
ಹವಾಮಾನದ ಕಟ್ಟೆಚ್ಚರ: ಸಾಲ ಬೇಡ, ಅನುದಾನ ಕೊಡಿ- ಜಾಗತಿಕ ಶೃಂಗಸಭೆಯಲ್ಲಿ ಭಾರತದ ಗಟ್ಟಿ ಧ್ವನಿ
ಬ್ರೆಜಿಲ್ ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯ ಹವಾ ಜೋರಾಗಿದೆ. ‘ಹವಾಮಾನದ ತುರ್ತುಸ್ಥಿತಿ’ಯ ಅಸ್ತ್ರವನ್ನು ಮುಂದಿಟ್ಟುಕೊಂಡಿರುವ ಭಾರತ ವಿಶ್ವಾಸಾರ್ಹತೆಯ ಆಧಾರದಲ್ಲಿ ಸಾಲವಲ್ಲ, ಅನುದಾನ ನೀಡಿ ಎಂಬ ಹಕ್ಕೊತ್ತಾಯವನ್ನು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಮುಂದೆ ಮಂಡಿಸಿದೆ...
ಬ್ರೆಜಿಲ್‌ನಲ್ಲಿ ವಾರ್ಷಿಕ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ಮುಂದುವರಿದಿರುವಾಗ, ಭಾರತ ಮತ್ತು ಗ್ಲೋಬಲ್ ಸೌತ್ ಒಂದು ಕವಲುದಾರಿಯಲ್ಲಿ ನಿಂತಿವೆ. ವೈಜ್ಞಾನಿಕ ಸಂಶೋಧನೆಗಳು ಮತ್ತು ವಿಶ್ವಸಂಸ್ಥೆ ಮೌಲ್ಯನಿರ್ಣಯಗಳು ಹವಾಮಾನದ ತುರ್ತು ಪರಿಸ್ಥಿತಿಗೆ ಹೊಂದಿಕೊಳ್ಳಲು ಬೇಕಾಗಿರುವ ಅತಿದೊಡ್ಡ ವೆಚ್ಚದ ಕಠಿಣ ವಾಸ್ತವವನ್ನು ಬಯಲು ಮಾಡಿವೆ.
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೊಂದಾಣಿಕೆ ನಿಧಿಯ ಅಗತ್ಯವು ಈಗ ಪ್ರತಿ ವರ್ಷ ಭರೋಬ್ಬರಿ 310 ರಿಂದ 365 ಶತಕೋಟಿ ಡಾಲರ್-ಗಿಂತಲೂ ಹೆಚ್ಚಾಗಿದೆ, ಆದರೆ ನಿಜವಾದ ಜಾಗತಿಕ ಹರಿವು ಅದರ ಒಂದು ಸಣ್ಣ ಭಾಗ ಮಾತ್ರ. ಈ ಕೊರತೆಯು ವರ್ಷದಿಂದ ವರ್ಷಕ್ಕೆ ವೇಗವಾಗಿ ಹೆಚ್ಚುತ್ತಿದೆ. ಈ ಅಂತರವನ್ನು ಕಡಿಮೆ ಮಾಡುವಲ್ಲಿ ವಿಫಲವಾದರೆ ನೂರಾರು ಮಿಲಿಯನ್ ಜನರನ್ನು ಅಪಾಯಕ್ಕೆ ಸಿಲುಕಿಸುವ ಮತ್ತು ಜಾಗತಿಕ ಹವಾಮಾನ ಒಪ್ಪಂದವನ್ನು ಹಾದಿ ತಪ್ಪಿಸುವ ಅಪಾಯ ಕಾಣುತ್ತಿದೆ.
ಹತ್ತು ವರ್ಷಗಳ ಹಿಂದೆ, ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಪ್ರಮಾಣದಲ್ಲಿ ಇರಿಸುವ ಭರವಸೆಯನ್ನು ವಿಶ್ವ ನಾಯಕರು ನೀಡಿದ್ದರು. ಆದರೂ ಹವಾಮಾನದ ಹೊರಸೂಸುವಿಕೆ ಮಟ್ಟ ಏರುತ್ತಲೇ ಇದೆ ಮತ್ತು ಈ ಗುರಿಯನ್ನು ಸಾಧಿಸುವಲ್ಲಿ ಜಗತ್ತು ಸಂಪೂರ್ಣ ವಿಫಲವಾಗುತ್ತಿದೆ. ಈಗ, ಅಮೆಜಾನ್‌ನ ಪ್ರವೇಶ ನಗರವಾದ ಬೆಲೆಮ್-ನಲ್ಲಿ, ಸಿರಿವಂತ ರಾಷ್ಟ್ರಗಳು ಹವಾಮಾನ ಪರಿಹಾರಗಳಿಗಾಗಿ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಲು ಭಾರತವು ಆಕ್ರಮಣಕಾರಿ ಹೆಜ್ಜೆಯನ್ನು ಇಡುತ್ತಿದೆ. ಅಭಿವೃದ್ಧಿಶೀಲ ಅರ್ಥ ವ್ಯವಸ್ಥೆಗಾಗಿ ವಾರ್ಷಿಕ 1.3 ಟ್ರಿಲಿಯನ್ ಡಾಲರ್ ಕ್ರೋಢೀಕರಿಸುವ ಗುರಿಯನ್ನು ಹೊಂದಿರುವ ಜಾಗತಿಕ ಮಾರ್ಗಸೂಚಿ ಈಗ ನಮ್ಮ ಮುಂದಿದೆ.
ಭಾರತದ ಹಕ್ಕೊತ್ತಾಯ
ಈ ಮೊತ್ತವು ಸಾಲಗಳ ರೂಪದಲ್ಲಿರದೆ, ಅನುದಾನಗಳ ರೂಪದಲ್ಲಿ ಬರಬೇಕು ಎಂಬುದು ಭಾರತದ ಹಕ್ಕೊತ್ತಾಯ. ಯಾಕೆಂದರೆ, ಹವಾಮಾನ ಬಿಕ್ಕಟ್ಟನ್ನು ಒಂದು ಸನ್ನೆಕೋಲಿನಂತೆ ಬಳಸಿಕೊಂಡು, ಜಾಗತಿಕ ಅಧಿಕಾರದ ಚಲನಶೀಲತೆಯನ್ನು ಮರುರೂಪಿಸಲು ಮತ್ತು ಒಡೆದ, ಬಹುಧ್ರುವೀಯ ಜಗತ್ತಿನಲ್ಲಿ ಕಾರ್ಯತಂತ್ರದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸಿದೆ.
ಹವಾಮಾನ ಹಣಕಾಸು ಎಂದರೆ ಮೂಲತಃ ಶ್ರೀಮಂತ ರಾಷ್ಟ್ರಗಳಿಂದ ಬಡ ರಾಷ್ಟ್ರಗಳಿಗೆ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಹವಾಮಾನದ ಪರಿಣಾಮಗಳಿಂದ ಹೇಗಾದರೂ ಬದುಕುಳಿಯಲು ಸಹಾಯ ಮಾಡಲು ಹರಿಯುವ ಹಣವಾಗಿದೆ. ಈ ನಿಟ್ಟಿನಲ್ಲಿ ಭಾರತದ ವಾದ ಸರಳವಾಗಿದೆ. ಎರಡು ಶತಮಾನಗಳ ಕಾಲ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಸುಡುವುದರ ಮೂಲಕ ಕೈಗಾರಿಕೀಕರಣಕ್ಕೆ ಪಕ್ಕಾದವು, ಈಗಂತೂ ಇಂಗಾಲದ ಡೈಆಕ್ಸೈಡ್‌ನಿಂದ ವಾತಾವರಣವನ್ನು ತುಂಬಿ ಇಡೀ ಗ್ರಹವನ್ನು ಈಗ ಬಿಸಿ ಮಾಡುವ ಬೆದರಿಕೆ ಹಾಕಿದೆ.
1850ರಿಂದ ಈಚೆಗೆ ಜಾಗತಿಕ ಹೊರಸೂಸುವಿಕೆಗೆ ಭಾರತದ ಕೊಡುಗೆ ಕೇವಲ ಶೇ4 ಮಾತ್ರ, ಆದರೂ ಇದು ಹವಾಮಾನ ವಿಪತ್ತುಗಳಿಗೆ ಹೋಲಿಸಿದರೆ ವಿಶ್ವದ ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದಲ್ಲಿ ಬೀಸುವ ಬಿಸಿಗಾಳಿ ಸಾವಿರಾರು ಜನರಿಗೆ ಹಾನಿ ಉಂಟುಮಾಡುತ್ತಿದೆ, ಪ್ರವಾಹಗಳಿಂದ ಬೆಳೆಗಳು ನಾಶವಾಗುತ್ತಿವೆ ಮತ್ತು ಬರಗಾಲದಿಂದ ಬಾವಿಗಳು ಮತ್ತು ಅಂತರ್ಜಲ ಮೂಲಗಳು ಬರಿದಾಗುತ್ತಿವೆ.
ಸಾಲದಲ್ಲಿ ಮುಳುಗಿರುವ ಹೊತ್ತಿನಲ್ಲಿ...
2015ರ ಪ್ಯಾರಿಸ್ ಒಪ್ಪಂದವು ಈ ಹಣಕಾಸನ್ನು ಒದಗಿಸುವ ವಿಚಾರದಲ್ಲಿ ಶ್ರೀಮಂತ ರಾಷ್ಟ್ರಗಳನ್ನು ಕಾನೂನುಬದ್ಧವಾಗಿ ಬದ್ಧವಾಗಿರುವಂತೆ ಮಾಡಿತು. ಆದರೂ, ವಾಸ್ತವಾಗಿ ಹೆಚ್ಚಿನ ಹವಾಮಾನ ಹಣವು ಅನುದಾನಗಳ ರೂಪದಲ್ಲಿರದೆ, ಸಾಲಗಳ ರೂಪದಲ್ಲಿ ಬರುತ್ತದೆ. ಈಗಾಗಲೇ ಸಾಲದಲ್ಲಿ ಮುಳುಗಿರುವ ದೇಶಗಳಿಗೆ, ಇದು ಒಂದು ಕ್ರೂರ ಬಲೆ ಎಂದರೆ ತಪ್ಪಲ್ಲ. ಅವರು ತಾವು ಕಾರಣರಲ್ಲದ ಹವಾಮಾನ ಹಾನಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಲ ಮಾಡಬೇಕಾದ ಅನಿವಾರ್ಯತೆಯಿದೆ, ನಂತರ ಆ ಸಾಲವನ್ನು ಮರುಪಾವತಿ ಮಾಡಲು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ವಿನಿಯೋಗವಾಗುವ ಹಣವನ್ನು ಬೇರೆಡೆಗೆ ತಿರುಗಿಸಬೇಕಾಗುತ್ತದೆ.
ಅನುದಾನಗಳಿಗಾಗಿ ಭಾರತ ಮಾಡುತ್ತಿರುವ ಒತ್ತಾಯವು ಕೇವಲ ನ್ಯಾಯದ ಮನವಿಗಿಂತ ಹೆಚ್ಚಿನದಾಗಿದೆ. ಇದು ಒಂದು ಭೌಗೋಳಿಕ ರಾಜಕೀಯ ತಂತ್ರದ ಭಾಗವಾಗಿದೆ. ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಇನ್‌ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್‌ನ ಸಂಶೋಧನೆಯು ಭಾರತವು ಮೂಲಭೂತವಾಗಿ ರಕ್ಷಣಾತ್ಮಕ ಹವಾಮಾನ ರಾಜತಾಂತ್ರಿಕತೆಗೆ ಬದಲಾಗಿ ಆಕ್ರಮಣಕಾರಿ ಹತೋಟಿ ಕ್ರಮಕ್ಕೆ ಮುಂದಾಗಿದೆ.
ಐತಿಹಾಸಿಕವಾಗಿ, ಭಾರತವು ಸಮತೋಲನಕ್ಕೆ ಒತ್ತು ನೀಡುವ ಮೂಲಕ ಅಭಿವೃದ್ಧಿಪಡಿಸುವ ತನ್ನ ಹಕ್ಕನ್ನು ಸಮರ್ಥಿಸಿಕೊಂಡಿತು, ಇದನ್ನು ಈಗ ಅದರ ರಾಜತಾಂತ್ರಿಕರು ನಿಷ್ಕ್ರಿಯ ಸ್ಥಾನ ಎಂದು ಪರಿಗಣಿಸುತ್ತಾರೆ. ಇಂದು, ಭಾರತವು ಮಾತುಕತೆಯನ್ನು ಮರುರೂಪಿಸುವ ಕೆಲಸ ಮಾಡುತ್ತಿದೆ. ಇದು ಹವಾಮಾನ ಹಣಕಾಸನ್ನು ಅಭಿವೃದ್ಧಿಯ ಸಹಾಯ ಎಂದು ಪ್ರಸ್ತುತಪಡಿಸದೆ, ಬಾಕಿದಾರರು ಗಾಯಗೊಂಡವರಿಗೆ ನೀಡಬೇಕಾದ ಕಡ್ಡಾಯ ಬಾಧ್ಯತೆ ಎನ್ನುವ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದೆ. ಇದು ದೀನನೊಬ್ಬನು ನ್ಯಾಯಕ್ಕಾಗಿ ಮೊರೆಯಿಡುವ ಹಕ್ಕುದಾರನಾಗಿ ರೂಪಾಂತರಗೊಳ್ಳುತ್ತಿದ್ದಾನೆ. ಅಧಿಕಾರದ ಚಲನಶೀಲತೆಯ ಈ ವಿಲೋಮವು ಅಕ್ಷರಶಃ ಭಾರತವು ನಡೆಸುತ್ತಿರುವ ಯುದ್ಧವಾಗಿದೆ.
ಬಿಕ್ಕಟ್ಟು ನಿರ್ವಹಣೆಗೆ ಭರೋಬ್ಬರಿ ಮೊತ್ತ
ಭಾರತದ ಆಯುಧವೆಂದರೆ ಅದರ ತೀವ್ರ ದುರ್ಬಲವಾಗಿರುವ ಹವಾಮಾನ. ಈ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ಬೇಕಾದ ಪ್ರವಾಹ ರಕ್ಷಣೆಗಳನ್ನು ನಿರ್ಮಿಸಲು, ಬರ-ನಿರೋಧಕ ಬೆಳೆಗಳನ್ನು ಅಭಿವೃದ್ಧಿಪಡಿಸಲು ಮತ್ತು ನೀರಿನ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಭಾರತಕ್ಕೆ ಪ್ರತಿ ವರ್ಷ 359 ಶತಕೋಟಿ ಡಾಲರ್ ಮೊತ್ತದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಬೆಲೆಮ್ ಶೃಂಗಸಭೆಯಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ಈ ಅಗತ್ಯಗಳನ್ನು ಕಾರ್ಯತಂತ್ರವಾಗಿ ಮಾಡಿಕೊಂಡಿದೆ, ಅವು ದಕ್ಷಿಣ ಜಗತ್ತಿನ ಅಸ್ತಿತ್ವದ ವಿಶಾಲ ನಿರೂಪಣೆಯಾಗಿದೆ.
ತನ್ನದೇ ಆದ ದುರ್ಬಲ ಸ್ಥಿತಿಯನ್ನು ಮಾತುಕತೆ ಕೇಂದ್ರವನ್ನಾಗಿ ಮಾಡುವ ಮೂಲಕ, ಭಾರತವು ಶ್ರೀಮಂತ ರಾಷ್ಟ್ರಗಳು ಕೇವಲ ಹೊರಸೂಸುವಿಕೆಯನ್ನು ಮಾತ್ರವಲ್ಲದೆ ನ್ಯಾಯ ಮತ್ತು ಬದುಕುಳಿಯುವ ಹಕ್ಕನ್ನೂ ಗಮನಿಸಬೇಕು ಎಂದು ಒತ್ತಾಯಿಸಲು ಉದ್ದೇಶಿಸಿದೆ. ಇದು ದೌರ್ಬಲ್ಯವನ್ನೇ ಒಂದು ಸಾಧನವನ್ನಾಗಿ ಮಾಡಿಕೊಳ್ಳುವಂತೆ ಮಾಡುತ್ತದೆ.
ಹೆಚ್ಚಿದ ಭಾರತದ ಸಾಮರ್ಥ್ಯ
ಈ ಹೋರಾಟದಲ್ಲಿ ಭಾರತ ಏಕಾಂಗಿಯಲ್ಲ. ಅದು ಸಮಾನ ಮನಸ್ಕ ಅಭಿವೃದ್ಧಿಶೀಲ ರಾಷ್ಟ್ರಗಳ ಬಳಗವನ್ನು ಮುನ್ನಡೆಸುತ್ತಿದೆ. ಅದು ಮನುಕುಲದ ಶೇ.80ಕ್ಕಿಂತ ಹೆಚ್ಚು ಜನರನ್ನು ಪ್ರತಿನಿಧಿಸುವ 130ಕ್ಕೂ ಹೆಚ್ಚು ದೇಶಗಳ ಜಿ77 ಮತ್ತು ಚೀನಾ ಒಕ್ಕೂಟಕ್ಕಾಗಿ ಮಾತನಾಡುತ್ತಿದೆ. ಈ ಸಾಮೂಹಿಕ ಶಕ್ತಿಯು ಭಾರತದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಹವಾಮಾನ ಶೃಂಗಸಭೆಗಳಲ್ಲಿ ಭಾರತವು ಮಾತನಾಡುವಾಗ, ಇದು ತನ್ನೊಬ್ಬನಿಗಾಗಿ ಅಲ್ಲದೆ ಎಲ್ಲೆಡೆ ಇರುವ ದುರ್ಬಲರಿಗಾಗಿ ತಾನು ಮಾತನಾಡುತ್ತಿರುವುದಾಗಿ ಹೇಳಿಕೊಳ್ಳುತ್ತದೆ. ಶ್ರೀಮಂತ ರಾಷ್ಟ್ರಗಳು ಬಹುಪಕ್ಷೀಯ ನ್ಯಾಯಸಮ್ಮತ ಸಂಗತಿಯನ್ನು ವಿಭಜಿಸದೆ, ಅಂತಹ ಒಕ್ಕೂಟವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಪ್ಲಾನೆಟರಿ ಸೆಕ್ಯುರಿಟಿ ಇನಿಶಿಯೇಟಿವ್ನ ಸಂಶೋಧನೆಯು, ಹವಾಮಾನ ನೆರವು ಪಡೆಯುವ ದೇಶವಾಗಿ ಮಾತ್ರವಲ್ಲದೆ, ಪರಿಹಾರಗಳನ್ನು ಒದಗಿಸುವ ದೇಶವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಭಾರತವು ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟದಂತಹ ವೇದಿಕೆಗಳನ್ನು ಕಾರ್ಯತಂತ್ರವಾಗಿ ಬಳಸಿಕೊಂಡಂತೆ ಕಾಣುತ್ತಿದೆ.
ಈ ಉಪಕ್ರಮಗಳು ಭಾರತಕ್ಕೆ ನೈತಿಕ ಅಧಿಕಾರ ಮತ್ತು ಒಕ್ಕೂಟದ ನಾಯಕತ್ವವನ್ನು ನೀಡುತ್ತವೆ, ಇದರಿಂದ ಅದರ ಬೇಡಿಕೆಗಳು ಕೇವಲ ಸ್ವಾರ್ಥಪರವಾಗದೆ ಸಾರ್ವತ್ರಿಕವಾಗುತ್ತವೆ.
ಸಾಂಘಿಕ ಶಕ್ತಿಯ ಫಲ
ಅಜೆರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ 2024ರ ಹವಾಮಾನ ಶೃಂಗಸಭೆಯಲ್ಲಿ, ಭಾರತವನ್ನು ಆರಂಭದಲ್ಲಿ ನಿರ್ಲಕ್ಷಿಸಲಾಗಿತ್ತು. ಆದರೆ, ಒಕ್ಕೂಟದ ಒತ್ತಡದ ಫಲವಾಗಿ ಶ್ರೀಮಂತ ರಾಷ್ಟ್ರಗಳು 1.3 ಟ್ರಿಲಿಯನ್ ಡಾಲರ್ ಗುರಿಯನ್ನು ಒಪ್ಪಿಕೊಳ್ಳುವಂತೆ ಮಾಡಿತು. ಆ ಮೊತ್ತವು ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಭಾರತವು ಏಕಾಂಗಿಯಾಗಿ ಮಾತುಕತೆ ನಡೆಸಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ. ಶ್ರೀಮಂತ ರಾಷ್ಟ್ರಗಳು ದಕ್ಷಿಣ ಜಗತ್ತನ್ನು ವಜಾ ಮಾಡುವುದರಿಂದ ಬಹುಪಕ್ಷೀಯ ಸಹಕಾರವು ಸಂಪೂರ್ಣವಾಗಿ ನಾಶವಾಗುತ್ತದೆ ಎಂಬ ಭಯ ನೆಲೆಸಿದ ಕಾರಣ ಒಕ್ಕೂಟ ತಂತ್ರವು ಕೆಲಸ ಮಾಡುತ್ತದೆ.
ಭಾರತದ ರಾಜತಾಂತ್ರಿಕ ಪರಿಷ್ಕರಣೆಯು ವಿರೋಧಾತ್ಮಕ ಮೈತ್ರಿಗಳನ್ನು ಸಮತೋಲನ ಮಾಡುವುದರಲ್ಲಿ ಅಡಗಿದೆ. ಇದು ಕ್ವಾಡ್ (Quad) ನಂತಹ ವೇದಿಕೆಗಳ ಮೂಲಕ ಶುದ್ಧ ಇಂಧನದ ಮೇಲೆ ಅಮೆರಿಕ, ಯುರೋಪ್ ಮತ್ತು ಜಪಾನ್‌ನೊಂದಿಗೆ ಸಹಕರಿಸುತ್ತದೆ. ಅದೇ ಹೊತ್ತಿಗೆ, BRICSನಲ್ಲಿ ಚೀನಾ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತದೆ, ಶ್ರೀಮಂತ ರಾಷ್ಟ್ರಗಳು ವಿರೋಧಿಸುವ ಸಮತೋಲನ ತತ್ವಗಳನ್ನು ಸಮರ್ಥಿಸುತ್ತದೆ.
ಇದು ನಿಜವಾಗಿಯೂ ಅಸಂಗತತೆಯಲ್ಲ, ಆದರೆ ಕಾರ್ಯತಂತ್ರದಲ್ಲಿರುವ ಕ್ರಿಯಾಶೀಲತೆ. ಭಾರತವು ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವಾಗ ಎರಡೂ ಕಡೆಗಳಿಂದ ಪ್ರಯೋಜನಗಳನ್ನು ಪಡೆಯುತ್ತದೆ.
ಅಮೆರಿಕ ಮತ್ತು ಚೀನಾ ನಡುವಿನ ಭೌಗೋಳಿಕ ರಾಜಕೀಯ ಪೈಪೋಟಿಯನ್ನು ಕೂಡ ಭಾರತ ಬಳಸಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಹವಾಮಾನ ಹಣಕಾಸಿನ ಬಗ್ಗೆ ಹಿಂಜರಿದಾಗ, ಭಾರತವು ಚೀನಾ ಮತ್ತು BRICS ಜೊತೆಗಿನ ಗಹನ ಮೈತ್ರಿಯ ಬೆದರಿಕೆಯನ್ನು ವಿಶ್ವಾಸಾರ್ಹವಾಗಿ ಪರಿಗಣಿಸಬಲ್ಲದು. ಚೀನಾವು ಭಾರತದ ಬೇಡಿಕೆಗಳನ್ನು ನಿರ್ಬಂಧಿಸಿದಾಗ, ಭಾರತವು ಪಾಶ್ಚಿಮಾತ್ಯ ಪಾಲುದಾರರ ಕಡೆಗೆ ಮುಖಮಾಡಬಹುದು.
ಗ್ಲೋಬಲ್ ಸೌತ್ ಎಂಬ ಸಂಘಶಕ್ತಿ
ಇದು ಹವಾಮಾನ ನ್ಯಾಯದ ಭಾಷೆಯಲ್ಲಿ ಆವರಿಸಿಕೊಂಡಿರುವ ಸ್ವದೇಶಹಿತ ನೀತಿಯಾಗಿದೆ ಎಂದರೆ ತಪ್ಪಲ್ಲ. ಈ ರೀತಿ ಕಾರ್ಯನಿರ್ವಹಿಸುವಲ್ಲಿ ಭಾರತದ ವಿಶಿಷ್ಟತೆ ಏನೂ ಇಲ್ಲ. ಸಾಮಾನ್ಯವಾಗಿ ಎಲ್ಲಾ ಪ್ರಮುಖ ಶಕ್ತಿಗಳು ಈ ರೀತಿ ಕಾರ್ಯನಿರ್ವಹಿಸುತ್ತವೆ. ಆದರೆ ಗ್ಲೋಬಲ್ ಸೌತ್‌ನ ಪ್ರತಿನಿಧಿಯಾಗಿ ಭಾರತದ ಪಾತ್ರವು ಶ್ರೀಮಂತ ರಾಷ್ಟ್ರಗಳು ಮಾಡಿದರೆ ಸ್ವಾರ್ಥಪರವೆಂದು ತೋರುವ ಬೇಡಿಕೆಗಳನ್ನು ಮುಂದಿಡಲು ಅದಕ್ಕೆ ವಿಶಿಷ್ಟವಾದ ಸಾಮರ್ಥ್ಯ ನೀಡುತ್ತದೆ.
ಭಾರತದ ಹವಾಮಾನ ಬೇಡಿಕೆಗಳು ನವೀಕರಿಸಬಹುದಾದ ಇಂಧನಗಳು, ಹಸಿರು ಜಲಜನಕ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸುವುದರ ಜೊತೆಗೆ ನಿಕಟ ಸಂಪರ್ಕ ಹೊಂದಿವೆ, ಇದು ಆರ್ಥಿಕ ಬೆಳವಣಿಗೆ ಮತ್ತು ಕಾರ್ಯತಂತ್ರದ ಸ್ವಾಯತ್ತತೆ ವಿಚಾರದಲ್ಲಿ ಅತ್ಯಂತ ನಿರ್ಣಾಯಕ. ರಿಯಾಯ್ತಿ ಹವಾಮಾನ ಹಣಕಾಸು ಪಡೆಯುವ ಮೂಲಕ, ಭಾರತವು ಈ ಯೋಜನೆಗಳಿಗೆ ಅತಿಯಾದ ಸಾಲವಿಲ್ಲದೆ ಹಣ ನೀಡಬಹುದು,
ಕಾರ್ಬನ್ ನಿವಾರಣೆಯ ಭಾರತದ ರಾಜತಾಂತ್ರಿಕತೆಯು ತಾಂತ್ರಿಕ ಸ್ವಾಯತ್ತತೆ ಮತ್ತು ಚೀನಾ-ಪ್ರಾಬಲ್ಯದ ಪೂರೈಕೆ ಸರಪಳಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ಹವಾಮಾನ ಹಣಕಾಸು ಎನ್ನುವುದು ಪ್ರಾಥಮಿಕವಾಗಿ ಹೊಂದಾಣಿಕೆಯನ್ನು ಅವಲಂಬಿಸಿಲ್ಲ ಬದಲಾಗಿ ಹಸಿರು ಆರ್ಥಿಕತೆಯಲ್ಲಿ ಭೌಗೋಳಿಕ ರಾಜಕೀಯದ ಸ್ವಾಯತ್ತತೆಯನ್ನು ಅವಲಂಬಿಸಿದೆ. ಸಾಲಗಳ ಬದಲಿಗೆ ಅನುದಾನಗಳು, ಈ ಕೈಗಾರಿಕಾ ನಿರ್ಮಾಣಕ್ಕಾಗಿ ಗರಿಷ್ಠ ವಿತ್ತೀಯ ಸ್ಥಳವನ್ನು ಹೆಚ್ಚಿಸುತ್ತವೆ.
ದೌರ್ಬಲ್ಯದ ವಿರೋಧಾಭಾಸ
ಇದರ ಹೊರತಾಗಿಯೂ, ಭಾರತದ ಕಾರ್ಯತಂತ್ರವು ಒಂದು ಆಂತರಿಕ ಬಿಕ್ಕಟ್ಟನ್ನು ಒಳಗೊಂಡಿದೆ. ಅದು ತೀವ್ರವಾದ ಹವಾಮಾನ ದೌರ್ಬಲ್ಯ ಹೊಂದಿರುವುದು ನಿಜ. ಇದು 2024ರಲ್ಲಿ 274 ದಿನಗಳಲ್ಲಿ 255 ದಿನಗಳ ಕಾಲ ತೀವ್ರ ಸ್ವರೂಪದ ಹವಾಮಾನವನ್ನು ಎದುರಿಸಿತು ಮತ್ತು ಶಾಖದ ಒತ್ತಡಕ್ಕೆ ಸಿಲುಕಿ ಜಿಡಿಪಿಯಲ್ಲಿ ಶೇ.5.4ರಷ್ಟು ನಷ್ಟವನ್ನು ಎದುರಿಸಿತು. ಆದರೆ, ಭಾರತವು 2023-24ರಲ್ಲಿ ಜಾಗತಿಕ ಹೊರಸೂಸುವಿಕೆಯಲ್ಲಿ 165 ದಶಲಕ್ಷ ಟನ್‌ಗಳನ್ನು ಸೇರಿಸುವ ಮೂಲಕ ನಿಚ್ಚಳ ಹೆಚ್ಚಳವನ್ನು ಕೂಡ ದಾಖಲಿಸಿತು.
ಭಾರತವು ದೇಶೀಯವಾಗಿ ಹೆಚ್ಚಿನದನ್ನು ಸಾಧಿಸಬೇಕು ಎಂದು ಶ್ರೀಮಂತ ರಾಷ್ಟ್ರಗಳು ವಾದಿಸುತ್ತವೆ. ಭಾರತವು ಇದಕ್ಕೆ ಪ್ರತ್ಯುತ್ತರವಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳು ಕೈಗಾರಿಕೀಕರಣಗೊಂಡಿದ್ದಕ್ಕಿಂತ ತನ್ನ ನ್ಯಾಯಸಮ್ಮತ ವಾತಾವರಣದ ಪರಿಧಿದೊಳಗೆ ಹೆಚ್ಚು ಶುದ್ಧವಾಗಿ ಕೈಗಾರಿಕೆಗಳು ವಿಸ್ತರಿಸುತ್ತಿವೆ ಎಂದು ಪ್ರತಿಪಾದಿಸುತ್ತದೆ.
ಎರಡೂ ವಾದಗಳಿಗೂ ತಕ್ಕುನಾದ ಅರ್ಹತೆ ಇದೆ. ಈ ಅಸಂಗತೆ ಢಾಳಾಗಿ ಕಾಣಿಸುಸುತ್ತಿದ್ದಂತೆ, ಭಾರತದ ನೈತಿಕ ಸ್ಥಾನವು ಸ್ವಲ್ಪಮಟ್ಟಿಗೆ ದುರ್ಬಲಗೊಳ್ಳುತ್ತದೆ, ಆದರೂ ಅದರ ಕಾರ್ಯತಂತ್ರದ ಸಾಮರ್ಥ್ಯವು ಪ್ರಬಲವಾಗಿ ಉಳಿದಿದೆ.
ಜಗತ್ತಿನ ವಾಸ್ತವ ಮತ್ತು ಭಾರತದ ಪ್ರಭಾವ
ಭಾರತದ ಆಕ್ರಮಣಕಾರಿ ರಾಜತಾಂತ್ರಿಕ ನಿಲುವು ವಿಶಾಲವಾದ ಭೌಗೋಳಿಕ ರಾಜಕೀಯ ವಾಸ್ತವವನ್ನು ಪ್ರತಿಬಿಂಬಿಸುತ್ತದೆ. ಅಮೆರಿಕವು ಆಂತರಿಕವಾಗಿ ಹವಾಮಾನ ನೀತಿಯ ಮೇಲೆ ವಿಭಜಿಸಲ್ಪಟ್ಟಿದೆ ಮತ್ತು ಅದರ ನಾಯಕತ್ವ ದುರ್ಬಲವಾಗಿದೆ. ಉಕ್ರೇನ್ ಯುದ್ಧದ ಫಲಾಗಿ ಯುರೋಪ್ ವಿತ್ತೀಯ ಒತ್ತಡಗಳನ್ನು ಎದುರಿಸುತ್ತಿದೆ. ಚೀನಾವು ಅತಿ ದೊಡ್ಡ ಹೊರಸೂಸುವ ದೇಶವಾಗಿದ್ದರೂ, ದಾನಿ ಸ್ಥಾನಮಾನವನ್ನು ನಿರಾಕರಿಸುತ್ತದೆ. ರಷ್ಯಾ ಪ್ರತ್ಯೇಕಿಸಲ್ಪಟ್ಟಿದೆ.
ಹೀಗೆ ಈ ವಿಘಟಿತವಾದ ಬಹುಧ್ರುವೀಯ ಜಗತ್ತಿನಲ್ಲಿ ಯಾವುದೇ ಶಕ್ತಿಯು ಒಪ್ಪಂದವನ್ನು ಹೇರಲು ಸಾಧ್ಯವಿಲ್ಲ. ಭಾರತವು ಈ ಕ್ಷಣವನ್ನು ಒಂದು ಅವಕಾಶವೆಂದು ಭಾವಿಸುವುದರಲ್ಲಿ ಅರ್ಥವಿದೆ. ತನ್ನನ್ನು ತಾನು ಗ್ಲೋಬಲ್ ಸೌತ್ನ ಧ್ವನಿ ಎಂದುಕೊಳ್ಳುವ ಮೂಲಕ, ಭಾರತವು ತನ್ನ ಪ್ರೊಫೈಲ್ ಮತ್ತು ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಭಾರತದ ಒಕ್ಕೂಟದ ನಾಯಕತ್ವವು ಹೆಚ್ಚು ಪರಿಣಾಮಕಾರಿಯಾದಷ್ಟೂ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅದರೊಂದಿಗೆ ಮಾತುಕತೆ ನಡೆಸುವ ಅನಿವಾರ್ಯತೆಗೆ ಸಿಲುಕುತ್ತವೆ. ಇದು ಜಾಗತಿಕ ಆಡಳಿತದಲ್ಲಿ ಭಾರತದ ಸ್ಥಾನಮಾನವನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. 2028ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯನ್ನು ಆಯೋಜಿಸುವ ಭಾರತದ ಪ್ರಯತ್ನವು ಈ ನಾಯಕತ್ವವನ್ನು ಸಾಂಸ್ಥಿಕಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಹವಾಮಾನದ ಹೆಚ್ಚಿನ ಪಾಲು
ಭಾರತವು ಈ ರಾಜತಾಂತ್ರಿಕ ಯುದ್ಧವನ್ನು ಪರಿಣಾಮಕಾರಿಯಾಗಿ ನಡೆಸುತ್ತಿದೆ. ಇದು ಹವಾಮಾನ ಹಣಕಾಸು ಗುರಿಗಳನ್ನು ಸರಿಸುಮಾರು ಶೂನ್ಯದಿಂದ 1.3 ಟ್ರಿಲಿಯನ್ ಡಾಲರ್-ಗೆ ಹೆಚ್ಚಿಸಿದೆ. ಇದು ಸಮಾನತೆಯ ತತ್ವಗಳನ್ನು ಮಾತುಕತೆಯಲ್ಲಿ ಮುಖ್ಯ ಅಂಶವನ್ನಾಗಿ ಮಾಡಿದೆ. ಗ್ಲೋಬಲ್ ಸೌತ್ ಪರಿಕಲ್ಪನೆಯನ್ನು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ ಎಂಬುದನ್ನು ಅದು ಸಾಬೀತುಪಡಿಸಿದೆ.
ಆದರೂ, ಇನ್ನೂ ಯುದ್ಧವನ್ನು ಗೆದ್ದಿಲ್ಲ. ನಿಜವಾದ ಹಣಕಾಸಿನ ಹರಿವು ಪ್ರತಿಜ್ಞೆಗಳ ಒಂದು ಸಣ್ಣ ಭಾಗವಾಗಿ ಉಳಿದಿವೆ. ಅನುದಾನಗಳು ಮತ್ತು ಸಾಲಗಳ ನಡುವಿನ ಸಂಯೋಜನೆಯು ಅಸ್ಪಷ್ಟವಾಗಿದೆ. ಗಣನೀಯ ಹಣಕಾಸಿನ ಹರಿವು ಜಾರಿಗೆ ಬರದಿದ್ದರೆ, ಒಕ್ಕೂಟದ ನಾಯಕನಾಗಿ ಭಾರತದ ವಿಶ್ವಾಸಾರ್ಹತೆ ಕುಸಿಯುವ ಅಪಾಯವಿದೆ.
ಆದ್ದರಿಂದ, ಭಾರತವು ಜಾಗತಿಕ ಆರ್ಥಿಕ ರಚನೆಯನ್ನು ಮರುರೂಪಿಸಲು, ಕೈಗಾರಿಕಾ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಮುಖ ಶಕ್ತಿಯ ಸ್ಥಾನಮಾನವನ್ನು ಪ್ರತಿಪಾದಿಸಲು ಹವಾಮಾನ ಬಿಕ್ಕಟ್ಟನ್ನು ಒಂದು ಅಸ್ತ್ರವಾಗಿ ಬಳಸುತ್ತಿದೆ. ಇದರ ಯಶಸ್ಸು ನೈತಿಕ ಮನವೊಲಿಕೆಯ ಮೇಲೆ ಅವಲಂಬಿತವಾಗಿಲ್ಲ, ಆದರೆ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಿಂದಾಗಿ ಸಿರಿವಂತ ರಾಷ್ಟ್ರಗಳು ಗ್ಲೋಬಲ್ ಸೌತ್-ನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಅಂಶವನ್ನೂ ಪರಿಗಣಿಸಲೇಬೇಕು.
(Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ದ ಫೆಡರಲ್ ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.)

