ತಮಿಳುನಾಡು ಚುನಾವಣೆ 2026: ಕಮಲ್ ಹಾಸನ್ ಅಚ್ಚರಿಯ ನಿರ್ಧಾರ; ಡಿಎಂಕೆಗೆ ಬೇಷರತ್ ಬೆಂಬಲ!
x
ಕಮಲ್‌ ಹಾಸನ್‌ ಅವರು ಸಿಎಂ ಎಂ.ಕೆ. ಸ್ಟ್ಯಾಲಿನ್‌ ಅವರನ್ನು ಭೇಟಿ ಮಾಡಿದರು.

ತಮಿಳುನಾಡು ಚುನಾವಣೆ 2026: ಕಮಲ್ ಹಾಸನ್ ಅಚ್ಚರಿಯ ನಿರ್ಧಾರ; ಡಿಎಂಕೆಗೆ ಬೇಷರತ್ ಬೆಂಬಲ!

Tamil Nadu Assembly Election 2026| 2026ರ ತಮಿಳುನಾಡು ಚುನಾವಣೆಯಲ್ಲಿ ನಟ ಕಮಲ್ ಹಾಸನ್ ನೇತೃತ್ವದ MNM ಸ್ಪರ್ಧಿಸುತ್ತಿಲ್ಲ! ಬದಲಾಗಿ ಡಿಎಂಕೆ ಮೈತ್ರಿಕೂಟಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.


2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನಟ-ರಾಜಕಾರಣಿ ಕಮಲ್ ಹಾಸನ್ ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ. ಅವರ ನೇತೃತ್ವದ ಮಕ್ಕಳ್ ನೀಧಿ ಮೈಯಂ (MNM) ಪಕ್ಷವು ಈ ಬಾರಿ ನೇರವಾಗಿ ಸ್ಪರ್ಧಿಸದಿರಲು ತೀರ್ಮಾನಿಸಿದೆ. ಬದಲಾಗಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಮೈತ್ರಿಕೂಟಕ್ಕೆ ಪಕ್ಷವು ಬೇಷರತ್ ಬೆಂಬಲ ನೀಡಲಿದೆ.

ಚುನಾವಣೆಯಿಂದ ಹಿಂದೆ ಸರಿಯಲು ಕಾರಣವೇನು?

ಡಿಎಂಕೆ ನೀಡಿದ ಸೀಟುಗಳ ಸಂಖ್ಯೆ ಮತ್ತು ಚಿಹ್ನೆಯ ವಿಚಾರದಲ್ಲಿ ಉಂಟಾದ ಅಸಮಾಧಾನವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, "ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ನಮಗೆ ನೀಡಿರುವ ಸೀಟುಗಳ ಸಂಖ್ಯೆ ಮತ್ತು ಡಿಎಂಕೆಯ 'ಉದಯ ಸೂರ್ಯ' ಚಿಹ್ನೆಯಡಿ ಸ್ಪರ್ಧಿಸಬೇಕು ಎಂಬ ಪ್ರಸ್ತಾವನೆ ನನಗೆ ಅಥವಾ ನನ್ನ ಪಕ್ಷದ ಕಾರ್ಯಕರ್ತರಿಗೆ ಒಪ್ಪಿಗೆಯಿಲ್ಲ. ಹೀಗಾಗಿ ನಾವು ನೇರವಾಗಿ ಸ್ಪರ್ಧಿಸದೆ, ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಇದು ಬಲವಂತದ ನಿರ್ಧಾರವಲ್ಲ, ಬದಲಾಗಿ ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡಿ ಕೈಗೊಂಡಿರುವ ತೀರ್ಮಾನ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಇದು ತ್ಯಾಗವಲ್ಲ, ಕರ್ತವ್ಯ" - ಎಂ.ಕೆ. ಸ್ಟಾಲಿನ್ ಭಾವುಕ ನುಡಿ

ಕಮಲ್ ಹಾಸನ್ ಅವರ ಈ ನಿರ್ಧಾರದ ನಂತರ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಮಲ್ ಅವರನ್ನು 'ಅಣ್ಣಾ ಅರಿವಾಲಯಂ'ನಲ್ಲಿ ಭೇಟಿ ಮಾಡಿ ಚರ್ಚಿಸಿದರು. ಬಳಿಕ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, "ಕಮಲ್ ಹಾಸನ್ ಅವರು ಇದನ್ನು ತ್ಯಾಗವಲ್ಲ, ಕರ್ತವ್ಯ ಎಂದು ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಇದು ದೊಡ್ಡ ತ್ಯಾಗ. ತಮಿಳುನಾಡಿನ ಕಲ್ಯಾಣಕ್ಕಾಗಿ ಸ್ವಹಿತಾಸಕ್ತಿಯನ್ನು ಬದಿಗಿಟ್ಟ ಅವರ ನಿರ್ಧಾರವನ್ನು ಇತಿಹಾಸ ಸ್ಮರಿಸುತ್ತದೆ. ಮುಂದಿನ 'ದ್ರಾವಿಡ ಮಾಡೆಲ್ 2.0' ಸರ್ಕಾರವು ಕಮಲ್ ಹಾಸನ್ ಅವರ ಬೆಂಬಲದೊಂದಿಗೆ ರೂಪಿತವಾಗಲಿದೆ” ಎಂದಿದ್ದಾರೆ.

ಡಿಎಂಕೆ ಮೈತ್ರಿಕೂಟದ ಸೀಟು ಹಂಚಿಕೆ ಫೈನಲ್!

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಡಿಎಂಕೆ ನೇತೃತ್ವದ ಮೈತ್ರಿಕೂಟವು ತನ್ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಅಂತಿಮಗೊಳಿಸಿದ್ದು, ಪ್ರಮುಖ ಮಿತ್ರಪಕ್ಷವಾದ ಕಾಂಗ್ರೆಸ್‌ಗೆ 28 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಉಳಿದಂತೆ ವಿಜಯಕಾಂತ್ ಅವರ DMDK ಪಕ್ಷಕ್ಕೆ 10, ತಿರುಮಾವಳವನ್ ನೇತೃತ್ವದ VCK ಗೆ 8, ಕಮ್ಯುನಿಸ್ಟ್ ಪಕ್ಷಗಳಾದ CPI ಮತ್ತು CPM ಗೆ ತಲಾ 5, ವೈಕೋ ಅವರ MDMK ಗೆ 4 ಹಾಗೂ ಇತರ ಸಣ್ಣ ಮಿತ್ರಪಕ್ಷಗಳಾದ IUML, MMK ಮತ್ತು KMDK ಗೆ ತಲಾ 2 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಇತ್ತ ನಟ ಕಮಲ್ ಹಾಸನ್ ಅವರ MNM ಪಕ್ಷವು ಸ್ಪರ್ಧೆಯಿಂದ ಹಿಂದೆ ಸರಿದು ಡಿಎಂಕೆ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ಘೋಷಿಸಿರುವುದು ಈ ಮೈತ್ರಿಕೂಟಕ್ಕೆ ಮತ್ತಷ್ಟು ಬಲ ತಂದಿದೆ.

ಚುನಾವಣಾ ವೇಳಾಪಟ್ಟಿ

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ ಏಪ್ರಿಲ್ 23, 2026 ರಂದು ರಾಜ್ಯಾದ್ಯಂತ ಏಕಹಂತದಲ್ಲಿ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮತದಾನ ಪ್ರಕ್ರಿಯೆ ಮುಗಿದ ನಂತರ, ಮೇ 4, 2026 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕಮಲ್ ಹಾಸನ್ ಅವರ ಈ ನಿರ್ಧಾರದಿಂದ ಡಿಎಂಕೆ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಸಿಕ್ಕಂತಾಗಿದೆ. ಕಮಲ್ ಹಾಸನ್ ಅವರು ರಾಜ್ಯಾದ್ಯಂತ ಸ್ಟಾಲಿನ್ ಪರ ಪ್ರಚಾರ ನಡೆಸಲಿದ್ದಾರೆ. ಇದು ನಟ ವಿಜಯ್ ಅವರ ಹೊಸ ಪಕ್ಷಕ್ಕೆ ಯಾವ ರೀತಿ ಸವಾಲಾಗಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Read More
Next Story