Sanket Upadhyay

ವಿಷಕಂಠ ದೆಹಲಿ ಏದುಸಿರು ಬಿಡುತ್ತಿದೆ, ಸಂಸತ್ತು ಮೌನವಾಗಿದೆ, ಯಾಕೆಂದರೆ ಶ್ವಾಸಕೋಶಗಳು ಮತ ಹಾಕುವುದಿಲ್ಲ!


ವಿಷಕಂಠ ದೆಹಲಿ ಏದುಸಿರು ಬಿಡುತ್ತಿದೆ, ಸಂಸತ್ತು ಮೌನವಾಗಿದೆ, ಯಾಕೆಂದರೆ ಶ್ವಾಸಕೋಶಗಳು ಮತ ಹಾಕುವುದಿಲ್ಲ!
x
ನಿರಂತರ ವಿಷಗಾಳಿ ಕುಡಿದು ದೇಶದ ರಾಜಧಾನಿ ದೆಹಲಿ ವಿಷಕಂಠನಂತಾಗಿದೆ. ನವದೆಹಲಿಯ ಒಂದು ಚಳಿಗಾಲದ ಮುಂಜಾವಿನಲ್ಲಿ ಆವರಿಸಿರುವ ದಟ್ಟವಾದ ಮಂಜಿನ ಪರದೆಯನ್ನು ಸರಿಸಲು ನೀರಿನ ತುಂತುರು ಮಳೆ ಸುರಿಸಲಾಗುತ್ತಿದೆ.
Click the Play button to hear this message in audio format

ದಟ್ಟವಾದ ಮಂಜಿನಿಂದ ಕಣ್ಣಿಗೆ ಏನೇನೂ ಕಾಣುತ್ತಿಲ್ಲ. ವಿಷಪೂರಿತ ಹೊಗೆಯಿಂದ ಉಸಿರುಗಟ್ಟುತ್ತಿದೆ. ಇಡೀ ದೆಹಲಿ ಏದುಸಿರು ಬಿಡುತ್ತಿದೆ. ಆದರೆ ಸಂಸತ್ತು ಮೌನವಾಗಿದೆ. ವಾಯು ಮಾಲಿನ್ಯ ಯಾಕೆ ಎಂದಿಗೂ ಆದ್ಯತೆಯಲ್ಲ?

ಪೋಸ್ಟರ್‌ಗಳು ಮತ್ತು ಮಾಸ್ಕ್‌ಗಳು ಭರವಸೆಯ ಸಾಧ್ಯತೆಗಳನ್ನು ಮೂಡಿಸಿದ್ದವು. ಸಂಸತ್ತು ಕೊನೆಗೂ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅನಿಸಿತ್ತು. ಶ್ವಾಸಕೋಶಕ್ಕೆ ಆಗುವ ಹಾನಿಯಾದರೂ ಕನಿಷ್ಠ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರನ್ನು ಒಂದುಗೂಡಿಸಬಹುದು ಎಂದು ನಂಬಲಾಗಿತ್ತು.

ಶುಭ ಸುದ್ದಿಯೆಂದರೆ, ಅವರೆಲ್ಲರೂ ಒಂದಾಗಿದ್ದರು. ಮಾತುಕತೆ ನಡೆಸಿದರು. ಜೊತೆಯಾಗಿ ಚಹಾ ಕೂಡ ಸೇವಿಸಿದರು. ಆದರೆ ಕೆಟ್ಟ ಸುದ್ದಿಯೆಂದರೆ, ಅವರು ಮಾಲಿನ್ಯದ ಬಗ್ಗೆ ಮಾತ್ರ ಚರ್ಚಿಸಲೇ ಇಲ್ಲ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಇತಿಹಾಸದಲ್ಲೇ ಅತ್ಯಂತ ಕೆಟ್ಟ ಗಾಳಿ ಗುಣಮಟ್ಟದ ಸೂಚ್ಯಂಕವನ್ನು (AQI) ದಾಖಲಿಸಿದ ದಿನದಂದೇ ಸಂಸತ್ತನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಇದು ನಮ್ಮ ಉತ್ತರ ಭಾರತೀಯರನ್ನು ಕೆರಳಿಸಬೇಕಾಗಿತ್ತು. ಚಳಿಗಾಲದ ಈ ತಿಂಗಳುಗಳು ಅತ್ಯಂತ ಭೀಕರ. ಮಂಜು ಕವಿಯುವುದು ನೈಸರ್ಗಿಕ ವಿದ್ಯಮಾನವೇ ಆದರೂ, ಕುಸಿದು ಕುಳಿತಿರುವ ವ್ಯವಸ್ಥೆ ಗಾಳಿಯನ್ನು ಉಸಿರಾಡಲು ಸಾಧ್ಯವಾಗದ ವಿಷಕಾರಿ ಹೊಗೆಯಾಗಿ ಪರಿವರ್ತಿಸಿದೆ. ಇದರ ಮಟ್ಟ ಎಷ್ಟು ಕಡುವಿಷವಾಗಿದೆ ಎಂದರೆ, ಅಸ್ತಮಾ ರೋಗಿಗಳು ತಕ್ಷಣ ಆಸ್ಪತ್ರೆಗೆ ದಾವಿಸುವಂತೆ ಮಾಡಬಹುದು; ಇದು ನಿಮ್ಮ ಆಯುಷ್ಯವನ್ನು ಕನಿಷ್ಠ ಒಂದು ದಶಕದಷ್ಟು ಕಡಿಮೆ ಮಾಡಬಲ್ಲದು.

ಕೊಳೆತ ಶ್ವಾಸಕೋಶ!

ಒಂದು ಸಂಪ್ರದಾಯಕ್ಕೆ ಕಟ್ಟುಬಿದ್ದವನಂತೆ ಮಾಲಿನ್ಯದ ಕುರಿತಾದ ವರದಿಗಳನ್ನು ಮಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. 2015ರಲ್ಲಿ ಡಾ. ನರೇಶ್ ಟ್ರೆಹಾನ್ ಅವರು ಇಬ್ಬರು ವ್ಯಕ್ತಿಗಳ ಶ್ವಾಸಕೋಶಗಳನ್ನು ನನಗೆ ತೋರಿಸಿದ್ದು ಇನ್ನೂ ನೆನಪಿದೆ — ಅವರಲ್ಲಿ ಒಬ್ಬರು ದೆಹಲಿಯವರೇ. ಅವರೆಂದೂ ಧೂಮಪಾನ ಮಾಡದವರು. ಮತ್ತೊಬ್ಬರು ಹಿಮಾಚಲ ಪ್ರದೇಶದವರು. ಆಗೀಗ ಧೂಮಪಾನ ಮಾಡುವವರು. ಹಿಮಾಚಲದ ವ್ಯಕ್ತಿಯ ಶ್ವಾಸಕೋಶ ಗುಲಾಬಿ ಬಣ್ಣದಂತೆ ಸುಂದರವಾಗಿತ್ತು. ಆದರೆ ದೆಹಲಿಯ ವ್ಯಕ್ತಿಯ ಶ್ವಾಸಕೋಶವು ಸಂಪೂರ್ಣವಾಗಿ ಕೊಳೆತು ಹೋದಂತೆ ಕಾಣುತ್ತಿತ್ತು.

ನಾವು ಏರ್ ಪ್ಯೂರಿಫೈಯರ್‌ಗಳು, ಮನೆಯೊಳಗೆ ಇಡಬಹುದಾದ ಗಿಡಗಳು ಮತ್ತು ರಸ್ತೆಗಳಲ್ಲಿ ಸಮ-ಬೆಸ ಸಂಖ್ಯೆಯ ವಾಹನಗಳ ಓಡಾಟದಂತಹ ತಾತ್ಕಾಲಿಕ ರಾಜಕೀಯ ಪರಿಹಾರಗಳು ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿದೆವು. ಇವೆಲ್ಲದರ ಜೊತೆಗೇ ಪರಾಲಿ (ಭತ್ತದ ಕಳೆ) ಸುಡುವುದಕ್ಕಾಗಿ ಪಂಜಾಬ್ ರೈತರನ್ನು ದೂಷಿಸುವುದು ಎಲ್ಲರ ನೆಚ್ಚಿನ ವಿಷಯವಾಗಿತ್ತು.

ಹತ್ತು ವರ್ಷಗಳು ಸರಿದುಹೋದವು. ಇಂದು ಕೇಂದ್ರದಲ್ಲಿ ಮಾತ್ರವಲ್ಲದೆ ಉತ್ತರ ಪ್ರದೇಶದ ಪಶ್ಚಿಮ ಭಾಗದಿಂದ ಹರಿಯಾಣ ಮತ್ತು ದೆಹಲಿಯವರೆಗೆ ನಮಗೆ ಪೂರಕವಾದ ಸರ್ಕಾರಗಳಿವೆ. ಸ್ವತಃ ಸರ್ಕಾರದ ದತ್ತಾಂಶಗಳೇ ಪಂಜಾಬ್‌ನಲ್ಲಿ 'ಪರಾಲಿ' ಸುಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತೋರಿಸುತ್ತಿವೆ. ಆದರೂ ದೆಹಲಿಯ ವಿಷಕಾರಿ ಮಾಲಿನ್ಯ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಚಹಾ ಕೂಟದಲ್ಲಿ ಮೈಮರೆತವರು

ಅಂದೂ-ಇಂದೂ ಯಾವತ್ತೂ ಸಮಸ್ಯೆ ಇರುವುದು “ರಾಜಕೀಯ ಇಚ್ಛಾಶಕ್ತಿ”ಯ ಕೊರತೆಯಲ್ಲಿ. ಯಾಕೆಂದರೆ ನಮ್ಮ ಶ್ವಾಸಕೋಶಗಳೇನೂ ಮಾತನಾಡುವುದಿಲ್ಲ; ಕನಿಷ್ಠಪಕ್ಷ ತಕ್ಷಣಕ್ಕಂತೂ ಇಲ್ಲ. ಶ್ವಾಸಕೋಶಗಳು ರಾಜಕೀಯ ವಿಷಯಗಳಲ್ಲ, ಕನಿಷ್ಠ ಇದುವರೆಗೂ ಹಾಗೆ ಆಗಿಲ್ಲ. ಇದೇ ಕಾರಣಕ್ಕೆ ಮಾಲಿನ್ಯದ ಕುರಿತಾದ ಯಾವುದೇ ಪರಿಹಾರವೂ ಪ್ರಾಮಾಣಿಕವಾಗಿಲ್ಲ ಮತ್ತು ಅದರ ಬಗ್ಗೆ ನಡೆಯುವ ಯಾವ ಚರ್ಚೆಯೂ ಪರಿಣಾಮಕಾರಿಯಾಗಿಲ್ಲ.

ಅದು ಸುಳ್ಳಾಗಿದ್ದರೆ ಮಾಲಿನ್ಯದ ವಿಷಯದಲ್ಲಿ ಸರ್ಕಾರ ಸಂಸತ್ತಿನಲ್ಲಿ ನ್ಯಾಯಯುತವಾಗಿಯೇ ಇಕ್ಕಟ್ಟಿಗೆ ಸಿಲುಕಬೇಕಿತ್ತು. ಯಾಕೆಂದರೆ ಹೇಳಿಕೊಳ್ಳಲು ಸರ್ಕಾರದ ಬಳಿ ಯಾವುದೇ ಸಾಧನೆ ಇರಲಿಲ್ಲ. ಆದರೆ ನಮಗೆ ಪ್ರತಿಯಾಗಿ ಸಿಕ್ಕಿದ್ದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಸಂಸತ್ತು. ನಾವು ಬಹಳ ಕಾಲದಿಂದ ಕಂಡಿರದ ಒಂದು ರೀತಿಯ ಸೌಹಾರ್ದತೆ ಅಲ್ಲಿ ಕಂಡುಬಂತು. ಸಂಸತ್ತಿನ ನಂತರದ ಸಾಂಪ್ರದಾಯಿಕ ಚಹಾ ಕೂಟವು ಕಳೆದ 18 ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ ನಡೆಯಿತು. ಇಡೀ ದೇಶವು ತನ್ನ ಸರ್ಕಾರ ಮಾಲಿನ್ಯದ ವಿರುದ್ಧ ಏನು ಮಾಡಿದೆ ಅಥವಾ ಏನು ಮಾಡಿಲ್ಲ ಎಂದು ಕೇಳಲು ಕಾಯುತ್ತಿರುವಾಗಲೇ ಅವರು ಚಹಾ ಹೀರುತ್ತ ಮೈಮರೆತರು.


'ಗ್ರಾಪ್ 4' ಎಂಬ ಕಠಿಣ ಕ್ರಮಗಳು

ನಮಗೆ 'ಗ್ರಾಪ್' (GRAP- Graded Action Response Plan) ನಂತಹ ಅರ್ಧಮರ್ಧ ಕ್ರಮಗಳಲ್ಲೇ ತೃಪ್ತಿ. ಅಂದರೆ, ಗಾಳಿ ಗುಣಮಟ್ಟದ ಸೂಚ್ಯಂಕಕ್ಕೆ (AQI) ಅನುಗುಣವಾಗಿ ಕೆಲವು ತ್ವರಿತ ಕ್ರಮಗಳನ್ನು ಕೈಗೊಳ್ಳಬಹುದು. ಇದರಲ್ಲಿ ಅತ್ಯಂತ ಕಠಿಣವಾದದ್ದು 'ಗ್ರಾಪ್ 4'. ಇದು ಗಾಳಿಯ ಗುಣಮಟ್ಟ ತೀರಾ ದಯನೀಯವಾದ ಮಟ್ಟಕ್ಕೆ ತಲುಪಿದಾಗ ಅನ್ವಯವಾಗುತ್ತದೆ. ಈ ಹಂತದಲ್ಲಿ, ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಹಳೆಯ ಕಾರುಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಇವೆಲ್ಲಕ್ಕಿಂತ ವಿಚಿತ್ರದ ಸಂಗತಿ ಎಂದರೆ, ದೆಹಲಿ ನಿವಾಸಿಗಳು ಈ ಸಮಯದಲ್ಲಿ ರುಚಿಕರವಾದ ತಂದೂರಿ ಖಾದ್ಯಗಳನ್ನು ಸವಿಯುವಂತಿಲ್ಲ! ಈಗ ಇಲ್ಲಿರುವ ಕಪಟತನವನ್ನು ಗಮನಿಸಿ — ಹೊಸ ಸಂಸತ್ ಭವನದಿಂದ ಕೇವಲ ಕೆಲವೇ ಮೀಟರ್ ದೂರದಲ್ಲಿ ಹೊಸ 'ಸೆಂಟ್ರಲ್ ಸೆಕ್ರೆಟರಿಯೇಟ್' ಕಟ್ಟಡ ನಿರ್ಮಾಣವಾಗುತ್ತಿದೆ. ಅದು ಅತ್ಯಂತ ವಿಸ್ತಾರವಾದ ಸರ್ಕಾರಿ ಸಂಕೀರ್ಣ.

ಒಂದು ವೇಳೆ ನೀವೇನಾದರೂ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿದರೆ ನಿಮಗೆ ದಂಡ ವಿಧಿಸಬಹುದು ಮತ್ತು ನಿಮ್ಮ ಕಟ್ಟಡದ ಆವರಣವನ್ನು ಸೀಲ್ ಮಾಡಬಹುದು, ಆದರೆ ಸರ್ಕಾರ ಮಾತ್ರ ಯಾವುದೇ ಶಿಕ್ಷೆಯ ಭಯವಿಲ್ಲದೆ ತನ್ನ ಕೆಲಸವನ್ನು ಮುಂದುವರಿಸಬಹುದು.

ದೆಹಲಿಯ ಹೃದಯಭಾಗದಲ್ಲಿ, ಆಡಳಿತದ ಮೂಗಿನ ನೇರಕ್ಕೇ ಸೆಂಟ್ರಲ್ ಸೆಕ್ರೆಟರಿಯೇಟ್ ಕಟ್ಟಡ ನಿರ್ಮಾಣದ ಕೆಲಸ ಮುಂದುವರಿಯಿತು. ಯಾಕೆ ಹೀಗಾಯಿತು? ಯಾಕೆಂದರೆ ನಿಮಗೆ ಇದರ ಬಗ್ಗೆ ಯಾವುದೇ ಚಿಂತೆ ಇಲ್ಲ. ಶ್ವಾಸಕೋಶಗಳು ಮತ ಹಾಕುವುದಿಲ್ಲ. ನಿಮ್ಮ ಜೀವಿತಾವಧಿ ಮುಗಿದ ಹಳೆಯ ಕಾರುಗಳಂತೆಯೇ, ಶ್ವಾಸಕೋಶಗಳು ಕೂಡ ತಮ್ಮ ಅಕಾಲಿಕ ನಿವೃತ್ತಿಯ ಮೂಲಕ ತಮ್ಮ ಅಸ್ತಿತ್ವದ ಅರಿವು ಮೂಡಿಸುತ್ತವೆ—ಅದು ಕೂಡ ಆಸ್ಪತ್ರೆಯ ಮಂಚದ ಮೇಲೆ! ಮತ್ತು ಆಗಲೂ ಆ ಸ್ಥಿತಿಗೆ ಹತ್ತಾರು ಬೇರೆ ಕಾರಣಗಳನ್ನು ನೀಡಬಹುದು.

ನಿರ್ಲಜ್ಜ ಮರೆವಿನ ಜನ ನಾವು

ಅಷ್ಟಕ್ಕೂ ನಮ್ಮ ರಾಜಕಾರಣಿಗಳು ಯಾಕಾದರೂ ತಲೆಕೆಡಿಸಿಕೊಳ್ಳಬೇಕು? ನಾವೇ ತಲೆಕೆಡಿಸಿಕೊಳ್ಳದಿದ್ದಾಗ! ನಾವು ಕೋವಿಡ್ ಸಂಕಷ್ಟಗಳನ್ನು ಎಷ್ಟು ಬೇಗ ಮರೆತುಬಿಟ್ಟೆವು ಅಲ್ಲವೇ? ಈ ದೇಶದ ಆರೋಗ್ಯ ಮೂಲಸೌಕರ್ಯವು ಸಂಪೂರ್ಣ ಕುಸಿದು ಕುಳಿತಿದ್ದನ್ನು ನಾವು ಮರೆತಿದ್ದೇವೆ. ನ್ಯಾಯ ಮತ್ತು ಘನತೆಗಾಗಿ ಹೋರಾಡುವ ಬದಲು, ಆಸ್ತಿ ಯಾರಿಗೆ ಸೇರಬೇಕು ಎಂಬುದರ ಬಗ್ಗೆ ಕಿತ್ತಾಡಿಕೊಂಡ ಜನರ ಅಸಂಖ್ಯಾತ ಕಥೆಗಳು ನಮ್ಮ ಮುಂದೆ ಇವೆ.

ನಿಮ್ಮ ಘನತೆಯೇ ಎಷ್ಟು ಕೆಟ್ಟಾ ಕೊಳಕ ಸ್ಥಿತಿಯಲ್ಲಿದೆ. ಈಗ ಸರ್ಕಾರವು 'ಗಾಳಿಯ ಗುಣಮಟ್ಟದ ಸೂಚ್ಯಂಕ' ದೋಷಪೂರಿತವಾಗಿದೆ ಎಂದು ಪ್ರತಿಪಾದಿಸುತ್ತಿದೆಯಲ್ಲ ಹಾಗೆ! ಗಾಳಿಯ ಗುಣಮಟ್ಟವನ್ನು ಲೆಕ್ಕಹಾಕುವ ಈ ವಿಧಾನವು ತೀರಾ “ಪಾಶ್ಚಾತ್ಯ” ಶೈಲಿಯಲ್ಲಿದೆ ಎಂದು ಅವರಿಗೆ ಅನಿಸುತ್ತಿದೆ. ಹಾಗಾಗಿ ನಮಗೆ ಈಗ ಒಂದು ”ಭಾರತೀಯ ವಿಧಾನ" ಬೇಕಿದೆಯಂತೆ! ಹೌದು, ಖಂಡಿತ. ನಮ್ಮ ಗಾಳಿಯ ಗುಣಮಟ್ಟದ "ಭಾರತೀಯತೆ" ಹೇಗಿರುತ್ತದೆ ಎಂದರೆ, ಅದು ಗಾಳಿಯಲ್ಲಿರುವ ಸಲ್ಫರ್ನೊಂದಿಗೆ ‘ಕಪಟತನ’ವೂ ಬೆರೆತಿರುತ್ತದೆ.

ತಿರುಚು ನಿಪುಣರು

ಇದು ಸರ್ಕಾರದ ಹಳೆಯ ತಂತ್ರ. ಯಾವಾಗ ನಿಮಗೆ ಒಂದು ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲವೋ, ಆಗ ಪರಿಹಾರದ ದಾರಿಯನ್ನೇ ತಿರುಚುವುದು. ಜಿಡಿಪಿ ನಮ್ಮ ಮೂಗಿನ ನೇರಕ್ಕೆ ಇಲ್ಲ ಅಂದುಕೊಳ್ಳಿ, ಆಗ ಅದರ ಲೆಕ್ಕಾಚಾರದ ವಿಧಾನವನ್ನೇ ಬದಲಿಸುವುದು. ಅದೇ ರೀತಿ, ಒಂದು ವೇಳೆ ವಾಯು ಮಾಲಿನ್ಯ ಸರಿಪಡಿಸಬೇಕಿದ್ದರೆ, ಅದರ ಮೇಲ್ವಿಚಾರಣೆ ವ್ಯವಸ್ಥೆಯನ್ನೇ ತಿರುಚಿಬಿಡುವುದು.

ಇಂತಹ ಪೊಳ್ಳ್ಳುತನದಿಂದ ಏನಾಗಬಹುದೆಂದರೆ, ಮುಂದಿನ ವರ್ಷದಿಂದ ಮಾಲಿನ್ಯ ಮಾಪಕಗಳು ಸುಳ್ಳನ್ನು ಪೋಷಿಸಲು ಅಥವಾ ಸುಳ್ಳು ರೀಡಿಂಗ್ ತೋರಿಸಲು ಅವುಗಳಿಗೆ ನೀರುಣಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಇದು ಖಂಡಿತವಾಗಿಯೂ ನಡೆಯುತ್ತದೆ. ಏಕೆಂದರೆ ನಿಮಗೆ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯವಿದೆ.

ಯೋಚನಾ ಶಕ್ತಿಯೇ ಬಂದ್ ಆದಾಗ...

ಅವೆಲ್ಲವೂ ಒತ್ತಟ್ಟಿಗಿರಲಿ, ಇಷ್ಟೆಲ್ಲವೂ ಸಾಲದು ಎಂಬಂತೆ ಇತ್ತೀಚೆಗೆ ಸರ್ಕಾರವು ಸಂಸತ್ತಿನಲ್ಲಿ ಊಹಿಸಲೂ ಅಸಾಧ್ಯವಾದ ಹೇಳಿಕೆಯೊಂದನ್ನು ನೀಡಿದೆ: “ಗಾಳಿ ಗುಣಮಟ್ಟದ ಸೂಚ್ಯಂಕ ಮತ್ತು ಶ್ವಾಸಕೋಶದ ಸಮಸ್ಯೆಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ!” ಅಬ್ಬಾ, ಎಂತಹ ಮಾತು!

ಹಾಗಿದ್ದರೆ ಈಗ ವೈದ್ಯರು ಶ್ವಾಸಕೋಶದ ಎಲ್ಲಾ ಕೇಂದ್ರಗಳನ್ನು ಮುಚ್ಚಿ ರಜೆಗೆ ತೆರಳಬಹುದು. ಡಾ. ಟ್ರೆಹಾನ್ ಅವರು ದೆಹಲಿಯ ಆ ವ್ಯಕ್ತಿಯ ಶ್ವಾಸಕೋಶದ ಚಿತ್ರವನ್ನು ನನಗೆ ತೋರಿಸಿದ್ದು ಬಹುಶಃ “ಫೇಕ್ ನ್ಯೂಸ್" ಇರಬಹುದು! ಆ ಶ್ವಾಸಕೋಶ ಕಪ್ಪಾಗಿದ್ದುದು ಅಲ್ಲಿನ ಗಾಳಿಯಿಂದಲ್ಲ, ಬದಲಾಗಿ ಯಾವುದೋ ಮಾಟಮಂತ್ರ ಇರಬಹುದು!

ನಾನು ಸರ್ಕಾರಕ್ಕೆ ಒಂದು ಸೀದಾಸಾದ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಒಂದು ವೇಳೆ ಗಾಳಿ ಗುಣಮಟ್ಟದ ಸೂಚ್ಯಂಕಕ್ಕೂ ನಮ್ಮ ಶ್ವಾಸಕೋಶಕ್ಕೂ ಯಾವುದೇ ಸಂಬಂಧವಿಲ್ಲ ಅನ್ನುವುದಾದರೆ, ಅದಕ್ಕೆ ತಳುಕು ಹಾಕಿರುವ ಈ 'ಗ್ರೇಡೆಡ್ ಆಕ್ಷನ್ ಪ್ಲಾನ್' (GRAP 1-2-3-4) ನಮಗೆ ಯಾಕಾದರೂ ಬೇಕು? ಆದನ್ನು ಕೂಡ ರದ್ದು ಮಾಡಬಾರದೇ? ಜನರಿಗಂತೂ ಇದರಿಂದ ತುಂಬಾ ಸಂತೋಷವಾಗುತ್ತದೆ. ಹೇಗಿದ್ದರೂ, ದೆಹಲಿಯವರೆಲ್ಲರೂ ತಮ್ಮ ನಿರ್ಮಾಣ ಕಾಮಗಾರಿಗಳಿಗೆ ಮತ್ತೆ ಚಾಲನೆ ನೀಡಬಹುದು. ತಂದೂರಿ ಚಿಕನ್ ಮತ್ತು ತಂದೂರಿ ರೊಟ್ಟಿಯನ್ನು ತಿಂದು ಆರಾಮಾಗಿರಬಹುದು.

ನಮ್ಮದು ದೇಶವಿರೋಧಿ ಶ್ವಾಸಕೋಶ!

ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಸರ್ಕಾರಕ್ಕೆ ಕಾಳಜಿಯಿಲ್ಲ ಯಾಕೆಂದರೆ ನಿಮಗೂ ಕಾಳಜಿಯಿಲ್ಲ. ಯಾವುದೇ ಮಾಲಿನ್ಯ ವಿರೋಧಿ ಪ್ರತಿಭಟನೆಯನ್ನು "ದೇಶವಿರೋಧಿ ಅಜೆಂಡಾ" ಎಂದು ಕರೆಯುವುದು ಅವರಿಗೆ ಬಹಳ ಸುಲಭ. ಬಹುಶಃ ನೀವು ನಿಮ್ಮ ಈ “ದೇಶವಿರೋಧಿ ಶ್ವಾಸಕೋಶ”ಗಳನ್ನು ತೆಗೆದುಕೊಂಡು ಪಾಕಿಸ್ತಾನಕ್ಕೆ ಹೋಗಬೇಕು! ಆದರೆ ಸ್ವಲ್ಪ ತಡೆಯಿರಿ, ಅಲ್ಲಿಯೂ ಗಾಳಿ ಮಾಲಿನ್ಯವಾಗಿದೆಯಲ್ಲ!

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಉತ್ತರ ಭಾರತದ ಮಾಲಿನ್ಯದ ಬಗ್ಗೆ ಇದುವರೆಗೆ ಒಂದೇ ಒಂದು ಪತ್ರಿಕಾಗೋಷ್ಠಿ ಕೂಡ ನಡೆಸಿಲ್ಲ. ಯಾಕೆಂದರೆ ಅವರಿಗೆ ಅದರ ಬಗ್ಗೆ ಕಾಳಜಿಯಿಲ್ಲ. ಖಾಸಗಿ ಟಿವಿ ಚಾನೆಲ್ ಕಾರ್ಯಕ್ರಮದಲ್ಲಿ ಅವರು ಅತ್ಯಂತ ಅಪ್ರಮಾಣಿಕ ಪ್ರತಿಕ್ರಿಯೆ ನೀಡಿದರು. ಅವರಿಗೆ ಅಂತಹ ಒಂದು ಐಷಾರಾಮಿ ಅವಕಾಶವನ್ನು ನಾವೇ ಮಾಡಿಕೊಟ್ಟಿದ್ದೇವೆ.

“ನಮಗೆ ನಿಮ್ಮ ಮೇಲೆ ಎಲ್ಲರಿಗಿಂತ ಹೆಚ್ಚಿನ ಕಾಳಜಿಯಿದೆ,” ಹಾಗೂ “ಕಳೆದ ಕಾಂಗ್ರೆಸ್ 70 ವರ್ಷಗಳ ಕಾಲ ಆಳಿತು" ಎಂಬಂತಹ ಮಾತುಗಳನ್ನು ಹೇಳಿ ತಪ್ಪಿಸಿಕೊಳ್ಳುವ ಅವಕಾಶವನ್ನು ನಾವೇ ಈ ಮಂತ್ರಿ ಮಹೋದಯರಿಗೆ ನೀಡಿದ್ದೇವೆ.

ಎಕ್ಯೂಐ ಮತ್ತು ಐಕ್ಯೂ ನಡುವಿನ ವ್ಯತ್ಯಾಸ

ನೇತಾಜಿ ಸುಭಾಷ್ ಪ್ಯಾಲೇಸ್ ಖ್ಯಾತಿಯ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರ ಹೆಸರನ್ನು ಉಲ್ಲೇಖಿಸದೆ ಈ ಲೇಖನವನ್ನು ಮುಕ್ತಾಯ ಮಾಡುವುದಾದರೂ ಹೇಗೆ? ಅವರ ಪ್ರಕಾರ ಎಕ್ಯೂಐ ಎಂಬುದು ಒಂದು ರೀತಿಯ ತಾಪಮಾನ! ಅವರು ತಮ್ಮ ಪ್ರತಿಕ್ರಿಯೆಗಳಲ್ಲಿ AQI ಮತ್ತು ಐಕ್ಯೂ ಪದಗಳನ್ನು ಒಂದಕ್ಕೊಂದು ಪರ್ಯಾಯವಾಗಿ ಬಳಸುತ್ತಾರೆ. ಮಾಲಿನ್ಯ ನಿಯಂತ್ರಣ ಮಾಪಕಗಳಿಗೆ ನೀರುಣಿಸುವುದನ್ನು ಅವರು “ಸಾಮಾನ್ಯ ಪದ್ಧತಿ” ಎಂದು ಕರೆಯುತ್ತಾರೆ. ರೇಖಾ ಗುಪ್ತ ಅವರ ಸರ್ಕಾರವು ಕೂಡ ಕೇಂದ್ರ ಸರ್ಕಾರದ ಪುಸ್ತಕದಿಂದ ಕೆಲವು ತಂತ್ರಗಳನ್ನು ಕಲಿತಿದೆ. ಅವರ ಉತ್ತರವೂ “70 ವರ್ಷಗಳ ಕಾಂಗ್ರೆಸ್ ಆಡಳಿತ" ಎಂದೇ ಇರುತ್ತದೆ. ಕನಿಷ್ಠ ಪಕ್ಷ ರೇಖಾ ಗುಪ್ತ ಅವರು 15 ವರ್ಷಗಳ ಶೀಲಾ ದೀಕ್ಷಿತ್ ಆಡಳಿತ ಮತ್ತು 10 ವರ್ಷಗಳ ಕೇಜ್ರಿವಾಲ್ ಆಡಳಿತವನ್ನು ದೂಷಿಸುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.

ಓ ಪ್ರಿಯ ದೆಹಲಿಯೇ, ನಿನ್ನ ಸಹನೆ ಮತ್ತು ಸಂಯಮಕ್ಕೆ ನನ್ನದೊಂದು ದೊಡ್ಡ ನಮಸ್ಕಾರ. ನಾನು ನಿನ್ನ ಮುಂದೆ ಈ ಕೆಳಗಿನ ಚಿತ್ರವನ್ನು ಮಂಡಿಸುತ್ತಿದ್ದೇನೆ: ನೀನು ಬೆಳಗ್ಗೆ ಎದ್ದು ಕಿಟಕಿಯ ಪರದೆಗಳನ್ನು ಸರಿಸುತ್ತೀಯ. ಬಾಲ್ಕನಿಯಲ್ಲಿ ಒಂದು ಸುಂದರವಾದ ಗುಬ್ಬಚ್ಚಿ 'ಹೇಗಿದ್ದೀರಾ?' ಎಂದು ಕೇಳುವಂತೆ ಕಲರವ ಮಾಡುತ್ತಿರುವ ದೃಶ್ಯ ನಿನ್ನ ಕಣ್ಣಿಗೆ ಬೀಳುತ್ತದೆ. ಆಕಾಶದ ಗಾಢ ನೀಲಿ ಬಣ್ಣಕ್ಕೆ ವಿರುದ್ಧವಾಗಿ ಅಕ್ಕಪಕ್ಕದ ಹಸಿರು ಸೊಬಗು ಎದ್ದು ಕಾಣುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಪುಟ್ಟ ಮಳೆ ಹನಿಗಳ ಭರವಸೆ ಹೊತ್ತ ತೇಲುವ ಮೋಡಗಳು ಆಕಾಶದಲ್ಲಿ ತುಂಬಿವೆ. ಕೇಳಲು ತುಂಬಾ ರೊಮ್ಯಾಂಟಿಕ್ ಅನಿಸುತ್ತಿದೆ ಅಲ್ಲವೇ?

2025+15+10...2050! ಖಂಡಿತವಾಗಿಯೂ ನಿಮ್ಮ ಶ್ವಾಸಕೋಶಗಳು ಅಲ್ಲಿಯವರೆಗೂ ಎಲ್ಲವನ್ನೂ ತಡೆದುಕೊಳ್ಳಲು ಶಕ್ತವಾಗಿದೆ. ಸದ್ಯಕ್ಕೆ, ನಮ್ಮ ನೇತಾರರು ತಮ್ಮ ಚಹಾ ಕೂಟದಲ್ಲಿ ತಲ್ಲೀನರಾಗಿದ್ದಾರೆ. ಅವರನ್ನು ಹಾಗೆ ಆನಂದಿಸಲು ಬಿಟ್ಟುಬಿಡೋಣ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.


Next Story