Euthanasia Case| 13 ವರ್ಷಗಳಿಂದ ಕೋಮಾದಲ್ಲಿ ಹರೀಶ್‌ ರಾಣಾಗೆ ದಯಾಮರಣ- ಸುಪ್ರೀಂ ಮಹತ್ವದ ತೀರ್ಪು
x
ಹರೀಶ್ ರಾಣಾಗೆ ದಯಾಮರಣ ನೀಡಿ ತೀರ್ಪು

Euthanasia Case| 13 ವರ್ಷಗಳಿಂದ ಕೋಮಾದಲ್ಲಿ ಹರೀಶ್‌ ರಾಣಾಗೆ ದಯಾಮರಣ- ಸುಪ್ರೀಂ ಮಹತ್ವದ ತೀರ್ಪು

2013 ರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹರೀಶ್ ರಾಣಾ ಅವರ ಜೀವ ರಕ್ಷಣಾ ವ್ಯವಸ್ಥೆ ಹಿಂಪಡೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನಿಷ್ಕ್ರಿಯ ದಯಾಮರಣದ ನಿಯಮಗಳ ಬಗ್ಗೆ ಕೇಂದ್ರಕ್ಕೆ ಕೋರ್ಟ್ ನೀಡಿದ ಸೂಚನೆ ಇಲ್ಲಿದೆ.


ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ 31 ವರ್ಷದ ಹರೀಶ್ ರಾಣಾ ಅವರ ಜೀವ ರಕ್ಷಣಾ ವ್ಯವಸ್ಥೆಯನ್ನು ತೆಗೆಯಲು ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ. ಪೋಷಕರ ಸುದೀರ್ಘ ಹೋರಾಟ ಮತ್ತು ಮಗನ ಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯ, 'ನಿಷ್ಕ್ರಿಯ ದಯಾಮರಣ'ಕ್ಕೆ (Passive Euthanasia) ಹಸಿರು ನಿಶಾನೆ ತೋರಿಸಿದೆ.

ಘಟನೆಯ ಹಿನ್ನೆಲೆ

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ, 2013ರಲ್ಲಿ ತಾವು ಉಳಿದುಕೊಂಡಿದ್ದ ಪಿಜಿಯ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಂದಿನಿಂದ ಅವರು ಹಾಸಿಗೆ ಹಿಡಿದಿದ್ದು, ಉಸಿರಾಟ ಮತ್ತು ಆಹಾರಕ್ಕಾಗಿ ಪೈಪ್‌ಗಳ ಸಹಾಯ ಪಡೆಯುತ್ತಿದ್ದರು. ಕಳೆದ 13 ವರ್ಷಗಳಲ್ಲಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಮಗನ ಪರಿಸ್ಥಿತಿಯನ್ನು ನೋಡಲಾರದ ಪೋಷಕರು ಆತನಿಗೆ ದಯಾಮರಣ ಕರುಣಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿರಲಿಲ್ಲ.

ಕೋರ್ಟ್‌ ಹೇಳಿದ್ದೇನು?

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ತೀರ್ಪು ನೀಡುವಾಗ ವಿಲಿಯಂ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ನಾಟಕದ ಪ್ರಸಿದ್ಧ ಸಾಲು "ಬದುಕಿರಬೇಕೇ ಅಥವಾ ಬೇಡವೇ?" ಎಂಬುದನ್ನು ಉಲ್ಲೇಖಿಸಿತು. "ರೋಗಿಯನ್ನು ಗುಣಪಡಿಸುವುದು ವೈದ್ಯರ ಕರ್ತವ್ಯ ನಿಜ, ಆದರೆ ರೋಗಿ ಚೇತರಿಸಿಕೊಳ್ಳುವ ಯಾವುದೇ ಭರವಸೆ ಇಲ್ಲದಿದ್ದಾಗ ಆ ಕರ್ತವ್ಯವು ಕೊನೆಗೊಳ್ಳುತ್ತದೆ" ಎಂದು ನ್ಯಾಯಾಲಯ ಹೇಳಿದೆ. ಹರೀಶ್ ರಾಣಾ ಅವರನ್ನು ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಅವರ ಘನತೆಗೆ ಧಕ್ಕೆಯಾಗದಂತೆ ವೈದ್ಯಕೀಯ ನೆರವನ್ನು ಹಿಂಪಡೆಯಲು ಸೂಚಿಸಲಾಗಿದೆ.

ಪೋಷಕರ ನಿಸ್ವಾರ್ಥ ಸೇವೆಗೆ ಶ್ಲಾಘನೆ

ವಯಸ್ಸಾದ ಪೋಷಕರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಮಗನನ್ನು ಸಾಕಿ ಸಲಹಿದ್ದನ್ನು ನ್ಯಾಯಾಲಯ ಕೊಂಡಾಡಿದೆ. "ಪ್ರೀತಿಸುವುದು ಎಂದರೆ ಕತ್ತಲೆಯ ಸಮಯದಲ್ಲಿಯೂ ಜೊತೆಗಿರುವುದು. ನಮ್ಮ ಈ ನಿರ್ಧಾರವು ಕೇವಲ ತರ್ಕಕ್ಕೆ ಸಂಬಂಧಿಸಿದ್ದಲ್ಲ, ಇದು ಪ್ರೀತಿ, ಜೀವನ ಮತ್ತು ನಷ್ಟಕ್ಕೆ ಸಂಬಂಧಿಸಿದ್ದು" ಎಂದು ಪೀಠವು ಭಾವುಕವಾಗಿ ನುಡಿಯಿತು.

ಭಾರತದಲ್ಲಿ ದಯಾಮರಣದ ನಿಯಮ

ಭಾರತದಲ್ಲಿ 2011ರ 'ಅರುಣಾ ಶಾನ್‌ಬಾಗ್' ಪ್ರಕರಣದ ತೀರ್ಪಿನ ನಂತರ ಅಸಾಧಾರಣ ಸಂದರ್ಭಗಳಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ನೀಡಲಾಗಿದೆ. ಆದರೆ, ಇದಕ್ಕಾಗಿ ಸುಪ್ರೀಂ ಕೋರ್ಟ್ ನೇಮಿಸುವ ವೈದ್ಯಕೀಯ ಮಂಡಳಿಯ ಅನುಮತಿ ಕಡ್ಡಾಯವಾಗಿದೆ. ಇದೇ ಸಂದರ್ಭದಲ್ಲಿ, ನಿಷ್ಕ್ರಿಯ ದಯಾಮರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನು ರೂಪಿಸುವ ಬಗ್ಗೆ ಕೇಂದ್ರ ಸರ್ಕಾರ ಆಲೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

Read More
Next Story