ಬಿಹಾರ ಚುನಾವಣಾ ಕಣ: ರಾಜಕೀಯದ ಅಬ್ಬರದಲ್ಲಿ ದಿವ್ಯಾ ಗೌತಮ್ ಎಂಬ ಭರವಸೆಯ ಆಶಾಕಿರಣ
x
ಬಿಹಾರದ ದಿಘಾ ವಿಧಾನಸಭಾ ಕ್ಷೇತ್ರದಿಂದ ಸಿಪಿಐ(ಎಂಎಲ್) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದಿವ್ಯಾ ಗೌತಮ್ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು.

ಬಿಹಾರ ಚುನಾವಣಾ ಕಣ: ರಾಜಕೀಯದ ಅಬ್ಬರದಲ್ಲಿ ದಿವ್ಯಾ ಗೌತಮ್ ಎಂಬ ಭರವಸೆಯ ಆಶಾಕಿರಣ

ಬಿಹಾರದ ದಿಘಾ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸುತ್ತಿರುವ ಮಹಾಘಟಬಂಧನ್ ಅಭ್ಯರ್ಥಿಯ ಹೆಸರು ದಿವ್ಯಾ ಗೌತಮ್. ಬಿಹಾರ ರಾಜಕೀಯದಲ್ಲಿ ಅವರದ್ದು ಹೊಸ ಮುಖ. ಅವರ ಬೇರು ವಂಶಪಾರಂಪರ್ಯದಲ್ಲಿ ಇಲ್ಲ. ಪಿತೃಪ್ರಭುತ್ವಕ್ಕೆ ಸವಾಲು ಹಾಕಿರುವ ಈಕೆ ಬದಲಾವಣೆಯ ಆಶಾಕಿರಣವಾಗಿ ಕಾಣುತ್ತಿದ್ದಾರೆ.


ಬಿಹಾರ ವಿಧಾನಸಭಾ ಚುನಾವಣೆಯ ಸದ್ದು-ಗದ್ದಲವೆಲ್ಲ ಮುಗಿದು ಫಲಿತಾಂಶ ಘೋಷಣೆಯಾದ ನಂತರ, ದಿವ್ಯಾ ಗೌತಮ್ ಎಂಬ ಹೆಸರೇ ಮುಚ್ಚಿಹೋಗಿ ಕಟ್ಟಕಡೆಗೆ ಮರೆತೇ ಹೋಗುವ ಸಾಧ್ಯತೆ ಅಧಿಕವಾಗಿದೆ...

ಹಾಗಿದ್ದೂ ಕಳೆದ ಕೆಲವು ದಿನಗಳಿಂದ, ಅವರ ಅಸಾಂಪ್ರದಾಯಿಕ ಮತ್ತು ಸಾಮಾಜಿಕ-ರಾಜಕೀಯ ಶೌರ್ಯವನ್ನು ಬಣ್ಣಿಸುವ ತರಾವರಿ ವರದಿಗಳು ಹತ್ತಾರು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ಈ ಕಥೆಗಳು, ವರದಿಗಳು ಅವರು ಭಾರತಕ್ಕೆ ಭರವಸೆಯ ಸಂಕೇತವಾಗಿದ್ದಾರೆ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಹೇಳಬಹುದಾಗಿದೆ.

ದಿವ್ಯಾ ಗೌತಮ್ ಅವರು ಅನುಸರಿಸುತ್ತಿರುವ ಕಾರ್ಯತಂತ್ರಗಳನ್ನು ಗಮನಿಸಿದರೆ ಅವರು ತಮ್ಮನ್ನು ಬದಲಾವಣೆಯ ವಾಹಕರೆಂದು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಸಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರದ ಹೊಚ್ಚಹೊಸ ಕನಸಿಗೆ ಮುನ್ನುಡಿಯಾಗುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.

ರಾಜಕೀಯ ನಂಟಿಲ್ಲ

ವಿಪರ್ಯಾಸವೆಂದರೆ, ಅವರು ಚುನಾವಣೆಯಲ್ಲಿ ಗೆಲುವಿನ ಶಕ್ತಿಯಾಗಿ ಹೊರಹೊಮ್ಮದೇ ಇರಬಹುದು. ಯಾಕೆಂದರೆ ಅವರು ಪ್ರತಿನಿಧಿಸುತ್ತಿರುವ ಪಕ್ಷ, ಅಸಾಮಾನ್ಯವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನ್-ವಾದಿ) ಲಿಬರೇಷನ್. ಅವರನ್ನು ಪಾಟ್ನಾದ ಈಗಿನ ನಗರ ಸಮೂಹದ ಭಾಗವಾದ ದಿಘಾದಲ್ಲಿ, ಎರಡು ಬಾರಿ ಶಾಸಕರಾದ ಭಾರತೀಯ ಜನತಾ ಪಕ್ಷದ ಸಂಜೀವ್ ಚೌರಾಸಿಯ ವಿರುದ್ಧ ಮಹಾಘಟಬಂಧನ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

ಕಾಂಗ್ರೆಸ್ ಮತ್ತು ಇತರ ಎದುರಾಳಿ ಪಕ್ಷಗಳಲ್ಲಿನ ವಂಶಪಾರಂಪರ್ಯವನ್ನು ವಿರೋಧಿಸಿ ದೇಶದಲ್ಲಿ ತನ್ನ ಚುನಾವಣಾ ಪ್ರಾಬಲ್ಯವನ್ನು ಹೆಚ್ಚಿಸಿದ ಬಿಜೆಪಿಯ ದ್ವಿಮುಖ ನೀತಿಗೆ ಚೌರಾಸಿಯವರ ಹಿನ್ನೆಲೆಗಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ. ಸುದೀರ್ಘ ಕಾಲ ಪಕ್ಷದ ನಾಯಕರಾಗಿದ್ದ ಮತ್ತು 2018ರಿಂದ 2023ರವರೆಗೆ ಐದು ವರ್ಷಗಳ ಅವಧಿಗೆ ಸಿಕ್ಕಿಂನ ರಾಜ್ಯಪಾಲರಾಗಿದ್ದ ಗಂಗಾ ಪ್ರಸಾದ್ ಅವರ ಪುತ್ರ ಈ ಸಂಜೀವ್ ಚೌರಾಸಿಯಾ. ಆ ಅವಧಿಯಲ್ಲಿ, ಅವರು ಏಕಕಾಲದಲ್ಲಿ ಮೇಘಾಲಯ ಮತ್ತು ಮಣಿಪುರಗಳ ಹೆಚ್ಚುವರಿ ರಾಜ್ಯಪಾಲರ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು.

ಇದಕ್ಕೆ ತದ್ವಿರುದ್ಧವಾಗಿ ದಿವ್ಯಾ ಗೌತಮ್ ಅವರಿಗೆ ಯಾವುದೇ ರಾಜಕೀಯದ ನಂಟಿಲ್ಲ. ಅವರ ಸಂಬಂಧಿಕರೊಬ್ಬರು (ಕಾಲಾನಂತರದಲ್ಲಿ ನಿಧನರಾದ) ಸಾರ್ವಜನಿಕ ವ್ಯಕ್ತಿಯಾಗಿದ್ದನ್ನು ಹೊರತುಪಡಿಸಿದರೆ ರಾಜಕೀಯದಲ್ಲಿ ಅವರು ಅನನುಭವಿ. ಇಷ್ಟಿದ್ದರೂ ಅವರು ಸಕಾರಾತ್ಮಕ ಚುನಾವಣಾ ಫಲಿತಾಂಶವನ್ನು ಪ್ರಾಥಮಿಕ ಉದ್ದೇಶವಾಗಿ ನೋಡುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಪಿತೃಪ್ರಧಾನ ಭಾರತದಲ್ಲಿ ...

ಪಿತೃಪ್ರಧಾನ ವ್ಯವಸ್ಥೆಯೇ ಆಳವಾಗಿ ಬೇರೂರಿರುವ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಬಿಹಾರದಲ್ಲಿ, ಮಹಿಳೆಯಾಗಿರುವುದು ಕಟು ಸತ್ಯ. ಆಕೆಯನ್ನು ಅಭ್ಯರ್ಥಿ ಎಂದು ಘೋಷಿಸಿದ ದಿನದಿಂದ ಮತ್ತು ಪ್ರಚಾರವು ಇನ್ನೂ ವೇಗವನ್ನು ಪಡೆದುಕೊಳ್ಳದೆ ಇರುವಾಗಲೇ ಅವರ ಬಗ್ಗೆ ಸಾಕಷ್ಟು ವಿಸ್ತೃತವಾಗಿ ಬರೆಯಲಾಯಿತು.

ಆದರೂ, ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡ ಚಲನಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಂಬಂಧಿ ಎಂಬ ಅಂಶವನ್ನೇ ಪ್ರಮುಖವಾಗಿ ಬಿಂಬಿಸಿದರು. ಅದರಲ್ಲಿ ಅಚ್ಚರಿಯೇನೂ ಇಲ್ಲ ಬಿಡಿ.

21ನೇ ಶತಮಾನದ ರಜತ ಮಹೋತ್ಸವದ ವರ್ಷದಲ್ಲಿ, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಕಾಲ ಎಂದು ಕೀರ್ತಿ ಪತಾಕೆ ಹಾರಿಸಿದ ಅವಧಿಯಲ್ಲಿ, ಒಬ್ಬ ಮಹಿಳೆಯ ಗುರುತನ್ನು ಜೀವಂತವಾಗಿರುವ ಅಥವಾ ಮೃತರಾದ, ಪ್ರಸಿದ್ಧ ಪುರುಷನೊಂದಿಗೆ ಸಂಬಂಧಿಸದ ಹೊರತು 'ಪೂರ್ಣ' ಎಂದು ಪರಿಗಣಿಸಲಾಗದು. ಇದು ನಿಜಕ್ಕೂ ದುಃಖದ ಸಂಗತಿ.

ಒಬ್ಬಾಕೆ ಯಶಸ್ವಿ ಮಹಿಳೆಯಾಗಲು, ಅವರು ಕನಿಷ್ಠ ಒಬ್ಬ ಸಾಧಕ ಮತ್ತು ಯಶಸ್ವಿ ಪುರುಷನ ತಾಯಿ, ಮಗಳು, ಹೆಂಡತಿ ಅಥವಾ ಸಹೋದರಿ ಆಗಿರಬೇಕಾಗುತ್ತದೆ.

ದಿವ್ಯಾ ಅವರ ಕುರಿತಾದ ಸುದ್ದಿಗಳನ್ನು ಹುಡುಕುವಾಗ ಪ್ರಕಟವಾದ ವರದಿಗಳಲ್ಲಿ, ಬಹುಪಾಲು ವರದಿಗಳು ಶೀರ್ಷಿಕೆಯಲ್ಲಿಯೇ ರಜಪೂತ್ ಅವರೊಂದಿಗಿನ ಅವರ 'ಸಂಬಂಧ'ವನ್ನು ಉಲ್ಲೇಖಿಸಿದ್ದವು. ಉಳಿದ ಕೆಲವೇ ವರದಿಗಳು ಈ ಅಂಶವನ್ನು ವರದಿಯ ಮುಖ್ಯ ಭಾಗದಲ್ಲಿ ಸೇರಿಸಿದ್ದವು. ಈ ಮೂಲಕ, ಭಾರತೀಯ ಮಾಧ್ಯಮವು, ತನ್ನನ್ನು ಸಮಾಜದ ಪ್ರತಿಬಿಂಬವೆಂದು ಪರಿಗಣಿಸಿದರೂ ಕೂಡ, ಇಂದಿಗೂ ಹಳೆಯ ಕಾಲದ ಚೌಕಟ್ಟಿನಲ್ಲಿಯೇ ಉಳಿದಿದೆ ಎಂಬುದು ಸಾಬೀತಾಯಿತು.

ಮಾಧ್ಯಮ ಮರೆತ ಸತ್ಯ

ಹಾಗಾದರೆ ರಜಪೂತ್ ಅವರನ್ನು ಹೊರತುಪಡಿಸಿ, ದಿವ್ಯಾ ಗೌತಮ್ ಯಾರು?

ಕೋಟ್ಯಾಂತರ ಭಾರತೀಯ ಮಹಿಳೆಯರಂತೆ ದಿವ್ಯಾ ಗೌತಮ್ ಅವರಿಗೂ ಸ್ವತಂತ್ರ ಮತ್ತು ವಿಶಿಷ್ಟವಾದ ಗುರುತು ಇದೆ. ಆ ಗುರುತನ್ನು ಕೇವಲ ತಿಳಿಯುವುದಷ್ಟೇ ಅಲ್ಲದೆ, ಭಾರತದ ಭವಿಷ್ಯಕ್ಕೆ ಭರವಸೆ ತುಂಬುವ ಸಾಮರ್ಥ್ಯ ಕೂಡ ಅವರಿಗೆ ಇದೆ ಎಂದು ಏಕಕಾಲದಲ್ಲಿ ಗುರುತಿಸಬೇಕು. ಇಂತಹ ಸತ್ಯಕ್ಕೆ ಈ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳು ಕೊಟ್ಟ ಗಮನ ಮಾತ್ರ ಅತ್ಯಲ್ಪ.

ಬಂಡಾಯದ ಮನೋಭಾವ ಮತ್ತು “ವಿಭಿನ್ನವಾಗಿ” ಇರುವುದು ಭಾರತ ಮತ್ತು ಭಾರತೀಯರಿಗೇನೂ ಹೊಸತಲ್ಲ. ಹಾಗೇನಾದರೂ ಆಗಿರದಿದ್ದರೆ, 'ಮಹಾತ್ಮ' ಎಂದು ಪೂಜಿಸಲ್ಪಡುವ ಭಾರತೀಯರು ಮತ್ತು ಅನೇಕ ಇತರ ಪ್ರತಿಭಾವಂತ ರಾಷ್ಟ್ರೀಯವಾದಿಗಳು ಕೇವಲ ವಕೀಲರು, ಶಿಕ್ಷಣ ತಜ್ಞರು, ಸಣ್ಣ ವ್ಯಾಪಾರಸ್ಥರು ಇಷ್ಟಕ್ಕೇ ಸೀಮಿತರಾಗಿರುತ್ತಿದ್ದರು.

ಮೇಲೆ ತಿಳಿಸಿದಂತಹ ಲಕ್ಷಣಗಳು ರಾಷ್ಟ್ರೀಯ ಚಳವಳಿಗೆ ಭುಜ ಕೊಟ್ಟ ಆ ಪೀಳಿಗೆಯ ಭಾರತೀಯರಲ್ಲಿ ಸಹಜವಾಗಿ ಬಂದಿರದಿದ್ದರೆ, ಭಾರತವು ಬ್ರಿಟಿಷ್ ವಸಾಹತುವಾಗಿಯೇ ಮುಂದುವರಿಯಬಹುದಿತ್ತು. ಆದರೆ, ಅದರ ಹಾದಿ ಭಿನ್ನವಾಗಿರುತ್ತಿತ್ತು ಮತ್ತು ಅಲ್ಲಿಯ ಜನರ ಗುಣಮಟ್ಟವೂ ಬೇರೆಯದೇ ಆಗಿರುತ್ತಿತ್ತು. ದೇಶದ ಗುಣಲಕ್ಷಣಗಳು ಎಷ್ಟು ಮತ್ತು ಯಾವ ರೀತಿಯಲ್ಲಿ ಭಿನ್ನವಾಗಿರುತ್ತಿದ್ದವು ಎಂಬುದು ಕಲ್ಪನೆಗೆ ಬಿಟ್ಟ ವಿಷಯ.

ಆದರೂ, 2014ರಿಂದ, 'ಸಾಮಾನ್ಯರಂತೆ' ಇರಲು ಮತ್ತು ಅಧಿಕಾರಕ್ಕೆ ಅನನುಕೂಲತೆ ಉಂಟುಮಾಡದೇ ಇರಲು ಹೆಚ್ಚಿನ ಸಾಮಾಜಿಕ ಒತ್ತಡವಿದೆ. 'ರಾಷ್ಟ್ರ ವಿರೋಧಿಗಳು' ಎಂದು ಹಣೆಪಟ್ಟಿ ಕಟ್ಟಬಹುದೆಂಬ ಭಯದಿಂದ ಅನೇಕ ಕುಟುಂಬಗಳು ತಮ್ಮಲ್ಲಿನ ಸಂಭಾವ್ಯ ಕ್ರಾಂತಿಕಾರಿಗಳನ್ನು ಹೊಸಕಿ ಹಾಕಿವೆ.

ರಾಜಕೀಯ ದಿಟ್ಟತನ

ಇಂತಹ ಕಾಲಘಟ್ಟದಲ್ಲಿ, ದಿವ್ಯಾ ಅವರ ಆಯ್ಕೆ ಅವರನ್ನು ಒಬ್ಬ ರಾಜಕೀಯ ಧೈರ್ಯಶಾಲಿ ಎಂದು ಚಿತ್ರಿಸುತ್ತವೆ. ಕಾಲೇಜು ಜೀವನದ ಆರಂಭದಲ್ಲಿ, ಅವರು 'ಪ್ರತಿರೋಧ ಸಿನಿಮಾ' ಎಂಬ ಉತ್ಸವದಲ್ಲಿ ಕೇವಲ ಚಲನಚಿತ್ರಗಳನ್ನು ವೀಕ್ಷಿಸುವುದಕ್ಕೆ ಮಾತ್ರ ಸೀಮಿತವಾಗದೆ, ಆ ಆಯ್ದ ಚಲನಚಿತ್ರಗಳಲ್ಲಿ ಪ್ರತಿಬಿಂಬಿತವಾದ ಯೋಚನೆಗಳನ್ನು ಪ್ರತಿಬಿಂಬಿಸುವ ಮುಖ್ಯವಾಹಿನಿಯ ಭಾಗವಾಗುವ ಆಯ್ಕೆ ಮಾಡಿಕೊಂಡರು.

ಸ್ಥಿರ ಸರ್ಕಾರಿ ಉದ್ಯೋಗಗಳಿಗೆ ಅವಕಾಶ ಕುಸಿಯುತ್ತಿರುವ ಹೊತ್ತಿನಲ್ಲಿಲ್ಲಿ, ಅವರು “ಸ್ಪರ್ಧಾತ್ಮಕ ಪರೀಕ್ಷೆಗಳ ಸಂತೆ”ಯಿಂದ ದೂರವಿದ್ದಿದ್ದು ಮಾತ್ರವಲ್ಲದೆ, ಮಧ್ಯಮ ವರ್ಗದ ಸ್ಥಿರತೆಯ ಕನಸನ್ನು ಖಚಿತಪಡಿಸುವ ಶಿಕ್ಷಕಿಯ ಹುದ್ದೆ ಮತ್ತು ನಿಯಮಿತ ಸರ್ಕಾರಿ ಉದ್ಯೋಗ ಎರಡನ್ನೂ ತ್ಯಜಿಸಿ ಬಂದವರು.

ಹೆಚ್ಚಿನ ಸಂಖ್ಯೆಯ ಕಾಲೇಜುಗಳಲ್ಲಿ ಎಡಪಂಥೀಯ ರಾಜಕೀಯವು ಪ್ರಚಲಿತವಿದ್ದಾಗ ದಿವ್ಯಾ ಕಾಲೇಜು ಮೆಟ್ಟಿಲು ಹತ್ತಲಿಲ್ಲ. ಆದರೆ ಅದೃಷ್ಟವಶಾತ್, ಅವರು ಪ್ರವೇಶ ಪಡೆದ ಪಾಟ್ನಾದ ಒಂದು ಹೆಸರಾಂತ ಕಾಲೇಜಿನಲ್ಲಿ, ಕನಿಷ್ಠ ವಿದ್ಯಾರ್ಥಿಗಳ ಒಂದು ವಿಭಾಗವಾದರೂ ನಾಟಕ, ರಾಜಕೀಯ ಚಲನಚಿತ್ರಗಳು ಮತ್ತು ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆಯನ್ನು ಮೆಚ್ಚುವಂತಿತ್ತು.

ಕಾಲೇಜು ಸಂಘಟನೆಯಿಂದ ಮುಖ್ಯವಾಹಿನಿಗೆ

ವಿದ್ಯಾರ್ಥಿ ಸಂಘದ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಅನೇಕ ವ್ಯಕ್ತಿಗಳು ತಮ್ಮ ಭವಿಷ್ಯದ ದಿನಗಳಲ್ಲಿ ರಾಜಕೀಯದಲ್ಲಿ ಬೇರೂರುವುದಿಲ್ಲ. ಹಾಗೆ ಮಾಡುವವರಲ್ಲಿ, ಬಹುಪಾಲು ಜನರು, ವಿಶೇಷವಾಗಿ 2014 ರಿಂದ, ಈ ಯುಗದ ಆಡಳಿತಾರೂಢ ಪಕ್ಷದಲ್ಲಿ ಭದ್ರವಾಗಿ ನೆಲೆಯೂರಿದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇನ್ನುಳಿದವರಿಗೆ, ವಿಶೇಷವಾಗಿ ದಿವ್ಯಾ ಅವರಂತೆ ಹೆಚ್ಚು ಮೂಲಭೂತವಾದಿ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಂಡವರಿಗೆ, ಪರಿಸ್ಥಿತಿ ಕಠಿಣವಾಗುತ್ತವೆ. ಯಾಕೆಂದರೆ, ಇಂದಿನ ಆಡಳಿತವು ವಿರೋಧಿಗಳನ್ನು ದೇಶದ್ರೋಹಿಗಳು, ಅರ್ಬನ್-ನಕ್ಸಲರು ಎಂದೆಲ್ಲಾ ಕರೆಯಲು ಸಿದ್ಧವಾಗಿರುತ್ತದೆ.

ಈ ವಾಸ್ತವದ ಅರಿವಿದ್ದರೂ, ದಿವ್ಯಾ ಅವರು ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯರಾಗಿ ಮತ್ತು (ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ) ಅಭ್ಯರ್ಥಿಯಾಗಿ ಸಫಲರಾಗದೆ ತಮ್ಮ ಪಾತ್ರವನ್ನು ಮುಗಿಸಿ, ಮೂಲ ಪಕ್ಷವಾದ ಸಿಪಿಐ (ಎಂಎಲ್) ಲಿಬರೇಷನ್‌ಗೆ ಸುಲಭವಾಗಿ ತೇರ್ಗಡೆ ಹೊಂದಿದರು. ಈಗ ಅವರು, 2020ರಲ್ಲಿ ಚೌರಾಸಿಯವರು ಸುಮಾರು 50,000 ಮತಗಳ ಅಂತರದಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಸೋಲಿಸಿದ್ದ ಸ್ಥಾನದಿಂದ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಸಾಂಪ್ರದಾಯಿಕ ಹಾದಿಯನ್ನು ಅನುಸರಿಸದೆ ಅನ್ಯ ಮಾರ್ಗವನ್ನು ಆರಿಸಿಕೊಂಡ ಜನರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಉದಾಹರಣೆಗಳಿಂದ ಇತಿಹಾಸವು ತುಂಬಿಹೋಗಿದೆ. ಇಟಾಲಿಯನ್ ನಾಟಕಕಾರ ಡಾರಿಯೋ ಫೋ ಅವರ ನಾಟಕಗಳಲ್ಲಿ, ಮನ್ನು ಭಂಡಾರಿ ಅವರ 'ಮಹಾಭೋಜ್'ನಲ್ಲಿ ನಿಪುಣರಾಗಿರುವ, ಭೋಜ್‌ಪುರಿ ತಾರಾ ಲೋಕದಲ್ಲಿನ ಬಿಹಾರದ ಮೂರು ಸಂಕಟಗಳಾದ ಜಾತಿ, ವರ್ಗ ಮತ್ತು ಪುರುಷತ್ವದ ಕುರಿತು ತಮ್ಮ ಪಿಎಚ್‌ಡಿಗಾಗಿ ಸಂಶೋಧನೆ ಮಾಡುತ್ತಿರುವ ಮತ್ತು ಅದೇ ಸಮಯದಲ್ಲಿ ತಮ್ಮ ಹಕ್ಕುಗಳ ಅಥವಾ ಭರವಸೆ ನೀಡಿದ ಸೌಲಭ್ಯಗಳಿಗಾಗಿ ಆಗ್ರಹಿಸುವ ಆಂದೋಲನಕ್ಕೆ ಧುಮುಕಿದ ಮೊದಲ ವ್ಯಕ್ತಿ ದಿವ್ಯಾ ಅಲ್ಲ.

ಭರವಸೆಯ ಕಿರಣ

ಪರ್ಯಾಯ ಹಾದಿಯಲ್ಲಿ ಸಾಗಿದವರಲ್ಲಿ ದಿವ್ಯಾ ಕೊನೆಯವರೂ ಆಗುವುದಿಲ್ಲ. ಆದರೆ, ಬಹುತೇಕ ನಿಷ್ಕ್ರಿಯ ಯುಗದಲ್ಲಿನ ಅವರ ಆಯ್ಕೆಯು, 'ಪ್ರಶ್ನಿಸುವ ಮತ್ತು ಕಾರಣ ಕೇಳುವ' ಭರವಸೆಯ ದೀಪವನ್ನು ಹೊತ್ತವರು ಇನ್ನೂ ಇದ್ದಾರೆ ಮತ್ತು 'ಲೈಟ್ ಬ್ರಿಗೇಡ್'ನಂತೆ ಆದೇಶಗಳಿಗೆ ತಲೆ ಬಾಗಲು ಇಷ್ಟಪಡುವುದಿಲ್ಲ ಎಂಬ ಆಶಯ ಮೂಡಿಸುತ್ತದೆ.

ನಿಸ್ಸಂದೇಹವಾಗಿ ಪ್ರತಿ ರಾಷ್ಟ್ರಕ್ಕೂ ಅದರ ಗಡಿಗಳನ್ನು ರಕ್ಷಿಸಲು ಮತ್ತು ಪ್ರತಿಕೂಲ ಶಕ್ತಿಗಳು ಭೂಮಿ, ಜನ ಮತ್ತು ಸಂಪನ್ಮೂಲಗಳಿಗೆ ಅಪಾಯ ಎದುರಾದಾಗ ಶಿಸ್ತಿನಿಂದ ತಿರುಗೇಟು ನೀಡಲು ಸೈನಿಕರ ಅಗತ್ಯವಿದೆ. ಆದರೆ, ಪ್ರತಿ ಪ್ರಜಾಪ್ರಭುತ್ವಕ್ಕೂ ನಿಯಂತ್ರಣ ಮತ್ತು ಸಮತೋಲನವೂ ಅತ್ಯಗತ್ಯ.

ದಿವ್ಯಾ ಗೌತಮ್ ಅವರು ಮುಂಬರುವ ದಿನಗಳಲ್ಲಿ ಭರವಸೆಯ ಆಶಾಕಿರಣವಾಗಿ ಕಾಣುತ್ತಿರುವುದು ಈ ಕಾರಣಕ್ಕೆ.

(Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.)

Read More
Next Story