ಚಂಪಾರಣ್‌ನಿಂದ ವೋಟ್ ಚೋರಿ ತನಕ: ಪಣಕ್ಕೊಡಿದ ಬಿಹಾರದ ಮತದಾರರ ಆತ್ಮ
x
ಇಡೀ ತೀರ್ಪಿನ ದಿಕ್ಕನ್ನೇ ಬದಲಿಸಬಲ್ಲ ಮತದಾರರ ಸಂಖ್ಯೆಯನ್ನು ಪಟ್ಟಿಯಿಂದ ಕಿತ್ತುಹಾಕಿದ ಬಳಿಕ ಬಿಹಾರದ ಮತದಾರರ ಪಟ್ಟಿ ಗಣನೀಯವಾಗಿ ಕುಗ್ಗಿಹೋಗಿದೆ. ಪಟನಾದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಈ ವಾರದ ಆರಂಭದಲ್ಲಿ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಸಿದ್ಧವಾಗಿರುವ ಮ್ಯೂರಲ್ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ.

ಚಂಪಾರಣ್‌ನಿಂದ ವೋಟ್ ಚೋರಿ ತನಕ: ಪಣಕ್ಕೊಡಿದ ಬಿಹಾರದ ಮತದಾರರ ಆತ್ಮ

ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಶುದ್ಧೀಕರಣ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ. ಇತಿಹಾಸ, ಅಸ್ತಿತ್ವ ಮತ್ತು ಸಂಶಯದಿಂದ ರೂಪುಗೊಂಡಿರುವ ಈ ಚುನಾವಣೆಗೆ ಬಿಹಾರ ಮೈಕೊಡವಿಕೊಂಡಿದೆ.


ಚುನಾವಣಾ ಆಯೋಗವು ದೇಶದಲ್ಲಿಯೇ ಮೊದಲ ಬಾರಿಗೆ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಉಂಟುಮಾಡಿರುವ ಭಾರೀ ಸಂಚಲನದ ನಡುವೆಯೇ ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಘೋಷಣೆಯಾಗಿದೆ.

ರಾಜಕೀಯ ಹಕ್ಕುದಾರರ ಜೊತೆ ಸಮಾಲೋಚನೆ ನಡೆಸುವ ಕನಿಷ್ಠ ಸೌಜನ್ಯವನ್ನೂ ತೋರದೆ ಪರಿಷ್ಕರಣೆ ಪ್ರಕ್ರಿಯೆಯನ್ನು ಆರಂಭಿಸಿದ ಚುನಾವಣಾ ಆಯೋಗವು, ವ್ಯಕ್ತವಾಗಿರುವ ರಾಜಕೀಯ ವಿರೋಧ ಮತ್ತು ಸಾಂಸ್ಥಿಕ ತಾಟಸ್ಥ್ಯ ನೀತಿಯನ್ನು ಕಾಯ್ದುಕೊಳ್ಳಬೇಕು ಹಾಗೂ ಕಾನೂನು ಚೌಕಟ್ಟನ್ನು ಮೀರಬಾರದು ಎಂಬ ನ್ಯಾಯಾಂಗದ ಸೂಚನೆಯ ನಡುವೆಯೇ ಪರಿಷ್ಕರಣೆ ಕಾರ್ಯವನ್ನು ಧೈರ್ಯದಿಂದ ಪೂರ್ಣಗೊಳಿಸಿದೆ.

ಎಸ್.ಐ.ಆರ್. ಎಂಬ ವಿಭಜನೆ ತಂತ್ರ

ಆಯೋಗ ಕೈಗೊಂಡಿರುವ ಈ ನಿರ್ಧಾರದಿಂದಾಗಿ ರಾಜ್ಯದೊಳಗೆ ಮತ್ತು ಹೊರಗೆ ರಾಜಕೀಯ ವಲಯದಲ್ಲಿ ತೀವ್ರ ಧ್ರುವೀಕರಣಕ್ಕೆ ಕಾರಣವಾಗಿದೆ. ಅಷ್ಟುಮಾತ್ರವಲ್ಲದೆ ಇದು ಭಾರತದಾದ್ಯಂತ ನಾಗರಿಕ ಸಮಾಜ ಮತ್ತು ಮಾಧ್ಯಮಗಳ ನಡುವೆಯೂ ತೀಕ್ಷ್ಣ ಸ್ವರೂಪದ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿದೆ.

ಇತ್ತೀಚೆಗೆ ನೇಪಾಳ ಆಗಿರುವ ವಿದ್ಯಮಾನಗಳು ಎಲ್ಲರ ಕಣ್ಣ ಮುಂದೆ ಇದೆ. ಹಾಗಾಗಿ ಒಂದು ಕಥನವನ್ನು ಕಟ್ಟಲು ರಾಜಕೀಯ ಪಕ್ಷಗಳು ಮಾತ್ರ ಏಕಸ್ವಾಮ್ಯದ ಅಧಿಕಾರವನ್ನು ಹೊಂದಿಲ್ಲ. ಸಾಮಾಜಿಕ ಮಾಧ್ಯಮದ ಅಧಿಕಾರವನ್ನು ಹಿಡಿದು ಅಥವಾ ಅದರ ಅನುಪಸ್ಥಿತಿಯಲ್ಲಿಯೂ ಒಬ್ಬ ವ್ಯಕ್ತಿ ಕೂಡ ಬದಲಾವಣೆಯ ಹರಿಕಾರನಾಗಿ ರೂಪುಗೊಳ್ಳಬಹುದು.

ಈ ರಾಜಕೀಯ ರಂಗದಲ್ಲಿ ಚುನಾವಣಾ ಆಯೋಗದ ‘ಶುದ್ಧೀಕರಣ ಯೋಜನೆ’ ಒಂದು ಕಡೆಯಾದರೆ ಬಿಜೆಪಿ ಮತ್ತು ಜೆಡಿಯು ಹಾಗೂ ಅದರ ಸಣ್ಣ ಪುಟ್ಟ ಮಿತ್ರ ಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ಆರ್.ವಿ), ರಾಷ್ಟ್ರೀಯ ಲೋಕಮೋರ್ಚಾ ಮತ್ತು ಹಿಂದುಸ್ತಾನ್ ಅವಾಮಿ ಮೋರ್ಚಾ ಕಡೆಯಿಂದ ಬೆಂಬಲವನ್ನು ಪಡೆಯಿತು. ಅದು ನಿರೀಕ್ಷಿತವೂ ಕೂಡ.

ಇನ್ನೊಂದು ಕಡೆ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್.ಜೆ.ಡಿ) ನೇತೃತ್ವದ ಮಹಾಘಟಬಂಧನ್ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ನಿರಂತರ ಅಭಿಯಾನವನ್ನು ನಡೆಸುತ್ತಲೇ ಬಂದವು. ಮತದಾರರ ಪಟ್ಟಿ ಪರಿಷ್ಕರಣೆಯ ಮೂಲ ಉದ್ದೇಶವೇ ಮತಗಳನ್ನು ಕದಿಯುವುದೇ ಆಗಿದೆ (ಇದನ್ನು ಕಾಂಗ್ರೆಸ್ ‘ವೋಟ್ ಚೋರಿ’ ಎಂದೇ ಕರೆದಿದೆ) ಎಂದು ಅವರು ಆರೋಪಿಸಿದರು. ತಮಗೆ ಅನುಕೂಲವಲ್ಲದ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕುವ ಉದ್ದೇಶದಿಂದ ಆಡಳಿತ ಪಕ್ಷ ಈ ತಂತ್ರ ಬಳಸಿದೆ ಎಂದು ಮಹಾಮೈತ್ರಿಕೂಟವು ತೀವ್ರವಾಗಿ ಟೀಕಿಸಿದೆ.

ದ್ವಂದ್ವ ನಿಲುವಿನ ಪ್ರಶಾಂತ್ ಕಿಶೋರ್

ಈ ವಿಚಾರದಲ್ಲಲಿ ಎರಡು ಪ್ರಮುಖ ವಿರೋಧ ಪಕ್ಷಗಳ ಸ್ಪಷ್ಟ ನಿಲುವಿಗೆ ಪ್ರತಿಯಾಗಿ ಪ್ರಶಾಂತ್ ಕಿಶೋರ್ ಮತ್ತು ಅವರ ಜನ ಸೂರಜ್ ಪಾರ್ಟಿ ದ್ವಂದ್ವ ನಿಲುವನ್ನು ಹೊಂದಿತ್ತು. 2024ರಲ್ಲಿ ಬಿಹಾರ ವಿಧಾನಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಭಾಗಿಯಾದ ಅನುಭವವನ್ನು ಬಿಟ್ಟರೆ ಈ ಪಕ್ಷಕ್ಕೆ ಈ ಚುನಾವಣೆ ತೀರಾ ಹೊಸತು. ಅದು ಈ ಚುನಾವಣಾ ಹೋರಾಟದಲ್ಲಿ ಹಾಕುವ ಪಟ್ಟುಗಳು ಎಂತಹುದು, ಮಾಧ್ಯಮ ನಿರ್ವಹಣೆ ಹೇಗೆ, ಗಳಿಸುವ ಮತಗಳಾದರೂ ಎಷ್ಟು ಎನ್ನುವುದು ಚುನಾವಣಾ ತೀರ್ಪಿನಿಂದಷ್ಟೇ ನಿರ್ಧಾರವಾಗಲಿದೆ.

21ನೇ ಶತಮಾನದ ಎರಡನೇ ದಶಕದ ಆರಂಭದ ವರ್ಷಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಗ್ರಾಹಕ’ರನ್ನಾಗಿ ಪಡೆದಿರುವ ಪ್ರಶಾಂತ್ ಕಿಶೋರ್ ವೃತ್ತಿಪರ ಸಲಹೆಗಾರ-ಸಂಘಟಕ ಮತ್ತು ಚುನಾವಣಾ ಮಾರ್ಗದರ್ಶಕರಾಗಿ ಅನೇಕ ಚುನಾವಣೆಗಳಲ್ಲಿ ತೊಡಗಿಸಿಕೊಂಡವರು.

ಇದರ ಪರಿಣಾಮವಾಗಿ ಪ್ರಶಾಂತ್ ಕಿಶೋರ್ ಅವರು ಆ ಬಳಿಕ ನಾನಾ ರಾಜ್ಯಗಳಲ್ಲಿ ಇತರ ಪಕ್ಷಗಳಿಗಾಗಿ ಅನೇಕ ಚುನಾವಣೆಗಳಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದವರು. ಹಾಗಾಗಿ ಅವರು ಕೆಲವೇ ವರ್ಷಗಳ ಅವಧಿಯಲ್ಲಿ ತಂತ್ರಜ್ಞಾನ ನುರಿತ ಯುವಕರ ಪಾಲಿಗೆ ಒಂದು ರೀತಿಯಲ್ಲಿ ಆರಾಧ್ಯ ವ್ಯಕ್ತಿಯಾಗಿ ಹೊರಹೊಮ್ಮಿದರು. ಅವರಿಗೀಗ ತಮ್ಮ ಪೂರ್ವಜರು ಮತ್ತು ಸಮಕಾಲೀನರು ಅನುಸರಿಸಿದ ಸಾಂಪ್ರದಾಯಿಕ ಮತ್ತು ಸುಲಭ ಸಾಧ್ಯ ಪ್ರಯೋಗಗಳ ಅರಿವು ಇದೆ.

ಅಂತಿಮವಾಗಿ ಬಿಜೆಪಿ ನಾಯಕತ್ವವು ತಮ್ಮ ಪಾಳಯದಿಂದ ಚುನಾವಣಾ ಪ್ರವೀಣ ನಿರ್ವಾಹಕನನ್ನು ಹೊರಹಾಕಿ ಆ ಬಳಿಕ ಪಶ್ಚಾತ್ತಾಪವನ್ನೂ ಪಟ್ಟಿತು. ಹಾಗಂತ ಅದು ಎಲ್ಲಿಯೂ ಬಹಿರಂಗವಾಗಿ ಅದನ್ನು ಒಪ್ಪಿಕೊಳ್ಳಲಿಲ್ಲ ಎನ್ನುವ ಮಾತು ಬೇರೆ. ಅಷ್ಟಕ್ಕೂ ಅವರು ಅದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಯಾಕೆಂದರೆ ಅಂತಹ ನಿರ್ಧಾರವನ್ನು ‘ಎಲ್ಲ ಜವಾಬ್ದಾರಿ ಕೊನೆಗೊಳ್ಳುವ’ ಉನ್ನತ ಸ್ಥಳದಲ್ಲೇ ಕೈಗೊಳ್ಳಲಾಗಲಿಲ್ಲವೇ?’ ಎಂಬ ಪ್ರಶ್ನೆಯನ್ನು ಬಿಡುಬೀಸಾಗಿ ಕೇಳಬಹುದು.

ಈ ನಡುವಿನ ಅವಧಿಯಲ್ಲಿ ಆರ್.ಜೆ.ಡಿ ಮತ್ತು ಜೆಡಿಯು ನಡುವಿನ ಮೈತ್ರಿಕೂಟವನ್ನು ರೂಪಿಸುವಲ್ಲಿ ಕಿಶೋರ್ ಪ್ರಮುಖ ಪಾತ್ರವನ್ನೇ ನಿರ್ವಹಿಸಿದರು. 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ತನ್ನ ಹಳೆಯ ಮಿತ್ರ ಲಾಲೂ ಪ್ರಸಾದ್ ಯಾದವ್ ಜೊತೆಗೇ ಉಳಿದುಕೊಂಡಿತು. ಬಿಜೆಪಿ ಸೋಲಿಗೆ ತಲೆಬಾಗಿದ ಚುನಾವಣೆಯದು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸೋತ ಮೊದಲ ದೊಡ್ಡ ರಾಜ್ಯದ ಚುನಾವಣೆ ಅದಾಗಿತ್ತು.

ಆ ಬಳಿಕ ಬಂದಿದ್ದು 2021ರ ಪಶ್ಚಿಮ ಬಂಗಾಲ ಚುನಾವಣೆ. ಅದರಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಪ್ರಶಾಂತ್ ಕಿಶೋರ್. ಬಹುಹಂತದ ಆ ಚುನಾವಣೆಯಲ್ಲಿ ಕೊನೆಯ ಹಂತದ ವರೆಗೂ ಮೋದಿ ಮತ್ತು ಅಮಿತ್ ಶಾ ಜೋಡಿ ಇಬ್ಬರೂ ದಣಿವರಿಯದೇ ಕೆಲಸ ಮಾಡಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ಈಗ ರಂಗ ಸಿದ್ಧವಾಗಿದೆ. ಹಲವಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿರೋಧಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ಎಸ್.ಐ.ಆರ್ ಹಾಗೂ ವೋಟ್ ಚೋರಿ ವಿರುದ್ಧ ಅತ್ಯಂತ ಬಿರುಸಿನ ಪ್ರಚಾರ ನಡೆಸಿದ್ದರ ಪರಿಣಾಮವಾಗಿ ‘ಗೆದ್ದರೂ ಗೆಲ್ಲಬಹುದು’ ಎಂಬ ಲೆಕ್ಕಾಚಾರದಲ್ಲಿ ನಿರತವಾಗಿದೆ.

ಆಡಳಿತ ವಿರೋಧಿ ಭಾವನೆ

ಈ ಎಲ್ಲ ಘೋಷಣೆ, ಪ್ರಚಾರ, ಹೋರಾಟ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನಾಟಿರುವುದರ ನಡುವೆಯೇ ಎನ್.ಡಿ.ಎ ವಿರುದ್ಧ ಇತರ ಅಂಶಗಳು ಕೂಡ ಮಹತ್ವ ಪಡೆಯುತ್ತವೆ. ಜನರಲ್ಲಿ ಬೇರುಬಿಟ್ಟಿರುವ ಆಡಳಿತ ವಿರೋಧಿ ಭಾವನೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಷ್ಟೇನು ಶ್ಲಾಘನೀಯವಲ್ಲದ ಕೆಲಸಗಳು, ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯ ಬಗೆಗಿನ ಅನುಮಾನಗಳು ಆಡಳಿತ ಮೈತ್ರಿಕೂಟವನ್ನು ಅಧಿಕಾರದಿಂದ ಕೆಳಕ್ಕಿಳಿಸಬಹುದು. ಹಾಗೇನಾದರೂ ಆದರೆ ವಿರೋಧ ಪಕ್ಷಗಳು ಪ್ರಮಾಣ ವಚನ ಸಮಾರಂಭದ ವರೆಗೂ ಸಂಭ್ರಮದಿಂದ ಸಾಗಬಹುದು.

ಈ ವಿರೋಧ ಪಕ್ಷಗಳು, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷ ತಮ್ಮ ಆಕ್ರಮಣಕಾರಿ ಪ್ರಚಾರದಿಂದ ಜನರನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ನಂಬಿಕೊಂಡಿದೆ. ಮೂವರು ಚುನಾವಣಾ ಆಯುಕ್ತರ ವಿರುದ್ಧ, ಅದರಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ವೋಟ್ ಚೋರಿಯ ಆರೋಪಗಳು ಜನರ ಮನಸ್ಸಿನಲ್ಲಿ ಭೀತಿಯನ್ನು ತುಂಬಿರುವುದಂತೂ ನಿಶ್ಚಿತ. ಚುನಾವಣೆಯಲ್ಲಿ ಕೆಟ್ಟದ್ದೇನಾದರೂ ಮಾಡಿದರೆ ಅದು ಚುನಾವಣಾ ಆಯೋಗವೇ ಎಂಬ ಭಾವನೆ ಸ್ಥಿರವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಎನ್.ಡಿ.ಎ ಬಹುಮತವನ್ನು ಪಡೆಯದೇ ಹೋದರೆ, ಜೊತೆಗೆ ಮಹಾಘಟಬಂಧನ್ ಕೂಡ ಅಂತಹ ಬಲವನ್ನು ಪಡೆಯಲು ವಿಫಲವಾದರೆ ತ್ರಿಶಂಕು ವಿಧಾನಸಭೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಆಯೋಗವು ಮುಂದಿನ ಎಸ್.ಐ.ಆರ್. ಪ್ರಕ್ರಿಯೆ ನಡೆಸಲಿರುವ ರಾಜ್ಯಗಳಿಗೆ ಬಿಹಾರದಿಂದ ಒಂದು ಸ್ಪಷ್ಟ ಸಂದೇಶವಂತೂ ರವಾನೆಯಾಗುತ್ತದೆ.

ಒಂದು ವೇಳೆ ಜನರ ತೀರ್ಪೇನಾದರೂ ಆಡಳಿತಾರೂಢ ಮೈತ್ರಿಕೂಟದ ಪರವಾಗಿ ಬಂದರೆ ಇದು ನಮ್ಮಿಂದ ‘ಕಿತ್ತುಕೊಂಡ ವಿಜಯ’ ಎಂದು ವಿರೋಧ ಪಕ್ಷಗಳು ಖಂಡಿತವಾಗಿ ಬೊಬ್ಬೆ ಹೊಡೆಯುತ್ತವೆ. ಮುಂದಿನ ನಾಲ್ಕು ವರ್ಷಗಳ ಕಾಲ, ಅಂದರೆ 2029ರ ಲೋಕಸಭಾ ಚುನಾವಣೆ ನಡೆಯುವ ತನಕವೂ ಈ ಕೂಗು ಮುಂದುವರಿಯುತ್ತದೆ. ಚುನಾವಣಾ ಆಯೋಗದ ತಟಸ್ಥ ನೀತಿಯನ್ನು ಪ್ರತಿಬಾರಿಯೂ ಪ್ರಶ್ನೆಗೆ ಗುರಿಪಡಿಸಲಾಗುತ್ತದೆ.

ಚುನಾವಣಾ ಆಯೋಗ ತನ್ನ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಅದು ಮೊದಲ ಬಾರಿಗೆ 1989ರಲ್ಲಿ ಬಿಡುಗಡೆಯಾದ Honey, I Shrunk the Kids ಎಂಬ ಅಮೆರಿಕದ ವೈಜ್ಞಾನಿಕ ಕಾದಂಬರಿ ಆಧಾರಿತ ಚಲನಚಿತ್ರದ ಶೀರ್ಷಿಕೆಯಲ್ಲಿ ಅಡಕವಾಗಿದ್ದ ಕಾರ್ಯವನ್ನೇ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಬಹಿರಂಗವಾಯಿತು.

ಆಯೋಗದ ಅದಕ್ಷತೆಯ ಮುದ್ರೆ

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಗಳು ಸಣ್ಣದಾಗಿಲ್ಲ. ತೀರ್ಪನ್ನೇ ಬದಲಿಸುವಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ಕಿತ್ತುಹಾಕುವ ಮೂಲಕ ಈ ಮತದಾರರ ಪಟ್ಟಿಗಳು ಸುಕ್ಕುಗಟ್ಟಿವೆ. ಈ ಮತದಾರರ ಪಟ್ಟಿ ಎರಡು ಕಾರಣಕ್ಕೆ ಇತಿಹಾಸದಲ್ಲಿ ಸಾಕ್ಷಿಯಾಗಿ ಉಳಿಯಲಿವೆ; ಒಂದು ಚುನಾವಣಾ ಪ್ರಕ್ರಿಯೆಯ ತಿರುಚುವ ಕಾರ್ಯಕ್ಕೆ ಮತ್ತು ನಕಲಿ ಹೆಸರುಗಳು ಅಥವಾ ಮೃತಪಟ್ಟವರು ಅಥವಾ ವಲಸೆ ಹೋದವರ ಹೆಸರುಗಳನ್ನು ತೆಗೆದುಹಾಕಿದ ಆಯೋಗದ ಅದಕ್ಷತೆ.

ಎರಡು ಸೀಕ್ವೆಲ್ ಮತ್ತು ಒಂದು ಟಿವಿ ಧಾರವಾಹಿಯನ್ನು ಹೊಂದಿರುವ ಆ ಅಮೆರಿಕದ ಚಲನಚಿತ್ರದಂತೆ, ಬಿಹಾರದಲ್ಲಿ ಉದ್ಭವಿಸಿದ ಸ್ಥಿತಿಯು (SIR) ಇತರ ಹಲವು ರಾಜ್ಯಗಳಲ್ಲಿ ಮತ್ತು ಅಂತಿಮವಾಗಿ ದೇಶಾದ್ಯಂತ ‘ಮತದಾರರ ಪಟ್ಟಿಗಳು ಕುಗ್ಗಲು’ ಕಾರಣವಾಗದೇ ಇರಲಿ ಎಂಬ ಆಶಯ ನನ್ನದು. ಹಾಗೇನಾದರೂ ಆದರೆ ಭಾರತವು ಸರ್ವಾಧಿಕಾರಿಯ ಆಡಳಿತವಾಗಿ ಪರಿವರ್ತನೆ ಹೊಂದುವುದಕ್ಕೆ ದಾರಿಯಾಗಲಿದೆ.

ಈಗ ಚುನಾವಣಾ ಆಯೋಗವು ಬಿಹಾರದಲ್ಲಿ ಔಪಚಾರಿಕವಾಗಿ ಅಧಿಕಾರದ ಕೋಟೆಗೆ ಲಗ್ಗೆ ಹಾಕಲು ರೇಸ್-ಗೆ ಚಾಲನೆ ನೀಡಿರುವುದರಿಂದ ಎರಡು ಮುಖ್ಯ ಪ್ರತಿರೋಧಿಗಳು ಹೊಸ ಯೋಚನೆಗಳು ಕೊರತೆ ಎದುರಿಸುತ್ತಿದ್ದಾರೆ ಎಂಬುದಂತೂ ಸತ್ಯ. ಅದರಲ್ಲಿ ಒಂದೆಂದರೆ, ಚುನಾವಣೆ ದಿನಾಂಕಗಳು ಪ್ರಕಟವಾದ ಬೆನ್ನಲ್ಲೇ ಅಮಿತ್ ಶಾ ಅವರು ನೀಡಿದ ಹೇಳಿಕೆ, ‘ಎನ್.ಡಿ.ಎ ಬಿಹಾರವನ್ನು ಜಂಗಲ್ ರಾಜ್ ನಿಂದ ಹೊರತಂದಿದೆ.’

ಇಂತಹ ಹೇಳಿಕೆಯನ್ನು ಹಿಂದೆಯೂ ಕೇಳಿದ್ದೀರಾ ಎಂದು ಜನರನ್ನು ಕೇಳಿದರೆ ಅವರು ‘ಹೌದು’ ಎಂದೇ ಉತ್ತರಿಸುತ್ತಾರೆ. ಯಾಕೆಂದರೆ ಅವರು ಒಮ್ಮೆಯಲ್ಲ ಅನೇಕ ಬಾರಿ ಆ ಹೇಳಿಕೆಯನ್ನು ಕೇಳಿದ್ದಾರೆ.

2004ರ ಚುನಾವಣೆಯಲ್ಲಿ ಉಂಟಾದ ಸೋಲಿನ ಬಳಿಕ ಬಿಜೆಪಿಯಲ್ಲಿನ ರಾಜಕೀಯ ಪರಿವರ್ತನೆಯ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಒಮ್ಮೆ ಹೇಳಿದ್ದರು, ‘ಆಯಾಸಗೊಂಡಿದ್ದೇನೆ, ಆದರೆ ನಿವೃತ್ತನಾಗಿಲ್ಲ,’ ಎಂದು. ಅಂತಿಮವಾಗಿ ಆಯಾಸ ಮತ್ತು ಹೊಣೆಗಾರಿಕೆಗಳು ಪರಿಣಾಮ ಬೀರುವಲ್ಲಿ ಯಶಸ್ವಿಯಾದವು. ಅವರು ಹಿಂದೆ ಸರಿದಿದ್ದರು.

ಜೆಡಿಯುಗೆ ಇದು ಕೊನೆಯ ಅವಕಾಶ

ಬಿಜೆಪಿ ಇದನ್ನು ಒಪ್ಪಿಕೊಳ್ಳದೇ ಇರಬಹುದು. ಆದರೆ ನಿತೀಶ್ ಕುಮಾರ್ ಅವರ ವ್ಯಕ್ತಿತ್ವವು ಬಿಹಾರದಲ್ಲಿ ಎನ್.ಡಿ.ಎಗೆ ಆಗಿರುವ ಆಯಾಸವನ್ನು ಮೂರ್ತಿಕರಿಸಿದರೆ ಅಚ್ಚರಿಯಿಲ್ಲ. ಇನ್ನೂ ವಿವರವಾಗಿ ಹೇಳಬೇಕೆಂದರೆ ಕನಿಷ್ಠ ಈಗಿನ ಸ್ವರೂಪದಲ್ಲಿ ಜೆಡಿಯುಗೆ ಇದು ಕೊನೆಯ ಚುನಾವಣೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಂತಹುದೊಂದು ಯೋಚನೆ ಪಕ್ಷದ ಅನೇಕ ಮಂದಿ ಹಿರಿಯರ ಮನಸ್ಸಿನಲ್ಲಿ ಹಾದುಹೋಗಿದ್ದರೆ ಅಚ್ಚರಿಯಿಲ್ಲ. ಆದರೆ ಲೂಲು ಅವರಿಗೆ ವಿಶ್ವಾಸಾರ್ಹ ಪರ್ಯಾಯವನ್ನು ಹುಟ್ಟಿಹಾಕಿದ ವ್ಯಕ್ತಿಯ ಮನಸ್ಸಿನಲ್ಲಿ ಇದು ಸುಳಿದಿರಲಿಕ್ಕಿಲ್ಲ.

ಆದರೆ ಅವೆಲ್ಲವೂ ಒಂದು ಕಾಲದ ಕಥೆಯಾಯಿತು. ಅದನ್ನು ನಾವು ರಾಜಕೀಯದಲ್ಲಿ ಇನ್ನೂ ಆಸಕ್ತಿ ಬೆಳೆಸಿಕೊಳ್ಳಬೇಕಿರುವ ಮುಂದಿನ ತಲೆಮಾರಿನ ತಲೆಗೆ ತುಂಬಬೇಕಾದ ಸುದ್ದಿ.

ಮಹಾಘಟಬಂಧನ್ ನಾಯಕರಲ್ಲಿ ಬಹುತೇಕರು ಇನ್ನೂ ಪರಸ್ಪರ ಜಗಳವಾಡುತ್ತಲೇ ಇದ್ದಾರೆ. ಇನ್ನು ಅಷ್ಟೇನು ಗಟ್ಟಿಕಾಳುಗಳಲ್ಲದ ಪ್ರತಿನಿಧಿಗಳು ಟಿವಿಯಲ್ಲಿ ತಮ್ಮ ಪಕ್ಷದ ಹಕ್ಕುಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಜೊತೆಗೆ ತಮ್ಮ ಮುಖ್ಯಸ್ಥರ ನಡುವೆ ಬಗೆಹರಿಸಲೇಬೇಕಾದ ವಿಷಯಗಳ ಬಗ್ಗೆ ಗುಟ್ಟುಗುಟ್ಟಾಗಿ ಮಾತನಾಡುತ್ತಿದ್ದಾರೆ.

ಮುಂದಿನ ಕೆಲವು ವಾರಗಳು ಅನೇಕ ಸಮಸ್ಯೆಗಳು ತೆರೆಸರಿದು ಬರುವ ಸಾಧ್ಯತೆಗಳಿವೆ. ಆ ಮೂಲಕ ಬಿಹಾರದಲ್ಲಿ ಜಾತಿ ಆಧಾರಿತ ಪಕ್ಷಗಳ ‘ಅಸ್ತಿತ್ವ’ ಮತ್ತು ‘ನಿಷ್ಠೆ’ ಮುಖ್ಯ ಅಂಶವಾಗಿ ಉಳಿಯಲಿದೆಯೇ ಎಂಬುದು ಬಹಿರಂಗವಾಗಲಿದೆ.

‘ರೇವ್ಡಿ’ಗಳ ಲಾಭ ಪಡೆದುಕೊಳ್ಳುವ ಪ್ರಯತ್ನ

ಇತ್ತೀಚಿನ ಎಲ್ಲ ಚುನಾವಣೆಗಳಿಗೂ ಮುನ್ನ ಆಗಿರುವಂತೆ ಚುನಾವಣೆ ಆಯೋಗ ಕೊಟ್ಟಿರುವ ‘ಕಾಲಾವಕಾಶ’ದ ಸದುಪಯೋಗ ಮಾಡಿಕೊಂಡು ಮೋದಿ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಿರುವ ‘ರೇವ್ಡಿ’ (ಉಚಿತ ಕೊಡುಗೆ)ಗಳ ಲಾಭಪಡೆದುಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಲಿದೆಯೇ ಎಂಬುದನ್ನು ಗಮನಿಸಬೇಕು. ಹಸಿವು ಮತ್ತು ಅಪೌಷ್ಟಿಕತೆ ಸಾಂಕ್ರಾಮಿಕ ಸ್ವರೂಪಕ್ಕೆ ತಲುಪುವುದನ್ನು ತಡೆಯಲು ಆರ್ಥಿಕ ಉದಾರತೆಯಾಗಿ ನೀಡಿದ ‘ಧಾನಧರ್ಮ’ಗಳು ರಾಜಕಾರಣದ ಅಸ್ತಿತ್ವಕ್ಕೆ ಆಸರೆಯಾಗುವುದು ಅದರ ಉದ್ದೇಶ.

ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸರ್ಕಾರವು ‘ಉನ್ನತಾಧಿಕಾರದ ಜನಸಂಖ್ಯಾ ಅಭಿಯಾನ’ವನ್ನು ಆರಂಭಿಸಲಿದೆ ಎಂದು ಘೋಷಿಸಿದ್ದರು. ಅದನ್ನು ಅವರು ಅನೇಕ ಭಾಷಣಗಳಲ್ಲಿ ಪುನರುಚ್ಚರಿಸಿದ್ದಾರೆ ಎಂಬುದನ್ನೂ ಗಮನಿಸಬೇಕು.

ಅವರ ಮಾದರಿಯಂತೂ ಸಿದ್ಧವಾಗಿದೆ. ತಮ್ಮದೇ ರಾಷ್ಟ್ರದಲ್ಲಿ ಹಿಂದುಗಳನ್ನು ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ಕುಗ್ಗಿಸುವ ‘ಇಸ್ಲಾಮಿಸ್ಟ್ ಪಿತೂರಿ’ಯನ್ನು ಚಿತ್ರಿಸಲಿದೆ.

ಈಗ ಎದುರಾಗಿರುವ ಪ್ರಶ್ನೆ ಏನೆಂದರೆ. ಚುನಾವಣೆಯ ಮುನ್ನಾದಿನದಂದು ಬಿಜೆಪಿ ಯಾಕೆ ಧ್ರುವೀಕರಣದ ಸಂಗತಿಗಳನ್ನು ಪಠಿಸುತ್ತಿದೆ? ಉತ್ತರ ತುಂಬಾ ಸರಳ, ಇನ್ನೊಂದು ಜನಾದೇಶವನ್ನು ಪಡೆಯಲು ಅದರ ಬಳಿ ಅಷ್ಟೇ ಗಟ್ಟಿಯಾದ ಬೇರೆ ವಿಷಯಗಳಿಲ್ಲ.

ಬಹುಮತವೆಂಬ ಶಿಖರದಿಂದ ಬಿಜೆಪಿ ಪತನ ಹೊಂದಲು ಕಾರಣವಾಗಿರುವ ಸಂಘ ಪರಿವಾರದ ಆಂತರಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದ ಸಂಗತಿಗಳೆಂದರೆ ಜೀವನೋಪಾಯದ ಬಗ್ಗೆ ಜನರಲ್ಲಿ ಹುಟ್ಟಿಕೊಂಡ ಕಳವಳ, ಅಭೂತಪೂರ್ವವಾದ ನಿರುದ್ಯೋಗ ಸಮಸ್ಯೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮುಂತಾದವು.

ಕಾಡೀತೇ ಅಸ್ಮಿತೆಯ ಭಯ?

‘ವೋಟ್ ಚೋರಿ’ ವಿರುದ್ಧದ ಪಾದಯಾತ್ರೆಗಳ ಸಂದರ್ಭದಲ್ಲಿ ಜನರು ಹೊರಬಂದ ರೀತಿಯಲ್ಲಿಯೇ ಚುನಾವಣೆ ಪ್ರಚಾರದ ವೇಳೆ ಸ್ಪಂದಿಸುತ್ತಾರೆಯೇ ಎಂಬುದು ಪ್ರಚಾರ ಆರಂಭವಾದ ಬಳಿಕವೇ ಹೇಳಲು ಸಾಧ್ಯ. ಮುಂದಿನ ಸುತ್ತಿನ ಇವಿಎಂ ಕೆಲಸಗಳೆಲ್ಲ ಮುಗಿದು ಜನರ ದೈನಂದಿನ ಚಿಂತೆಗಳಿಗಿಂತ ‘ಅಸ್ಮಿತೆ’ ಮತ್ತು ‘ಇತರರ ಭಯ’ವೇ ಜನರನ್ನು ಕಾಡಲು ಶುರುಮಾಡಿದರೆ ಏನಾಗುತ್ತದೆ ಎಂಬುದೂ ಕುತೂಹಲಕಾರಿ.

ಆದರೂ ಈ ಕ್ಷಣದಲ್ಲಿ ಖಚಿತವಾಗಿ ಹೇಳಬಹುದಾದ ಸಂಗತಿ ಎಂದರೆ, ‘ತ್ಯಾಗ’ ಮತ್ತು ‘ತ್ಯಾಗಿಗಳಿಗೆ’ ವಿಶೇಷ ಆದ್ಯತೆ ಸಿಗುತ್ತದೆ. 1919-20ರ ಅವಧಿಯ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಅವರು ತಮ್ಮ ಅಲಂಕಾರದ ಬಟ್ಟೆಗಳನ್ನು ತ್ಯಜಿಸಿ ಕಚ್ಚೆ ಪಂಚೆ ಮತ್ತು ಬಿಳಿ ಶಾಲು ಧರಿಸದೇ ಹೋಗಿದ್ದರೆ ಚಳವಳಿಗೆ ಅಂತಹ ಗೆಲುವು ಸಿಗುತ್ತಿರಲಿಲ್ಲ.

ಇತ್ತೀಚಿನ ದಿನಮಾನಗಳಲ್ಲಿ ಹಾಗೆ ಗುರುತಿಸಲ್ಪಟ್ಟವರು ಅರವಿಂದ ಕೇಜ್ರಿವಾಲ್. 2013ರಲ್ಲಿ ಕಡಿಮೆ ಸಂಪನ್ಮೂಲ ಹಾಗೂ ಯಾವುದೇ ಮಹತ್ವದ ಸಂಘಟನೆ ಇಲ್ಲದೆಯೂ ಮತದಾರರಲ್ಲಿ ಭರವಸೆ ಮೂಡಿಸಬಹುದು ಎಂಬುದನ್ನು ತೋರಿಸಿಕೊಟ್ಟರು. ಮೋದಿ ಅವರು ಕೂಡ ತಮ್ಮ ಕುಟುಂಬ ಮತ್ತು ಸಾಮಾನ್ಯ ಜೀವನವನ್ನು ತ್ಯಜಿಸಿ, ತನ್ನ ಸ್ವಂತಕ್ಕಿಂತ ಕರ್ತವ್ಯವೇ ಮುಖ್ಯವೆಂದು ಹೇಳಿಕೊಂಡಿರುವುದನ್ನು ಗಮನಿಸಬಹುದಾಗಿದೆ.

ಆದಾಗ್ಯೂ ಪ್ರಶಾಂತ್ ಕಿಶೋರ್ ಅವರು ಒಂದು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿ ಕಿಂಗ್ ಮೇಕರ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಬದಲಾವಣೆಯ ಮುನ್ಸೂಚನೆ ಹೊಸದಲ್ಲ

ಹಿಂದೆಯೂ ಎರಡು ಪ್ರಮುಖ ಸಂದರ್ಭಗಳಲ್ಲಿಯೂ ಬಿಹಾರ ಬದಲಾವಣೆಯ ಮುನ್ಸೂಚನೆಯನ್ನು ನೀಡಿತ್ತು. ಅಂತಹ ಒಂದು ಮಹತ್ವದ ಚಳವಳಿ ಎಂದರೆ 1917ರ ಬಿಹಾರ ಇಂಡಿಗೋ ರೈತರ ದಂಗೆ. ಅದನ್ನು ಚಂಪಾರಣ್ ಸತ್ಯಾಗ್ರಹ ಎಂದೂ ಕರೆಯಲಾಗುತ್ತದೆ.

ಸುಮಾರು ಆರು ದಶಕಗಳ ಬಳಿಕ, ರಾಜ್ಯದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಜೆಪಿ ಚಳವಳಿ ಎದ್ದು ನಿಂತಾಗ ಆಗ ವಸಾಹತುಶಾಹಿಗಳು ಅಧಿಕಾರದಲ್ಲಿ ಇರಲಿಲ್ಲ. ಆದರೆ ರಾಜಕೀಯ ಸ್ವಚ್ಛಂದತೆ ಮತ್ತು ಸರ್ವಾಧಿಕಾರಿ ಧೋರಣೆಗಳನ್ನು ಜನ ಸ್ವೀಕರಿಸುವುದಿಲ್ಲ ಎಂಬುದನ್ನು ಆಗಿನ ನಾಯಕರಿಗೆ ಪಾಠ ಕಲಿಸಬೇಕಿತ್ತು.

ಎರಡೂ ಸಂದರ್ಭಗಳಲ್ಲಿ ಜನ ಒಗ್ಗಟ್ಟಿನಿಂದ ನಿಂತಿದ್ದನ್ನು ಗಮನಿಸಬಹುದು. ಮುಖ್ಯವಾಗಿ ಜನರ ಮನಸ್ಸಿನಲ್ಲಿ ಆಗ ಯಾವುದೇ ‘ಬಹುಸಂಖ್ಯಾತವಾದ’ ಅಚ್ಚೊತ್ತಿರಲಿಲ್ಲ.

ಹಾಗಿದ್ದೂ, ಅಂತಹ ಒಳಗೊಳ್ಳುವ ಪರಂಪರೆಯಿಂದ ಹೊರಹೊಮ್ಮಿದ ಜನರು ತಮ್ಮ ನಡುವೆ ಬಿತ್ತಲಾದ ಒಡೆದು ಆಳುವ ನೀತಿಯನ್ನು ಮರೆತುಬಿಟ್ಟಿದ್ದಾರೆಯೇ ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ.

(Disclaimer: ದ ಫೆಡರಲ್‌ ಎಲ್ಲಾ ದೃಷ್ಟಿಕೋನಗಳಿಂದ ಲೇಖನಗಳನ್ನು ಪ್ರಕಟಿಸುತ್ತದೆ. ಈ ಲೇಖನದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ದ ಫೆಡರಲ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ.)

Read More
Next Story