
ತಮಿಳುನಾಡು ಚುನಾವಣೆ 2026: AIADMK ಮೊದಲ ಪಟ್ಟಿ ಬಿಡುಗಡೆ
Tamil Nadu Election 2026|AIADMK ತನ್ನ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಹಿರಿಯ ನಾಯಕರ ಕ್ಷೇತ್ರಗಳ ವಿವರ, ಬಿಜೆಪಿ ಹಾಗೂ ಮಿತ್ರಪಕ್ಷಗಳ ಸೀಟು ಹಂಚಿಕೆಯ ಸಂಪೂರ್ಣ ಮಾಹಿತಿ ಓದಿ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದು, ಪ್ರಮುಖ ವಿರೋಧ ಪಕ್ಷವಾದ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಬುಧವಾರ ತನ್ನ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಕ್ಷವು ತನ್ನ ಹಿರಿಯ ನಾಯಕರು ಮತ್ತು ಮಾಜಿ ಸಚಿವರಿಗೆ ಅವರ ಕ್ಷೇತ್ರಗಳಲ್ಲೇ ಮತ್ತೆ ಅವಕಾಶ ನೀಡಲಾಗಿದೆ.
ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು
ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ತಮ್ಮ ತವರು ಜಿಲ್ಲೆಯಾದ ಸೇಲಂನ ಎಡಪ್ಪಾಡಿ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಉಳಿದಂತೆ ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳು ಹೀಗಿವೆ:
ಎಡಪ್ಪಾಡಿ ಕೆ. ಪಳನಿಸ್ವಾಮಿ- ಎಡಪ್ಪಾಡಿ
ಡಿ. ಜಯಕುಮಾರ್ -ರಾಯಪುರಂ (ಚೆನ್ನೈ)
ಸಿ. ವಿಜಯಭಾಸ್ಕರ್- ವೈರಲಿಮಲೈ
ಎಸ್.ಪಿ. ವೇಲುಮಣಿ -ತೊಂಡಮುತ್ತೂರು
ಡಿಂಡಿಗಲ್ ಸಿ. ಶ್ರೀನಿವಾಸನ್ -ಡಿಂಡಿಗಲ್
ಕೆ.ಪಿ. ಮುನುಸ್ವಾಮಿ -ವೇಪ್ಪನಹಳ್ಳಿ
ಸೆಲ್ಲೂರು ಕೆ. ರಾಜು ಮಧುರೈ -ಪಶ್ಚಿಮ
ಸಿ. ವಿ. ಷಣ್ಮುಗಂ- ಮೈಲಂ
ಹಿರಿಯ ನಾಯಕರಿಗೆ ಮಣೆ
ಹಿರಿಯ ಶಾಸಕ ನಾಥಮ್ ಆರ್. ವಿಶ್ವನಾಥನ್ (ನಾಥಮ್), ಮಾಜಿ ಸಚಿವ ಪಿ. ತಂಗಮಣಿ (ಕುಮಾರಪಾಳಯಂ), ಕೆ.ಪಿ. ಅನ್ಬಳಗನ್ (ಪಾಲಕೋಡು), ಮತ್ತು ಆರ್. ಕಾಮರಾಜ್ (ನನ್ನಿಲಂ) ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಅಲ್ಲದೆ, ಓ.ಎಸ್. ಮಣಿಯನ್, ಕದಂಬೂರ್ ಸಿ. ರಾಜು, ಮತ್ತು ಆರ್.ಬಿ. ಉದಯಕುಮಾರ್ ಅಂತಹ ಪ್ರಭಾವಿ ನಾಯಕರು ತಮ್ಮ ಹಳೆಯ ಕ್ಷೇತ್ರಗಳಲ್ಲೇ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಮೈತ್ರಿ ಮತ್ತು ಸೀಟು ಹಂಚಿಕೆ
ತಮಿಳುನಾಡಿನ 2026ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ನೇತೃತ್ವವನ್ನು ಎಐಎಡಿಎಂಕೆ (AIADMK) ವಹಿಸಿಕೊಂಡಿದ್ದು, ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅಂತಿಮಗೊಳಿಸಿದೆ. ಈ ಮೈತ್ರಿ ಒಪ್ಪಂದದ ಅನ್ವಯ, ಬಿಜೆಪಿಗೆ (BJP) 27 ಸ್ಥಾನಗಳನ್ನು ಬಿಟ್ಟುಕೊಡಲಾಗಿದ್ದರೆ, ಪಿಎಂಕೆಗೆ (PMK) 18 ಮತ್ತು ಎಎಮ್‌ಎಂಕೆಗೆ (AMMK) 11 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಹಿರಿಯ ನಾಯಕರನ್ನೊಳಗೊಂಡ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಎಐಎಡಿಎಂಕೆ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದಂತಾಗಿದೆ.
ಚುನಾವಣಾ ಕಣದ ಚಿತ್ರಣ
ತಮಿಳುನಾಡಿನ ಪ್ರಮುಖ ಪಕ್ಷಗಳ ಪೈಕಿ ಅಭ್ಯರ್ಥಿಗಳನ್ನು ಘೋಷಿಸಿದ ಮೊದಲ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ AIADMK ಪಾತ್ರವಾಗಿದೆ. ಸೀಮಾನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (NTK) ಈಗಾಗಲೇ ಎಲ್ಲಾ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಆಡಳಿತಾರೂಢ DMK ಮೈತ್ರಿಕೂಟದ ಪಟ್ಟಿ ಇನ್ನಷ್ಟೇ ಹೊರಬರಬೇಕಿದೆ.

