Union Budget 2026: 75 ವರ್ಷದ ಸಂಪ್ರದಾಯಕ್ಕೆ ಬ್ರೇಕ್! `ಪಾರ್ಟ್-ಬಿಗೆ ಅಧಿಕ ಒತ್ತು
x
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

Union Budget 2026: 75 ವರ್ಷದ ಸಂಪ್ರದಾಯಕ್ಕೆ ಬ್ರೇಕ್! `ಪಾರ್ಟ್-ಬಿ'ಗೆ ಅಧಿಕ ಒತ್ತು

ಕೇಂದ್ರ ಬಜೆಟ್ 2026ರಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು 75 ವರ್ಷಗಳ ಹಳೆಯ ಬಜೆಟ್ ಸಂಪ್ರದಾಯವನ್ನು ಬದಲಿಸುತ್ತಿದ್ದಾರೆ. ಪಾರ್ಟ್-ಎ ಬದಲಿಗೆ ಪಾರ್ಟ್-ಬಿ ವಿಭಾಗಕ್ಕೆ ಆದ್ಯತೆ ನೀಡಲಿದ್ದಾರೆ ಎನ್ನಲಾಗಿದೆ.


ನರೇಂದ್ರ ಮೋದಿ ನೇತೃತ್ವದ ಮೂರನೇ ಸರ್ಕಾರದ 2026ರ ಕೇಂದ್ರ ಬಜೆಟ್ ಇಂದು ಮಂಡನೆಯಾಗುತ್ತಿದ್ದು, ಇದು ಹಲವು ಕಾರಣಗಳಿಂದ ಐತಿಹಾಸಿಕ ಮಹತ್ವ ಪಡೆದಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾನುವಾರದಂದು ಬಜೆಟ್ ಮಂಡನೆಯಾಗುತ್ತಿರುವುದು ಇದು ಎರಡನೇ ಬಾರಿ ಮಾತ್ರ. 1999ರಲ್ಲಿ ಯಶವಂತ್ ಸಿನ್ಹಾ ಮೊದಲ ಬಾರಿಗೆ ಭಾನುವಾರ ಮಂಡಿಸಿದ್ದರು. ಜೊತೆಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸುತ್ತಿದ್ದಾರೆ.

'ಪಾರ್ಟ್-ಬಿ'ಗೆ ಹೆಚ್ಚಿನ ಆದ್ಯತೆ

ಈ ಬಾರಿಯ ಬಜೆಟ್‌ನ ಮತ್ತೊಂದು ವಿಶೇಷವೆಂದರೆ, ಸೀತಾರಾಮನ್ ಅವರು 75 ವರ್ಷಗಳ ಸಂಪ್ರದಾಯವನ್ನು ಬದಿಗಿಟ್ಟು ಬಜೆಟ್ ಭಾಷಣದ 'ಪಾರ್ಟ್-ಎ' (Part A) ಗಿಂತ 'ಪಾರ್ಟ್-ಬಿ' (Part B) ಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಕೇಂದ್ರ ಬಜೆಟ್ ಭಾಷಣವು ಎರಡು ಪ್ರಮುಖ ಭಾಗಗಳನ್ನು ಒಳಗೊಂಡಿರುತ್ತದೆ. ಮೊದಲನೆಯದಾದ 'ಪಾರ್ಟ್ ಎ' ವಿಭಾಗದಲ್ಲಿ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಗತಿ, ಜಿಡಿಪಿ ಬೆಳವಣಿಗೆ, ವಿವಿಧ ಇಲಾಖೆಗಳಿಗೆ ನೀಡಲಾಗುವ ಅನುದಾನಗಳು ಹಾಗೂ ಸರ್ಕಾರದ ಹೊಸ ಯೋಜನೆಗಳ ಕುರಿತಾದ ಸಮಗ್ರ ಮಾಹಿತಿ ಇರುತ್ತದೆ. ಇದು ಆರ್ಥಿಕತೆಯ ಚಿತ್ರಣವನ್ನು ನೀಡುವ ಭಾಗವಾಗಿದ್ದು, ಸಂಪ್ರದಾಯದಂತೆ ಹಣಕಾಸು ಸಚಿವರು ಈ ವಿಭಾಗದ ಮೇಲೆ ಹೆಚ್ಚಿನ ಸಮಯ ವ್ಯಯಿಸಿ ಸುದೀರ್ಘವಾಗಿ ಭಾಷಣ ಮಾಡುತ್ತಿದ್ದರು.

ಇನ್ನು ಎರಡನೆಯದಾದ 'ಪಾರ್ಟ್ ಬಿ' ವಿಭಾಗವು ತೆರಿಗೆ ಪ್ರಸ್ತಾವನೆಗಳು, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳು ಮತ್ತು ರಿಯಾಯಿತಿಗಳಂತಹ ವಿಷಯಗಳಿಗೆ ಸೀಮಿತವಾಗಿರುತ್ತದೆ. ಈ ಹಿಂದೆ ಪಾರ್ಟ್ ಬಿ ಭಾಷಣವು ಅತ್ಯಂತ ಸಂಕ್ಷಿಪ್ತವಾಗಿರುತ್ತಿತ್ತು.

'ಪಾರ್ಟ್ ಬಿ'ನಲ್ಲೇನಿದೆ?

ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯವನ್ನು ಬದಿಗಿಟ್ಟು 'ಪಾರ್ಟ್ ಬಿ' ವಿಭಾಗಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂಬ ವರದಿಗಳಿವೆ. ಈ ಬಾರಿಯ ಪಾರ್ಟ್ ಬಿ ಭಾಷಣವು ಕೇವಲ ತೆರಿಗೆ ಘೋಷಣೆಗಳಿಗಷ್ಟೇ ಸೀಮಿತವಾಗದೆ, ದೇಶದ ಭವಿಷ್ಯದ ಆರ್ಥಿಕ ನೀತಿಗಳು, ತೆರಿಗೆ ಪದ್ಧತಿಯ ಸಮಗ್ರ ಸುಧಾರಣೆ, ರಫ್ತು ಉತ್ತೇಜನ ಮತ್ತು ಮುಂದಿನ 25 ವರ್ಷಗಳ ಆರ್ಥಿಕ ದೃಷ್ಟಿಕೋನದ ಬಗ್ಗೆ ವಿವರವಾದ ಮಾಹಿತಿಯನ್ನು ಒಳಗೊಂಡಿರಲಿದೆ. ಅಂಕಿಅಂಶಗಳಿಗಿಂತ ಹೆಚ್ಚಾಗಿ ಆರ್ಥಿಕ ಶಿಸ್ತು ಮತ್ತು ಭವಿಷ್ಯದ ಸುಧಾರಣೆಗಳ ಬಗ್ಗೆ ಸಚಿವರು ಈ ಬಾರಿ ದೀರ್ಘವಾಗಿ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ.

ಈ ಬಜೆಟ್ ದೇಶದ ದೀರ್ಘಕಾಲೀನ ಆರ್ಥಿಕ ದಿಕ್ಸೂಚಿಯನ್ನು ರೂಪಿಸಲಿದೆ. ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು, ನಿಯಮಗಳ ಸರಳೀಕರಣ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸುವುದು ಇದರ ಪ್ರಮುಖ ಗುರಿಯಾಗಿದೆ. ವಿಶೇಷವಾಗಿ ಅಮೆರಿಕದ ಸುಂಕದ ನೀತಿಗಳಂತಹ ಜಾಗತಿಕ ಸವಾಲುಗಳ ನಡುವೆ, ರಫ್ತುದಾರರು ಮತ್ತು ಉತ್ಪಾದಕರಿಗೆ ಪೂರಕವಾದ ವ್ಯವಸ್ಥೆಯನ್ನು ನಿರ್ಮಿಸಲು ಈ ಬಜೆಟ್ ಆದ್ಯತೆ ನೀಡಲಿದೆ. ಈ ಐತಿಹಾಸಿಕ ಬದಲಾವಣೆಗಳು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಲಿವೆ.

ಜನಸಾಮಾನ್ಯರು ಮತ್ತು ತೆರಿಗೆದಾರರಿಗೆ ಏನು ಸಿಗಬಹುದು?

ಆದಾಯ ತೆರಿಗೆ ಸುಧಾರಣೆ: 64 ವರ್ಷಗಳ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ ಹೊಸ ಮಸೂದೆಯನ್ನು ಪರಿಚಯಿಸುವ ಮೂಲಕ ತೆರಿಗೆ ಪದ್ಧತಿಯನ್ನು ಸರಳಗೊಳಿಸುವ ನಿರೀಕ್ಷೆಯಿದೆ.

ಪಿಎಂ-ಕಿಸಾನ್ ಮೊತ್ತ: ರೈತರಿಗೆ ನೀಡಲಾಗುವ ವಾರ್ಷಿಕ ಸಹಾಯಧನವನ್ನು ₹6,000 ದಿಂದ ₹9,000 ಅಥವಾ ₹12,000ಕ್ಕೆ ಏರಿಸುವ ಚರ್ಚೆಗಳು ನಡೆಯುತ್ತಿವೆ.

ಉದ್ಯೋಗ ಮತ್ತು ಉತ್ಪಾದನೆ: ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಸಲು ಹೊಸ 'PLI 2.0' ಯೋಜನೆ ಮತ್ತು MSMEಗಳಿಗೆ ಬಡ್ಡಿ ಸಹಾಯಧನದ ನಿರೀಕ್ಷೆಯಿದೆ.

Read More
Next Story