
ಪತ್ರಕರ್ತರು ಸಹಾಯಕ್ಕಾಗಿ ಬೆಜೋಸ್ ಅವರನ್ನು ಬೇಡಿಕೊಂಡರು ಮತ್ತು ಪೋಸ್ಟ್‌ನ ಮನವಿಗಳ ನಡುವೆ ಇತ್ತೀಚಿನ ವಾರಗಳಲ್ಲಿ ಅವರು ಮೌನವಾಗಿದ್ದಾರೆ.
ವಾಷಿಂಗ್ಟನ್ ಪೋಸ್ಟ್‌ನಲ್ಲಿ ಉದ್ಯೋಗ ಕಡಿತ: ಶಶಿ ತರೂರ್ ಪುತ್ರ ಇಶಾನ್ ತರೂರ್ ಸೇರಿ 300 ಸಿಬ್ಬಂದಿ ವಜಾ!
ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ವಾಷಿಂಗ್ಟನ್ ಪೋಸ್ಟ್ ಮಾಲೀಕ ಜೆಫ್ ಬೆಜೋಸ್ (Jeff Bezos) ಅವರ ಮೌನ ಟೀಕೆಗೆ ಗುರಿಯಾಗಿದೆ.
ಜಾಗತಿಕ ಪತ್ರಿಕೋದ್ಯಮದ ದೈತ್ಯ ಸಂಸ್ಥೆ 'ದಿ ವಾಷಿಂಗ್ಟನ್ ಪೋಸ್ಟ್' ಬುಧವಾರ (ಫೆಬ್ರವರಿ 4) ಬರೋಬ್ಬರಿ ಶೇ.33 ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಈ ಆಘಾತಕಾರಿ ನಿರ್ಧಾರದಿಂದಾಗಿ ಸುಮಾರು 300 ಪತ್ರಕರ್ತರು ಮತ್ತು ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪುತ್ರ ಹಾಗೂ ಹಿರಿಯ ಪತ್ರಕರ್ತ ಇಶಾನ್ ತರೂರ್ ಕೂಡ ಸೇರಿದ್ದಾರೆ.
ತಂತ್ರಜ್ಞಾನದ ಬದಲಾವಣೆ ಮತ್ತು ಓದುಗರ ಹವ್ಯಾಸಗಳಿಗೆ ತಕ್ಕಂತೆ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಈ "ನೋವಿನ ಕ್ರಮ" ಅನಿವಾರ್ಯ ಎಂದು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮ್ಯಾಟ್ ಮುರ್ರೆ ಸಮರ್ಥಿಸಿಕೊಂಡಿದ್ದಾರೆ. ಈ ಕಡಿತದ ಭಾಗವಾಗಿ ಪತ್ರಿಕೆಯು ತನ್ನ ಕ್ರೀಡಾ ವಿಭಾಗ, ಪುಸ್ತಕ ವಿಮರ್ಶೆ ಮತ್ತು ಹಲವಾರು ವಿದೇಶಿ ಬ್ಯೂರೋಗಳನ್ನು ಮುಚ್ಚಿದೆ. "ನಾವು ಎಲ್ಲರಿಗೂ ಎಲ್ಲವನ್ನೂ ನೀಡಲು ಸಾಧ್ಯವಿಲ್ಲ," ಎಂದು ಮುರ್ರೆ ಸಿಬ್ಬಂದಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಇಶಾನ್ ತರೂರ್ ಭಾವುಕ ಪೋಸ್ಟ್:
ಉದ್ಯೋಗ ಕಳೆದುಕೊಂಡ ಬಳಿಕ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಇಶಾನ್ ತರೂರ್, "ನನ್ನನ್ನೂ ಒಳಗೊಂಡಂತೆ ಅಂತಾರಾಷ್ಟ್ರೀಯ ವಿಭಾಗದ ಬಹುತೇಕ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. 12 ವರ್ಷಗಳಿಂದ ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಾಗಿದ್ದ ಅದ್ಭುತ ಪತ್ರಕರ್ತರನ್ನು ಕಳೆದುಕೊಳ್ಳುತ್ತಿರುವುದು ಹೃದಯ ಒಡೆದಂತಾಗಿದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಶಾನ್ ಅವರು 2017ರಲ್ಲಿ ಆರಂಭಿಸಿದ್ದ ಜನಪ್ರಿಯ ಅಂಕಣ 'ವರ್ಲ್ಡ್‌ವ್ಯೂ' ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುತ್ತಿತ್ತು.
ಮಾಲೀಕ ಜೆಫ್ ಬೆಜೋಸ್ ಮೌನ:
ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ವಾಷಿಂಗ್ಟನ್ ಪೋಸ್ಟ್ ಮಾಲೀಕ ಜೆಫ್ ಬೆಜೋಸ್ (Jeff Bezos) ಅವರ ಮೌನ ಟೀಕೆಗೆ ಗುರಿಯಾಗಿದೆ. ಪತ್ರಿಕೆಯ ಮಾಜಿ ಸಂಪಾದಕ ಮಾರ್ಟಿನ್ ಬ್ಯಾರನ್, "ಇದು ಸ್ವಯಂ-ಪ್ರೇರಿತ ಬ್ರ್ಯಾಂಡ್ ವಿನಾಶದ ಉದಾಹರಣೆ," ಎಂದು ಕಿಡಿಕಾರಿದ್ದಾರೆ. ಪತ್ರಕರ್ತರು ಬೆಜೋಸ್ ಅವರ ಮಧ್ಯಸ್ಥಿಕೆಗಾಗಿ ಮನವಿ ಮಾಡಿದ್ದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆಯನ್ನು ಅಮೆರಿಕದ ಪತ್ರಿಕೋದ್ಯಮಕ್ಕೆ ಬಿದ್ದ ದೊಡ್ಡ ಪೆಟ್ಟು ಎಂದು ವಿಶ್ಲೇಷಿಸಲಾಗುತ್ತಿದೆ.

