ರೇಲ್ ಬಹಿಷ್ಕಾರವನ್ನು ಬೆಂಬಲಿಸಿದ್ದರೂ ಮತ್ತು ಇಸ್ರೇಲಿ ಸೇನೆಯೊಂದಿಗಿನ ಸಂಬಂಧದಿಂದಾಗಿ ಕಾರ್ನೆಲ್ ವಿಶ್ವವಿದ್ಯಾಲಯದ ರೂಸ್‌ವೆಲ್ಟ್ ಐಲ್ಯಾಂಡ್ ಕ್ಯಾಂಪಸ್ ಮತ್ತು ಟೆಕ್ನಿಯನ್-ಇಸ್ರೇಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡುವಿನ ವಿನಿಮಯ ಕಾರ್ಯಕ್ರಮವನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರೂ ಸಹ ಅವರಿಗೆ ಈ ಮತಗಳು ಬೀಳುವುದು ತಪ್ಪಲಿಲ್ಲ.

ನ್ಯೂಯಾರ್ಕ್‌ನಲ್ಲಿ ಶೇ.33ರಷ್ಟು ಯಹೂದಿಗಳು ಮಮ್ದಾನಿಯವರಿಗೆ ಮತ ಹಾಕಿದ್ದಾರೆ ಎಂಬ ಒಂದೇ ಕಾರಣಕ್ಕೆ, ಅವರು ಪ್ಯಾಲೆಸ್ತೀನಿಯರ ಜೊತೆಗಿನ ಸಂಘರ್ಷದಲ್ಲಿ ಅಥವಾ ಗಾಜಾದ ಮೇಲಿನ ದಾಳಿಯ ನಿರ್ದಿಷ್ಟ ವಿಷಯದಲ್ಲಿ ಇಸ್ರೇಲಿಗೆ ಬೆಂಬಲ ನೀಡುವುದಿಲ್ಲ ಎಂದು ಊಹಿಸುವುದು ಅತಿ ಸರಳ ಲೆಕ್ಕಾಚಾರವಾಗುತ್ತದೆ. ಅದೇ ಸಮಯದಲ್ಲಿ, ಯಹೂದಿಗಳು ಮಮ್ದಾನಿಯವರಿಗೆ ಮತ ಹಾಕಿದ್ದರೂ, ಅವರು ಇಸ್ರೇಲ್-ಪರರಾಗಿದ್ದರು ಎಂದು ಊಹಿಸಲೂ ಸಾಧ್ಯವಿಲ್ಲ.

ಜನಜೀವನಕ್ಕೆ ನೇರ ಸಂವಾದಿಯಾದ ಭರವಸೆ

ಸತ್ಯ ಇನ್ನೆಲ್ಲೋ ಅಡಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಂದರೆ ಯಹೂದಿ ಸಮುದಾಯದಲ್ಲಿ ಇಸ್ರೇಲ್ ಅಥವಾ ಗಾಜಾ ದಾಳಿಯಲ್ಲಿ ಬೆಂಜಮಿನ್ ನೆತನ್ಯಾಹು ಸರ್ಕಾರದ ನಡೆಯನ್ನು ಬೆಂಬಲಿಸದೇ ಇರುವ ವಿಭಾಗಗಳೂ ಇವೆ. ಅಥವಾ, ಇಸ್ರೇಲ್-ನ್ನು ಬೆಂಬಲಿಸಿದರೂ ಕೂಡ, ನ್ಯೂಯಾರ್ಕ್-ನ್ನು ಹೆಚ್ಚು ಕೈಗೆಟುಕುವಂತೆ ಮತ್ತು ಮಧ್ಯಮ ಹಾಗೂ ದುಡಿಯುವ ವರ್ಗದವರಿಗೆ ಉತ್ತಮ ಸ್ಥಳವನ್ನಾಗಿ ಮಾಡುವ ಮಮ್ದಾನಿಯವರ ಭರವಸೆಗಳು ತಮ್ಮ ದೈನಂದಿನ ಜೀವನಕ್ಕೆ ನೇರವಾಗಿ ಸಂಬಂಧಿಸಿರುವುದರಿಂದ, ಅದನ್ನು ಬೆಂಬಲಿಸುವುದು ಉತ್ತಮ ಉದ್ದೇಶ ಎಂದು ಅವರು ನಿರ್ಧರಿಸಿದರು.

ಸ್ವತಂತ್ರ ಯಹೂದಿ ಪ್ರಕಟಣೆಯಾದ ಫಾರ್ವರ್ಡ್ ಪ್ರಕಾರ, "850ಕ್ಕೂ ಹೆಚ್ಚು ರಬ್ಬಿಗಳು ಮತ್ತು ಕಂಟೋರ್‌ಗಳು ಮಮ್ದಾನಿ ಅವರನ್ನು ಮತ್ತು 'ಸಿಯೋನಿಸಂ-ವಿರೋಧದ ರಾಜಕೀಯ ಸಾಮಾನ್ಯೀಕರಣವನ್ನು ವಿರೋಧಿಸಿ ಪತ್ರಕ್ಕೆ ಸಹಿ ಹಾಕಿದರು."

ಅದೇ ಸಂದರ್ಭದಲ್ಲಿ, ಫಾರ್ವರ್ಡ್ ಮ್ಯಾಗಜೀನ್ ಹೀಗೆ ಹೇಳಿದೆ: "ಮಮ್ದಾನಿಯವರು ಪ್ರಗತಿಪರ ಮತ್ತು ಯುವ ಯಹೂದಿಗಳ ಬೆಂಬಲವನ್ನು ಪಡೆದರು. ಇವರು ಇಸ್ರೇಲ್ ಮೇಲಿನ ಅವರ ಟೀಕೆಗಳನ್ನು ಯಹೂದಿ ನ್ಯಾಯದ ಮೌಲ್ಯಗಳೊಂದಿಗೆ ಹೊಂದಾಣಿಕೆಯಾಗುತ್ತವೆ ಎಂಬುದನ್ನು ಪರಿಗಣಿಸಿದರು."

ದಿಟ್ಟತನದ ಪಾಠಗಳು

ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿರುವ ಮಮ್ದಾನಿ ಅವರಂತಹ ಒಳ್ಳೆಯ ಉದ್ದೇಶದ ಆಕಾಂಕ್ಷಿಗಳಿಗೆ ಇದೊಂದು ದೊಡ್ಡ ಪಾಠ. ಅಂದರೆ, ಅವರು ಇಂದಿನ ಅಮೆರಿಕ ಎದುರಿಸುತ್ತಿರುವ ಹಲವಾರು ವಿವಾದಾತ್ಮಕ ವಿಷಯಗಳ ಬಗ್ಗೆ ದಿಟ್ಟತನದ, ವಿರೋಧಾತ್ಮಕ ನಿಲುವುಗಳನ್ನು ತೆಗೆದುಕೊಳ್ಳಲು ಭಯಪಡಬೇಕಾದ ಅಗತ್ಯವಿಲ್ಲ ಎಂಬುದರ ಸ್ಪಷ್ಟ ಸಂದೇಶ. ಅವುಗಳೆಂದರೆ;

ಎರಡು ವರ್ಷಗಳ ಗಾಜಾ ದಾಳಿಯೂ ಸೇರಿದಂತೆ, ಪ್ಯಾಲೆಸ್ತೀನಿಯರೊಂದಿಗಿನ ಸಂಘರ್ಷದಲ್ಲಿ ಇಸ್ರೇಲ್ ತೆಗೆದುಕೊಳ್ಳುವ ಯಾವುದೇ ಕ್ರಮಗಳಿಗೆ ಪ್ರಶ್ನಿಸದೆ ಬೆಂಬಲ ನೀಡುವುದು.

ಅಗ್ನಿ ಅಸ್ತ್ರಗಳಿಗೆ ಸಾಮಾನ್ಯ ಅಂಗಡಿಯಲ್ಲಿ ಕ್ಯಾಂಡಿ ಖರೀದಿಸಿದಷ್ಟು ಸುಲಭವಾಗಿ ಪ್ರವೇಶವನ್ನು ನೀಡುವ, ಅಮೆರಿಕವನ್ನು ಟ್ರಿಗರ್-ಗೆ (ಪ್ರಚೋದಕಕ್ಕೆ) ಸುಲಭವಾಗಿ ಕೈಯಿಡುವ ರಾಷ್ಟ್ರವನ್ನಾಗಿ ಮಾಡಿದ ವಿವಾದಾತ್ಮಕ ಬಂದೂಕು ಕಾನೂನುಗಳು ಮತ್ತು ಗರ್ಭಪಾತದ ಹಕ್ಕು ಸೇರಿದಂತೆ ಮಹಿಳಾ-ವಿರೋಧಿ ಪ್ರತಿಗಾಮಿ ಕಾನೂನುಗಳು.

ಖಂಡಿತವಾಗಿಯೂ ಇದು ಸುಲಭವಲ್ಲ. ಸಾಂಪ್ರದಾಯಿಕ, ಗಟ್ಟಿಯಾಗಿ ಬೇರೂರಿರುವ ಅಮೆರಿಕ ಕಾರ್ಪೊರೇಟ್ ಹಿತಾಸಕ್ತಿಗಳು, ಪ್ರಪಂಚದ ಎಲ್ಲಾ ಹಣ ಮತ್ತು ಶಕ್ತಿಯ ಬೆಂಬಲದೊಂದಿಗೆ, ಸಂಪ್ರದಾಯವಾದಿ ಬಣಗಳೊಂದಿಗೆ ಸೇರಿ, ಯಶಸ್ವಿಯಾಗಲಿ ಅಥವಾ ಆಗದಿರಲಿ, ಯಥಾಸ್ಥಿತಿಯು ಮುಂದುವರಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅಸಾಧ್ಯವಾದುದನ್ನು ಮಾಡಲು ಪ್ರಯತ್ನಿಸುತ್ತವೆ - ಇದಕ್ಕೆ ಮಮ್ದಾನಿ ಚುನಾವಣೆಯು ಸಾಕ್ಷಿಯಾಗಿದೆ.

ನ್ಯೂಯಾರ್ಕ್‌ನ ಹೊರಗಿನ ಅನೇಕರು ಈ ಬೆಳವಣಿಗೆಯನ್ನು ಹೆಚ್ಚು ಆಸಕ್ತಿಯಿಂದ ಮತ್ತು ಬಹುಶಃ ಕಳವಳದಿಂದಲೂ ವೀಕ್ಷಿಸುತ್ತಿದ್ದಾರೆ. ಅವರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಒಬ್ಬರು. ಅವರು "ನಾವು ಇದರ ಬಗ್ಗೆ ಗಮನ ಹರಿಸುತ್ತೇವೆ" ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ. ಮಮ್ದಾನಿ ಚುನಾವಣೆಯಲ್ಲಿ ಗೆದ್ದಿರಬಹುದು, ಆದರೆ ನಿಜವಾದ ಹೋರಾಟ ಈಗಷ್ಟೇ ಪ್ರಾರಂಭವಾಗುತ್ತಿದೆ. ವಾಸ್ತವವಾಗಿ, ಬಂಡವಾಳಶಾಹಿ ಅಮೆರಿಕದ ಹೃದಯಭಾಗದಲ್ಲಿ ಮಮ್ದಾನಿಯವರು ತಮ್ಮ "ಸಮಾಜವಾದಿ" ನೀತಿಗಳನ್ನು ಎಷ್ಟು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಾರೆ ಎಂಬುದರ ಮೇಲೆ ಅಮೆರಿಕದ ಭವಿಷ್ಯದ ಪಥವು ನಿರ್ಧಾರವಾಗಬಹುದು.

Read More
Next Story