ಕಾಂಗ್ರೆಸ್ ಪಾಳಯದಲ್ಲಿ ತಣ್ಣಗಾಯಿತೇ ಅಸಮಾಧಾನ? ರಾಹುಲ್-ಖರ್ಗೆ ಭೇಟಿಯಾದ ಶಶಿ ತರೂರ್
x

ಕಾಂಗ್ರೆಸ್ ಪಾಳಯದಲ್ಲಿ ತಣ್ಣಗಾಯಿತೇ ಅಸಮಾಧಾನ? ರಾಹುಲ್-ಖರ್ಗೆ ಭೇಟಿಯಾದ ಶಶಿ ತರೂರ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಯೋಜಿದ್ದ ಔತಣಕೂಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಆಹ್ವಾನವಿರಲಿಲ್ಲ. ಆದರೂ ತರೂರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿತ್ತು.


Click the Play button to hear this message in audio format

ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಅಂತರ ಕಾಯ್ದುಕೊಂಡಿದ್ದಾರೆ, ಪಕ್ಷ ತೊರೆಯಲಿದ್ದಾರೆ ಎಂಬಿತ್ಯಾದಿ ಊಹಾಪೋಹಗಳ ನಡುವೆಯೇ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಗುರುವಾರ (ಜ.29) ಪಕ್ಷದ ವರಿಷ್ಠರೊಂದಿಗೆ ಮಹತ್ವದ ಸಂಧಾನ ಸಭೆ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ತರೂರ್, ಸುಮಾರು 90 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸುವ ಮೂಲಕ ಭಿನ್ನಮತದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಸಂಸತ್ ಭವನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಈ ಸಭೆ ನಡೆದಿದೆ. ಭೇಟಿಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತರೂರ್, "ನಮ್ಮ ನಡುವಿನ ಮಾತುಕತೆ ಅತ್ಯಂತ ಸಕಾರಾತ್ಮಕ ಮತ್ತು ರಚನಾತ್ಮಕವಾಗಿತ್ತು. ನಾವೆಲ್ಲರೂ ಒಂದೇ. ಭಾರತದ ಜನರ ಸೇವೆಗಾಗಿ ನಾವೆಲ್ಲರೂ ಒಗ್ಗೂಡಿ ಮುನ್ನಡೆಯುತ್ತಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ.

ಭಿನ್ನಮತ ಹೊಗೆಯಾಡಿದ್ದು ಏಕೆ?

ಕಳೆದ ಕೆಲವು ತಿಂಗಳುಗಳಿಂದ ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕತ್ವದ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ದೆಹಲಿ ಅಂಗಳದಲ್ಲಿ ಕೇಳಿಬರುತ್ತಿದ್ದವು. ಇದಕ್ಕೆ ಇಂಬು ನೀಡುವಂತೆ, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯ ತಂತ್ರಗಾರಿಕೆ ರೂಪಿಸಲು ಕರೆಯಲಾದ ಪಕ್ಷದ ಉನ್ನತ ಮಟ್ಟದ ಸಭೆಗಳಿಗೆ ತರೂರ್ ಗೈರಾಗಿದ್ದರು. ಅಲ್ಲದೆ, ಕೊಚ್ಚಿಯಲ್ಲಿ ನಡೆದ ಪಕ್ಷದ ಸಮಾರಂಭವೊಂದರಲ್ಲಿ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ಚುನಾವಣಾ ಕಹಳೆ ಊದಿದ ಸಂದರ್ಭದಲ್ಲಿ ತರೂರ್ ಅವರನ್ನು ಕಡೆಗಣಿಸಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಎಲ್ಲಾ ಬೆಳವಣಿಗೆಗಳು ತರೂರ್ ಅವರು ಸಿಪಿಐ(ಎಂ) ಸೇರಬಹುದು ಎಂಬ ವದಂತಿಗೂ ಕಾರಣವಾಗಿದ್ದವು.

ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ ತರೂರ್ ನಡೆಗಳು

ಕೇವಲ ಸಭೆಗಳಿಗೆ ಗೈರಾಗುವುದು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ತರೂರ್ ಅವರ ಕೆಲವು ನಿರ್ದಿಷ್ಟ ನಡೆಗಳು ಮತ್ತು ಹೇಳಿಕೆಗಳು ಕಾಂಗ್ರೆಸ್ ನಾಯಕತ್ವಕ್ಕೆ ಇರಿಸುಮುರಿಸು ಉಂಟುಮಾಡಿದ್ದವು ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಕೇಂದ್ರ ಸರ್ಕಾರ ಕೈಗೊಂಡ 'ಆಪರೇಷನ್ ಸಿಂಧೂರ್' ಮತ್ತು ರಾಜತಾಂತ್ರಿಕ ನಡೆಗಳನ್ನು ತರೂರ್ ಶ್ಲಾಘಿಸಿದ್ದರು. ಅಷ್ಟೇ ಅಲ್ಲದೆ, ಈ ಕುರಿತು ವಿದೇಶಗಳಿಗೆ ಮಾಹಿತಿ ನೀಡಲು ಬಿಜೆಪಿ ಸರ್ಕಾರ ಆಯೋಜಿದ್ದ ಸರ್ವಪಕ್ಷಗಳ ನಿಯೋಗದ ನೇತೃತ್ವವನ್ನು ತರೂರ್ ವಹಿಸಿಕೊಂಡಿದ್ದರು. ಕಾಂಗ್ರೆಸ್‌ನ ಇತರ ಯಾವ ನಾಯಕರಿಗೂ ಈ ಆಹ್ವಾನ ಸಿಕ್ಕಿರಲಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಯೋಜಿದ್ದ ಔತಣಕೂಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಆಹ್ವಾನವಿರಲಿಲ್ಲ. ಆದರೂ ತರೂರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿತ್ತು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯಂದೇ (ಅಕ್ಟೋಬರ್ 31), 'ಪ್ರಾಜೆಕ್ಟ್ ಸಿಂಡಿಕೇಟ್'ನಲ್ಲಿ ತರೂರ್ ಬರೆದ ಲೇಖನ ವಿವಾದ ಸೃಷ್ಟಿಸಿತ್ತು. 'ಭಾರತೀಯ ರಾಜಕೀಯ ಒಂದು ಕೌಟುಂಬಿಕ ವ್ಯವಹಾರ' (Indian Politics Are a Family Business) ಎಂಬ ಶೀರ್ಷಿಕೆಯಡಿ, ಕಾಂಗ್ರೆಸ್ ವಿರುದ್ಧ ಸಾಮಾನ್ಯವಾಗಿ ಕೇಳಿಬರುವ ವಂಶಪಾರಂಪರ್ಯ ರಾಜಕೀಯದ ಆರೋಪವನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.

ಕಾಂಗ್ರೆಸ್ ಸ್ಥಾಪನಾ ದಿನಾಚರಣೆಯಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು, "ಸಂಘಟನಾತ್ಮಕ ಶಿಸ್ತಿನ ವಿಚಾರದಲ್ಲಿ ಆರ್‌ಎಸ್‌ಎಸ್ ಮಾದರಿಯನ್ನು ಗಮನಿಸಬೇಕು," ಎಂಬರ್ಥದ ಹೇಳಿಕೆ ನೀಡಿದ್ದರು. ಇದನ್ನು ತರೂರ್ ಬೆಂಬಲಿಸಿದ್ದು ಪಕ್ಷದ ನಿಲುವಿಗೆ ವಿರುದ್ಧವಾಗಿತ್ತು.

ಕೇರಳ ಚುನಾವಣೆ ಹೊತ್ತಲ್ಲೇ ಒಗ್ಗಟ್ಟು

ಕೇರಳದಲ್ಲಿ ವಿಧಾನಸಭಾ ಚುನಾವಣೆ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಈ 'ಸಂಧಾನ ಸಭೆ' ಮಹತ್ವ ಪಡೆದುಕೊಂಡಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ ಶಶಿ ತರೂರ್ ಪ್ರಮುಖ ತಾರಾ ಪ್ರಚಾರಕರಾಬಲ್ಲರು. ಈ ನಿಟ್ಟಿನಲ್ಲಿ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಚುನಾವಣೆಯನ್ನು ಎದುರಿಸಲು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ತಮ್ಮ ಕಳವಳಗಳನ್ನು ಹೈಕಮಾಂಡ್ ಮುಂದೆ ಹೇಳಿಕೊಳ್ಳಲು ತರೂರ್ ಸಮಯ ಕೇಳಿದ್ದರು ಎನ್ನಲಾಗಿದ್ದು, ಇಂದಿನ ಸಭೆಯಲ್ಲಿ ಆ ಎಲ್ಲಾ ವಿಷಯಗಳ ಬಗ್ಗೆ ಮುಕ್ತ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ, 2022ರಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ 'ಜಿ-23' ಬಂಡಾಯ ಗುಂಪಿನ ಪ್ರಮುಖರಾಗಿದ್ದ ತರೂರ್, ಇದೀಗ ರಾಹುಲ್ ಮತ್ತು ಖರ್ಗೆ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ತಾವು ಪಕ್ಷದ ನಿಷ್ಠಾವಂತ ಸಿಪಾಯಿ ಎಂಬುದನ್ನು ಮರುಸ್ಥಾಪಿಸಿದ್ದಾರೆ.

Read More
Next Story