
Lalu Prasad Yadav| ಲಾಲುಗೆ ಬಿಗ್ ಶಾಕ್! 'ಉದ್ಯೋಗಕ್ಕಾಗಿ ಭೂಮಿ' ಹಗರಣದ ಸಿಬಿಐ ಎಫ್‌ಐಆರ್ ರದ್ದುಗೊಳಿಸಲು ಸುಪ್ರೀಂ ನಿರಾಕರಣೆ
ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಹಗರಣದ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ 'ಕೆಲಸಕ್ಕಾಗಿ ಭೂಮಿ' ಹಗರಣಕ್ಕೆ ಸಂಬಂಧಿಸಿದ ಸಿಬಿಐ ಎಫ್‌ಐಆರ್ ಅನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. ಆದರೆ, 77 ವರ್ಷದ ಲಾಲು ಪ್ರಸಾದ್ ಯಾದವ್ ಅವರ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ವಿಚಾರಣಾ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.
ತಾಂತ್ರಿಕ ಅಂಶಗಳ ಚರ್ಚೆಗೆ ಅವಕಾಶ
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ರ ಅನ್ವಯ, ತನಿಖೆಗೆ ಪೂರ್ವಾನುಮತಿ ಪಡೆಯದ ಕಾರಣ ಈ ಪ್ರಕರಣ ಅಸಿಂಧು ಎಂಬ ಲಾಲು ಯಾದವ್ ಅವರ ವಾದವನ್ನು ಮುಂದಿನ ವಿಚಾರಣೆಗಳಲ್ಲಿ ಮಂಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇದಕ್ಕೂ ಮೊದಲು ದೆಹಲಿ ಹೈಕೋರ್ಟ್ ಕೂಡ ಸಿಬಿಐ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿ, ಸಿಬಿಐ ಕ್ರಮ ಕಾನೂನುಬದ್ಧವಾಗಿದೆ ಎಂದು ಹೇಳಿತ್ತು.
ಏನಿದು ಹಗರಣ?
2004 ರಿಂದ 2009 ರವರೆಗೆ ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಮಧ್ಯಪ್ರದೇಶದ ಜಬಲ್‌ಪುರದ ಪಶ್ಚಿಮ ಮಧ್ಯ ವಲಯದಲ್ಲಿ ಗ್ರೂಪ್-ಡಿ ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿತ್ತು. ಈ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಹಣದ ಬದಲು ಅವರ ಅಥವಾ ಅವರ ಕುಟುಂಬದ ಹೆಸರಿನಲ್ಲಿದ್ದ ಭೂಮಿಯನ್ನು ಲಾಲು ಯಾದವ್ ಅವರ ಕುಟುಂಬ ಸದಸ್ಯರು ಅಥವಾ ಆಪ್ತರ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಲಾಗಿತ್ತು ಎಂಬುದು ಸಿಬಿಐ ಆರೋಪವಾಗಿದೆ.
ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ. ಕಳೆದ ಜನವರಿ 9 ರಂದು ವಿಚಾರಣಾ ನ್ಯಾಯಾಲಯವು ಲಾಲು ಕುಟುಂಬ ಸೇರಿದಂತೆ 41 ಆರೋಪಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲು ಆದೇಶಿಸಿತ್ತು. ಒಟ್ಟು 103 ವ್ಯಕ್ತಿಗಳಲ್ಲಿ ಐವರು ಈಗಾಗಲೇ ಮರಣ ಹೊಂದಿದ್ದಾರೆ.
ಹೈಕೋರ್ಟ್‌ನಲ್ಲೂ ಹಿನ್ನಡೆಯಾಗಿತ್ತು
ಮೊದಲಿಗೆ ತಮ್ಮ ವಿರುದ್ಧ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಲಾಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅವರಿಗೆ ಭಾರೀ ಹಿನ್ನಡೆಯಾಗಿತ್ತು. ನ್ಯಾಯಮೂರ್ತಿ ರವೀಂದ್ರ ದುಡೇಜಾ ಅವರ ಪೀಠವು ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಇದರಲ್ಲಿ ಯಾವುದೇ ಅಂಶಗಳಿಲ್ಲ ಎಂದು ತೀರ್ಪು ನೀಡಿತ್ತು.
ಲಾಲೂ ವಾದವೇನಿತ್ತು?
2022, 2023 ಮತ್ತು 2024 ರಲ್ಲಿ ಸಿಬಿಐ ಸಲ್ಲಿಸಿದ ಮೂರು ಚಾರ್ಜ್ ಶೀಟ್‌ಗಳನ್ನು ರದ್ದುಗೊಳಿಸುವಂತೆ ಲಾಲು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಬಿಐ ತನಿಖೆ ಮತ್ತು ಚಾರ್ಜ್‌ಶೀಟ್‌ಗಳು ಕಾನೂನುಬದ್ದವಾಗಿ ಸರಿಯಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ತನಿಖೆ ನಡೆಸಲು ಸಿಬಿಐ ಪೂರ್ವಾನುಮತಿ ಪಡೆದಿಲ್ಲ ಎಂದು ಲಾಲು ಪ್ರಸಾದ್ ಪರ ವಕೀಲರು ವಾದಿಸಿದ್ದರು. ಆದರೆ, ಸಿಬಿಐ ಅಗತ್ಯ ಅನುಮತಿಯನ್ನು ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಈ ವಾದವನ್ನು ತಳ್ಳಿಹಾಕಿತು.

