Gen-Z ಪ್ರಭಾವ: ಬದಲಾಯಿತು ಭಾಗವತ್ ಭಾಷೆ, ಬದಲಾಗಲಿಲ್ಲ ಸಂಘ ಪರಿವಾರದ ವರಸೆ
x

Gen-Z ಪ್ರಭಾವ: ಬದಲಾಯಿತು ಭಾಗವತ್ ಭಾಷೆ, ಬದಲಾಗಲಿಲ್ಲ ಸಂಘ ಪರಿವಾರದ ವರಸೆ

ಯುವ ಪ್ರತಿಭಟನಾಕಾರರನ್ನು ತಲುಪುವ ಆರ್‌ಎಸ್‌ಎಸ್‌ ಮುಖ್ಯಸ್ಥರ ಈ ಯತ್ನ ಯುವಜನರ ಆಕ್ರೋಶವನ್ನು ತಣಿಸುವ ಒಂದು ಕಾರ್ಯತಂತ್ರ. ಆದರೆ ಸಂಘಪರಿವಾರದ ಸೈದ್ಧಾಂತಿಕ ಬಿರುಕುಗಳನ್ನು ಮುಚ್ಚಲು ಅವರು ಸಿದ್ಧರಿಲ್ಲ!


ವಿದ್ಯಾರ್ಥಿಗಳು ಹಾಗೂ ಯುವಜನರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮುಂಬೈನಲ್ಲಿ ಕಳೆದ ವಾರ ನಡೆದ ಸಂವಾದದಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿದರು. ಆ ಸಂವಾದದಲ್ಲಿ ಇದ್ದುದು ಕೆಲವೇ ಕೆಲವು ಜನ ಪ್ರೇಕ್ಷಕರು ಮಾತ್ರ. ಅವರ ಸಮ್ಮುಖದಲ್ಲಿಯೇ ಭಾಗವತ್‌ ಅವರು ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಇದು ಯುವಜನರಲ್ಲಿ ಹೆಚ್ಚುತ್ತಿರುವ ಆಕ್ರೋಶದ ನಡುವೆಯೂ ಅವರ ಜೊತೆ ಸಂವಾದಿಯಾಗುವ ವ್ಯೂಹಾತ್ಮಕ ಹಾದಿಯನ್ನು ಅವರು ಹುಡುಕಿಕೊಂಡಿದ್ದು ಗಮನಾರ್ಹ.

ಆ ಕಾರ್ಯಕ್ರಮವನ್ನು ಆಯೋಜಿಸಿದ್ದು ʼಇಂಡಿಯಾಸ್‌ ಇಂಟರ್‌ನ್ಯಾಷನಲ್‌ ಮೂವ್‌ಮೆಂಟ್‌ ಟು ಯುನೈಟೆಡ್‌ ನೇಷನ್ಸ್ʼ ಎಂಬ ಖಾಸಗಿ ಸಂಸ್ಥೆ. ಅದರ ಸಂಸ್ಥಾಪಕ ಅಧ್ಯಕ್ಷ ರಿಷಭ್‌ ಶಾ ಅವರ ಜೊತೆಗೆ ಪ್ರಶ್ನೋತ್ತರ ಕಲಾಪದಲ್ಲಿ ಅವರು ಭಾಗವಹಿಸಲು ಒಪ್ಪಿಕೊಳ್ಳುವ ಮೂಲಕ ಸಮಾಲೋಚನಾ ಸಭೆಯ ಸ್ವರೂಪವನ್ನೇ ಬದಲಿಸಿದರು ಮತ್ತು ಆ ಮೂಲಕ ತಮ್ಮನ್ನು ಒಬ್ಬ ಕರುಣಾಳು ಹಾಗೂ ನಿಮ್ಮ ಅಹವಾಲುಗಳಿಗೆ ಕಿವಿಗೊಡುವ ಹಿರಿಯ ವ್ಯಕ್ತಿ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದರು.

ಕಾಣಲಿಲ್ಲ ಸೈದ್ಧಾಂತಿಕ ಬದಲಾವಣೆ

ಯುವಜನರ ಹತಾಶೆಗಳಿಗೆ ಸಂಘ ಪರಿವಾರ ಯಾವತ್ತೂ ಗುರಿಯಾಗದಂತೆ ಕಾಪಾಡುವುದೇ ಭಾಗವತ್ ಅವರ ಮುಖ್ಯ ಗುರಿಯಾಗಿತ್ತು ಎಂಬುದು ಸ್ಪಷ್ಟ. ಆದರೂ ಈ ಕಾರ್ಯಕ್ರಮವನ್ನು ಯಾವುದೇ ಸ್ವಾಭಾವಿಕ ಸೈದ್ಧಾಂತಿಕ ಬದಲಾವಣೆ ಎಂದು ಪರಿಗಣಿಸಿಬಿಡಲು ಸಾಧ್ಯವೇ ಇಲ್ಲ. ಬದಲಾಗಿ ಇದೊಂದು ಪಕ್ಕಾ ರಾಜಕೀಯ ಹೊಂದಾಣಿಕೆಯ ಕ್ರಮವಷ್ಟೇ.

ನವದೆಹಲಿ ಮತ್ತು ಭಾರತದಾದ್ಯಂತ ನೂರಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ (ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಾನಾ ಕಾರಣಗಳಿಗಾಗಿ ಈಗಲೂ ಮುಂದುವರಿದಿರುವಂತೆ) ನಾನಾ ದಿಕ್ಕುಗಳಲ್ಲಿ ಪ್ರತಿಫಲಿಸಿದ ವಿಚಾರಗಳ ಕುರಿತು ಮುಕ್ತ ಮನಸ್ಸಿನಿಂದ ಇರಲು ಸರಸಂಘಚಾಲಕರು ಪ್ರಯತ್ನವೇನೋ ನಡೆಸಿದರು. ಆದರೆ ಸಂಘಪರಿವಾರವು ಬಹಳ ಹಿಂದಿನಿಂದಲೂ ಸಾಧಿಸಿಕೊಂಡು ಬಂದಿರುವ ಸೈದ್ಧಾಂತಿಕ ಕುರುಡು ವಿಚಾರಗಳನ್ನು ಮುಚ್ಚಿಡಲು ಅವರು ಸಫಲರಾಗಲಿಲ್ಲ.

ಇನ್ನೊಂದು ಮಹತ್ವದ ಸಂಗತಿ ಏನೆಂದರೆ ಆರ್‌ಎಸ್‌ಎಸ್‌ ಅನ್ನು ಹಳೆಯ ಸಂಘಟನೆ ಎಂಬಂತೆ ಬಿಂಬಿಸದೇ ನಗರದ ಯುವಜನರ ಮುಂದೆ ಇಂದಿನ ಕಾಲಕ್ಕೆ ತಕ್ಕಂತೆ ಆಧುನಿಕ ಸಂಸ್ಥೆಯಾಗಿ ತೋರ್ಪಡಿಸುವ ಉದ್ದೇಶದಿಂದ ಭಾಗವತ್ ಅವರು ಜೆನ್-ಝೀ ಶಬ್ಧಕೋಶವನ್ನು ಬಳಸುವ ಪ್ರಯತ್ನ ಮಾಡಿದರು. ಉದಾಹರಣೆಗೆ clock it ಅಥವಾ LGBTQ ಪದಗಳ ಬಳಕೆ.

ಹೊಸ ಸಾಮಾಜಿಕ ಭಾಷೆಯ ಬಳಕೆ

ಹೊಸ ರಾಜಕೀಯ ಅಥವಾ ಸಾಮಾಜಿಕ ಭಾಷೆಯನ್ನು ಬಳಸುವುದು ಆರ್‌ಎಸ್‌ಎಸ್‌ಗೆ ಹೊಸದೇನೂ ಅಲ್ಲ. ಭಾರತೀಯ ರಾಜಕಾರಣದ ಮುಖ್ಯ ವೇದಿಕೆಗೆ ಬರಲು ಸಂಘ ಪರಿವಾರವು ರಾಮಜನ್ಮಭೂಮಿ ಚಳವಳಿಯ ಹೋರಾಟದ ಹಾದಿಯನ್ನು ಆರಿಸಿಕೊಂಡ ಕಾಲದಿಂದಲೂ ಇದು ಚಾಲ್ತಿಯಲ್ಲಿದೆ. ಈ ಹಿಂದೆ ಭಾಗವತ್ ಕೂಡ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡಿದ್ದಿದೆ. ಉದಾಹರಣೆಗೆ, 2018ರಲ್ಲಿ ಹೊಸ ದೆಹಲಿಯ ವಿಜ್ಞಾನ ಭವನದಲ್ಲಿ ನೀಡಿದ ಸಾರ್ವಜನಿಕ ಉಪನ್ಯಾಸಗಳಲ್ಲಿ, ಹಿಂದುಯೇತರರೇ ನಿಜವಾದ ಆಂತರಿಕ ಸವಾಲುಗಳು ಎಂದು ಬಣ್ಣಿಸಲು ಎಂ.ಎಸ್. ಗೋಳ್ವಾಲ್ಕರ್ ಬಳಸುತ್ತಿದ್ದ ಪದಬಳಕೆಯಿಂದ ಅವರು ದೂರ ಸರಿದರು. ಬದಲಿಗೆ, "ಮುಸ್ಲಿಮರಿಲ್ಲದೆ ಹಿಂದುತ್ವ ಅಪೂರ್ಣ" ಎಂದು ಪ್ರತಿಪಾದಿಸುತ್ತಾ, ಭಾರತೀಯರೆಲ್ಲರೂ "ಒಂದೇ ಡಿಎನ್ಎ" ಹೊಂದಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ನವೀಕರಿಸಿದರು.

ಇಂದು ಮುಂಬೈನಲ್ಲಿ ಮಾಡಿದಂತೆ, ಅಂದೂ ಸಹ ಭಾಗವತ್ ಅವರು ಎಚ್ಚರಿಕೆಯಿಂದ ಆಯ್ದುಕೊಂಡ ತಮ್ಮ ಶ್ರೋತೃಗಳ ಭಾಷೆಯನ್ನೇ ಮಾತನಾಡಿದರು. ಆದಾಗ್ಯೂ, ಸತ್ಯವೇನೆಂದರೆ ಆರ್‌ಎಸ್‌ಎಸ್‌ ಡಿಎನ್ಎ ಬದಲಾಗಿಲ್ಲ; ಉದಾಹರಣೆಗೆ, ವಿಷಮಲಿಂಗೇತರ (non-heteronormative- ಸಾಂಪ್ರದಾಯಿಕ ಗಂಡು-ಹೆಣ್ಣಿನ ಸಂಬಂಧದ ನಿಯಮಗಳು ಮತ್ತು ರೂಢಿಗಳಿಗೆ ಸೀಮಿತವಾಗದಿರುವ, ಅಥವಾ ಅದಕ್ಕಿಂತ ಭಿನ್ನವಾಗಿರುವ ಲೈಂಗಿಕತೆ, ಲಿಂಗ ಗುರುತು ಹಾಗೂ ಸಂಬಂಧಗಳು-ಉದಾ: ಕ್ವೀರ್, ಸಲಿಂಗಕಾಮಿ, ದ್ವಿಲಿಂಗಕಾಮಿ ಮುಂತಾದವು) ಗುರುತುಗಳು ಮಾನವ ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳಲು ಅವರು LGBTQ+ ಪದವನ್ನು ಬಳಸಿದರು, ಆದರೆ ತಾವೇ ಮೊದಲು ಸಾಗಿದ ಹಾದಿಯನ್ನು ದಾಟಿ ಮುಂದೆ ಹೋಗಲಿಲ್ಲ ಅಥವಾ ಆರ್‌ಎಸ್‌ಎಸ್‌ ಪದಾಧಿಕಾರಿಗಳು ಈಗಾಗಲೇ ಹೇಳಿದ್ದಕ್ಕಿಂತ ಹೆಚ್ಚೇನನ್ನೂ ಹೇಳಲಿಲ್ಲ.

ಹಿಂದೆ ಸರಿಯದ ಪಿತೃಪ್ರಧಾನ ಸಿದ್ಧಾಂತದ ನಿಲುವು

ಅವರು ಸಾಮಾಜಿಕ ಹೊಂದಾಣಿಕೆ, ಸಹಾನುಭೂತಿ ಮತ್ತು ಸಲಿಂಗ ಸಹವಾಸಕ್ಕೆ ಒಂದು ಔಪಚಾರಿಕ ಕಾನೂನು ಚೌಕಟ್ಟನ್ನು ಪ್ರತಿಪಾದಿಸಿದರು. ಆದರೆ ಅವರು ಹಿಂದೂ ಲಕ್ಷ್ಮಣ ರೇಖೆಯ (ನೈತಿಕ ಗಡಿಯ) ಒಳಗೇ ಉಳಿದುಕೊಂಡು ಸಲಿಂಗ ವಿವಾಹವನ್ನು ಅನುಮೋದಿಸಲಿಲ್ಲ. ತಾವು "ಸಂಪ್ರದಾಯದೊಂದಿಗೆ ಚೆಲ್ಲಾಟವಾಡುವ" ವಿಷಯದ ವಿರೋಧಿ ಎಂದು ಮತ್ತೊಮ್ಮೆ ವಾದಿಸಿದರು.

ಇದು ಮೂಲಭೂತ ಸಾಂವಿಧಾನಿಕ ಸಮಾನತೆಯನ್ನು ಕೇವಲ ಸಾಮಾಜಿಕ ಅನುಮತಿಯ ವಿಷಯವನ್ನಾಗಿ ತಗ್ಗಿಸುವ ಪ್ರಯತ್ನಕ್ಕಿಂತ ಹೆಚ್ಚೇನೂ ಅಲ್ಲ. ಆರ್‌ಎಸ್‌ಎಸ್‌ ತನ್ನ ಮೂಲಭೂತ ಪಿತೃಪ್ರಧಾನ ಮತ್ತು ಬಹುಸಂಖ್ಯಾತ ಸಿದ್ಧಾಂತದಿಂದ ಹಿಂದೆ ಸರಿಯುತ್ತಿಲ್ಲ ಎಂಬುದನ್ನು ಗಮನಿಸಬೇಕು. ಮೂಲಭೂತವಾಗಿ, ಭಾಗವತ್ ಅವರ ಈ ಸಂವಾದವು ಇಮೇಜ್ ಮ್ಯಾನೇಜ್ಮೆಂಟ್ ಹಾಗೂ ಯುವಜನರ ಆತಂಕವನ್ನು ಮುಂಚಿತವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಅಥವಾ ಹೈಜಾಕ್ ಮಾಡುವ ಯತ್ನಕ್ಕಿಂತ ಹೆಚ್ಚೇನೂ ಆಗಿರಲಿಲ್ಲ.

Gen-Z ಬಗ್ಗೆ ಮೃದು ಪೋಷಣೆ

ಆದರೆ, "ದೊಡ್ಡಣ್ಣ" ತನ್ನ ಮನಸ್ಸಿನಲ್ಲಿರುವ ಹಿರಿಯತನದ ಭಾವನೆಯನ್ನು ಬಿಟ್ಟುಕೊಡಲು ಸಾಧ್ಯವೇ? Gen-Z ಬಗ್ಗೆ ಒಂದೆರಡು ಮೆಚ್ಚುಗೆಯ ಮಾತುಗಳಾಡಿದ್ದು, ಒಂದು ಮುಖವಾಡದ ಮೂಲಕ ಅವರ ಮನಸ್ಸನ್ನು ಪ್ರವೇಶಿಸುವ ಉದ್ದೇಶದಿಂದಲೇ ಹೊರತು ಬೇರೆ ಇನ್ನೇನೂ ಅಲ್ಲ. ಆದರೆ ಭಾಗವತ್ ಅವರು, ಯುವಕರನ್ನು "ಭಾವನಾಜೀವಿಗಳು ಮತ್ತು 'ಶಾಂತ ಮನಸ್ಸಿನಿಂದ' ಯೋಚಿಸದವರು" ಎಂದು ಹೀಯಾಳಿಸಲು ಅಥವಾ ಅವರನ್ನು ಕಿರಿಯವರಂತೆ ಕಾಣಲು ತುಸು ಯೋಚಿಸಲೂ ಇಲ್ಲ.

ಆರ್‌ಎಸ್‌ಎಸ್‌ ತನ್ನ ಶಿಸ್ತು ಮತ್ತು ನಿಯಮಗಳ ಮೂಲಕ ಹದ್ದುಬಸ್ತಿನಲ್ಲಿಡಲು ಎಲ್ಲಿಯ ವರೆಗೆ ಸಾಧ್ಯವಾಗುತ್ತದೋ ಅಲ್ಲಿಯ ತನಕ ಮಾತ್ರ ಯುವಕರ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಸಂಸ್ಥೆಯ ಕಟ್ಟುನಿಟ್ಟಿನ ಸ್ವರೂಪವನ್ನು ಮೃದುಗೊಳಿಸಲು ಮತ್ತು ಯುವಕರ ಅಸಮಾಧಾನವು ಸರ್ಕಾರದ ವಿರುದ್ಧದ ಹೋರಾಟವಾಗಿ ಬದಲಾಗದಂತೆ ತಡೆಯಲು ಸರಸಂಘಚಾಲಕರು ಪ್ರಯತ್ನಿಸಿದ್ದು ಗಮನಿಸಬಹುದಾಗಿತ್ತು.

ಸಂಘ ಪರಿವಾರದ ದ್ವಂದ್ವ ನಡವಳಿಕೆ

ಆದರೆ, ಎಬಿವಿಪಿಯಂತಹ ಸಂಘಟನೆಗಳು ಮತ್ತು ವಿದ್ಯಾರ್ಥಿಗಳ ವಿರೋಧವನ್ನು ಹತ್ತಿಕ್ಕುವ ಸರ್ಕಾರಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸದಲ್ಲಿಯೇ ಅಸಲಿ ಸಮಸ್ಯೆಯಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥರು ಹೊರಗೆ ಶಾಂತಿಯುತವಾಗಿ ಮಾತನಾಡಿದರೆ, ಆಂತರಿಕವಾಗಿ ಅವರ ಇಡೀ ಸಂಸ್ಥೆಯು ತನ್ನದೇ ಆದ ಹಿಂದುತ್ವ/ಬಹುಸಂಖ್ಯಾತ ಸಿದ್ಧಾಂತವನ್ನು ಜಾರಿಗೆ ತರಲು ಕೆಲಸ ಮಾಡುತ್ತಿರುತ್ತದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಸಂಘದ ಅನುಮೋದಿತ ಸಂವಾದಕರಾದ ರಿಷಭ್ ಶಾ ಅವರೊಂದಿಗೆ ನಡೆದ ಈ ಸಾರ್ವಜನಿಕ ಸಂವಾದದಲ್ಲಿ, ಪ್ರತಿಭಟನೆಗಳು ಪ್ರಜಾಸತ್ತಾತ್ಮಕ ಸಂವಾದದ ಒಂದು ಕಾನೂನುಬದ್ಧ ರೂಪ ಎಂದು ಭಾಗವತ್ ಮಾತನಾಡಿದರು.

ಆದರೆ ಮೇಲೆ ಹೇಳಿದ ಅದೇ ಆರ್‌ಎಸ್‌ಎಸ್‌ ಅಂಗಸಂಸ್ಥೆಗಳು ಅಥವಾ ಸರ್ಕಾರಿ ವ್ಯವಸ್ಥೆಯು, ವಿದ್ಯಾರ್ಥಿ ನಾಯಕರನ್ನು ಮತ್ತು ಪ್ರತಿಭಟನಾಕಾರರನ್ನು ದಿನನಿತ್ಯ "ರಾಷ್ಟ್ರದ್ರೋಹಿಗಳು" ಎಂದು ಹಣೆಪಟ್ಟಿ ಕಟ್ಟುತ್ತದೆ.

ವಾಸ್ತವವಾಗಿ, ರಿಷಭ್ ಶಾ ಅವರ ಮುಕ್ತಾಯದ ಸಾಲಿನಲ್ಲಿಯೇ ಒಂದು ಪ್ರಮುಖ ಸುಳಿವು ಅಡಗಿತ್ತು: "ಆಂದೋಲನ (ಪ್ರತಿಭಟನೆ) ಎಲ್ಲವೂ ಅಲ್ಲ, ಸಂವಾದ ಎಂಬುವುದೊಂದು ಇದೆ". ಸಂಸತ್ತಿನಲ್ಲಿರಲಿ, ಬೀದಿಗಳಲ್ಲಿ ಪ್ರತಿಭಟನಾಕಾರರ ಜೊತೆಗೇ ಇರಲಿ, ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲೇ ಇರಲಿ- ಸಂವಾದದ ಕೊರತೆಯಿಂದಾಗಿ ಸರ್ಕಾರ ಹಾಗೂ ಆಡಳಿತ ಪಕ್ಷಕ್ಕೂ ಅದರ ವಿರೋಧಿಗಳು ಮತ್ತು ಟೀಕಾಕಾರರಿಗೂ ನಡುವೆ ಮುಂದುವರಿದೇ ಇರುವ ಸಂಘರ್ಷದ ಬಗ್ಗೆ ಬಹುಶಃ ಅವರಿಗೆ ಅರಿವಿಲ್ಲದೇ ಇರಬಹುದು.

ಈ ಸಂವಾದದಲ್ಲಿ, ಭಾಗವತ್ ಅವರು ಪ್ರತಿಭಟಿಸುವ ಉತ್ಸಾಹವನ್ನು ಶ್ಲಾಘಿಸಿದರು. ಆದರೆ, ಈ ಸಭೆಗೆ ಸಾರ್ವಜನಿಕ ಹಿನ್ನೆಲೆಯನ್ನು ಒದಗಿಸಿದ ಪ್ರತಿಭಟನೆಗಳಿಗೆ ಕಾರಣವಾದ ನೀತಿ ವೈಫಲ್ಯಗಳಿಗೆ (ಶಿಕ್ಷಣದ ಖಾಸಗೀಕರಣ ಅಥವಾ ನಿರುದ್ಯೋಗ) ನೇರವಾಗಿ ರಾಜಕೀಯ ಆಡಳಿತ ವ್ಯವಸ್ಥೆಯನ್ನೇ ಹೊಣೆಗಾರರನ್ನಾಗಿ ಮಾಡುವುದನ್ನು ತಪ್ಪಿಸಿದರು.

ಸಮತೋಲನ ಕಾಯ್ದುಕೊಳ್ಳುವ ತಂತ್ರ

ಆಡಳಿತರೂಢ ಬಿಜೆಪಿಯೊಂದಿಗೆ ಸಂಬಂಧವನ್ನು ಕೆಡಿಸಿಕೊಳ್ಳದೆ, ನೈತಿಕ ಅಧಿಕಾರವನ್ನು ಉಳಿಸಿಕೊಳ್ಳಲು ವ್ಯವಸ್ಥೆಯ ಲಕ್ಷಣಗಳನ್ನು ಟೀಕಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಆರ್‌ಎಸ್‌ಎಸ್‌ನ ಯತ್ನಕ್ಕೆ ಇದು ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ.

ಬಿಜೆಪಿಯು ಸಂಸತ್ನಲ್ಲಿ ಬಹುಮತ ಸಾಧಿಸಲು ವಿಫಲವಾಗಿ, ಸರ್ಕಾರ ರಚಿಸಲು ಮಿತ್ರಪಕ್ಷಗಳನ್ನು ಅವಲಂಬಿಸಬೇಕಾಗಿ ಬಂದ 2024ರ ಲೋಕಸಭಾ ಚುನಾವಣೆಯ ತೀರ್ಪಿನ ನಂತರ, ಮೋದಿ ಅವರನ್ನು ಆರಾಧನೆ ಮಾಡುವಂತಹ ಬೆಳವಣಿಗೆಯ ಬಗ್ಗೆ ತನಗೆ ವೈಯಕ್ತಿಕವಾಗಿ "ಸಮಸ್ಯೆ" ಇದೆ ಎಂದು ಭಾಗವತ್ ಮೊದಲು ಸಾರ್ವಜನಿಕವಾಗಿ ತಿಳಿಸಿದ್ದರು.

ಆದಾಗ್ಯೂ, 'ಆಪರೇಷನ್ ಸಿಂಧೂರ್' ನಂತರ, ಮತ್ತು 2025ರ ನವೆಂಬರ್ನಲ್ಲಿ ಬಿಹಾರ ಹಾಗೂ 2026ರ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭೆಗಳಲ್ಲಿ ಬಿಜೆಪಿ ಸತತವಾಗಿ ಗೆಲುವು ಸಾಧಿಸಿದ ನಂತರ, ಸರಸಂಘಚಾಲಕರು ಬಿಜೆಪಿಯ ಒಳಗೆ ಹಾಗೂ ಸಂಘ ಪರಿವಾರದಲ್ಲಿ ಮೋದಿಯವರ ಸರ್ವಾಧಿಕಾರಿ ಅಥವಾ ಪ್ರಬಲ ಅಸ್ತಿತ್ವಕ್ಕೆ ಕ್ರಮೇಣ ಹೊಂದಿಕೊಳ್ಳುತ್ತಿರುವುದು ಕಂಡುಬಂದಿತು.

ಮತ್ತೊಮ್ಮೆ, ನಾಯಕತ್ವಕ್ಕೆ ನೀಡಬೇಕಾದ ಎಚ್ಚರಿಕೆಯ ದಿಕ್ಕನ್ನು ತೋರಿಸುವ ವಿಚಾರದಲ್ಲಿ ಸರಸಂಘಚಾಲಕರು ಮುಚ್ಚುಮರೆ ಮಾಡಲಿಲ್ಲ: "ನೀವು ಮೊದಲು ಒಳಗಿನಿಂದಲೇ ನಾಯಕತ್ವ ವಹಿಸಬೇಕು, ಮಾದರಿಯಾಗಿ ನಿಂತು ನಾಯಕತ್ವ ನೀಡಬೇಕು. ನಾವು ನಾಯಕತ್ವ ಎನ್ನುವ ಪದವನ್ನು ಕೇಳಿದಾಗ, ಯಾರೋ ಒಬ್ಬರು ಮುಂದೆ ನಿಂತು ಭಾಷಣ ಮಾಡುವುದು, ಚುನಾವಣೆಗಳನ್ನು ಗೆಲ್ಲುವುದು, ಜನರಿಗೆ ಬೋಧನೆ ಮಾಡುವುದು ನೆನಪಿಗೆ ಬರುತ್ತದೆ. ಆದರೆ ಸಂಘದಲ್ಲಿ ಹಾಗೆ ಕೆಲಸ ಮಾಡುವುದಿಲ್ಲ; ನಾಯಕರು ಎಂದರೆ ಹಿಂದೆ ಉಳಿದುಕೊಂಡು, ಒಳಗಿನಿಂದಲೇ ಕೆಲಸ ಮಾಡುವವರು".

ಈ ಭಾಗದಲ್ಲಿ ಅಥವಾ ಇಡೀ ಸಂವಾದದಲ್ಲಿಯೂ ಅವರು ಎಲ್ಲಿಯೂ ಮೋದಿಯವರ ಹೆಸರನ್ನು ಬಳಸಲಿಲ್ಲ. ಆದರೆ ವೀಡಿಯೊ ಕೇಳುತ್ತಿರುವ ಅಥವಾ ವರದಿಯನ್ನು ಓದುತ್ತಿರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ಪ್ರಧಾನಿಯವರ ಹೆಸರೇ ಸುಳಿದಾಡುತ್ತಿದ್ದರೆ ಅದರಲ್ಲಿ ಅಚ್ಚರಿಯಿಲ್ಲ.

ಮೋದಿಯವರ ವ್ಯಕ್ತಿತ್ವದ ಲಕ್ಷಣಗಳ ಬಗ್ಗೆ ಭಾಗವತ್ ಅವರ ಈ ಪರೋಕ್ಷ ಟೀಕೆಯು, ಸಾಮೂಹಿಕ ಹಾಗೂ ಕಾರ್ಯಕರ್ತ-ಆಧಾರಿತ ಅಧಿಕಾರವನ್ನು ಬಯಸುವ ಆರ್‌ಎಸ್‌ಸ ಮತ್ತು ಮೋದಿಯವರ ಅತಿ-ವ್ಯಕ್ತಿತ್ವ ಕೇಂದ್ರೀಕೃತ ರಾಜಕೀಯ ಪ್ರಾಬಲ್ಯಕ್ಕೂ ನಡುವಿನ ಐತಿಹಾಸಿಕ ಉದ್ವಿಗ್ನತೆಯ ಪ್ರತಿಧ್ವನಿಯಾಗಿದೆ.

ಮೋದಿ ಆರಾಧನೆಯಿಂದ ಲಾಭ

ಆದರೆ ಈ ವ್ಯತ್ಯಾಸವು ಕಪಟತನದಿಂದ ಕೂಡಿದೆ. ಎಲ್ಲಕ್ಕೂ ಮೀರಿದ ಸಂಗತಿಯೆಂದರೆ, ಸಂಘ ಮತ್ತು ಅದರ ಪರಿವಾರವು ಮೋದಿಯವರ ಆರಾಧನೆಯಿಂದ ಲಾಭ ಪಡೆದುಕೊಂಡಿವೆ. ಭಾರತದ ಮೂಲೆಮೂಲೆಗಳಲ್ಲಿ ಮತ್ತು ಜೀವನದ ಪ್ರತಿಯೊಂದು ರಂಗದಲ್ಲಿಯೂ ಪರಿವಾರವು ಪ್ರಾಬಲ್ಯ ಸಾಧಿಸಲು ಅದೇ ಪ್ರಮುಖ ಕಾರಣವೆಂದರೆ ತಪ್ಪಲ್ಲ.

ಅಲ್ಲದೆ, ಆರ್‌ಎಸ್‌ಎಸ್‌ ತನ್ನ ಅಂಗಸಂಸ್ಥೆಗಳನ್ನು ಕೂಡ ಬಾಯಿಮುಚ್ಚಿಕೊಂಡು ಇರುವಂತೆ ಮಾಡಿದೆ. ಉದಾಹರಣೆಗೆ, ನಾನಾ ಪ್ರದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಮಾಡಿರುವ ಯಾವುದೇ ಪ್ರಮುಖ ವಿಷಯಗಳನ್ನು ಎಬಿವಿಪಿ ಎಂದಾದರೂ ಪ್ರಸ್ತಾಪ ಮಾಡಿದೆಯೇ? ಅಥವಾ ಮೋದಿಯವರ ಆಡಳಿತದಲ್ಲಿ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್ಟಿಎ), ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಗಳು (ಸಿಇಪಿಎ) ಹಾಗೂ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದಗಳ (ಟಿಇಪಿಎ) ನಡುವೆ 'ಸ್ವದೇಶಿ ಜಾಗರಣ ಮಂಚ್' ಎಷ್ಟು ಬಾರಿ ಧ್ವನಿ ಎತ್ತಿದೆ?

ಟಾಕ್-ಶೋ ಶೈಲಿ

ಭಾಗವತ್ ಅವರ ಈ ಸಂವಾದದ ಸ್ವರೂಪವು, ಸರಿಯಾದ ಸಮಯಕ್ಕೆ ಜೋರಾಗಿ ಚಪ್ಪಾಳೆ ತಟ್ಟಲು, ಸಂಭ್ರಮಿಸಲು ಮತ್ತು ಶಿಳ್ಳೆ ಹೊಡೆಯಲು ಸಿದ್ಧವಾಗಿರುವ ಆಯ್ದ ಪ್ರೇಕ್ಷಕರನ್ನೊಳಗೊಂಡ ಟಾಕ್-ಶೋಗೆ ಸಮನಾಗಿತ್ತು.

ಭಾಗವತ್ ಅವರು ಶಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಇದು ಮೊದಲೇನಲ್ಲ (ಅವರು 2016 ಮತ್ತು 2020ರಲ್ಲಿ ಸಮಾನ ಮನಸ್ಕ ಯುವಕರನ್ನು ಉದ್ದೇಶಿಸಿ ಮಾತನಾಡಿದ್ದರು), ಆದರೂ ಈ ಕಾರ್ಯಕ್ರಮವನ್ನು ಸೈದ್ಧಾಂತಿಕ ವಿಕಾಸದ ಒಂದು ಐತಿಹಾಸಿಕ ತಿರುವು ಎಂದು ವಿಮರ್ಶೆ ಮರೆತ ವೀಕ್ಷಕರಿಗೆ ಬಿಂಬಿಸಲು ಆರ್‌ಎಸ್‌ಎಸ್‌ ನಾಯಕತ್ವವು ಶ್ರಮಿಸಿತು.

ಈ ಕಾರ್ಯಕ್ರಮವು ಮೊದಲೇ ಆಯೋಜಿಸಲಾಗಿದ್ದರೂ, ಇತ್ತೀಚಿನ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಮತ್ತು ಸಂಘಟನೆಯು ತನ್ನ ಸಹಾನುಭೂತಿಯನ್ನು ಹಾಗೂ ಬೆಂಬಲವನ್ನು ವ್ಯಕ್ತಪಡಿಸಲು ಇದು ವೇದಿಕೆಯಾಯಿತು ಎಂಬ ಅಭಿಪ್ರಾಯವನ್ನು ಮೂಡಿಸಲು ಆರ್‌ಎಸ್‌ಎಸ್‌ ಮತ್ತು ಖುದ್ದಾಗಿ ಭಾಗವತ್ ಪ್ರಯತ್ನ ಮಾಡಿದರು.

ಕೆಲವು ಧನಾತ್ಮಕ ಅಂಶಗಳು

ಇದೆಲ್ಲದರ ಹೊರತಾಗಿಯೂ, ಭಾಗವತ್ ಅವರ ಮಾತುಗಳಲ್ಲಿ ಕೆಲವು "ಧನಾತ್ಮಕ ಅಂಶಗಳು" ಇದ್ದವು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರತಿಭಟನಾಕಾರರು ರಾಷ್ಟ್ರದ್ರೋಹಿಗಳಲ್ಲ ಬದಲಿಗೆ "ನಮ್ಮವರೇ" ಎಂದು ಘೋಷಿಸುವ ಮೂಲಕ ಪ್ರತಿಭಟನೆಯ ಮೇಲಿನ ಕಳಂಕವನ್ನು ದೂರ ಮಾಡಿದರು.

ಯಾವುದೇ ರೀತಿಯ ಪ್ರತಿಭಟನೆಗಳ ಬಗ್ಗೆ ಮೋದಿಯವರ ಧೋರಣೆಗೆ ಇದು ವಿರುದ್ಧವಾಗಿ ಕಾಣಿಸಬಹುದು. ಆದರೆ ಪರಸ್ಪರ ಒಂದಕ್ಕೊಂದು ಬೆಸೆದುಕೊಂಡಿದ್ದರೂ ಸಹ, ಆರ್‌ಎಸ್‌ಎಸ್‌ ಮತ್ತು ಮೋದಿ ಅವರದ್ದು ಪ್ರತ್ಯೇಕ ಹಾದಿ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಎಂಬುದಂತೂ ದಿಟ.

ಗುರುತಿಸಬಹುದಾದ ಮತ್ತಿತರೆ "ಉತ್ತಮ" ಅಂಶಗಳೆಂದರೆ, ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಪ್ರತಿಭಟನೆಗಳ ಮೂಲಕ ಎತ್ತಿ ತೋರಿಸಿದ ಆರ್ಥಿಕ ಬಿಕ್ಕಟ್ಟು ಕಠಿಣ ಸತ್ಯ ಎಂಬುದನ್ನು ಭಾಗವತ್ ಒಪ್ಪಿಕೊಂಡಿದ್ದಾರೆ. ಉದ್ಯೋಗಗಳಿಲ್ಲ, ಶಿಕ್ಷಣ ವ್ಯವಸ್ಥೆಯು ದೋಷಪೂರಿತವಾಗಿದೆ ಮತ್ತು ಬಹುತೇಕ ಡಿಪ್ಲೋಮಾ ಹಾಗೂ ಪದವಿಗಳು ಕೇವಲ ʼಪಾಕೆಟ್ ಮನಿʼಗೆ (ಅದೂ ಸಿಕ್ಕರೆ ಹೆಚ್ಚು) ಸೀಮಿತವಾಗಿದೆ.

ಪ್ರಮುಖವಾಗಿ, ಸಾರ್ವಜನಿಕ ಶಿಕ್ಷಣಕ್ಕಾಗಿ ಜಿಡಿಪಿಯ ಶೇ. 6 ರಷ್ಟು ಹಣವನ್ನು ಮೀಸಲಿಡಬೇಕು ಎಂಬ ದೀರ್ಘಕಾಲದ ಪ್ರಗತಿಪರ ಬೇಡಿಕೆಗೆ ಭಾಗವತ್ ಅವರು ಬೆಂಬಲ ವ್ಯಕ್ತಪಡಿಸಿದರು ಮತ್ತು ಶಾಲಾ ಶಿಕ್ಷಣದ ವ್ಯಾಪಾರೀಕರಣಕ್ಕೆ ಅಂತ್ಯ ಹಾಡಬೇಕು ಎಂದು ಕರೆ ನೀಡಿದರು.

ಮುಖವಾಡ ಕಳಚಿದ ಕ್ಷಣ

ಆದರೆ ಮೂಲಭೂತ ವಿಷಯಗಳು ಚರ್ಚೆಗೆ ಬಂದಾಗ ಅವರ ಮುಖವಾಡ ಕಳಚಿ ಬಿದ್ದಿತ್ತು. ಉದಾಹರಣೆಗೆ ಜಾತಿಯ ವಿಷಯಕ್ಕೆ ಬಂದರೆ, ಸಾಮಾಜಿಕ ತಾರತಮ್ಯದಿಂದಾಗಿ ಮೀಸಲಾತಿ ಅನಿವಾರ್ಯ ಎಂದು ಅವರು ಹೇಳಿದರೂ, ಆರ್ಥಿಕವಾಗಿ ಸದೃಢರಾದ ಫಲಾನುಭವಿಗಳು ಸ್ವಯಂಪ್ರೇರಿತರಾಗಿ ಮೀಸಲಾತಿ ಸೌಲಭ್ಯವನ್ನು ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು. ವ್ಯವಸ್ಥಿತ ಅಸಮಾನತೆಯ ಮೇಲಿನ ಭಾರವನ್ನು ಭಾಗವತ್ ನೇರವಾಗಿ ವ್ಯಕ್ತಿಗಳ ಮೇಲೆಯೇ ಹೊರಿಸುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಆದರೆ, ರಾಜ್ಯ ಸರ್ಕಾರದ ದೌರ್ಜನ್ಯದ ವಿಷಯ ಬಂದಾಗ ಭಾಗವತ್ ಸಂಪೂರ್ಣ ತಡಬಡಾಯಿಸಿದರು. ಘಟನೆಗಳ ದೃಶ್ಯಗಳು ದಾಖಲಾಗಿದ್ದರೂ ಸಹ, "ಅಲ್ಲಿ ನಿಜವಾಗಿ ಏನಾಯಿತು" ಎಂಬುದರ ಬಗ್ಗೆ ತನಗೆ ತುಂಬಾ ಕಡಿಮೆ ತಿಳಿದಿದೆ ಎಂದು ಹೇಳಿ ಜಾರಿಕೊಳ್ಳಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Read More
Next Story