
UN Climate Summit| ಮುನಿದ ಪ್ರಕೃತಿ ಕಬಳಿಸಿದ್ದು 80000 ಜೀವ! ಡೇಂಜರ್ ಝೋನ್‌ನಲ್ಲಿ ಭಾರತ!!
ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ನ. 11 ರಂದು ಬಿಡುಗಡೆ ಮಾಡಿದ ಸೂಚ್ಯಂಕದಲ್ಲಿ ಕಳೆದ 30 ವರ್ಷಗಳಲ್ಲಿ ಸಂಭವಿಸಿದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹವಾಮಾನ ಸಂಬಂಧಿ ಘಟನೆಗಳನ್ನು ವಿಶ್ಲೇಷಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತವು ತೀವ್ರ ಹವಾಮಾನ ಬಿಕ್ಕಟ್ಟು ಎದುರಿಸುತ್ತಿದೆ. ಇದು ಅಪಾರ ಪ್ರಮಾಣದ ಮಾನವ ಮತ್ತು ಆರ್ಥಿಕ ಪರಿಣಾಮಕ್ಕೆ ಕಾರಣವಾಗಿದೆ. ಜರ್ಮನ್‌ವಾಚ್ ಕ್ಲೈಮೇಟ್ ರಿಸ್ಕ್ ಇಂಡೆಕ್ಸ್‌ನ (Germanwatch Climate Risk Index) ವರದಿ ಇದಕ್ಕೆ ಸ್ಪಷ್ಟ ಪುರಾವೆಯನ್ನು ಒದಗಿಸುತ್ತದೆ.
ಅದರ ಪ್ರಕಾರ, 1995 ಮತ್ತು 2024ರ ನಡುವಿನ ಅವಧಿಯಲ್ಲಿ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಭಾರತವು ಸುಮಾರು 170 ಶತಕೋಟಿ ಡಾಲರ್ ನಷ್ಟವನ್ನು ಅನುಭವಿಸಿದೆ. ಪ್ರವಾಹ, ಉಷ್ಣ ಅಲೆ, ಮತ್ತು ಚಂಡಮಾರುತಗಳಿಂದ ಹೆಚ್ಚು ಪ್ರಭಾವಿತವಾಗಿರುವ ವಿಶ್ವದ ದೇಶಗಳ ಪೈಕಿ ಭಾರತವು ಒಂಬತ್ತನೇ ಸ್ಥಾನದಲ್ಲಿದೆ.
ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯ ಹಿನ್ನೆಲೆಯಲ್ಲಿ ನ. 11 ರಂದು ಬಿಡುಗಡೆಯಾದ ಈ ಸೂಚ್ಯಂಕದಲ್ಲಿ ಕಳೆದ 30 ವರ್ಷಗಳಲ್ಲಿ ಸಂಭವಿಸಿದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹವಾಮಾನ ಸಂಬಂಧಿ ಘಟನೆಗಳನ್ನು ವಿಶ್ಲೇಷಿಸಲಾಗಿದೆ. ಈ ವಿಶ್ಲೇಷಣೆಯ ಪ್ರಕಾರ, ಜಾಗತಿಕವಾಗಿ ಅಂತಹ ವಿಪತ್ತುಗಳಿಂದ ಉಂಟಾದ ಸಾವಿನ ಸಂಖ್ಯೆ 832,000 ಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
80,000 ಕ್ಕೂ ಹೆಚ್ಚು ಜೀವಗಳು ಬಲಿ
ಹವಾಮಾನ ಬಿಕ್ಕಟ್ಟಿಗೆ ಸಂಬಂಧಿಸಿ ಭಾರತದಲ್ಲಿ ಸಂಭವಿಸಿದ ನಷ್ಟವು ಕೇವಲ ಹಣಕಾಸಿನ ನಷ್ಟವನ್ನು ಮೀರಿದೆ; ರಾಷ್ಟ್ರದಲ್ಲಿ 80,000 ಕ್ಕೂ ಹೆಚ್ಚು ಜೀವಗಳು ಹವಾಮಾನ ವಿಪತ್ತಿನ ಘಟನೆಗಳು ಬಲಿ ತೆಗೆದುಕೊಂಡಿವೆ. ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಲೆಕ್ಕವಿಲ್ಲ. ಪ್ರವಾಹದಿಂದಾಗಿ ಮನೆಗಳು ಕೊಚ್ಚಿಕೊಂಡು ಹೋಗುತ್ತವೆ, ತೀವ್ರ ಪ್ರಮಾಣದ ಶಾಖದ ಗಾಳಿಯಿಂದ ಸಮುದಾಯಗಳು ದುರ್ಬಲಗೊಳ್ಳುತ್ತವೆ ಮತ್ತು ಚಂಡಮಾರುತಗಳು ಇಡೀ ಪ್ರದೇಶವನ್ನೇ ಗುಡಿಸಿಹಾಕುತ್ತವೆ.
ಭಾರತದಲ್ಲಿ ಅತಿ ಹೆಚ್ಚು ಜನರು ಪ್ರಕೃತಿಯ ವಿಕೋಪಕ್ಕೆ ಸಿಲುಕುವುದು ಪ್ರವಾಹಗಳಿಂದ. ಆದರೆ ಚಂಡಮಾರುತಗಳು ಅತಿ ಹೆಚ್ಚಿನ ಆರ್ಥಿಕ ಹಾನಿಯನ್ನು ಉಂಟುಮಾಡುತ್ತವೆ ಎಂದು ಜರ್ಮನ್‌ವಾಚ್‌ನ ಅಂತರರಾಷ್ಟ್ರೀಯ ಹವಾಮಾನ ನೀತಿಯ ಮುಖ್ಯಸ್ಥೆ ಲಾರಾ ಸ್ಕೇಫರ್ ಅವರ ವಿಶ್ಲೇಷಣೆ. ಮತ್ತೆ ಮತ್ತೆ ಸಂಭವಿಸುವ ವಿಪತ್ತುಗಳು ಸುತ್ತಮುತ್ತಲಿನ ಸಮುದಾಯಗಳಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡುವುದಿಲ್ಲ. ಇದರಿಂದ ಬಡತನವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುತ್ತಾರೆ ಅವರು.
ಈ ಹಿನ್ನೆಲೆಯಲ್ಲಿ ದೊರೆಯುವ ಪರಿಹಾರದಲ್ಲಿಯೂ ಸಮಾನತೆಯಿಲ್ಲ. ಜಾಗತಿಕ ನಿಧಿಗಳಲ್ಲಿನ ಅಸಮಾನತೆಯಿಂದ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ದುರ್ಬಲ ರಾಷ್ಟ್ರಗಳು ಪ್ರತಿ ವರ್ಷಕ್ಕೆ ಒಬ್ಬ ವ್ಯಕ್ತಿಗೆ ಕೇವಲ ಎರಡು ಡಾಲರ್ ಮಾತ್ರ ಪಡೆಯುತ್ತಿವೆ. ಆದರೆ ಶ್ರೀಮಂತ ರಾಷ್ಟ್ರಗಳಿಗೆ ದಕ್ಕುವುದು 160 ಡಾಲರ್-ಗೂ ಅಧಿಕ ಹಣ ಎಂದು ವಿಶ್ವ ಹವಾಮಾನಶಾಸ್ತ್ರ ಸಂಸ್ಥೆಯು ಬೊಟ್ಟುಮಾಡುತ್ತದೆ. ಈ ರೀತಿಯ ಅಸಮ ಬೆಂಬಲದಿಂದಾಗಿ ಭಾರತವು ಅಪಾಯಗಳಿಗೆ ಸಿದ್ಧತೆ ಮಾಡಿಕೊಳ್ಳುವ ಕಡಿಮೆ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಅಪಾಯದ ಪ್ರಮಾಣ ಹೆಚ್ಚುತ್ತ ಸಾಗಿದೆ.
ವಿಪತ್ತು ತಡೆಗೆ ಹೂಡಿಕೆ ಅನಿವಾರ್ಯ
ಇಂತಹ ಹವಾಮಾನ ವಿಪತ್ತುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯ ಮತ್ತು ಅನಿವಾರ್ಯ. ಭಾರತದ ನೇತೃತ್ವವನ್ನು ಹೊಂದಿರುವ ದುರಂತ ನಿರೋಧಕ ಮೂಲಸೌಕರ್ಯಕ್ಕಾಗಿರುವ ಒಕ್ಕೂಟ (CDRI) ಹೇಳುವಂತೆ, ಪ್ರತಿರೋಧಕ ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಪ್ರತಿ ಡಾಲರ್-ನಿಂದ ತಪ್ಪಿಸಬಹುದಾದ ನಷ್ಟಗಳಲ್ಲಿ 4 ರಿಂದ 15 ಡಾಲರ್ ವರೆಗೆ ಉಳಿತಾಯ ಮಾಡಲು ಸಾಧ್ಯವಿದೆ. ಆದರೂ, ಹೆಚ್ಚಿನ ನಿಧಿಗಳು ಇನ್ನಷ್ಟು ವಿಪತ್ತುಗಳನ್ನು ತಡೆಯುವ ಬದಲು ಪರಿಹಾರದ ಮೇಲೆ ಗಮನ ಹರಿಸುತ್ತಿವೆ.
ವಿಶ್ವಾದಾದ್ಯಂತ ಮೂಲಸೌಕರ್ಯಕ್ಕೆ ಉಂಟಾಗುವ ನಷ್ಟಗಳು ವಾರ್ಷಿಕವಾಗಿ 850 ಶತಕೋಟಿ ತಲುಪಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನಷ್ಟಗಳ ಹರಿವನ್ನು ತಡೆಯಲು 2050ರ ವೇಳೆಗೆ ಜಾಗತಿಕವಾಗಿ ಸ್ಥಿತಿಸ್ಥಾಪಕತ್ವ ಹೂಡಿಕೆಗಳ ಒಟ್ಟು ಮೊತ್ತವು 10 ಲಕ್ಷ ಕೋಟಿ ಡಾಲರ್ ಆಗಿರಬೇಕು ಎಂದು ವಿಪತ್ತು ಅಪಾಯ ಕಡಿತಕ್ಕಾಗಿ ಇರುವ ವಿಶ್ವಸಂಸ್ಥೆಯ ಕಚೇರಿ (UNDRR) ಅಂದಾಜು ಮಾಡಿದೆ.
ಭಾರತದ ಸ್ಥಿತಿಸ್ಥಾಪಕತ್ವದ ಪ್ರಯತ್ನಗಳು ಸುಧಾರಿಸಿದ್ದು, ಇದಕ್ಕೆ ಸರ್ಕಾರಿ ಕಾರ್ಯಕ್ರಮಗಳು ಹಿಂದಿಗಿಂತ ಹೆಚ್ಚಿನ ಬೆಂಬಲ ನೀಡಿವೆ. ಆದಾಗ್ಯೂ, ವಿಶೇಷವಾಗಿ ದುರ್ಬಲ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯಗಳು ಅಪಾಯಕ್ಕೆ ಸಿಲುಕುವುದನ್ನು ತಗ್ಗಿಸಲು ಸಂಪೂರ್ಣ ಮೌಲ್ಯಮಾಪನ ಕೆಲಸವನ್ನು ಹೆಚ್ಚು ಹೆಚ್ಚಾಗಿ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ನೀತಿ, ಹಣಕಾಸು ಮತ್ತು ಸ್ಥಳೀಯ ಜ್ಞಾನವನ್ನು ಸಂಯೋಜಿಸುವ ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಜೀವ ಉಳಿಸುವ ಸಾಧ್ಯತೆಗಳು
ಅತಿ ಹೆಚ್ಚು ತೊಂದರೆಗೆ ಸಿಲುಕಿದ ಸಮುದಾಯಗಳಲ್ಲಿ ವಿಮೆ, ಸಾಲ ಅಥವಾ ವಿಪತ್ತಿನ ಮುಂಜಾಗೃತೆಯಂತಹ ಸಂಪನ್ಮೂಲಗಳ ಕೊರತೆ ಇರುತ್ತದೆ. ಸೂಕ್ಷ್ಮ-ಹಣಕಾಸು, ಸುರಕ್ಷತಾ ಜಾಲಗಳು ಮತ್ತು ಮುಂಚಿತವಾಗಿ ಎಚ್ಚರಿಕೆಯನ್ನು ನೀಡುವ ವ್ಯವಸ್ಥೆಗಳಿಂದ ಜೀವಗಳನ್ನು ಉಳಿಸಲು ಸಾಧ್ಯ ಎಂಬುದನ್ನು ಅಧ್ಯಯನಗಳು ಸಾಬೀತುಮಾಡಿವೆ, ಆದರೆ ಇವುಗಳ ಲಭ್ಯತೆಯು ಇನ್ನೂ ಸಮಾನವಾಗಿಲ್ಲ ಎನ್ನುವುದು ವಿಪರ್ಯಾಸ.
ಜರ್ಮನ್‌ವಾಚ್ ಕ್ಲೈಮೇಟ್ ರಿಸ್ಕ್ ಇಂಡೆಕ್ಸ್ ಹೇಳುವ 170 ಶತಕೋಟಿ ಡಾಲರ್ ಮೊತ್ತವು ತುರ್ತು ಕ್ರಮದ ಕಡೆಗೆ ಗಮನ ಹರಿಸುವಂತೆ ಖಡಕ್ ಎಚ್ಚರಿಕೆ ನೀಡುತ್ತದೆ. ಸ್ಥಿತಿಸ್ಥಾಪಕತ್ವದಲ್ಲಿ ಅಥವಾ ಪ್ರತಿಬಂಧಕದಲ್ಲಿ ಹೂಡಿಕೆ ಮಾಡುವುದನ್ನು ವಿಳಂಬ ಮಾಡುವುದರಿಂದ, ಭವಿಷ್ಯದಲ್ಲಿ ಆರ್ಥಿಕವಾಗಿ ಹೆಚ್ಚಿನ ಹೊರೆ ಎದುರಿಸಬೇಕಾದೀತು ಮತ್ತು ಮಾನವ ಸಂಕಟವೂ ಅತಿಯಾಗುವ ಅಪಾಯವಿದೆ ಎಂದು ಹೇಳುತ್ತದೆ.
ವಿಶ್ವಸಂಸ್ಥೆ ಶೃಂಗಸಭೆಯು ನಡೆಯುತ್ತಿರುವ ಹೊತ್ತಿನಲ್ಲೇ ಸರ್ಕಾರಗಳ ಮುಂದೆ ಸ್ಪಷ್ಟ ಆಯ್ಕೆಗಳಿವೆ. ಹೆಚ್ಚುತ್ತಿರುವ ಹವಾಮಾನ ಆಘಾತಗಳಿಂದ ಭಾರತದ ಜನರನ್ನು ರಕ್ಷಿಸಲು ಮತ್ತು ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಬಿಕ್ಕಟ್ಟು ಪ್ರತಿಸ್ಪಂದನಾ ಕ್ರಮ ಮತ್ತು ಮುಂಜಾಗ್ರತಾ ಯೋಜನೆ ಮತ್ತು ಹೂಡಿಕೆಯತ್ತ ಚಿತ್ತ ಹರಿಸುವುದು ಅವಶ್ಯಕವಾಗಿದೆ. ಅತ್ಯಂತ ದುರ್ಬಲ ಸಮುದಾಯಗಳು ಪರಿಸ್ಥಿತಿಯನ್ನು ಬದಲಾಯಿಸಲು ಮತ್ತು ತನ್ನ ಪ್ರಗತಿಯನ್ನು ರಕ್ಷಿಸಿಕೊಳ್ಳುವಂತೆ ಮಾಡಲು ಸಾಧ್ಯವಾಗುತ್ತದೆಯೇ ಎಂಬುದರ ಮೇಲೆ ಭಾರತದ ಭವಿಷ್ಯವು ಅವಲಂಬಿತವಾಗಿದೆ.

