Supreme Court warns states that revision of voter list will not be obstructed
x

ಸುಪ್ರೀಂ ಕೋರ್ಟ್‌

ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆಯೊಡ್ಡಲು ಬಿಡುವುದಿಲ್ಲ; ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮತದಾರರ ಪಟ್ಟಿಯಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಹೊರಗಿಡಬೇಕು ಎಂಬುದನ್ನು ನಿರ್ಧರಿಸಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಪರ ವಕೀಲ ಶ್ಯಾಮ್ ದಿವಾನ್ ವಾದಿಸಿದರು.


Click the Play button to hear this message in audio format

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಯಾವುದೇ ರೀತಿಯ ಅಡೆತಡೆ ಉಂಟುಮಾಡುವುದನ್ನು ಸಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ (ಫೆ. 9) ಕಟುವಾದ ಎಚ್ಚರಿಕೆ ನೀಡಿದೆ. ಈ ವಿಚಾರವನ್ನು ಎಲ್ಲ ರಾಜ್ಯಗಳು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್​ಐಆರ್​ ಪ್ರಕ್ರಿಯೆಗೆ ಸಂಬಂಧಿಸಿದ ಆಕ್ಷೇಪಣೆಗಳ ವಿಚಾರಣೆ ವೇಳೆ ಈ ಮಾತುಗಳನ್ನಾಡಿದೆ.

"ಎಸ್​ಐಆರ್​​ ಪ್ರಕ್ರಿಯೆಗೆ ಯಾವುದೇ ಅಡೆತಡೆ ಉಂಟುಮಾಡಲು ನಾವು ಬಿಡುವುದಿಲ್ಲ. ಈ ಬಗ್ಗೆ ಬೇಕಾದರೆ ಯಾವುದೇ ಆದೇಶ ಅಥವಾ ಸ್ಪಷ್ಟೀಕರಣ ನೀಡಲು ನಾವು ಸಿದ್ಧ. ಆದರೆ, ಈ ಪ್ರಕ್ರಿಯೆಗೆ ಅಡ್ಡಿಪಡಿಸುವುದನ್ನು ಮಾತ್ರ ಒಪ್ಪಲಾಗದು," ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿರುವುದಾಗಿ ಲೈವ್ ಲಾ ವರದಿ ಮಾಡಿದೆ.

ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ

ಪಶ್ಚಿಮ ಬಂಗಾಳದ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಮೈಕ್ರೋ- ಅಬ್ಸರ್ವರ್‌ಗಳ ನಿಯೋಜನೆ ಕುರಿತು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ, "ಮೈಕ್ರೋ-ಅಬ್ಸರ್ವರ್‌ಗಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಚುನಾವಣೆ ಆಯೋಗದ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್‌ಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ಅದರಲ್ಲಿ "ಮೈಕ್ರೋ-ಅಬ್ಸರ್ವರ್‌ಗಳು ಇಆರ್‌ಒಗಳ ಜೊತೆ ಒಪ್ಪುತ್ತಾರೆ/ಒಪ್ಪುವುದಿಲ್ಲ" ಎಂಬ ಆಯ್ಕೆ ಇರುವುದನ್ನು ಉಲ್ಲೇಖಿಸಿದರು.

ಆಧಾರ್ ಕಾರ್ಡ್ ಮತ್ತು ಅಡ್ಮಿಟ್ ಕಾರ್ಡ್‌ಗಳನ್ನು ದಾಖಲೆಗಳಾಗಿ ಸಲ್ಲಿಸಿದರೂ, ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕೆಂಬ ಸೂಚನೆಗಳನ್ನು ನೀಡಲಾಗಿದೆ ಎಂದು ದಿವಾನ್ ವಾದಿಸಿದರು. "ಒಬ್ಬ ವ್ಯಕ್ತಿಯ ಬಳಿ ಎರಡು ದಾಖಲೆಗಳಿದ್ದರೂ ಅವರನ್ನು ಹೊರಗಿಡಲಾಗುತ್ತಿದೆ. ಇದು ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕುವ ಯೋಜನೆಯಂತೆ ಕಾಣುತ್ತಿದೆ," ಎಂದು ಅವರು ವಾದಿಸಿದರು.

ಕಂಪ್ಯೂಟರ್ ಸರ್ವಾಧಿಕಾರಿಯಾಗುತ್ತಿದೆ!

ಮತದಾರರ ಪಟ್ಟಿಯಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಹೊರಗಿಡಬೇಕು ಎಂಬುದನ್ನು ನಿರ್ಧರಿಸಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಫೆಬ್ರವರಿ 14 ರಂದು ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್​ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಅಂತಿಮ ಪಟ್ಟಿ ಪ್ರಕಟವಾಗಲಿದೆ. ಆದರೆ ಅದರಲ್ಲಿ ಎಷ್ಟು ಜನರನ್ನು ಮರುಸೇರ್ಪಡೆ ಮಾಡಲಾಗಿದೆ ಅಥವಾ ಕೈಬಿಡಲಾಗಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಒಂದು ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಶ್ಯಾಮ್ ದಿವಾನ್ ಕಳವಳ ವ್ಯಕ್ತಪಡಿಸಿದರು.

ಸಾಫ್ಟ್‌ವೇರ್ ಲೋಪಕ್ಕೆ ಕೋರ್ಟ್ ಅಸಮಾಧಾನ

ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಪರ ಹಾಜರಿದ್ದ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ಹೊಂದಾಣಿಕೆಯಾಗದ ದೋಷಗಳನ್ನು ಸರಿಪಡಿಸಲು ಸಾಫ್ಟ್‌ವೇರ್ ಬಳಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು. ಸುಮಾರು 70 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಅವರು, "ಇದು ಕೇವಲ ಮೇಲ್ನೋಟಕ್ಕೆ ಕಾಣುವ ಸಮಸ್ಯೆ. ಒಬ್ಬ ಪೋಷಕರಿಗೆ 200 ಮಕ್ಕಳನ್ನು ಲಿಂಕ್ ಮಾಡಿರುವ ಪ್ರಕರಣಗಳೂ ಪತ್ತೆಯಾಗಿವೆ," ಎಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ, "ನಿಮ್ಮ ಸಾಫ್ಟ್‌ವೇರ್‌ಗೆ ಅಳವಡಿಸಿರುವ ನಿಯಮಗಳು (Tools) ಬಹಳ ನಿರ್ಬಂಧಿತವಾಗಿವೆ. ಅವು ಸಹಜವಾದ ವ್ಯತ್ಯಾಸಗಳನ್ನು ಕೂಡ ಹೊರಗಿಡುತ್ತಿವೆ," ಎಂದು ಚುನಾವಣಾ ಆಯೋಗದ ತಾಂತ್ರಿಕ ವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Read More
Next Story