
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಸಿಜೆಪಿ ಎಂಬ ವೇದಿಕೆಯಲ್ಲಿ ನಿಂತು ವಿದ್ಯಾರ್ಥಿಗಳು ನಿರುದ್ಯೋಗ ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಆಕ್ರೋಶವನ್ನು ಬಿಜೆಪಿ ಸುಲಭವಾಗಿ ನಿಭಾಯಿಸಲಾಗದ ಪರಿಸ್ಥಿತಿ ಇದೆ.
ʼಏಕ್ಲಾ ಚಲೋ ರೇʼ (ಒಂಟಿಯಾಗಿ ಸಾಗು) ಎಂಬ ಗೀತೆ ಕಳೆದ 120 ವರ್ಷಗಳಿಂದ ಭಾರತೀಯ ಪೀಳಿಗೆಯನ್ನು ಎದ್ದು ನಿಲ್ಲಲು ಬೇಕಾದ ಪ್ರೇರೇಪಣೆಯನ್ನು ನೀಡುತ್ತ ಬಂದಿದೆ. ಈಗಲೂ ಮೈಜಿಮ್ಮೆನ್ನಿಸುವಂತೆ ಮಾಡುವ ಈ ಹಾಡನ್ನು ಬರೆದವರು ರವೀಂದ್ರನಾಥ್ ಟ್ಯಾಗೋರ್.
ನಮ್ಮ ಕಾಲ ಕಳೆಗೆ ಇರುವ ಕಾಲದ ಮರಳು ಸಾಕಷ್ಟು ಪ್ರಮಾಣದಲ್ಲಿ ಸರಿದು ಹೋಗಿದ್ದರೂ ಒಂದು ರೀತಿಯ ವ್ಯಂಗವನ್ನೇ ಧ್ವನಿಸುವಂತಿರುವ ʼಕಾಕ್ರೋಚ್ ಜನತಾ ಪಾರ್ಟಿʼ (ಸಿಜೆಪಿ) ಎಂಬ ವೇದಿಕೆಯ ಮೇಲೆ ಮೊಟ್ಟಮೊದಲ ʼನೈಜ-ಪ್ರಪಂಚದʼ ಪ್ರದರ್ಶನ ನಡೆದುಹೋಗಿದೆ. ಈ ಪ್ರದರ್ಶನದಲ್ಲಿ ಭಾಗವಹಿಸಿದವರ ಸಂಖ್ಯೆಯನ್ನು ಕಡಿಮೆ ಎಂದು ಅಂದಾಜು ಮಾಡುವುದು ರಾಜಕೀಯ ವರ್ಗದವರ ಪಾಲಿಗೆ ನಿಜಕ್ಕೂ ಅವಸರದ ನಿರ್ಧಾರವಾದೀತು.
ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆ ಕೇವಲ ಸಾವಿರ-ಎರಡು ಸಾವಿರ ಅಂದಾಜಿನಲ್ಲಿತ್ತು ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರೆ ಎಂಬುದು ಇಲ್ಲಿ ಮುಖ್ಯವಾಗದು. ಅದಕ್ಕಿಂತ ಮಹತ್ವದ ಸಂಗತಿ ಏನೆಂದರೆ ಅವರ ಪ್ರತಿಭಟನಾ ಮೆರವಣಿಗೆ ʼಒಬ್ಬೇ ಒಬ್ಬ ವ್ಯಕ್ತಿಯ ಶಕ್ತಿʼಯನ್ನು ಎತ್ತಿ ತೋರಿಸಿದೆ. ಭಾರತದ ರಾಜಕೀಯದ ಇಂತಹ ಉಸಿರುಗಟ್ಟುವ ವಾತಾವರಣದಲ್ಲಿಯೂ ರಾಜಕೀಯವಾಗಿ ಅಷ್ಟಾಗಿ ಗುರುತಿಸಿಕೊಳ್ಳದೇ ಇರುವವರು ಒಗ್ಗೂಡಿ ಕಾರ್ಯಕ್ರಮವನ್ನು ತಡೆಯುವ ಸರ್ಕಾರದ ಧೈರ್ಯಕ್ಕೆ ಸವಾಲು ಹಾಕಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ.
ಭವಿಷ್ಯದಲ್ಲಿ ಸಿಜೆಪಿ ಒಂದು ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳಬಹುದು ಅಥವಾ ಹಾಗೆ ಆಗದೇ ಇರಬಹುದು. ಚುನಾವಣಾ ಆಖಾಡಕ್ಕೆ ಧುಮುಕಿ ಆಡಳಿತಾರೂಢ ಪಕ್ಷ ಮತ್ತು ಅದರ ಪ್ರಮುಖ ಎದುರಾಳಿಗಳಲ್ಲಿ ಅಸಮಾಧಾನವನ್ನು ಹುಟ್ಟುಹಾಕಬಹುದು. ನೆರೆಯ ಹಲವು ರಾಷ್ಟ್ರಗಳಲ್ಲಿ ಸಂಭವಿಸಿದಂತೆ ಜೆನ್-ಝಡ್ ನೇತೃತ್ವದ ಆಂದೋಲನಗಳು ಆಡಳಿತ ಬದಲಾವಣೆಗೆ ಕಾರಣವಾದ ರೀತಿಯಲ್ಲಿಯೇ ಇದು ಔನ್ನತ್ಯವನ್ನು ತಲುಪಲೂ ಬಹುದು.
ಆದರೆ, ಭವಿಷ್ಯದ ಇತಿಹಾಸಕಾರರು ಈ ಘಟನೆಯನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸುವುದಿಲ್ಲ ಎಂಬುದರಲ್ಲಿ ಯಾವುದೇ ಸಂಶಯ ಕಾಣದು. ಅತಿಯಾದ ಎಚ್ಚರಿಕೆ ಮತ್ತು ಪದಗಳ ಆಯ್ಕೆಯಲ್ಲಿ ಎಚ್ಚರಿಕೆಯನ್ನು ಬೇಡುವ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಅನಗತ್ಯವಾಗಿ ಮಾಡಿದ ನಿಂದನೆಯು, ಜನರ ಆಕ್ರೋಶ ಮತ್ತು ಸಿಟ್ಟನ್ನು ಕೆರಳಿಸಲು ದಾರಿ ಮಾಡಿತು.
ಬೀದಿ ಹೋರಾಟದ ಅಸಾಧಾರಣ ತಿರುವು
ವಾಸ್ತವವಾಗಿ, ಸಾಂವಿಧಾನಿಕ ಮತ್ತು ಇತರ ಪ್ರಮುಖ ಹುದ್ದೆಗಳನ್ನು ಹೊಂದಿರುವವರು ನಿವೃತ್ತಿಯ ನಂತರದ ಅಧಿಕಾರವನ್ನು ದಕ್ಕಿಸಿಕೊಳ್ಳುವ ಉದ್ದೇಶದಿಂದ ಆಡಳಿತಾರೂಢರನ್ನು ಓಲೈಸಲು ಸೂಕ್ತ ಮಾರ್ಗಗಳನ್ನು ಹುಡುಕುತ್ತಿರುವ ಈ ಕಾಲದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಅಂತಹ ಹುದ್ದೆಯನ್ನು ಪಡೆಯುವ ಸಾಧ್ಯತೆ ತೀರಾ ಕಡಿಮೆ.
ಜೂನ್ 6ರಂದು ನಡೆದ ಪ್ರತಿಭಟನೆಯು ಭಾರತದ ಬೀದಿ ಹೋರಾಟದ ಅಸಾಧಾರಣ ಮತ್ತು ಆಧುನಿಕ ತಿರುವಾಗಿತ್ತು. ವಿರೋಧಾಭಾಸವೆಂದರೆ, ಇದು ಇಂಟರ್ನೆಟ್ ಮೀಮ್ನಿಂದ ಅಥವಾ ಅಸಂಬದ್ಧವಾದ ಸೌಂಡ್ಟ್ರ್ಯಾಕ್ಗಳೊಂದಿಗೆ ಸ್ವಯಂ-ಗೇಲಿ ಮಾಡುವ ಮೂಲಕ ಪ್ರಾರಂಭವಾಯಿತು. ಪ್ರತಿಯೊಂದು ಸೌಂಡ್ಟ್ರ್ಯಾಕ್ ಕೂಡ ವಿಭಿನ್ನವಾಗಿದ್ದು, ಅದು ವೈರಲ್ ಆಗುವ ಗುಣವನ್ನು ಹೊಂದಿತ್ತು.
ಇಂತಹ ಪರಿವರ್ತನೆಯನ್ನು ಊಹಿಸಿಕೊಳ್ಳುವ ಮೊದಲೇ, 'ವರ್ಚುವಲ್ ಸಮೂಹವು' ಅರಾಜಕೀಯವಾದ, ಯುವಜನತೆಯ ನೇತೃತ್ವದ ಬೀದಿ ಪ್ರತಿಭಟನೆಯಾಗಿ ಬದಲಾಯಿತು. ಇದರಲ್ಲಿ ರಾಜಧಾನಿಯಿಂದ ದೂರವಿರುವ ಪಟ್ಟಣಗಳು ಮತ್ತು ನಗರಗಳಿಂದಲೂ ಹೆಚ್ಚಿನ ಸಂಖ್ಯೆಯ ಯುವಕರು ಭಾಗವಹಿಸಿದ್ದರು.
ಪ್ರಮುಖವಾಗಿ, ಇದು ಪಕ್ಷವೊಂದು ವ್ಯವಸ್ಥೆಯನ್ನು ನೋಡಿಕೊಳ್ಳುವ ಸಾಂಪ್ರದಾಯಿಕ ರಾಜಕೀಯ ಪ್ರದರ್ಶನವಾಗಿರಲಿಲ್ಲ. ಇಲ್ಲಿ ಪ್ರತಿಯೊಬ್ಬರೂ ಅಕ್ಷರಶಃ ಒಬ್ಬರೇ ನಡೆಯಬೇಕಿತ್ತು, ಅಥವಾ ಉತ್ತಮವಾದರೆ ಕೆಲವೇ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಭಾಗವಹಿಸಬೇಕಿತ್ತು.
ಅವಮಾನವೇ ಆಯುಧವಾದ ಕ್ಷಣ
ತಪ್ಪಾಗಿ ತಿಳಿಯಬೇಡಿ, 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ಹೆಸರು ಭಾರತೀಯ ಜನತಾ ಪಕ್ಷದ ಒಂದು ವಿಡಂಬನೆ ಎಂಬುದು ದಿಟ. ಪ್ರತಿ ಮುಖವಾಡ, ಘೋಷಣೆ ಅಥವಾ ಹಾಡು ಕೂಡ ಅವಮಾನವನ್ನು ಅಸ್ತ್ರವನ್ನಾಗಿ ಪರಿವರ್ತಿಸಿದ ನಿದರ್ಶನಗಳಾಗಿದ್ದವು.
ರಾಷ್ಟ್ರಧ್ವಜ ಮತ್ತು ಬಿ.ಆರ್. ಅಂಬೇಡ್ಕರ್ ಅವರ ದೊಡ್ಡ ಭಾವಚಿತ್ರಗಳ ಜೊತೆಗೆ ಶಾಲಾ-ಕಾಲೇಜು ಪುಸ್ತಕಗಳನ್ನು ಹಿಡಿದುಕೊಂಡು ಜಿರಲೆ ಮುಖವಾಡಗಳನ್ನು ಧರಿಸುವುದು ಪ್ರತಿಭಟನೆ ಮತ್ತು ಶಕ್ತಿಯ ಸಂಕೇತವಾಯಿತು. ಜಿರಲೆಯಾಗಿರುವುದು ಹೆಮ್ಮೆಯ ವಿಷಯವಾಯಿತು, ಏಕೆಂದರೆ ಆ ಕೀಟವು ಅತಿದೊಡ್ಡ ಕಷ್ಟಗಳನ್ನು ಎದುರಿಸಿಯೂ ಕೂಡ ಬದುಕಬಲ್ಲದು, ಅಪರಾಜಿತ ಅಥವಾ ಅಮರವಾದುದು ಎಂದೂ ಪರಿಗಣಿಸಲ್ಪಟ್ಟಿದೆ.
ಅಪಮಾನವನ್ನು ರಾಜಕೀಯ ಅಸ್ತ್ರವನ್ನಾಗಿ ಪರಿವರ್ತಿಸುವುದರ ಹೊರತಾಗಿ, ಜೂನ್ 6ರ ಪ್ರತಿಭಟನೆಯು ರಾಜಕೀಯ ಪಕ್ಷಗಳ ವ್ಯಾಪ್ತಿಗೆ ಒಳಪಡುವ ಸಾಂಪ್ರದಾಯಿಕ ರಾಜಕೀಯ ಹಾದಿಗಳನ್ನು ಬದಿಗಿಟ್ಟೂ ರಾಜಕೀಯ ಸಮಾವೇಶವನ್ನು ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಆದರೆ, ರಾತ್ರೋರಾತ್ರಿ ಸೃಷ್ಟಿಯಾದ ಸುಮಾರು 2.2 ಕೋಟಿ ಆನ್ಲೈನ್ ಅನುಯಾಯಿಗಳನ್ನು ರಾಜಕೀಯ ಪಡೆಯನ್ನಾಗಿ ಪರಿವರ್ತಿಸುವುದು ಮುಂದಿರುವ ದೊಡ್ಡ ಸವಾಲಾಗಿದೆ. ಮೌಸ್ನ ಒಂದು ಕ್ಲಿಕ್ ಮೂಲಕ ಡಿಜಿಟಲ್ ಫಾಲೋವರ್ ಆಗುವುದು ಸುಲಭ, ಆದರೆ "ನೈಜ ಲೋಕದಲ್ಲಿ" ಜನರನ್ನು ಸೇರಿಸುವುದೆಂದರೆ ಬಹಳ ಕಠಿಣವಾದ ಕೆಲಸವಾಗಿದೆ.
ಭಾರತದಲ್ಲಿ, ಅದರಲ್ಲೂ ಆನ್ಲೈನ್ನಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಹುಟ್ಟಿಕೊಂಡರೂ ಅದನ್ನು ತಕ್ಷಣ ಹತ್ತಿಕ್ಕುವ ಕೆಲಸ ನಡೆಯುತ್ತಿರೂವಾಗ, ಯುವಕರಲ್ಲಿ ಕಂಡುಬಂದ ಹತಾಶೆ ಮತ್ತು ಆಕ್ರೋಶದ ಹೊರಹರಿವು ಸರ್ಕಾರದ ಪಾಲಿಗೆ ಅತ್ಯಂತ ಕಳವಳಕಾರಿ ವಿಷಯವಾಗಿತ್ತು.
ದೊಡ್ಡ ವೋಟ್ ಬ್ಯಾಂಕ್ ಕಳೆದುಕೊಂಡಿತೇ?
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್), ಸಿಬಿಎಸ್ಇ ಆನ್ಸ್ಕ್ರೀನ್ ಮಾರ್ಕಿಂಗ್ (ಓಎಸ್ಎಂ) ವಿವಾದಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್ಟಿಎ) ವಿರುದ್ಧದ ಸಂಪೂರ್ಣ ಅಭಿಯಾನವನ್ನು ವಿದ್ಯಾರ್ಥಿಗಳು ಮತ್ತು ಯುವಕರು ಮುನ್ನಡೆಸಿದ್ದರು ಎಂಬುದು ಆಡಳಿತಾರೂಢ ಪಕ್ಷಕ್ಕೆ ಇರುವ ಅತಿದೊಡ್ಡ ಚಿಂತೆಯಾಗಿದೆ.
ಇನ್ನೂ ಹೆಚ್ಚು ಕಳವಳಕಾರಿ ವಿಷಯವೆಂದರೆ, ಓಎಸ್ಎಮ್ ಗುತ್ತಿಗೆ ನೀಡಿಕೆಯಲ್ಲಿನ ಲೋಪದೋಷಗಳು ಮತ್ತು ಅಕ್ರಮಗಳನ್ನು ಪತ್ತೆಹಚ್ಚಿದ್ದು 12ನೇ ತರಗತಿಯ ವಿದ್ಯಾರ್ಥಿಗಳು. ಇವರಲ್ಲಿ ಕೆಲವರು ಇನ್ನೂ 18 ವರ್ಷ ತುಂಬದವರೂ ಆಗಿದ್ದರು.
ಸರ್ಕಾರವು ಈ ತಪ್ಪುಗಳನ್ನು ಸರಿಪಡಿಸಿಕೊಳ್ಳದ ಹೊರತು, ಭಾರತೀಯ ಜನತಾ ಪಕ್ಷವು ಮೊದಲ ಬಾರಿಗೆ ಮತದಾನ ಮಾಡುವ ಮತದಾರರ ದೊಡ್ಡ ವರ್ಗವನ್ನು ಕಳೆದುಕೊಂಡಂತೆಯೇ ಸರಿ. ಯಾಕೆಂದರೆ, ಅವರಲ್ಲಿ ಅನೇಕರು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿನ ಅಂಕಗಳ ಗೊಂದಲದಿಂದಾಗಿ ಅನುಭವಿಸಿದ ಸಂಕಟಗಳು ಅವರ ಪ್ರವೇಶಾತಿಯ ಮೇಲೆ ನೇರ ಪರಿಣಾಮ ಬೀರಿದೆ.
ಅಂತೆಯೇ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರು ಶಿಕ್ಷಣ ರಂಗದ ಬಿಕ್ಕಟ್ಟು, ಪ್ರವೇಶ ಪರೀಕ್ಷೆಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆ ಮತ್ತು ನಿರುದ್ಯೋಗದ ಹೆಚ್ಚಳದ ಕಾರಣದಿಂದಾಗಿ ಆಡಳಿತಾರೂಢ ಪಕ್ಷದಿಂದ ದೂರ ಸರಿದು ನಿಂತಿದ್ದಾರೆ.
ಮತದಾರರ ಪೈಕಿ ಈ ಯುವ ಜನಸಂಖ್ಯಾ ಗುಂಪು ತಾಂತ್ರಿಕವಾಗಿ ಸಬಲವಾಗಿದೆ ಮತ್ತು ಅತ್ಯಂತ ಕ್ರಿಯಾಶೀಲವಾಗಿದೆ. ಅಪಾರವಾದ ಸಂಪರ್ಕ ಜಾಲವನ್ನು ಹೊಂದಿರುವ ಈ ಯುವಕರು, ಡಿಜಿಟಲ್ ಪ್ರತಿಭಟನೆಗಳನ್ನು ಜೂನ್ ಆರರಂದು ನಡೆದಿದ್ದಕ್ಕಿಂತಲೂ ದೊಡ್ಡ ಮಟ್ಟದ ಸಾಂಪ್ರದಾಯಿಕ ಪ್ರತಿಭಟನೆಗಳಾಗಿ ಪರಿವರ್ತಿಸಲು ಯಾವಾಗ ಯಶಸ್ವಿಯಾಗುತ್ತಾರೆ ಎಂದು ಹೇಳುವುದು ಕಷ್ಟ.
ಅಹಿಂಸೆಯೇ ಅವರ ಮಾರ್ಗ
ಮುಖ್ಯವಾಗಿ, ತಾವೊಬ್ಬರು ಹಾಸ್ಯಗಾರರು ಎಂದು ಕರೆದುಕೊಳ್ಳುವ ಮೂಲಕ ಮತ್ತು ಹಾಸ್ಯದ ರೂಪದಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿದರೂ, ಪ್ರತಿಭಟನಾಕಾರರು ತಮ್ಮ ವಿರೋಧವನ್ನು ಅಸ್ಪಷ್ಟತೆಗೆ ಆಸ್ಪದವಿಲ್ಲದಂತೆ ಸ್ಪಷ್ಟವಾಗಿ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ, ಅವರು ಅಹಿಂಸೆಯನ್ನು ಪಾಲಿಸುವಲ್ಲಿ ಎಚ್ಚರ ವಹಿಸಿದ್ದರು. ಬಿಜೆಪಿ ಅವರನ್ನು ತಮ್ಮ ಎಂದಿನ ರಾಜಕೀಯ ಲೇಬಲ್ಗಳ ಮೂಲಕ ಟೀಕಿಸುವುದನ್ನು ತಪ್ಪಿಸಲು ಭಾರತೀಯ ತ್ರಿವರ್ಣ ಧ್ವಜವನ್ನು ಪ್ರಮುಖವಾಗಿ ಪ್ರದರ್ಶಿಸಿದರು. ಜೊತೆಗೆ, ಯಾವುದೇ ಹಂತದಲ್ಲಿ ಧಾರ್ಮಿಕ ಗುರುತನ್ನು ಚರ್ಚೆಯ ಅಥವಾ ಪ್ರದರ್ಶನದ ವಿಷಯವಾಗಲು ಅವರು ಅವಕಾಶ ನೀಡಲಿಲ್ಲ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಸುಲಭಕ್ಕೆ ತಣ್ಣಗಾಗದು ಎಂಬುದು ಸ್ಪಷ್ಟವಾಗಿದೆ. ಒಂದು ದಿನದ ಪ್ರತಿಭಟನೆ ಮತ್ತು ಭಾರತದಾದ್ಯಂತ ಇನ್ನಷ್ಟು ಪ್ರತಿಭಟನೆಗಳು ನಡೆಯುವ ಭರವಸೆಯ ಜೊತೆಗೆ, ರಾಜಕೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು, ವಿಶೇಷವಾಗಿ ಕಾಂಗ್ರೆಸ್ನ ವಿದ್ಯಾರ್ಥಿ ವಿಭಾಗವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ಮತ್ತು ಸಿಪಿಐ(ಎಂ)ಗೆ ಸಂಬಂಧಿಸಿದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಕೂಡ ಸಿಜೆಪಿ ಎತ್ತಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿವೆ.
ಸಮಸ್ಯೆಗಳು ಸಮಾನ-ಧ್ವನಿಗಳು ಭಿನ್ನ
ಈ ಧ್ವನಿಗಳು ಭಿನ್ನವಾಗಿರಬಹುದು, ಆದರೆ ಸಮಸ್ಯೆಗಳು ಒಂದೇ ಆಗಿವೆ ಮತ್ತು ಸರ್ಕಾರದ ಮೇಲೆ ಇವುಗಳ ಪ್ರಭಾವವು ಕ್ರಮೇಣ ಹೆಚ್ಚಾಗುವ ಸಾಧ್ಯತೆಯಿದೆ.
ಸಿಜೆಪಿಯ ಅತಿದೊಡ್ಡ ಯಶಸ್ಸೆಂದರೆ, ಅದು ಭಾರತದ ನಿರುದ್ಯೋಗಿ ಅಥವಾ ವಿದ್ಯಾರ್ಥಿ ಯುವಕರ ಆತಂಕಗಳನ್ನು ನೇರವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಜನಸಂಖ್ಯಾ ವಿಭಾಗವು ಬಹುಮಟ್ಟಿಗೆ ಅಸ್ಥಿರ ಮತ್ತು ಸೈದ್ಧಾಂತಿಕವಲ್ಲದ ಮತದಾರರ ನೆಲೆಯನ್ನು ಪ್ರತಿನಿಧಿಸುತ್ತದೆ. ಬಿಜೆಪಿಯು ತನ್ನ ಸಂಸದೀಯ ಬಹುಮತವನ್ನು ಉಳಿಸಿಕೊಳ್ಳಲು ಬಳಸುವ ಸಾಂಪ್ರದಾಯಿಕ ಧ್ರುವೀಕರಣ ತಂತ್ರಗಳಿಂದ ಇವರನ್ನು ಸುಲಭವಾಗಿ ಎದುರಿಸಲು ಸಾಧ್ಯವಿಲ್ಲ.
ಆದರೆ, ಸಿಜೆಪಿ ತನ್ನ ಸದ್ಯದ ರೂಪದಲ್ಲಿ ಅಥವಾ ಹೊಸ ಅವತಾರದಲ್ಲಿ ಭಾರತದಲ್ಲಿ ರಾಜಕೀಯ ಭವಿಷ್ಯವನ್ನು ಹೊಂದಿದೆಯೇ ಎಂಬುದು ಈ ಹಂತದಲ್ಲಿ ಮುಖ್ಯವಾದ ಪ್ರಶ್ನೆ. ಈಗಿನ ಆಕ್ರೋಶವು NEET, CBSE ಮತ್ತು NTA ಅಸಮರ್ಪಕತೆ ಮತ್ತು ಇದರಿಂದ ವಿದ್ಯಾರ್ಥಿಗಳಿಗೆ ಉಂಟಾದ ನಷ್ಟದ ವಿಷಯವನ್ನು ಮುಂದಿಟ್ಟುಕೊಂಡು ಹುಟ್ಟಿಕೊಂಡಿದೆ.
ಆದರೆ ಯುವಕರೊಂದಿಗೆ ಸಂಪರ್ಕ ಕಾಯ್ದುಕೊಳ್ಳಲು, ಸಿಜೆಪಿ ನಾಯಕತ್ವವು ತಾತ್ಕಾಲಿಕ ವಿದ್ಯಾರ್ಥಿ ಆಕ್ರೋಶವನ್ನು ಯುವ ನಿರುದ್ಯೋಗ, ಆರ್ಥಿಕ ಸ್ಥಗಿತ ಮತ್ತು ಕೈಗೆಟುಕುವ ಹಾಗೂ ಗುಣಮಟ್ಟದ ಆರೋಗ್ಯ ಸೌಲಭ್ಯಗಳಂತಹ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ವಿಶಾಲ ಮತ್ತು ಸುಸ್ಥಿರ ಚೌಕಟ್ಟಾಗಿ ಪರಿವರ್ತಿಸಬೇಕಾದ ಜರೂರತ್ತಿದೆ.
ಬಿಜೆಪಿ ಸರ್ಕಾರದ ದೌರ್ಬಲ್ಯ
ಮೋದಿ ಸರ್ಕಾರವು ಕಳೆದ 12 ವರ್ಷಗಳಲ್ಲಿ ಬಹುತೇಕ ಪ್ರತಿಭಟನೆಗಳಿಲ್ಲದ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಸಾರ್ವಜನಿಕ ಪ್ರತಿಭಟನೆಗಳನ್ನು ನಿರ್ವಹಿಸುವ ಸಾಮರ್ಥ್ಯವು ಅದರ ಕೆಲವೇ ಕೆಲವು ದೌರ್ಬಲ್ಯಗಳಲ್ಲಿ ಒಂದಾಗಿ ಉಳಿದಿದೆ. ಆದರೆ, 2015ರಲ್ಲಿ ಭೂಸ್ವಾಧೀನದ ಉದಾರೀಕರಣ ಯೋಜನೆಯ ವಿರುದ್ಧದ ಆಕ್ರೋಶ, ರೈತರ ಆಂದೋಲನ, ಸಿಎಎ (CAA) ವಿರೋಧಿ ಪ್ರತಿಭಟನೆಗಳು, ಅಗ್ನಿಪಥ್ ಯೋಜನೆಯ ವಿರುದ್ಧದ ಪ್ರತಿಭಟನೆಗಳು ಮತ್ತು ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಮುಗಿದ ರೀತಿ, ಸರ್ಕಾರವು ಬೃಹತ್ ಪ್ರತಿಭಟನೆಗಳನ್ನು ನಿಭಾಯಿಸುವಲ್ಲಿ ಅಷ್ಟು ಸಮರ್ಥವಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.
ಸಿಜೆಪಿ ಪ್ರತಿಭಟನೆಯನ್ನು ಕರೆ ಕೊಟ್ಟ ಸಂದರ್ಭದಲ್ಲಿ ಸರ್ಕಾರವು ಅದನ್ನು ಹತ್ತಿಕ್ಕುವ ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಿಗೆ, ವಿಮಾನ ನಿಲ್ದಾಣದ ಆಗಮನದ ಲಾಂಜ್ನಲ್ಲಿ ಅಗತ್ಯವಿರುವ ಫಾರ್ಮ್ಗಳಿಗೆ ಅಭಿಜಿತ್ ದಿಗ್ಕೆ ಅವರಿಂದ ಸಹಿ ಹಾಕಿಸಿಕೊಳ್ಳುವ ಮೂಲಕ ಪ್ರತಿಭಟನೆಗೆ ಅನುಮತಿ ನೀಡಿತು.
ಪ್ರಜಾಪ್ರಭುತ್ವಬದ್ಧವಾಗಿ ಚುನಾಯಿತವಾದ ಸಂಸದೀಯ ಬಹುಮತದಿಂದ ಅಂಗೀಕರಿಸಲ್ಪಟ್ಟ ನೀತಿಗಳನ್ನು ಬೀದಿ ತಡೆಗಳ ಮೂಲಕ ನಿರ್ದೇಶಿಸಲು ಅಥವಾ ಉರುಳಿಸಲು ಸಾಧ್ಯವಿಲ್ಲ ಎಂಬ ಸರ್ಕಾರದ ನಿಲುವಿನಿಂದ ಸರ್ಕಾರವು ಹಿಂದೆ ಸರಿಯಬೇಕಾದ ಮೊದಲ ನಿದರ್ಶನ ರೈತರ ಆಂದೋಲನವಾಗಿತ್ತು.
ಪ್ರಜಾಸತ್ತಾತ್ಮಕ ಸಂಸ್ಥೆಗಳ ಅವನತಿ
ವಿ-ಡೆಮ್ (V-Dem) ಇನ್ಸ್ಟಿಟ್ಯೂಟ್ನ ಪ್ರಜಾಪ್ರಭುತ್ವ ವರದಿಗಳ ಪ್ರಕಾರ 2017 ರಿಂದ ಭಾರತವನ್ನು 'ಚುನಾವಣಾ ನಿರಂಕುಶ ಪ್ರಭುತ್ವ' ಎಂದು ಕರೆಯಲಾಗಿದೆ. ಈ ಅವಧಿಯಲ್ಲಿ, 2026ರ ವರದಿಯಲ್ಲಿ ಪ್ರತಿಪಾದಿಸಿದಂತೆ ನಾವು "ಪ್ರಜಾಸತ್ತಾತ್ಮಕ ಸಂಸ್ಥೆಗಳ ನಿಧಾನಗತಿಯ ಆದರೆ ವ್ಯವಸ್ಥಿತವಾದ ಅವನತಿ"ಗೆ ಸಾಕ್ಷಿಯಾಗಿದ್ದೇವೆ.
ಮುಖ್ಯವಾಗಿ, ವರದಿಯು ಪ್ರಜಾಸತ್ತಾತ್ಮಕ ಆಚರಣೆಗಳ ಸಂಕೋಚನದ ಮೇಲೆ ಗಮನಹರಿಸಿದರೂ, ಡಿಜಿಟಲ್-ಕೇಂದ್ರಿತ ಪೀಳಿಗೆಯು ಪಣಕ್ಕೊಡ್ಡಲಾಗಿರುವ ವಿಷಯಗಳ ಬಗ್ಗೆ ಜಾಗೃತವಾಗಿದೆ ಎಂದೂ ಅದು ತಿಳಿಸಿದೆ.
'ಕಾಕ್ರೋಚ್ ಚಳುವಳಿ'ಯ ಆರಂಭಿಕ ಅವಧಿಯಲ್ಲಿ, ಸರ್ಕಾರವು ತನ್ನ ದಬ್ಬಾಳಿಕೆಯ ಧೋರಣೆಯನ್ನು ಮುಂದುವರಿಸಿತು ಮತ್ತು ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ನೀಡಿ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ಗಳನ್ನು ತೆಗೆದುಹಾಕಿತು ಎಂಬುದನ್ನು ಮರೆಯಬಾರದು.
ಆದರೆ, ಇದೇ ರೀತಿಯ ಹಲವು ನಕಲಿ ಹ್ಯಾಂಡಲ್ಗಳು ಮತ್ತು ವೇದಿಕೆಗಳು ಸೃಷ್ಟಿಯಾದ ಪರಿಣಾಮವಾಗಿ ನಿರಂಕುಶ ಧೋರಣೆಗಳು ಉಲ್ಟಾ ಹೊಡೆಯುತ್ತವೆ ಎಂಬ ಸಂದೇಶವನ್ನು ಯಶಸ್ವಿಯಾಗಿ ರವಾನಿಸಿದವು. ಜೂನ್ 6 ರಂದು ಮತ್ತು ಅದಕ್ಕೂ ಮುನ್ನ ಸರ್ಕಾರವು ತೋರಿಸಿದ ಅಸಾಧಾರಣವಾದ ಸಂಘರ್ಷರಹಿತ ನಿಲುವು, ರೈತರ ಆಂದೋಲನ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಮತ್ತು 2020ರ ದೆಹಲಿ ಗಲಭೆಗಳ ಸಂದರ್ಭದಲ್ಲಿ ಬಳಸಿದಂತಹ ಹಳೆಯ ತಂತ್ರಗಳನ್ನು ಬಳಸದಿರುವುದೇ ಉತ್ತಮ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ ಎಂಬುದನ್ನು ಸೂಚಿಸುತ್ತದೆ.
ಉಳಿದೀತೇ ಜಿರಲೆ ?
ಗಮನಾರ್ಹ ಸಂಗತಿಯೆಂದರೆ, ಜೂನ್ 6 ರ ಪ್ರತಿಭಟನೆಯನ್ನು ಬಹುತೇಕ ಎಲ್ಲಾ ಮುಖ್ಯವಾಹಿನಿ ಟಿವಿ ಮಾಧ್ಯಮಗಳು ಕಡೆಗಣಿಸಿದವು. ಈ ವಿಷಯದಲ್ಲಿಯೂ ಸಹ, ಡಿಜಿಟಲ್ ಮಾಧ್ಯಮದಲ್ಲಿ ಲಭ್ಯವಿದ್ದ ಸಾಕಷ್ಟು ವಿಡಿಯೋ ಕವರೇಜ್, ಡಿಜಿಟಲ್ ಪ್ರಸಾರದ ಶಕ್ತಿಯನ್ನು ಸಾಬೀತುಪಡಿಸಿತು.
ಸಿಜೆಪಿ ಅತಿ ಹೆಚ್ಚು ವೀಕ್ಷಣೆಗೆ ಕಾರಣವಾದ ವಿಷಯಗಳ ಪಟ್ಟಿಯಲ್ಲಿರುವ ಇಂಟರ್ನೆಟ್ ಅಲ್ಗಾರಿದಮ್ಗಳಿಂದ ಕ್ರಮೇಣ ಮರೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಅಂದಾಜು ಮಾಡುವುದು ಕಷ್ಟ.
ಆದರೆ, ಮುಂಬರುವ ದಿನಗಳಲ್ಲಿ 'ಕಾಕ್ರೋಚ್' (ಜಿರಲೆ) ಚರ್ಚೆ ಮತ್ತು ವಿಶ್ಲೇಷಣೆಯ ವಿಷಯವಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

