ಸಮಾಜವಾದಿ ಮಮ್ದಾನಿಗೆ ಗೆಲುವಿನ ಮುದ್ರೆಯೊತ್ತಿದ ಅಮೆರಿಕದ ಮತದಾರರು: ಅಮೆರಿಕವನ್ನೂ ದಾಟಿದ ಜಯದ ಪ್ರಭಾವ
x
ಅಮೆರಿಕದ ಅತ್ಯಂತ ಯಶಸ್ವೀ ನಗರವಾದ ನ್ಯೂಯಾರ್ಕ್ ನಲ್ಲಿ ಜೊಹ್ರಾನ್ ಮಮದಾನಿ ಅವರು ಕಂಡಿರುವ ಯಶಸ್ಸು ಟ್ರಂಪ್ ಮತ್ತು ವ್ಯಾನ್ಸ್ ಅವರ ಬಿಳಿಯರ ಸಾಂಪ್ರದಾಯಿಕ ಪ್ರಾಬಲ್ಯವನ್ನು ಸ್ಥಳೀಯವಾದಿ ರಾಜಕೀಯಕ್ಕೆ ಆಗಿರುವ ಹಿನ್ನಡೆ. (ಬಲ) ಮಮದಾನಿ ಅವರ ಗೆಲುವನ್ನು ಸಂಭ್ರಮಿಸುತ್ತಿರುವ ಅವರ ಬೆಂಬಲಿಗರು.

ಸಮಾಜವಾದಿ ಮಮ್ದಾನಿಗೆ ಗೆಲುವಿನ ಮುದ್ರೆಯೊತ್ತಿದ ಅಮೆರಿಕದ ಮತದಾರರು: ಅಮೆರಿಕವನ್ನೂ ದಾಟಿದ ಜಯದ ಪ್ರಭಾವ

ಜೊಹ್ರಾನ್ ಮಮ್ದಾನಿ ಅವರ ಗೆಲುವು ಸ್ಥಳೀಯವಾದಿ ರಾಜಕಾರಣಕ್ಕೆ ಸೆಡ್ಡು ಹೊಡೆದಿದೆ, ಈ ಗೆಲವು ಅಮೆರಿಕದ ರಾಜಕೀಯ ಚರ್ಚೆಯಲ್ಲಿ ಸಮಾಜವಾದಕ್ಕೆ ಹೊಸ ಚೈತನ್ಯ ತುಂಬುತ್ತದೆ ಎಂಬುದು ನಿಸ್ಸಂದೇಹ


ಅತಿಶಯೋಕ್ತಿಗಳನ್ನೆಲ್ಲ ಒತ್ತಟ್ಟಿಗಿಟ್ಟರೆ, ನ್ಯೂಯಾರ್ಕ್ ಸಿಟಿಯಲ್ಲಿ ಜೋಹ್ರಾನ್ ಮಮ್ದಾನಿ ಅವರ ಗೆಲುವು ಮಹತ್ವದ ಬೆಳವಣಿಗೆಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಅಮೆರಿಕದ ರಾಷ್ಟ್ರೀಯ ರಾಜಕಾರಣದಲ್ಲಿ ಹವಾ ಸೃಷ್ಟಿಸುವುದು ನಿಶ್ಚಿತ ಮತ್ತು ವಿದೇಶಗಳಲ್ಲಿಯೂ ಇದು ಸದ್ದು ಮಾಡಿದರೆ ಅಚ್ಚರಿಯಿಲ್ಲ.

ಅಮೆರಿಕದ ಮತದಾರರು ತಮ್ಮ ಸಿದ್ಧಾಂತಕ್ಕೆ ದೃಢೀಕರಣ ಮುದ್ರೆ ಒತ್ತಿದ್ದಾರೆ ಎಂದು ಯುರೋಪಿನ ಸಮಾಜವಾದಿಗಳು ಮತ್ತು ಎಡಪಂಥೀಯರು ಘೋಷಿಸಿದ್ದಾರೆ. ಇದರ ಪರಿಣಾಮವಾಗಿ ತಮ್ಮದೇ ದೇಶ, ರಾಜ್ಯ ಮತ್ತು ನಗರಗಳಲ್ಲಿ ಉತ್ತಮ ಸಾಧನೆ ಮಾಡುವ ಭರವಸೆಯೂ ಅವರಿಗಿದೆ.

ಭಾರತದಲ್ಲಿ, ಈ ಯುವ ಮುಸ್ಲಿಂ ನೇತಾರನ ಗೆಲುವು ಕೆಲವು ವರ್ಗಗಳಲ್ಲಿ ಕೋಪವನ್ನು ಹುಟ್ಟುಹಾಕಿದೆ. ಯಾಕೆಂದರೆ ಅವರು ನಿರ್ದೇಶಕಿ ಮೀರಾನಾಯರ್ ಮತ್ತು ಗುಜರಾತಿ-ಉಗಾಂಡ ಮೂಲದ ಕೊಲಂಬಿಯಾ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಮಗನನ್ನು ‘ಲವ್ ಜಿಹಾದಿ’ಯ ಸಂತತಿ ಎಂದೇ ಪರಿಗಣಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಈ ಗೆಲುವು ಉದಾರವಾದಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವಾತಂತ್ರ್ಯದ ಮುನ್ನಾ ದಿನದಂದು ನೆಹರು ಸಂಸತ್ತಿಗೆ ನೀಡಿದ ‘ಟ್ರಿಸ್ಟ್-ವಿತ್-ಡೆಸ್ಟಿನಿ’ ಭಾಷಣದ ಆಯ್ದ ಭಾಗಗಳನ್ನು ಮಮ್ದಾನಿ ತಮ್ಮ ವಿಜಯ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ ಎಂಬುದಂತೂ ಅವರು ವಿಶೇಷವಾಗಿ ಸಂತೋಷಕ್ಕೆ ಒಳಗಾಗಲು ಕಾರಣವಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ.

ಜನ ಮುಖ್ಯವಾಗಿ ಗಮನ ಕೊಡುವುದು ತಾವು ತಿನ್ನುವ ರೊಟ್ಟಿಯ ಬಗ್ಗೆಯೇ ಹೊರತು ತತ್ವ-ಸಿದ್ಧಾಂತ-ಅಸ್ತಿತ್ವದ ಬಗ್ಗೆ ಅಲ್ಲ ಎಂಬುದು ಮಮ್ದಾನಿಯವರ ಗೆಲವು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಮಮ್ದಾನಿಯವರ ಚುನಾವಣಾ ಅಸ್ತ್ರವೇ ಜನರಿಗೆ ಕೈಗೆಟಕುವ ದರ. ಅವರು ಕೊಟ್ಟ ಭರವಸೆ ನಗರ-ನಿರ್ವಹಣೆಯ ದಿನಸಿ ಅಂಗಡಿಗಳನ್ನು ಪ್ರಾರಂಭಿಸುತ್ತೇನೆ ಎಂದು. ಅಲ್ಲಿ ಆಹಾರವು ಸಾಂಪ್ರದಾಯಿಕ ಮಳಿಗೆಗಳಿಗಿಂತ ಹೆಚ್ಚು ಕೈಗೆಟಕುವ ದರದಲ್ಲಿರುತ್ತದೆ ಎಂಬುದು. ಏಕೆಂದರೆ: ಅಲ್ಲಿ ಯಾವುದೇ ಅನುಚಿತ ಲಾಭಾಂಶಗಳು ಇರುವುದಿಲ್ಲ ಮತ್ತು ಎರಡೆಯದಾಗಿ ನಗರದ ಮಾಲೀಕತ್ವದಿಂದಾಗಿ ಉಳಿತಾಯವಾಗುವ ಆಸ್ತಿ ತೆರಿಗೆ ಮತ್ತು ಬಾಡಿಗೆಯನ್ನು ಆ ಅಂಗಡಿಗಳು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ.

ಜೊತೆಗೆ ಮಮ್ದಾನಿಯವರು ನಗರ ಉಚಿತ ಬಸ್ ಪ್ರಯಾಣ ಆರಂಭಿಸುವುದಾಗಿ ಭರವಸೆ ನೀಡಿದರು. ರಾಜ್ಯ ಸರ್ಕಾರದ ಸಹಾಯದಿಂದ ಶಿಶುಪಾಲನೆಯನ್ನು ಸಾರ್ವತ್ರಿಕ ಮತ್ತು ಉಚಿತವಾಗಿ ನಿರ್ವಹಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದ್ದಾರೆ. ಬಾಡಿಗೆ ನಿಯಂತ್ರಣವನ್ನು ಜಾರಿಗೆ ತರುವ ಮೂಲಕ ಮತ್ತು ಹೊಸ ವಸತಿ ಘಟಕಗಳ ಶಕ್ತಿಯುತ ನಿರ್ಮಾಣದ ಮೂಲಕ ನ್ಯೂಯಾರ್ಕ್‌ನಲ್ಲಿ ವಸತಿ ವ್ಯವಸ್ಥೆಯನ್ನು ಹೆಚ್ಚು ಕೈಗೆಟಕುವಂತೆ ಮಾಡಲು ಅವರು ಯೋಜಿಸಿದ್ದಾರೆ. ಈ ಹೊಸ ಘಟಕಗಳಲ್ಲಿ ಒಂದು ಭಾಗವು ಬಾಡಿಗೆ-ಸ್ಥಿರೀಕರಣಗೊಂಡಿರಬೇಕು.

ಅಸ್ತಿತ್ವವೆಂಬ ಬೊಗಳೆಯ ಮುಂದೆ...

ಅಮೆರಿಕನ್ನರು 'ಪಾಕೆಟ್‌ಬುಕ್ ಸಮಸ್ಯೆಗಳು' ಎಂದು ಕರೆಯುವ ಜೀವನ ವೆಚ್ಚವು ಟ್ರಂಪ್ ಅವರ ಸ್ವಂತ ಚುನಾವಣಾ ಜನಪ್ರಿಯತೆಯ ಪ್ರಾಥಮಿಕ ಅಂಶವಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಗರ ಜೀವನವನ್ನು ಹೆಚ್ಚು ಕೈಗೆಟಕುವಂತೆ ಮಾಡುವ ಭರವಸೆಯು ಉಳಿದೆಲ್ಲ ಆಶ್ವಾಸನೆಯನ್ನು ಹಿಂದಿಕ್ಕಿತು. ಅಭ್ಯರ್ಥಿ ಪ್ರತಿಪಾದಿಸಿದ ಅಸ್ತಿತ್ವದಂತಹ ಸಂಗತಿಗಳು ಅಮೆರಿಕನ್ ರಾಜಕೀಯ ಚರ್ಚೆಯಲ್ಲಿ ವಿನಾಶಕಾರಿಯಾಗಿ ಕಂಡಿದ್ದು ವಿಶೇಷ.

ಸೆಪ್ಟೆಂಬರ್ 11, 2001 ರಂದು ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಗಳು ಮತ್ತು ಒಸಾಮಾ ಬಿನ್ ಲಾಡೆನ್ ಆ ದಾಳಿಯ ಸೂತ್ರಧಾರ ಎಂದು ಗುರುತಿಸಿದಾಗಿನಿಂದ, ಅನೇಕ ನ್ಯೂಯಾರ್ಕ್ ನಿವಾಸಿಗಳು ಮತ್ತು ಇನ್ನೂ ವಿಶಾಲವಾಗಿ ಹೇಳುವುದಾದರೆ, ಅಮೆರಿಕನ್ನರು, ಮುಸ್ಲಿಂ ಆಗಿರುವುದು ಎಂದರೆ ಹಿಂಸಾತ್ಮಕ ಮತ್ತು ಅಪಾಯಕಾರಿ ಎಂಬ ಪೂರ್ವಾಗ್ರಹವನ್ನು ಹೊಂದಿದ್ದಾರೆ. ಮಮ್ದಾನಿ ಕೂಡ ಮುಸ್ಲಿಂ ಎಂಬುದು ಅವರ ವಿರುದ್ಧದ ಚುನಾವಣಾ ಪ್ರಚಾರದ ವಿಷಯವಾಗಿತ್ತು ಕೂಡ.

ಮಮ್ದಾನಿ ಗಾಜಾದಲ್ಲಿನ ನರಮೇಧವನ್ನು ಬಲವಾಗಿ ವಿರೋಧಿಸಿದರು ಮತ್ತು ಪ್ಯಾಲೆಸ್ಟೀನಿಯರಿಗೆ ರಾಜಕೀಯ ಸ್ವಾತಂತ್ರ್ಯ ನೀಡುವುದನ್ನು ಬೆಂಬಲಿಸಿದರು. ಇದು ಅವರನ್ನು “ಭಯೋತ್ಪಾದಕ” ಮತ್ತು "ಯಹೂದಿ-ದ್ವೇಷಿ" ಎಂಬ ಹಣೆಪಟ್ಟಿ ಕಟ್ಟಲು ಸಾಕಾಗಿತ್ತು. ವೃತ್ತಿಪರ ಮತ್ತು ವಿದ್ಯಾವಂತ ಯಹೂದಿಗಳು ಪ್ರಬಲವಾಗಿರುವ ಪ್ರದೇಶಗಳಲ್ಲಿ ಮಾತ್ರ ಮಮ್ದಾನಿ ಬೆಂಬಲವನ್ನು ಗಳಿಸಿದರು.

ಟ್ರಂಪ್ ಮಮ್ದಾನಿ ಅವರನ್ನು ಕಮ್ಯುನಿಸ್ಟ್ ಎಂದು ಕರೆದರು. ಅಮೆರಿಕದಲ್ಲಿ ಸಮಾಜವಾದ, ಕಮ್ಯುನಿಸಂ, ಮಾರ್ಕ್ಸ್‌ವಾದ ಮತ್ತು ಡೆಮಾಕ್ರಟಿಕ್ ಸೋಷಿಯಲಿಸಂ ಇವೆಲ್ಲವೂ ತೀವ್ರವಾಗಿ ಬಂಡವಾಳಶಾಹಿ-ವಿರೋಧಿ ಮತ್ತು ಅಮೆರಿಕನ್-ವಿರೋಧಿ ಮೌಲ್ಯಗಳು ಮತ್ತು ಕಾರ್ಯಕ್ರಮಗಳಿಗೆ ಸಮಾನಾರ್ಥಕಗಳಾಗಿವೆ. ಇದು 1950ರ ದಶಕದ ಆರಂಭದಲ್ಲಿ ಹೌಸ್ ಆನ್-ಅಮೆರಿಕನ್ ಆಕ್ಟಿವಿಟೀಸ್ ಕಮಿಟಿಯನ್ನು ಸ್ಥಾಪಿಸಿದ ಮತ್ತು ಸೆನೆಟರ್ ಜೋಸೆಫ್ ಮೆಕಾರ್ಥಿಯವರು ನಾನಾ ಕಲಾವಿದರು ಮತ್ತು ಬುದ್ಧಿಜೀವಿಗಳ ವಿರುದ್ಧ ಮಾಡಿದ ಆರೋಪಗಳಾಗಿದ್ದವು. ಇದಕ್ಕೆ ಹೆಚ್ಚು ಪ್ರಚಾರ ಸಿಕ್ಕಿತ್ತು. ಹೀಗೆ ಫಲಪ್ರದವಾದ ಆರೋಪಗಳಿಂದ ಹುಟ್ಟಿಕೊಂಡ ಕಮ್ಯುನಿಸ್ಟರ ವಿರುದ್ಧದ ಮಾಟಗಾತಿ ಬೇಟೆಯ ಶಾಶ್ವತ ಪರಂಪರೆಯಾಗಿದೆ. ಇದರ ಪರಿಣಾಮವಾಗಿ ಹಾಲಿವುಡ್‌ನ ಅನೇಕ ಮಂದಿ ಪ್ರಮುಖರನ್ನು ಕೆಲಸದಿಂದ ಮತ್ತು ದೇಶದಿಂದಲೇ ಹೊರಹಾಕಲಾಗಿತ್ತು. ಅದರಲ್ಲಿ ಚಾರ್ಲಿ ಚಾಪ್ಲಿನ್ ಕೂಡ ಸೇರಿದ್ದರು.

ಸಮಾಜವಾದದ ಪ್ರಭಾವಗಳು

ಪ್ರಪಂಚದಾದ್ಯಂತ, 80 ದೇಶಗಳನ್ನು ಒಳಗೊಂಡಂತೆ ಮೇ ಒಂದನ್ನು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಾಂಕದ ಮಹತ್ವವೆಂದರೆ, 1886ರಲ್ಲಿ ಇದೇ ದಿನದಂದು ಎಂಟು ಗಂಟೆಗಳ ಕೆಲಸದ ದಿನಕ್ಕಾಗಿ ಒತ್ತಾಯಿಸಿ ಆಂದೋಲನ ಮಾಡುತ್ತಿದ್ದ ಕಾರ್ಮಿಕರು ಚಿಕಾಗೋದ ಹೇಮಾರ್ಕೆಟ್ ಚೌಕದಲ್ಲಿ ಪೊಲೀಸರೊಂದಿಗೆ ಸಂಘರ್ಷ ನಡೆಸಿದ್ದರು. ಇದರಲ್ಲಿ ಅನೇಕರು ಸಾವನ್ನಪ್ಪಿದ್ದರು.

1889ರಲ್ಲಿ, ಆಗ ಅಸ್ತಿತ್ವದಲ್ಲಿದ್ದ ಸಮಾಜವಾದಿ ಮತ್ತು ಕಾರ್ಮಿಕ ಪಕ್ಷಗಳ ಜಾಗತಿಕ ಸಂಸ್ಥೆಯಾದ ಸೆಕೆಂಡ್ ಇಂಟರ್-ನ್ಯಾಷನಲ್ ಸಂಸ್ಥೆಯು, ಘನತೆಯಿಂದ ಕೂಡಿದ ಜೀವನದ ಹಕ್ಕಿಗಾಗಿ ಅರಸುತ್ತಿದ್ದ ಕಾರ್ಮಿಕರ ಆ ತ್ಯಾಗವನ್ನು ಸ್ಮರಿಸಲು, ಪ್ರತಿ ವರ್ಷದ ಮೇ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. (ಸೆಕೆಂಡ್ ಇಂಟರ್-ನ್ಯಾಷನಲ್ ಸಂಸ್ಥೆಯು, 1872ರಲ್ಲಿ ಮಾರ್ಕ್ಸ್ ವಾದಿಗಳು ಮತ್ತು ಅರಾಜಕತಾವಾದಿಗಳ ನಡುವೆ ಒಡೆದುಹೋಗಿ ಕೆಲವೇ ವರ್ಷಗಳಲ್ಲಿ ವಿಘಟನೆಗೊಂಡ ಇಂಟರ್‌ನ್ಯಾಷನಲ್ ವರ್ಕಿಂಗ್ ಮೆನ್ಸ್ ಅಸೋಸಿಯೇಷನ್‌ನ ಉತ್ತರಾಧಿಕಾರಿಯಾಗಿ ರೂಪುಗೊಂಡಿತು).

ಅಮೆರಿಕದಲ್ಲಿ, ಸರ್ಕಾರವು ದೇಶದ ಕಾರ್ಮಿಕರ ದಿನವನ್ನು ಸಮಾಜವಾದದ ಪ್ರಭಾವಗಳಿಂದ ಪ್ರತ್ಯೇಕಿಸಲು ನಿರ್ಧರಿಸಿತು ಮತ್ತು ಅದನ್ನು ಪ್ರತಿ ಸೆಪ್ಟೆಂಬರ್‌ನ ಮೊದಲ ಸೋಮವಾರದಂದು ಬರುವ ರಜಾದಿನವಾಗಿ ನಿಗದಿಪಡಿಸಿತು.

ಸೆನೆಟರ್ ಬರ್ನಿ ಸ್ಯಾಂಡರ್ಸ್ ತಮ್ಮನ್ನು ಡೆಮಾಕ್ರಟಿಕ್ ಸೋಷಿಯಲಿಸ್ಟ್ ಎಂದು ಕರೆದುಕೊಳ್ಳುತ್ತಾರೆ ಮತ್ತು ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನಕ್ಕಾಗಿ ಡೆಮಾಕ್ರಟಿಕ್ ಪ್ರೈಮರಿಗಳಲ್ಲಿ ಅವರು ತಮ್ಮ ಪ್ರಚಾರಗಳಿಗೆ ಗಣನೀಯ ಬೆಂಬಲ ಗಳಿಸಿದ್ದಾರೆ. ಇದು ಅಮೆರಿಕನ್ನರ ಬಹುದೊಡ್ಡ ವರ್ಗಗಳು 'ಸಮಾಜವಾದಿ' ಎಂಬ ಪದಕ್ಕೆ ಅಷ್ಟೇನೂ ಅಲರ್ಜಿ ಅಲ್ಲ ಎಂಬುದನ್ನು ತೋರಿಸುತ್ತದೆ. ಆದರೂ, ಸ್ಯಾಂಡರ್ಸ್ ಎಂದಿಗೂ ನಾಮನಿರ್ದೇಶನವನ್ನು ಗೆದ್ದಿಲ್ಲ ಮತ್ತು ಗೆಲ್ಲುವ ಸಾಧ್ಯತೆಯೂ ಕಡಿಮೆ.

ಸಮಾಜವಾದವನ್ನು ಮರಳಿ ಪಡೆವ ಅವಕಾಶ

1960ರ ದಶಕದ ನಂತರ ಪ್ರಮುಖ ಹುದ್ದೆಯನ್ನು ಅಲಂಕರಿಸಿದ ಅಮೆರಿಕದ ಮೊದಲ ಸಮಾಜವಾದಿ ಎಂದರೆ ಮಮ್ದಾನಿ. 1920ರ ದಶಕದಲ್ಲಿ ಮತ್ತು 1960ರವರೆಗೆ ವಿಸ್ಕಾನ್ಸಿನ್‌ನ ಮಿಲ್ವಾಕೀ ನಗರದಲ್ಲಿ, ಅಮೆರಿಕದ ಸೋಷಿಯಲಿಸ್ಟ್ ಪಕ್ಷವು ಕೆಲವು ಸಿಟಿ ಹಾಲ್ ವಿಜಯ ಸಾಧಿಸಿತ್ತು. ಅದು ಸಾರ್ವಜನಿಕ ನೈರ್ಮಲ್ಯದಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದರಿಂದ ಅವರಿಗೆ 'ಸೀವೇಜ್ ಸೋಷಿಯಲಿಸ್ಟ್‌ಗಳು' ಎಂಬ ಹಣೆಪಟ್ಟಿಯನ್ನು ಅಂಟಿಸಲಾಗಿತ್ತು.

ಅಮೆರಿಕದ ರಾಜಕೀಯದಲ್ಲಿ ಮೂಲಭೂತವಾದಿ ಕ್ರಿಶ್ಚಿಯನ್ನರ ಪ್ರಭಾವ ಹೆಚ್ಚಿದ ಬಳಿಕ ಮತ್ತು ಆ ನಂತರ ಹುಟ್ಟಿಕೊಂಡ ಟೀ ಪಾರ್ಟಿ ಚಳವಳಿ ಮತ್ತು ಟ್ರಂಪ್ ಅವರ 'ಮೇಕ್ ಅಮೆರಿಕ ಗ್ರೇಟ್ ಎಗೇನ್ (MAGA)'ದಂತಹ ಮತಿವಿಕಲ್ಪದಿಂದಾಗಿ, ಸಮಾಜವಾದವೆಂದರೆ ಅಮೆರಿಕದ ರಾಜಕೀಯದಲ್ಲಿ ಒಂದು ಬೈಗುಳದ ಪದವಾಗಿ ಮಾರ್ಪಟ್ಟಿದೆ. ಈಗ ಮಮ್ದಾನಿಯವರ ಆಯ್ಕೆಯಿಂದಾಗಿ ಇದು ಬದಲಾಗುವ ನಿರೀಕ್ಷೆಯಿದೆ.

ಒಂದು ವೇಳೆ ಮಮ್ದಾನಿ ಅವರು ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾದರೆ ಮತ್ತು ನಗರದ ಕೋಟ್ಯಧಿಪತಿಗಳ ಕೂಟದೊಂದಿಗೆ ರಾಜಿ ಮಾಡಿಕೊಂಡರೆ, (ಅವರಲ್ಲಿ ಹೆಚ್ಚಿನವರು ಕಡಿಮೆ ತೆರಿಗೆ ಇರುವ ಟೆಕ್ಸಾಸ್ ಮತ್ತು ಫ್ಲೋರಿಡಾಕ್ಕೆ ಪಲಾಯನ ಮಾಡುವುದನ್ನು ತಡೆಯುವ ಬದಲು), ಅಮೆರಿಕ ರಾಜಕೀಯ ಚರ್ಚೆಯಲ್ಲಿ ಸಮಾಜವಾದಕ್ಕೆ ಅಂಟಿರುವ ಕಳಂಕವನ್ನು ತೊಡೆದುಹಾಕಲು ಸಹಾಯ ಮಾಡಬಹುದು. ಇದೇನು ಕಣ್ಣಿಗೆ ಕಾಣುವಷ್ಟು ಸಂಕೀರ್ಣವಾಗಿಲ್ಲ. ಅಮೆರಿಕದ ಸಂವಿಧಾನವು ಶ್ರೀಮಂತರ ಮೇಲೆ, ಆದಾಯ ಅಥವಾ ಸಂಪತ್ತಿನ ತನ್ನದೇ ಆದ ತೆರಿಗೆಯನ್ನು ಹೇರಲು ನಗರ ಸರ್ಕಾರಕ್ಕೆ ಅನುಮತಿ ನೀಡುವುದಿಲ್ಲ. ಆದರೆ, ನಗರವು ಆಸ್ತಿ ತೆರಿಗೆಗಳನ್ನು ಹೆಚ್ಚಿಸಬಹುದು.

ಎಲ್ಲಾ ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ಸರ್ಕಾರಗಳು ಈಗ ಕೈಗಾರಿಕಾ ನೀತಿ, ಆಯ್ದ ರಾಜ್ಯ ನಿಧಿ ಮತ್ತು ಸರ್ಕಾರಿಸ್ವಾಮ್ಯದ ಮೂಲಕ ಅರ್ಥ ವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸುತ್ತವೆ. ಇದು ಕಡಿಮೆ ಶ್ರೀಮಂತರ ಕಲ್ಯಾಣಕ್ಕಾಗಿ ಹೆಚ್ಚು ದೃಢವಾದ ಮತ್ತು ಪಾರದರ್ಶಕ ಬದ್ಧತೆಯನ್ನು ಹೊರತುಪಡಿಸಿ, ಪ್ರಜಾಸತ್ತಾತ್ಮಕ ಸಮಾಜವಾದವನ್ನು ಇತರ ಸಿದ್ಧಾಂತಗಳಿಂದ ಪ್ರತ್ಯೇಕಿಸಲು ಕಷ್ಟವಾಗುತ್ತದೆ.

ಟ್ರಂಪ್ ರಾಜಕಾರಣಕ್ಕೆ ಹಿನ್ನಡೆ

ಮಮ್ದಾನಿಯವರನ್ನು ಜನಪ್ರಿಯಗೊಳಿಸಿದ್ದು ಕೇವಲ ಅವರ ನೀತಿಗಳಲ್ಲ. ಅವರು ತಮ್ಮ ಚರಿಷ್ಮಾದಿಂದ ಬೆಳಗುತ್ತಾರೆ. ಅವರು ವಾಗ್ಮಿ, ಅವರಿನ್ನೂ ಯುವಕರು ಮತ್ತು ಅವರು ಪ್ರಾಮಾಣಿಕರಾಗಿಯೇ ಉಳಿದಿದ್ದಾರೆ. ಅವರು ಸಾಮಾಜಿಕ ಮಾಧ್ಯಮವನ್ನು, ವಿಶೇಷವಾಗಿ ಟಿಕ್‌ಟಾಕ್ ಅನ್ನು ಬಳಸುವುದರಲ್ಲಿ ನಿಷ್ಣಾತರಾಗಿದ್ದಾರೆ. ಇವೆಲ್ಲವೂ ಅವರನ್ನು ಗೆಲ್ಲಿಸಲು ಸಹಾಯ ಮಾಡಿದೆ.

ಅವರು ತಾವು ಮುಸ್ಲಿಂ ಮತ್ತು ತಮ್ಮ ಮೂಲ ದಕ್ಷಿಣ ಏಷ್ಯಾ ಎಂಬುದನ್ನು ಒಪ್ಪಿಕೊಳ್ಳುತ್ತಾರೆ, ಮತ್ತು ಅದನ್ನು ಅಮೆರಿಕಕ್ಕೆ ವಲಸೆ ಬಂದ ಇತರ ಅನೇಕ ಅಸ್ತಿತ್ತಗಳ ಜೊತೆ ಬೆಸೆದು ಸಂಯುಕ್ತ ಅಮೆರಿಕನ್ ಅಸ್ತಿತ್ವವನ್ನು ಸೃಷ್ಟಿಸುತ್ತಾರೆ. ಅಮೆರಿಕದ ಅತ್ಯಂತ ಯಶಸ್ವಿ ನಗರಗಳಲ್ಲಿ ಒಂದಾದ ನ್ಯೂಯಾರ್ಕ್-ನಲ್ಲಿ ಅವರ ಈ ಯಶಸ್ಸು, ಬಿಳಿವರ್ಣದ ಅಮೆರಿಕನ್ನರ ಸಾಂಪ್ರದಾಯಿಕ ಪ್ರಾಬಲ್ಯವನ್ನು ಮರಳಿ ಪಡೆಯಲು ಬಯಸುವ ಟ್ರಂಪ್ ಮತ್ತು ಜೆಡಿ ವ್ಯಾನ್ಸ್ ಅವರ ಸ್ಥಳೀಯ ರಾಜಕಾರಣಕ್ಕೆ ಒಂದು ಹಿನ್ನಡೆಯಾಗಿದೆ.

ಡೆಮಾಕ್ರಾಟ್‌ಗಳು ವರ್ಜೀನಿಯಾ ಮತ್ತು ನ್ಯೂಜೆರ್ಸಿಯಲ್ಲಿ ಗವರ್ನರ್ ಚುನಾವಣೆಗಳನ್ನು ಗೆದ್ದಿದ್ದಾರೆ. ಅಲ್ಲದೆ, ಕ್ಯಾಲಿಫೋರ್ನಿಯಾದಲ್ಲಿ ಅವರಿಗೆ ಅನುಕೂಲಕರವಾದ ಹೊಸ ಚುನಾವಣಾ ಜಿಲ್ಲೆಗಳನ್ನು ರಚಿಸಲು ಅವಕಾಶ ನೀಡುವ ಪ್ರಸ್ತಾವನೆಯಲ್ಲಿ ಅವರು ಗೆದ್ದಿದ್ದಾರೆ. ಇದು ರಿಪಬ್ಲಿಕನ್‌ಗಳಿಗೆ ಅನುಕೂಲಕರವಾದ ಆರು ಹೊಸ ಚುನಾವಣಾ ಜಿಲ್ಲೆಗಳನ್ನು ರಚಿಸಲು ಟೆಕ್ಸಾಸ್‌ನಲ್ಲಿ ಈಗಾಗಲೇ ಪೂರ್ಣಗೊಂಡಿರುವ ಗೆರಿಮ್ಯಾಂಡರಿಂಗ್ ಅನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

ಈ ಎಲ್ಲಾ ಚುನಾವಣೆಗಳಿಂದ ಡೆಮಾಕ್ರಾಟ್‌ಗಳಿಗೆ ಹೆಚ್ಚಿನ ಹುಮ್ಮಸ್ಸು ಸಿಕ್ಕಿದೆ. ನ್ಯೂಯಾರ್ಕ್‌ನಲ್ಲಿರುವ ವಿಶಿಷ್ಟ, ವೈವಿಧ್ಯಪೂರ್ಣ ಜನಸಂಖ್ಯೆ ಮತ್ತು ಇತರ ಭಾಗಗಳ ಹೆಚ್ಚಿನ ಏಕರೂಪತೆ ಮತ್ತು ಸಂಪ್ರದಾಯವಾದವನ್ನು ಗಮನಿಸಿದರೆ, ಡೆಮಾಕ್ರಾಟ್‌ಗಳು ಸಮಾಜವಾದವನ್ನು ಅಳವಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಟ್ರಂಪ್ ಅವರನ್ನು ಎದುರಿಸುವ ತಮ್ಮ ಸಾಮರ್ಥ್ಯದ ಬಗ್ಗೆ ಸಾಮಾನ್ಯವಾಗಿ ಹೆಚ್ಚು ಉತ್ಸುಕರಾಗುವ ಸಾಧ್ಯತೆಯಿದೆ. ಮಮ್ದಾನಿ ಅವರ ಗೆಲುವಿನಿಂದ ಸ್ಫೂರ್ತಿ ಪಡೆಯುತ್ತಿರುವ ಅಮೆರಿಕದ ಹೊರಗಿನವರು ಈ ಅಂಶವನ್ನು ಪ್ರಶಂಸಿಸುವುದು ಉತ್ತಮ.

(Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ದ ಫೆಡರಲ್‌ ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.)

Read More
Next Story