
'ಡಿಜಿಟಲ್ ಅರೆಸ್ಟ್' ಬ್ರೇಕ್: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ, ಬಲಿಪಶುಗಳಿಗೆ ಪರಿಹಾರ ನೀಡಲು ಸೂಚನೆ
ಗೃಹ ಸಚಿವಾಲಯ ಆರ್‌ಬಿಐ, ಬ್ಯಾಂಕ್‌ಗಳು ಮತ್ತು ದೂರಸಂಪರ್ಕ ಇಲಾಖೆಯೊಂದಿಗೆ ಸಮಾಲೋಚಿಸಿ, ಮುಂದಿನ 4 ವಾರಗಳೊಳಗೆ ಕರಡು ಒಪ್ಪಂದವನ್ನು ಸಿದ್ಧಪಡಿಸಬೇಕೆಂದು ಸುಪ್ರೀಂ ಕೋರ್ಟ್ ಗಡುವು ನೀಡಿದೆ.
ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮತ್ತು ಜನರನ್ನು ಸುಲಿಗೆ ಮಾಡುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಹಗರಣಗಳನ್ನು ತಡೆಗಟ್ಟಲು ಸಮಗ್ರವಾದ 'ಪ್ರಮಾಣಿತ ಕಾರ್ಯವಿಧಾನ' ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಫೆ. 9) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಹಗರಣಗಳನ್ನು ಕೇವಲ ವಂಚನೆ ಎನ್ನುವಂತಿಲ್ಲ, ಇವು "ಹಗಲು ದರೋಡೆ" ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ. ಸೈಬರ್ ವಂಚಕರು ಇದುವರೆಗೆ ಬರೋಬ್ಬರಿ 54,000 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದ್ದು, ಈ ಮೊತ್ತವು ಹಲವು ಚಿಕ್ಕ ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತಲೂ ಹೆಚ್ಚಾಗಿದೆ ಎಂದು ಗಮನ ಸೆಳೆದಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ವಿಚಾರಣೆ ನಡೆಸಿತು. ಗೃಹ ಸಚಿವಾಲಯವು ಆರ್‌ಬಿಐ, ಬ್ಯಾಂಕ್‌ಗಳು ಮತ್ತು ದೂರಸಂಪರ್ಕ ಇಲಾಖೆಯೊಂದಿಗೆ ಸಮಾಲೋಚಿಸಿ, ಮುಂದಿನ 4 ವಾರಗಳೊಳಗೆ ಕರಡು ಒಪ್ಪಂದವನ್ನು ಸಿದ್ಧಪಡಿಸಬೇಕೆಂದು ಕೋರ್ಟ್ ಗಡುವು ನೀಡಿದೆ.
ಸಂತ್ರಸ್ತರಿಗೆ ಪರಿಹಾರ ನೀಡಿ
ಸೈಬರ್ ವಂಚನೆಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯವಿಧಾನವನ್ನು ರೂಪಿಸಲು ಆರ್‌ಬಿಐ, ದೂರಸಂಪರ್ಕ ಇಲಾಖೆ ಮತ್ತು ಇತರ ಏಜೆನ್ಸಿಗಳು ಜಂಟಿ ಸಭೆ ನಡೆಸಬೇಕು. ಪರಿಹಾರ ನೀಡುವ ವಿಷಯದಲ್ಲಿ "ಪ್ರಾಯೋಗಿಕ ಮತ್ತು ಉದಾರ" ಮನೋಭಾವ ಹೊಂದಿರಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಬ್ಯಾಂಕ್‌ಗಳಿಗೆ ತಪರಾಕಿ
ಬ್ಯಾಂಕ್‌ಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ, "ನಿವೃತ್ತರು ಅಥವಾ ಸಣ್ಣ ಉಳಿತಾಯಗಾರರ ಖಾತೆಗಳಿಂದ ಅವರ ಎಂದಿನ ವಹಿವಾಟು ಮೀರಿದ ಬೃಹತ್ ಮೊತ್ತದ ಹಣ ವರ್ಗಾವಣೆಯಾಗುವಾಗ ನಿಮ್ಮ ಎಐ ತಂತ್ರಜ್ಞಾನ ಯಾಕೆ ಎಚ್ಚರಿಕೆ ನೀಡುವುದಿಲ್ಲ?" ಎಂದು ಪ್ರಶ್ನಿಸಿದರು. ಬ್ಯಾಂಕ್‌ಗಳು ಕೇವಲ "ವ್ಯಾಪಾರ ಮನಸ್ಥಿತಿ"ಯಲ್ಲಿ ಕಾರ್ಯನಿರ್ವಹಿಸಬಾರದು ಎಂದು ಎಚ್ಚರಿಸಿದರು.
ಸಿಬಿಐ ತನಿಖೆಗೆ ಆದೇಶ
'ಡಿಜಿಟಲ್ ಅರೆಸ್ಟ್' ಪ್ರಕರಣಗಳನ್ನು ಗುರುತಿಸಿ ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಲಾಗಿದ್ದು, ಇದಕ್ಕಾಗಿ ದೆಹಲಿ ಮತ್ತು ಗುಜರಾತ್ ಸರ್ಕಾರಗಳಿಂದ ಅಗತ್ಯ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ.
ಏನಿದು 'ಡಿಜಿಟಲ್ ಅರೆಸ್ಟ್'?
ವಂಚಕರು ಪೊಲೀಸ್, ಸಿಬಿಐ ಅಥವಾ ಇತರೆ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿ, "ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಅಥವಾ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ" ಎಂದು ಬೆದರಿಸುತ್ತಾರೆ. ಬಂಧನದ ಭಯ ಹುಟ್ಟಿಸಿ, ಆನ್‌ಲೈನ್ ಮೂಲಕವೇ ವಿಚಾರಣೆ ನಡೆಸುವ ನಾಟಕವಾಡಿ ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚಿಸುತ್ತಾರೆ.

