ಹಜರತ್ಬಾಲ್ ಮಸೀದಿಯಲ್ಲಿ ಅಶೋಕ ಲಾಂಛನ: ವಿವಾದದ ಕಿಡಿ ಹೊತ್ತಿಸಿದ ವಕ್ಫ್ ಮಂಡಳಿಯ ಪ್ರಮಾದ
x
ಈಗ ವಿವಾದಕ್ಕೆ ಒಳಗಾಗಿರುವ ಪ್ರಾರ್ಥನಾ ಮಂದಿರವು ಒಂದು ಮಾಮೂಲಿ ಮಸೀದಿ ಅಲ್ಲ, ಬದಲಾಗಿ ಕಾಶ್ಮೀರದ ಹಜರತ್-ಬಾಲ್ ದರ್ಗಾ. ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಅದನ್ನೊಂದು ಪವಿತ್ರ ತಾಣವೆಂದು ಪರಿಗಣಿಸಲಾಗುತ್ತದೆ. ಇದನ್ನು ಅಪವಿತ್ರಗೊಳಿಸಲಾಗಿದೆ ಎಂದು ಜನರು ಭಾವಿಸಿದಾಗಲೆಲ್ಲಾ ಸಾಕಷ್ಟು ಕಲಹಕ್ಕೆ ಕಾರಣವಾಗಿದೆ.

ಹಜರತ್ಬಾಲ್ ಮಸೀದಿಯಲ್ಲಿ ಅಶೋಕ ಲಾಂಛನ: ವಿವಾದದ ಕಿಡಿ ಹೊತ್ತಿಸಿದ ವಕ್ಫ್ ಮಂಡಳಿಯ ಪ್ರಮಾದ

ಒಂದು ಸರ್ಕಾರಿ ಲಾಂಛನವನ್ನು ಅಧಿಕೃತ ದಾಖಲೆಗಳು ಮತ್ತು ತಾಣಗಳಲ್ಲಿ ಮಾತ್ರ ಬಳಸಬೇಕು. ಅದರ ಅರಿವಿಲ್ಲದ ವಕ್ಫ್ ಮಂಡಳಿ ಮಸೀದಿಯಲ್ಲಿ ಇದನ್ನು ಬಳಸಿ ಅಪಮಾನ ಮಾಡಿದೆ ಎಂದು ಅನ್ನಿಸುವುದಿಲ್ಲವೇ?


ಶ್ರೀನಗರದಲ್ಲಿರುವ ಹಜರತ್-ಬಾಲ್ ಪ್ರಾರ್ಥನಾ ಮಂದಿರದಲ್ಲಿರುವ, ಸರ್ಕಾರಿ ಲಾಂಛನ ಎಂದೇ ಕರೆಯಲಾಗುವ ಅಶೋಕ ರಾಷ್ಟ್ರೀಯ ಲಾಂಛನವನ್ನು ಕಳೆದ ವಾರ ಕೆಲವರು ನಾಶಗೊಳಿಸಿದ್ದಾರೆ ಎಂಬ ಆರೋಪದ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಜೆಪಿ ಮತ್ತೊಮ್ಮೆ ಧ್ವನಿ ಏರಿಸಿದೆ. ಆ ಮೂಲಕ ಇದು ಈಗಾಗಲೇ ತೀವ್ರ ವಿವಾದಕ್ಕೆ ಒಳಗಾಗಿರುವ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.

ಇಡೀ ಪ್ರಕರಣದ ಬಗ್ಗೆ ಹೇಳುವುದಾರೆ, ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದ ಈ ಘಟನೆಯು ಬಿಜೆಪಿ ಸ್ವತಃ ಸೃಷ್ಟಿಸಿಕೊಂಡ ಬಿಕ್ಕಟ್ಟು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಉದ್ಘಾಟನಾ ಫಲಕದಲ್ಲಿ ಎದ್ದು ಕಾಣುವಂತೆ ಲಾಂಛನದ ಸಿಂಹಗಳನ್ನು ಕೆತ್ತಿರುವುದನ್ನು ಕಂಡು ಕೆರಳಿದ ಜನರ ಗುಂಪಿನಿಂದ ಈ ಕೃತ್ಯ ನಡೆದಿದೆ.

ನಿಜಕ್ಕೂ ಇದನ್ನು ಇಷ್ಟೊಂದು ದೊಡ್ಡ ವಿವಾದವಾಗಿ ಮಾಡುವ ಅಗತ್ಯವಿರಲಿಲ್ಲ. ಯಾವುದೇ ಜನಬೆಂಬಲವಿಲ್ಲದ ಮತ್ತು ಪ್ರಸ್ತುತ ದೇಶದ ರಾಜಕೀಯ ಆಡಳಿತದ ಬೆಂಬಲ ಹೊಂದಿರುವ ಸ್ಥಳೀಯ ರಾಜಕಾರಣಿ ಮತ್ತು ಆಕೆಯ ಆಪ್ತವಲಯ ಈ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ. ಹಾಗಾಗಿ ಈ ವಿವಾದವು ಜನತೆ ಮತ್ತು ಈಗಾಗಲೇ ಅತೃಪ್ತರಾಗಿರುವ ಪ್ರದೇಶದ ಮೇಲೆ ಅನಗತ್ಯವಾಗಿ ಹೇರಲಾಗಿದೆ.

ನಾಯಕರನ್ನು ಮೆಚ್ಚಿಸುವ ಹುಕಿಗೆ ಬಿದ್ದ ಅಂದ್ರಾಬಿ

ಹೇಗಾದರೂ ಮಾಡಿ ಕೇಂದ್ರ ಮತ್ತು ಬಿಜೆಪಿ ನಾಯಕತ್ವದ ಬೆಂಬಲ ಪಡೆಯಬೇಕು ಎಂಬ ಜಿದ್ದಿಗೆ ಬಿದ್ದ ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿಯ ಅಧ್ಯಕ್ಷೆ ದರಖ್ಶಾನ್ ಅಂದ್ರಾಬಿ ನೇತೃತ್ವದ ಈ ಗುಂಪು, ನವದೆಹಲಿಯಲ್ಲಿರುವ ತಮ್ಮ ರಾಜಕೀಯ ನಾಯಕರನ್ನು ಮೆಚ್ಚಿಸುವ ಆಶಯದಿಂದ ಈ ಅಕ್ಷಮ್ಯ ಕೃತ್ಯ ಎಸಗಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ, ವಿಶೇಷವಾಗಿ ಕಣಿವೆ ಪ್ರದೇಶದಲ್ಲಿ ಅವರಿಗೆ ಯಾವುದೇ ಬೆಂಬಲವಿಲ್ಲದೇ ಇರುವುದು ಇದಕ್ಕೆ ಮುಖ್ಯ ಕಾರಣ.

ಲಭ್ಯವಿರುವ ವೀಡಿಯೊ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಗುರುತಿಸಲಾದ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿಯ ಅಧ್ಯಕ್ಷ ಸತ್ ಶರ್ಮಾ ಅವರು ಕರೆ ನೀಡಿರುವುದನ್ನು ಈ ಧರ್ಮನಿಂದೆಯ ಕೃತ್ಯಕ್ಕೆ ಸೇರಿಸಬಹುದಷ್ಟೇ.

ವರದಿಯ ಪ್ರಕಾರ, ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸ್ಥಳೀಯ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಅವರ ಮುಂದಿನ ಗತಿ ಏನಾಯಿತು ಎನ್ನುವ ಬಗ್ಗೆ ಯಾವುದೇ ಸುದ್ದಿ ಲಭ್ಯವಿಲ್ಲ.

ಈ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶರ್ಮಾ ಅವರು ಆಗ್ರಹಿಸಿರುವುದು ಆತಂಕಕಾರಿ ಸಂಗತಿ. ಯಾಕೆಂದರೆ ಇದು ಪಕ್ಷದ ನಕಲಿ ರಾಷ್ಟ್ರೀಯವಾದಿ ನಿಲುವನ್ನು ಪ್ರಚೋದಿಸುತ್ತದೆ. ಕೇಂದ್ರದ ಪ್ರತಿನಿಧಿಗಳಿಗೆ ಸೂಚಿಸುವ ಒಂದು ಪರೋಕ್ಷ ಮನವಿಯೆಂದರೆ, ಅವರ ವಿರುದ್ಧ ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇದರಿಂದ ಜಾಮೀನು ಸಿಗುವುದೂ ಅಸಾಧ್ಯವಾಗುತ್ತದೆ.

ಮಸೀದಿಯೊಳಗೆ ಅಳವಡಿಸಲಾದ ಫಲಕದಲ್ಲಿ ಸಾಂಕೇತಿಕ ಅಶೋಕ ಲಾಂಛನವನ್ನು ಕೆತ್ತಿರುವುದು ಸೂಕ್ತವೇ ಅಲ್ಲವೇ ಎಂಬುದನ್ನು ಅಂದ್ರಾಬಿ ಮತ್ತು ವಕ್ಫ್ ಮಂಡಳಿಯ ಇತರ ಅಧಿಕಾರಿಗಳು ಪರಿಗಣಿಸದೆ, ಶರ್ಮಾ ಅವರು ದೇಶದ ಸಂವಿಧಾನ ಮತ್ತು ಅದರ ಲಾಂಛನಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಒಂದು ಢಾಂಬಿಕ ಹೇಳಿಕೆ ನೀಡಿದ್ದಾರೆ.

ಈ ಮಾತನ್ನು ಯಾರೂ ಅಲ್ಲಗಳೆಯುವ ಹಾಗಿಲ್ಲ. ಆದರೆ, ಶರ್ಮಾ ಅವರು ರಾಷ್ಟ್ರೀಯ ಲಾಂಛನವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಲಾದ ಅನಾಮಿಕ ವ್ಯಕ್ತಿಗಳನ್ನು ದೂಷಿಸುವ ಮೊದಲು, ಹೆಚ್ಚು ಮಹತ್ವದ ಪ್ರಶ್ನೆಯನ್ನು ಕೇಳಬೇಕಾಗಿತ್ತಲ್ಲವೇ?

ಮಸೀದಿಯಲ್ಲಿ ಸರ್ಕಾರಿ ಲಾಂಛನ ಬೇಕೆ?

ಒಂದು ರಾಷ್ಟ್ರೀಯ ಲಾಂಛನವನ್ನು ಬಳಸಬೇಕಾಗಿರುವುದು ಕೇವಲ ಅಧಿಕೃತ ದಾಖಲೆಗಳು, ಕರೆನ್ಸಿ, ಪಾಸ್ಪೋರ್ಟ್ಗಳು ಮತ್ತು ಇತರ ಅಧಿಕೃತ ಸ್ಥಳಗಳಲ್ಲಿ. ಇದನ್ನು ಉಲ್ಲಂಘಿಸಿ ಮಸೀದಿಯೊಳಗೆ ಬಳಸುವ ಮೂಲಕ, ವಕ್ಫ್ ಮಂಡಳಿಯು ಭಾರತದ ಸರ್ಕಾರಿ ಲಾಂಛನವನ್ನು ಅವಮಾನಿಸಿಲ್ಲವೇ? ಇದಕ್ಕಿಂತಲೂ ಮಿಗಿಲಾಗಿ, ಪ್ರಶ್ನಿತ ಪ್ರಾರ್ಥನಾ ಮಂದಿರವು ಒಂದು ಸಾಮಾನ್ಯ ಮಸೀದಿ ಅಲ್ಲ, ಬದಲಾಗಿ ಕಾಶ್ಮೀರದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾದ ಹಜರತ್ಬಾಲ್ ದರ್ಗಾ. ಇದನ್ನು ಅಪವಿತ್ರಗೊಳಿಸಲಾಗಿದೆ ಎಂದು ಜನರು ಭಾವಿಸಿದಾಗಲೆಲ್ಲಾ ಸಾಕಷ್ಟು ಕಲಹಕ್ಕೆ ಕಾರಣವಾಗಿದೆ.

ಕಳೆದ ಒಂದು ವರ್ಷದಿಂದ ವಕ್ಫ್ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿದ್ದ ದರ್ಗಾದ ನವೀಕರಣ ಕಾರ್ಯ ಪೂರ್ಣಗೊಳ್ಳುವುದನ್ನು ಕಾಶ್ಮೀರದ ಜನರು ಕುತೂಹಲದಿಂದ ಎದುರು ನೋಡುತ್ತಿದ್ದರು.

ಪ್ರವಾದಿ ಮಹಮ್ಮದ್ ಅವರ ಜನ್ಮದಿನೋತ್ಸವವಾದ ಈದ್ ಮಿಲಾದ್ ಉನ್ನಬಿ ಹಬ್ಬದ ಸಂದರ್ಭದಲ್ಲಿ, ಅಂದರೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ದರ್ಗಾ ಸಾರ್ವಜನಿಕರ ಪ್ರವೇಶಕ್ಕಾಗಿ ಮತ್ತೆ ತೆರೆಯಲಾಗುವುದು ಎಂಬ ಘೋಷಣೆ ಜನರ ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ಪ್ರವಾದಿಯವರ ಪವಿತ್ರ ಅವಶೇಷವು ಇಲ್ಲಿ ಇರುವುದಾಗಿ ನಂಬಲಾಗಿದೆ.

ಭಾರತದಲ್ಲಿ ವಕ್ಫ್ ಮಂಡಳಿಯ ಮೊದಲ ಮತ್ತು ಏಕೈಕ ಮಹಿಳಾ ಅಧ್ಯಕ್ಷೆ ಅಂದ್ರಾಬಿ. ದರ್ಗಾದಲ್ಲಿ ಮೊದಲು ಸರಳವಾಗಿದ್ದ ಗೋಡೆಗಳನ್ನು ಸ್ಥಳೀಯ ಕಲೆಗಳು, ಇಸ್ಲಾಮಿಕ್ ಬರಹಗಳು ಮತ್ತು ಹೊಸ ತಂತ್ರಜ್ಞಾನದ ಗಿಜ್ಮೊಗಳಿಂದ ನಿಭಾಯಿಸಲಾದ ಪ್ರಕಾಶಮಾನ ದೀಪಗಳಿಂದ ಅಲಂಕರಿಸಿರುವುದನ್ನು ನೋಡಿ ಜನರು ಮೊದಲು ಆಶ್ಚರ್ಯಚಕಿತರಾದರು.

ಲಾಂಛನಕ್ಕೆ ಮುದ್ರೆಯೊತ್ತಿದರೇ ಕೇಂದ್ರ ಸಚಿವರು ?

ಔಪಚಾರಿಕ ಉದ್ಘಾಟನೆಗೂ ಮೊದಲೇ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ದರ್ಗಾಕ್ಕೆ ಭೇಟಿ ನೀಡಿ ಅಂದ್ರಾಬಿ ಅವರನ್ನು ಅಭಿನಂದಿಸಿದ್ದರು. ಈ ಇಡೀ ಯೋಜನೆಯು ಬಿಜೆಪಿಯ ರಾಜಕೀಯ ಪ್ರಚಾರದ ಭಾಗವಾಗಿದ್ದು, ಪಕ್ಷವು ಮತ್ತು ಕೇಂದ್ರ ಸರ್ಕಾರವು ದೂರವಿಡಲ್ಪಟ್ಟ ಸಮುದಾಯವನ್ನು ತಲುಪಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ರಿಜಿಜು ಅವರ ದರ್ಗಾ ಭೇಟಿ ಮತ್ತಷ್ಟು ಪುಷ್ಟಿ ನೀಡಿತು. ಆದರೂ ಪಕ್ಷವು ಇದಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದೆ ಎಂಬುದು ಗಮನಾರ್ಹ.

ಆದರೆ ನವೀಕರಣದ ಬಗ್ಗೆ ಮಾಹಿತಿ ಇರುವ ಫಲಕವನ್ನು ನೋಡಿದ ತಕ್ಷಣ ಜನರ ಆಕ್ರೋಶ ಇಮ್ಮಡಿಗೊಂಡಿದೆ. ವಕ್ಫ್ ಮಂಡಳಿ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, ಫಲಕದ ಮೇಲಿದ್ದ ಲಾಂಛನವನ್ನು ಹಾಳು ಮಾಡಿದ್ದಾರೆ. ಜನರ ದೃಷ್ಟಿಯಲ್ಲಿ, ಅಶೋಕ ಲಾಂಛನವನ್ನು ಒಂದು ಮಸೀದಿಯಲ್ಲಿ ಸ್ಥಾಪನೆ ಮಾಡಿದ್ದು, ಆ ಪ್ರಾರ್ಥನಾ ಮಂದಿರವು ಭಾರತ ಸರ್ಕಾರದ ಮತ್ತೊಂದು ಕಚೇರಿಯೆಂದು ಬಿಂಬಿಸುವ ಪ್ರಯತ್ನವಾಗಿ ಗ್ರಹಿಸಲ್ಪಟ್ಟಿದೆ.

ದರ್ಗಾದ ಮೇಲೆ ರಾಷ್ಟ್ರೀಯ ಲಾಂಛನವನ್ನು ಬಲವಂತವಾಗಿ ಹೇರುವ ನಿರ್ಧಾರವು, ಕಾಶ್ಮೀರಿ ಜನರು ಹಜರತ್ಬಾಲ್ ದರ್ಗಾವನ್ನು ಕೇವಲ ಒಂದು ಆಧ್ಯಾತ್ಮಿಕ ಸ್ಥಳವಾಗಿ ಮಾತ್ರವಲ್ಲದೆ, ರಾಜ್ಯದ ಶಕ್ತಿಗೆ ಅವರ ಸಾಮೂಹಿಕ ಪ್ರತಿರೋಧದ ಸಂಕೇತವಾಗಿಯೂ ನೋಡುತ್ತಾರೆ ಎಂಬ ಅಂಶವನ್ನು ನಿರ್ಲಕ್ಷಿಸಿದೆ.

ಒಂದು ಪವಿತ್ರ ಪ್ರಾರ್ಥನಾ ಮಂದಿರದೊಳಗೆ ಭಾರತದ ಅಧಿಕೃತ ಲಾಂಛನವನ್ನು ಛಾಪಿಸಿದ್ದು ಅಭೂತಪೂರ್ವ ಘಟನೆ. 1980 ಮತ್ತು 1990ರ ದಶಕದಲ್ಲಿ ಅಮೃತಸರದ ಹರ್ಮಂದಿರ್ ಸಾಹಿಬ್ (ಸ್ವರ್ಣ ದೇಗುಲ)ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದರೆ ಆಗ ಯಾವ ರೀತಿಯ ಪ್ರತಿಕ್ರಿಯೆ ಇರುತ್ತಿತ್ತೋ ಅದಕ್ಕಿಂತ ಈ ಘಟನೆಯೇನೂ ಭಿನ್ನವಾಗಿರಲಿಲ್ಲ. ಅದರಲ್ಲೂ ಆಪರೇಷನ್ ಬ್ಲೂ ಸ್ಟಾರ್ ನಂತರ ಹಾನಿಗೊಳಗಾದ ದೇವಾಲಯವನ್ನು ದುರಸ್ತಿ ಮತ್ತು ನವೀಕರಣದ ನಂತರ ತೆರೆದಾಗ ಇದೇ ರೀತಿಯ ಘಟನೆ ನಡೆದಿತ್ತು.

ಅದೇ ರೀತಿ, 2024ರ ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆಯ ನಂತರ, ಭಕ್ತರು ಅಶೋಕ ಲಾಂಛನವನ್ನು ಅದರೊಳಗೆ ನೋಡಿರುತ್ತಿದ್ದರೆ ಜನರ ಪ್ರತಿಕ್ರಿಯೆಯು ಕೂಡ ಇದೇ ರೀತಿ ಪ್ರತಿಕೂಲವಾಗಿರುತ್ತಿತ್ತು.

ರಾಷ್ಟ್ರೀಯ ಲಾಂಛನ ಎಲ್ಲಿ ಬಳಸಬೇಕೆಂಬ ಅರಿವಿರಲಿ

ಆಂದ್ರಾಬಿ ರಾಜ್ಯ ಬಿಜೆಪಿಯ ನಾಯಕತ್ವದ ಭಾಗವಾಗಿದ್ದರೂ ಅವರನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದು ರಾಜ್ಯ ಸರ್ಕಾರದ ತಪ್ಪಾಗಿತ್ತು. ಆಕೆಯನ್ನು ವಕ್ಫ್ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ಕೇಂದ್ರ ಸರ್ಕಾರವು ತನ್ನ ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಬಳಸಿ ಜನರ ಧಾರ್ಮಿಕ ಸಂವೇದನೆಗಳನ್ನು ತುಳಿಯುತ್ತಿದೆ ಎಂಬ ಆರೋಪಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಂತಾಯಿತು.

ಜನರ ಆಕ್ರೋಶಕ್ಕೆ ಅನೇಕ ಮಂದಿ ರಾಜಕೀಯ ನಾಯಕರು ಬೆಂಬಲ ನೀಡಿದರು. ಇದರಲ್ಲಿ ಮುಖ್ಯವಾಗಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ವಕ್ಫ್ ಮಂಡಳಿಯು ತನ್ನ “ತಪ್ಪಿಗೆ” ಕ್ಷಮೆಯಾಚಿಸಬೇಕು ಎಂದು ಸ್ಪಷ್ಟವಾಗಿ ಹೇಳಿದರು. ಅವರ ಪ್ರಕಾರ, ರಾಷ್ಟ್ರೀಯ ಲಾಂಛನವನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು, ಧಾರ್ಮಿಕ ಸಂಸ್ಥೆಗಳಿಗೆ ಅಲ್ಲ.

“ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಈ ರೀತಿ ಸರ್ಕಾರಿ ಲಾಂಛನವನ್ನು ಬಳಸುವುದನ್ನು ನಾನು ನೋಡಿಲ್ಲ. ಮಸೀದಿ, ದರ್ಗಾ, ಗುರುದ್ವಾರ ಮತ್ತು ಮಂದಿರಗಳು ಸರ್ಕಾರಿ ಸಂಸ್ಥೆಗಳಲ್ಲ. ಅವೆಲ್ಲವೂ ಧಾರ್ಮಿಕ ಸಂಸ್ಥೆಗಳು. ಇಂತಹ ಧಾರ್ಮಿಕ ಸಂಸ್ಥೆಗಳಲ್ಲಿ ಸರ್ಕಾರಿ ಲಾಂಛನಗಳನ್ನು ಬಳಸುವಂತಿಲ್ಲ” ಎಂದು ಅವರು ಯಾವುದೇ ಅಳುಕು ಇಲ್ಲದೆ ಹೇಳಿದರು.

ಇದೇ ರೀತಿ ಒಮರ್ ಅಬ್ದುಲ್ಲಾ ಅವರ ಭಾವನೆಗಳಿಗೆ ಸ್ಪಂದಿಸಿದವರು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಪಿಡಿಪಿ ಹಾಗೂ ಸಿಪಿಎಂನ ಇತರ ನಾಯಕರು. ಜಮ್ಮು-ಕಾಶ್ಮೀರದ ಅಷ್ಟೂ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿದ 2019ರ ಆಗಸ್ಟ್ ತಿಂಗಳ ಬಳಿಕ ಪೂರ್ತಿಗೆ ಪೂರ್ತಿ ಅಧಿಕಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ನಿಯಂತ್ರಣವಿದ್ದಿದ್ದು ಕೇಂದ್ರ ಸರ್ಕಾರದ ಬಳಿ. ಅಂದಿನಿಂದ ಕೇಂದ್ರಾಡಳಿತ ಪ್ರದೇಶವು ಪ್ರಪಾತದಂಚಿನಲ್ಲಿ ತೊನೆದಾಡುತ್ತಿದೆ ಎಂಬುದು ಅಕ್ಷರಶಃ ಸತ್ಯ.

ಜುಲೈ 13 ರಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತವು ಮುಫ್ತಿ ಸೇರಿದಂತೆ, ಮುಖ್ಯಮಂತ್ರಿ ಅಬ್ದುಲ್ಲಾ ಮತ್ತು ಇತರ ಎಲ್ಲಾ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದ ತಕ್ಷಣವೇ ಕೇಂದ್ರ ಸರ್ಕಾರದ ಕೈಮೇಲಾಯಿತು. ಈ ದಿನವನ್ನು ಸ್ಥಳೀಯ ಜನರು ಮತ್ತು ಅವರ ಪ್ರತಿನಿಧಿಗಳು 'ಹುತಾತ್ಮರ ದಿನ' ಎಂದೂ ಗುರುತಿಸುತ್ತಾರೆ.

ಪರಿಸ್ಥಿತಿ ತಿಳಿಗೊಳ್ಳುವ ಆಶಯ

ನರೇಂದ್ರ ಮೋದಿ ಸರ್ಕಾರಕ್ಕೆ ಕೇಂದ್ರೀಕೃತ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಇದ್ದರೂ, ದೇಶದ ಪ್ರತಿಯೊಂದು ಮೂಲೆಯಲ್ಲೂ, ಅದರಲ್ಲೂ ವಿಶೇಷವಾಗಿ ಸಮಸ್ಯೆಗಳಿರುವ ಪ್ರದೇಶಗಳಲ್ಲಿ, ಅದರ ಪ್ರತಿನಿಧಿಗಳ ಪ್ರತಿಯೊಂದು ನಡೆಯನ್ನೂ ಗಮನದಲ್ಲಿಡುವುದು ಸಾಧ್ಯವಾಗದ ಮಾತು.

ಈ ಎಲ್ಲ ಹಿನ್ನೆಲೆಯಲ್ಲಿ ಒಂದು ಪ್ರಮುಖ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ನಡೆಸುವಾಗ ಹೆಚ್ಚು ವಿವೇಚನೆಯಿಂದ ಕೂಡಿರಬೇಕು ಮತ್ತು ನ್ಯಾಯಸಮ್ಮತವಾಗಿರಬೇಕು. ಯಾರು ಯಾವತ್ತೂ ನಾಯಕತ್ವದ ಮೆಚ್ಚುಗೆ ಗಳಿಸಲು ಆತುರಪಡುವವರನ್ನು ನಿಶ್ಚಿತವಾಗಿ ದೂರವಿಡಬೇಕು.

ಈತ ತಲೆದೋರಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಬಿಜೆಪಿಯ ಕೇಂದ್ರೀಯ ನಾಯಕತ್ವವು ಮತ್ತು ಸರ್ಕಾರದಲ್ಲಿರುವ ಅದರ ಪ್ರಮುಖ ಪ್ರತಿನಿಧಿಗಳು ಸಾಧ್ಯವಾದಷ್ಟು ಬೇಗ ಪರಿಸ್ಥಿತಿಯನ್ನು ತಿಳಿಗೊಳಿಸುವುದು ಉತ್ತಮ.

ಈಗಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಪರಿಸ್ಥಿತಿಯನ್ನು ತಹಬಂದಿಗೆ ತರಲು ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಸರ್ಕಾರದ ಪ್ರಮುಖ ಪ್ರತಿನಿಧಿಗಳು ಪ್ರಯತ್ನ ನಡೆಸಬೇಕು. ಅದಕ್ಕಾಗಿ ಯಾವುದೇ ಆತುರಕ್ಕೆ ಬೀಳುವ ಅಗತ್ಯವಿಲ್ಲ. ಜೊತೆಗೆ ಶರ್ಮಾ ಅವರಂತಹವರ ಮೇಲೆ ನಿಯಂತ್ರಣ ಹೇರುವುದು ಉತ್ತಮ. ಇನ್ನು ಆಂದ್ರಾಬಿ ಅವರ ವಿಷಯಕ್ಕೆ ಬಂದರೆ, ಅಧಿಕೃತ ಲಾಂಛನವನ್ನು ಪವಿತ್ರ ಸ್ಥಳದ ಮೇಲೆ ಮುದ್ರಿಸುವ ನಿರ್ಧಾರಕ್ಕಾಗಿ ಜನರು ಮತ್ತು ಅವರ ಪ್ರತಿನಿಧಿಗಳಿಂದ ವ್ಯಕ್ತವಾಗುತ್ತಿರುವ ಬೇಡಿಕೆಗಳನ್ನು ಮನ್ನಿಸಲು ವಿಷಾದ ವ್ಯಕ್ತಪಡಿಸುವಂತೆ ಆಕೆಯ ಮನವೊಲಿಸುವುದು ನಾಯಕತ್ವದ ಜವಾಬ್ದಾರಿ.

Read More
Next Story