
ಉದ್ಯೋಗಕ್ಕಾಗಿ ಭೂಮಿ ಹಗರಣ- ಲಾಲುಗೆ ಬಿಗ್ ಶಾಕ್! FIR ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ
Lalu Prasad Yadav| ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಎಫ್‌ಐಆರ್ ರದ್ದು ಕೋರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
'ಉದ್ಯೋಗಕ್ಕಾಗಿ ಭೂಮಿ' (Land-for-jobs) ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖಂಡ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಭಾರಿ ಹಿನ್ನಡೆ ನೀಡಿದೆ. ಈ ಹಗರಣದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್ (FIR) ಅನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ರವೀಂದ್ರ ದುಡೇಜಾ ಅವರ ಪೀಠವು ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಇದರಲ್ಲಿ ಯಾವುದೇ "ಅಂಶಗಳಿಲ್ಲ" ಎಂದು ತೀರ್ಪು ನೀಡಿದೆ.
ಲಾಲೂ ವಾದವೇನಿತ್ತು?
2022, 2023 ಮತ್ತು 2024 ರಲ್ಲಿ ಸಿಬಿಐ ಸಲ್ಲಿಸಿದ ಮೂರು ಚಾರ್ಜ್‌ಶೀಟ್‌ಗಳನ್ನು ರದ್ದುಗೊಳಿಸುವಂತೆ ಲಾಲು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಬಿಐ ತನಿಖೆ ಮತ್ತು ಚಾರ್ಜ್‌ಶೀಟ್‌ಗಳು ಕಾನೂನುಬದ್ಧವಾಗಿ ಸರಿಯಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ತನಿಖೆ ನಡೆಸಲು ಸಿಬಿಐ ಪೂರ್ವಾನುಮತಿ ಪಡೆದಿಲ್ಲ ಎಂದು ಲಾಲು ಪ್ರಸಾದ್ ಪರ ವಕೀಲರು ವಾದಿಸಿದ್ದರು. ಆದರೆ, ಸಿಬಿಐ ಅಗತ್ಯ ಅನುಮತಿಯನ್ನು ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಈ ವಾದವನ್ನು ತಳ್ಳಿಹಾಕಿತು.
ಏನಿದು 'ಉದ್ಯೋಗಕ್ಕಾಗಿ ಭೂಮಿ' ಹಗರಣ?
2004 ರಿಂದ 2009 ರವರೆಗೆ ಲಾಲು ಪ್ರಸಾದ್ ಯಾದವ್ ಕೇಂದ್ರ ರೈಲ್ವೆ ಸಚಿವರಾಗಿದ್ದ ಕಾಲದಲ್ಲಿ ನಡೆದಿದೆ ಎನ್ನಲಾದ ಹಗರಣವಿದು. ಮಧ್ಯಪ್ರದೇಶದ ಜಬಲ್ಪುರ ಮೂಲದ ಪಶ್ಚಿಮ ಮಧ್ಯ ರೈಲ್ವೆ ವಲಯದಲ್ಲಿ ಗ್ರೂಪ್-ಡಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಪ್ರತಿಯಾಗಿ, ಅಭ್ಯರ್ಥಿಗಳು ಅಥವಾ ಅವರ ಕುಟುಂಬದವರಿಂದ ಲಾಲು ಕುಟುಂಬಸ್ಥರು ಮತ್ತು ಆಪ್ತರ ಹೆಸರಿಗೆ ಭೂಮಿಯನ್ನು "ಉಡುಗೊರೆ ಅಥವಾ ವರ್ಗಾವಣೆ" ಮಾಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಇಬ್ಬರು ಪುತ್ರಿಯರು ಮತ್ತು ಕೆಲವು ರೈಲ್ವೆ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಪ್ರಸ್ತುತ 77 ವರ್ಷದ ಲಾಲು ಮತ್ತು ಇತರರು ಜಾಮೀನಿನ ಮೇಲೆ ಹೊರಗಿದ್ದಾರೆ.
ನ್ಯಾಯಾಲಯದ ಇತರ ಪ್ರಮುಖ ಅಂಶಗಳು
ಕಳೆದ ಜನವರಿ 9 ರಂದು ವಿಚಾರಣಾ ನ್ಯಾಯಾಲಯವು ಲಾಲು ಕುಟುಂಬ ಸೇರಿದಂತೆ 41 ಆರೋಪಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲು ಆದೇಶಿಸಿತ್ತು. ಒಟ್ಟು 103 ವ್ಯಕ್ತಿಗಳಲ್ಲಿ ಐವರು ಈಗಾಗಲೇ ಮರಣ ಹೊಂದಿದ್ದಾರೆ.
ಲಾಲೂ ಅವರ ಅಂದಿನ ವೈಯಕ್ತಿಕ ಕಾರ್ಯದರ್ಶಿ ಆರ್.ಕೆ. ಮಹಾಜನ್ ಅವರು ಅಭ್ಯರ್ಥಿಗಳ ಪಟ್ಟಿಯನ್ನು ರೈಲ್ವೆ ಅಧಿಕಾರಿಗಳಿಗೆ ರವಾನಿಸುವ ಮೂಲಕ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಅಲ್ಲದೆ, ತನಿಖಾ ಸಮಯದಲ್ಲಿ ಸಂಗ್ರಹಿಸಲಾದ ಕೆಲವು ದಾಖಲೆಗಳನ್ನು ತಮಗೆ ನೀಡಬೇಕೆಂದು ರಾಬ್ರಿ ದೇವಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.
ದೆಹಲಿ ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿರುವುದರಿಂದ, ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಮೇಲೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾದಂತಾಗಿದೆ. ಪ್ರಕರಣದ ವಿಚಾರಣೆ ಈಗ ಕೆಳ ನ್ಯಾಯಾಲಯದಲ್ಲಿ ಮುಂದುವರಿಯಲಿದೆ.

