
ಮೊಘಲ್ ದೊರೆ ಬಾಬರ್
ಮಸೀದಿಗಳಿಗೆ 'ಬಾಬರ್' ಹೆಸರಿಡದಂತೆ ಕೋರಿದ್ದ IPL ವಜಾ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ದೇಶದಾದ್ಯಂತ ಬಾಬರ್, ಬಾಬರಿ ಮಸೀದಿ ಅಥವಾ ಆ ಹೆಸರನ್ನು ಹೋಲುವ ಇತರೆ ಯಾವುದೇ ರೂಪಾಂತರದ ಹೆಸರಿನಲ್ಲಿ ಮಸೀದಿಗಳ ನಿರ್ಮಾಣ ಅಥವಾ ನಾಮಕರಣ ಮಾಡುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.
ದೇಶದ ಯಾವುದೇ ಮಸೀದಿಗಳು ಅಥವಾ ಧಾರ್ಮಿಕ ಕಟ್ಟಡಗಳಿಗೆ ಮೊಘಲ್ ದೊರೆ 'ಬಾಬರ್' ಅಥವಾ 'ಬಾಬರಿ' ಎಂದು ನಾಮಕರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ದೇವಕೀನಂದನ್ ಅಲಿಯಾಸ್ ದೇವಕಿ ನಂದನ್ ಪಾಂಡೆ ಎಂಬುವವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿದ ಪೀಠವು, ಇಂತಹ ವಿಷಯಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಸಮ್ಮತಿ ಸೂಚಿಸಿತು. ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸುವ ಸ್ಪಷ್ಟ ಒಲವು ತೋರಿದ ಹಿನ್ನೆಲೆಯಲ್ಲಿ, ಅರ್ಜಿದಾರರು ಬಳಿಕ ತಮ್ಮ ಮನವಿಯನ್ನು ವಾಪಸ್ ಪಡೆದುಕೊಂಡರು.
ಆಕ್ರಮಣಕಾರನ ಹೆಸರು ಬೇಡವೆಂದಿದ್ದ ಅರ್ಜಿದಾರರು
ವಿಚಾರಣೆ ವೇಳೆ ತಮ್ಮ ವಾದ ಮಂಡಿಸಿದ ಅರ್ಜಿದಾರರು, ಐತಿಹಾಸಿಕ ಹಿನ್ನೆಲೆಯನ್ನು ಉಲ್ಲೇಖಿಸಿದ್ದರು. "ಭಾರತದ ಇತಿಹಾಸದಲ್ಲಿ ಬಾಬರ್ ಒಬ್ಬ ಆಕ್ರಮಣಕಾರ. ಹೀಗಾಗಿ, ನಮ್ಮ ದೇಶದ ಮೇಲೆ ದಾಳಿ ಮಾಡಿ, ಆಕ್ರಮಣಕಾರನಾಗಿ ಬಂದಂತಹ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಹೊಸ ಕಟ್ಟಡ, ರಚನೆ ಅಥವಾ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಬಾರದು ಮತ್ತು ಆತನ ಹೆಸರನ್ನು ದೇಶದ ಯಾವುದೇ ಕಟ್ಟಡಗಳಿಗೆ ನಾಮಕರಣ ಮಾಡಬಾರದು" ಎಂದು ಅರ್ಜಿದಾರರಾದ ದೇವಕಿ ನಂದನ್ ಪಾಂಡೆ ನ್ಯಾಯಾಲಯದ ಮುಂದೆ ಬಲವಾಗಿ ಪ್ರತಿಪಾದಿಸಿದ್ದರು.
ಸರ್ಕಾರಗಳಿಗೆ ನಿರ್ದೇಶನ ನೀಡಲು ಕೋರಿದ್ದ ಮನವಿ
ದೇಶದಾದ್ಯಂತ ಬಾಬರ್, ಬಾಬರಿ ಮಸೀದಿ ಅಥವಾ ಆ ಹೆಸರನ್ನು ಹೋಲುವ ಇತರೆ ಯಾವುದೇ ರೂಪಾಂತರದ ಹೆಸರಿನಲ್ಲಿ ಮಸೀದಿಗಳ ನಿರ್ಮಾಣ, ಸ್ಥಾಪನೆ ಅಥವಾ ನಾಮಕರಣ ಮಾಡುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಕ್ತ ನಿರ್ದೇಶನ (Guidelines) ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಆದರೆ, ಇಂತಹ ಯಾವುದೇ ಮಾರ್ಗಸೂಚಿ ಅಥವಾ ನಿರ್ದೇಶನಗಳನ್ನು ಸರ್ಕಾರಗಳಿಗೆ ನೀಡಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಲಿಲ್ಲ.

