West Bengal, Tamil Nadu elections: Campaigning ends; Development, identity and Vijay factor crucial
x

ಸಾಂದರ್ಭಿಕ ಚಿತ್ರ

ಪಶ್ಚಿಮ ಬಂಗಾಳ, ತಮಿಳುನಾಡು ಚುನಾವಣೆ: ಪ್ರಚಾರ ಅಂತ್ಯ; ಅಭಿವೃದ್ಧಿ, ಅಸ್ಮಿತೆ ಮತ್ತು ವಿಜಯ್ ಫ್ಯಾಕ್ಟರ್ ನಿರ್ಣಾಯಕ

ಟಿಎಂಸಿ ಈ ಚುನಾವಣೆಯನ್ನು ಬಂಗಾಳಿ ಅಸ್ಮಿತೆಯ ಹೋರಾಟ ಎಂದು ಬಿಂಬಿಸಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ವಲಸಿಗರ ಮೇಲೆ ದಾಳಿಯಾಗುತ್ತಿದೆ ಎಂದು ಆರೋಪಿಸಿದೆ.


Click the Play button to hear this message in audio format

ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ವಿಧಾನಸಭಾ ಚುನಾವಣೆಗಳ (2026) ಪ್ರಚಾರ ಕಣವೀಗ ರಂಗೇರಿ, ಅಂತಿಮ ಘಟ್ಟ ತಲುಪಿದೆ. ಏಪ್ರಿಲ್ 23ರಂದು ಪಶ್ಚಿಮ ಬಂಗಾಳದ 152 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ತಮಿಳುನಾಡಿನಲ್ಲೂ ಪ್ರಚಾರ ಅಂತ್ಯಗೊಂಡಿದೆ.

ಎರಡೂ ರಾಜ್ಯಗಳಲ್ಲಿ ಪ್ರಬಲ ಪ್ರಾದೇಶಿಕ ಪಕ್ಷಗಳಾದ ಟಿಎಂಸಿ ಹಾಗೂ ಡಿಎಂಕೆ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಕಣಕ್ಕಿಳಿದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದರೆ, ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಇದೇ ವೇಳೆ, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಹೊಸ ರಾಜಕೀಯ ಪ್ರವೇಶವು ತೀವ್ರ ಕುತೂಹಲ ಮೂಡಿಸಿದೆ.

ಪಶ್ಚಿಮ ಬಂಗಾಳ: ಚುನಾವಣೆಯ 5 ಪ್ರಮುಖ ಅಸ್ತ್ರಗಳು

ಬಂಗಾಳದಲ್ಲಿ ಅಸ್ಮಿತೆ, ವಲಸೆ, ಮತ್ತು ಭ್ರಷ್ಟಾಚಾರವೇ ಪ್ರಮುಖ ಪ್ರಚಾರದ ವಿಷಯಗಳಾಗಿವೆ.

1. SIR ವಿವಾದ ಮತ್ತು ಮತದಾರರ ಪಟ್ಟಿ

ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಬಂಗಾಳದಲ್ಲಿ ಬರೋಬ್ಬರಿ 91 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದನ್ನು ಸಿಎಂ ಮಮತಾ ಬ್ಯಾನರ್ಜಿ 'ಬಂಗಾಳಿಗಳ ಹಕ್ಕು ಕಸಿದುಕೊಳ್ಳುವ ಬಿಜೆಪಿಯ ತಂತ್ರ' ಎಂದು ವಿರೋಧಿಸಿದ್ದರೆ, ಬಿಜೆಪಿ ಇದನ್ನು ನುಸುಳುಕೋರರನ್ನು (ಬಾಂಗ್ಲಾದೇಶಿ, ರೋಹಿಂಗ್ಯಾ) ಹೊರಹಾಕುವ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದೆ.

2. ಬಂಗಾಳಿ ಅಸ್ಮಿತೆ

ಟಿಎಂಸಿ ಈ ಚುನಾವಣೆಯನ್ನು ಬಂಗಾಳಿ ಅಸ್ಮಿತೆಯ ಹೋರಾಟ ಎಂದು ಬಿಂಬಿಸಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ವಲಸಿಗರ ಮೇಲೆ ದಾಳಿಯಾಗುತ್ತಿದೆ ಎಂದು ಆರೋಪಿಸಿರುವ ಟಿಎಂಸಿ, 'ಹೊರಗಿನವರ' (Bohiragoto) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

3. ಮಟುವಾ ಸಮುದಾಯ

ಬಂಗಾಳದ ಸುಮಾರು 50 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ಎಸ್ಸಿ-ಹಿಂದೂ ನಿರಾಶ್ರಿತ 'ಮಟುವಾ' ಸಮುದಾಯದ ಒಲವು ಯಾರ ಕಡೆಗಿದೆ ಎಂಬುದು ಕುತೂಹಲ ಮೂಡಿಸಿದೆ. SIR ಪ್ರಕ್ರಿಯೆಯಲ್ಲಿ ಹಲವರ ಹೆಸರು ಕೈಬಿಟ್ಟಿರುವುದು ಈ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.

4. ಭ್ರಷ್ಟಾಚಾರ ಮತ್ತು ಉದ್ಯೋಗ

ಶಾಲಾ ಶಿಕ್ಷಕರ ನೇಮಕಾತಿ ಹಗರಣ, 25,000 ಶಿಕ್ಷಕರ ವಜಾ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ, ಟಿಎಂಸಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯನ್ನೆಬ್ಬಿಸಲು ಯತ್ನಿಸಿದೆ.

5. ಮಹಿಳಾ ಮೀಸಲಾತಿ ಮತ್ತು ಸುರಕ್ಷತೆ

ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ, ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನಿಸಿದೆ. ಜೊತೆಗೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಟಿಎಂಸಿ-ಕಾಂಗ್ರೆಸ್ ಅಡ್ಡಿಪಡಿಸಿವೆ ಎಂದು ಬಿಜೆಪಿ ಆರೋಪಿಸಿದೆ.

ತಮಿಳುನಾಡು: ದ್ರಾವಿಡ ರಾಜಕಾರಣ, ಕಲ್ಯಾಣ ಯೋಜನೆ ಮತ್ತು ವಿಜಯ್ ಅಲೆ

ತಮಿಳುನಾಡಿನ ಚುನಾವಣಾ ಅಖಾಡವು ದ್ರಾವಿಡ ಅಸ್ಮಿತೆ, ಉಚಿತ ಯೋಜನೆಗಳು ಹಾಗೂ ಹೊಸ ರಾಜಕೀಯ ಶಕ್ತಿಯ ಸುತ್ತ ಸುತ್ತುತ್ತಿದೆ.

1. ವಿಜಯ್ ಫ್ಯಾಕ್ಟರ್

ತಮಿಳುನಾಡಿನ ಈ ಬಾರಿಯ ಚುನಾವಣೆಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಒಂಟಿಯಾಗಿ ಸ್ಪರ್ಧಿಸುತ್ತಿದ್ದು, ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯಕ್ಕೆ ದೊಡ್ಡ ಸವಾಲೊಡ್ಡಿದೆ. ಯಾವುದೇ ಮೈತ್ರಿಯಿಲ್ಲದೆ ಕಣಕ್ಕಿಳಿದಿರುವ ವಿಜಯ್ ಅವರ ಸಮಾವೇಶಗಳಿಗೆ ಸೇರುತ್ತಿರುವ ಜನಸಾಗರವು ಸಾಂಪ್ರದಾಯಿಕ ಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ.

2. ಕಲ್ಯಾಣ ಯೋಜನೆಗಳು vs ಉದ್ಯೋಗ

ಉಚಿತ ವಿದ್ಯುತ್, ನಗದು ವರ್ಗಾವಣೆಯಂತಹ ಯೋಜನೆಗಳನ್ನೇ ನಂಬಿ ಡಿಎಂಕೆ ಮತ ಕೇಳುತ್ತಿದೆ. ಆದರೆ, ಯುವ ಮತದಾರರು ಕೇವಲ ಉಚಿತ ಯೋಜನೆಗಳ ಬದಲಾಗಿ, ಉದ್ಯೋಗ ಸೃಷ್ಟಿ, ಕೈಗಾರಿಕಾ ಅಭಿವೃದ್ಧಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

3. ಭಾಷಾ ಅಸ್ಮಿತೆ ಮತ್ತು ಒಕ್ಕೂಟ ವ್ಯವಸ್ಥೆ

ಹಿಂದಿ ಹೇರಿಕೆ ವಿರೋಧ, ನೀಟ್ (NEET) ಪರೀಕ್ಷೆ ರದ್ದತಿ ಮತ್ತು ರಾಜ್ಯದ ಹಕ್ಕುಗಳ ರಕ್ಷಣೆಯನ್ನೇ ಪ್ರಧಾನ ಅಸ್ತ್ರವನ್ನಾಗಿ ಡಿಎಂಕೆ ಬಳಸುತ್ತಿದೆ. ಬಿಜೆಪಿ ಇದನ್ನು ರಾಷ್ಟ್ರೀಯತೆಯ ವಿರುದ್ಧದ ನಡೆಯೆಂದು ಟೀಕಿಸಿದೆ.

4. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ವಿಂಗಡಣೆ

ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದಕ್ಕೆ ಡಿಎಂಕೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಆದರೆ, ಈ ಮಸೂದೆಯು ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ 'ಕ್ಷೇತ್ರ ವಿಂಗಡಣೆ'ಗೆ ಲಿಂಕ್ ಆಗಿರುವುದರಿಂದ ತಾವು ವಿರೋಧಿಸಿದ್ದಾಗಿ ಡಿಎಂಕೆ ಸಮರ್ಥಿಸಿಕೊಂಡಿದೆ.

ಒಟ್ಟಾರೆಯಾಗಿ, ಪಶ್ಚಿಮ ಬಂಗಾಳದಲ್ಲಿ ಅಸ್ಮಿತೆ ಮತ್ತು ನುಸುಳುಕೋರರ ಭೀತಿಯ ಸುತ್ತ ಚುನಾವಣೆ ಗಿರಕಿ ಹೊಡೆಯುತ್ತಿದ್ದರೆ, ತಮಿಳುನಾಡಿನಲ್ಲಿ ಕಲ್ಯಾಣ ಯೋಜನೆಗಳು ಮತ್ತು ವಿಜಯ್ ಅವರ ಹೊಸ ರಾಜಕೀಯ ಅಲೆಯು ಫಲಿತಾಂಶವನ್ನು ನಿರ್ಧರಿಸಲಿವೆ.

Read More
Next Story