Dont dare question judicial officers: Supreme Court warns West Bengal government, Election Commission
x

ಸುಪ್ರೀಂ ಕೋರ್ಟ್

'ನ್ಯಾಯಾಂಗ ಅಧಿಕಾರಿಗಳನ್ನು ಪ್ರಶ್ನಿಸುವ ಸಾಹಸ ಬೇಡ': ಪಶ್ಚಿಮ ಬಂಗಾಳ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ವಿಶೇಷ ಪರಿಷ್ಕರಣೆ ಪ್ರಕರಣಗಳಲ್ಲಿ ಮೇಲ್ಮನವಿ ಆಲಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ರಚಿಸುವಂತೆ ಸುಪ್ರೀಂ ಆದೇಶ ನೀಡಿದ್ದು, ಕೈಬಿಡಲಾದ ಮತದಾರರ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳಿಗೆ ಬೆಂಬಲ ನೀಡುವಂತೆ ಸೂಚನೆ


Click the Play button to hear this message in audio format

ಪಶ್ಚಿಮ ಬಂಗಾಳದಲ್ಲಿ ನಡೆದ 'ವಿಶೇಷ ಸಮಗ್ರ ಪರಿಷ್ಕರಣೆ' ಪ್ರಕ್ರಿಯೆಯಲ್ಲಿ ಕೈಬಿಡಲಾದ ಮತದಾರರ ಪರಿಶೀಲನೆಗೆ ನೇಮಕಗೊಂಡಿರುವ ನ್ಯಾಯಾಂಗ ಅಧಿಕಾರಿಗಳ (Judicial Officers) ಕಾರ್ಯವೈಖರಿಯನ್ನು ಪ್ರಶ್ನಿಸಿದ ಪಶ್ಚಿಮ ಬಂಗಾಳ ಸರ್ಕಾರ, ಭಾರತೀಯ ಚುನಾವಣಾ ಆಯೋಗ ಹಾಗೂ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ಎಚ್ಚರಿಕೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಮತದಾರರ ಪಟ್ಟಿಯಿಂದ ಕೈಬಿಡಲಾದವರ ಮೇಲ್ಮನವಿಗಳನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಂಗ ಅಧಿಕಾರಿಗಳು ಈಗಾಗಲೇ ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ, ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿತು.

"ನ್ಯಾಯಾಂಗ ಅಧಿಕಾರಿಗಳನ್ನು ಪ್ರಶ್ನಿಸುವ ಸಾಹಸಕ್ಕೆ ಕೈಹಾಕಬೇಡಿ! ಅವರಿಂದ ನೀವು ಇನ್ನೆಷ್ಟು ತ್ಯಾಗವನ್ನು ನಿರೀಕ್ಷಿಸುತ್ತೀರಿ? ಪಶ್ಚಿಮ ಬಂಗಾಳದಲ್ಲಿ ಕೈಬಿಡಲಾದ ಮತದಾರರ ಪ್ರಕರಣಗಳ ವಿಚಾರಣೆಗಾಗಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ! ಇದನ್ನು ನಾನು ಸಹಿಸುವುದಿಲ್ಲ!" ಎಂದು ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ, ಮತದಾರರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ವ್ಯಕ್ತಪಡಿಸಿರುವ ಕಳವಳಗಳನ್ನು ಬಗೆಹರಿಸುವಂತೆ ಚುನಾವಣಾ ಆಯೋಗಕ್ಕೆ ಕೋರ್ಟ್ ಸೂಚಿಸಿತು.

ಅಧಿಕಾರಿಗಳಿಗೆ ಬೆಂಬಲ ನೀಡಲು ನಿರ್ದೇಶನ

ಕೋರ್ಟ್ ನೇಮಿತ ನ್ಯಾಯಾಂಗ ಅಧಿಕಾರಿಗಳ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹೊಸ ಅರ್ಜಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅಧಿಕಾರಿಗಳ ತೀರ್ಪುಗಳನ್ನು ಗೌರವಿಸಬೇಕು ಎಂದು ಸ್ಪಷ್ಟಪಡಿಸಿತು. ಈ ಮೇಲ್ಮನವಿಗಳನ್ನು ನಿಭಾಯಿಸುತ್ತಿರುವ ನ್ಯಾಯಾಂಗ ಅಧಿಕಾರಿಗಳಿಗೆ ಅಗತ್ಯ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಬೆಂಬಲವನ್ನು ಒದಗಿಸುವಂತೆ ಚುನಾವಣಾ ಆಯೋಗ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಎರಡೂ ಕಡೆಯವರ ನಡವಳಿಕೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಪೀಠ, "ಎರಡೂ ಕಡೆಯವರ ಪ್ರಾಮಾಣಿಕತೆಯ ಬಗ್ಗೆ ನಮಗೆ ಅನುಮಾನವಿದೆ" ಎಂದು ಹೇಳಿತು. ಅಲ್ಲದೆ, ನ್ಯಾಯಾಂಗ ಅಧಿಕಾರಿಗಳನ್ನು ಪ್ರಶ್ನಿಸಿ ಹೊಸ ಅರ್ಜಿ ಸಲ್ಲಿಸಿದ್ದು ಯಾರು ಎಂದು ಸ್ಪಷ್ಟಪಡಿಸುವಂತೆ ಸೂಚಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ವಕೀಲ ಕಲ್ಯಾಣ್ ಬ್ಯಾನರ್ಜಿ, ಇಂಥದ್ದೊಂದು ಹೊಸ ಅರ್ಜಿಯ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದರು.

ಮೇಲ್ಮನವಿ ನ್ಯಾಯಮಂಡಳಿ ರಚನೆಗೆ ಆದೇಶ

ಸ್ವತಂತ್ರ ಮೇಲ್ಮನವಿ ವ್ಯವಸ್ಥೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ, ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಕೈಬಿಡಲಾದ ಮತದಾರರ ಮೇಲ್ಮನವಿಗಳನ್ನು ಆಲಿಸಲು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನೊಳಗೊಂಡ 'ಮೇಲ್ಮನವಿ ನ್ಯಾಯಮಂಡಳಿ'ಗಳನ್ನುರಚಿಸುವಂತೆ ಸುಪ್ರೀಂ ಕೋರ್ಟ್ ಹೊಸ ಆದೇಶ ಹೊರಡಿಸಿದೆ. ನ್ಯಾಯಾಂಗ ಅಧಿಕಾರಿಗಳಿಂದ ತಿರಸ್ಕೃತಗೊಂಡ ಮತದಾರರು ಈ ಮಂಡಳಿಯನ್ನು ಸಂಪರ್ಕಿಸಬಹುದು.

ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಆರೋಪ-ಪ್ರತ್ಯಾರೋಪಗಳ ನಡುವೆ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನ ನ್ಯಾಯಾಂಗ ಅಧಿಕಾರಿಗಳನ್ನು ಎಸ್‌ಐಆರ್ ಹಕ್ಕುಗಳ ವಿಚಾರಣೆಗೆ ನಿಯೋಜಿಸಲಾಗಿತ್ತು. ಇದೀಗ ಈ ನ್ಯಾಯಾಂಗ ಅಧಿಕಾರಿಗಳು ನೀಡುವ ಆದೇಶಗಳನ್ನು ಯಾವುದೇ ಕಾರ್ಯಾಂಗ ಅಥವಾ ಆಡಳಿತಾತ್ಮಕ ಪ್ರಾಧಿಕಾರದ ಮುಂದೆ ಪ್ರಶ್ನಿಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಮೇಲ್ಮನವಿ ಪ್ರಕ್ರಿಯೆ ಹೇಗೆ?

ಮೇಲ್ಮನವಿ ನ್ಯಾಯಮಂಡಳಿಗಳ ಸದಸ್ಯರಾಗಿ ಸೇವೆ ಸಲ್ಲಿಸಲು ಕಲ್ಕತ್ತಾ ಹೈಕೋರ್ಟ್ ಅಥವಾ ನೆರೆಯ ರಾಜ್ಯಗಳ ಕೆಲವು ಮಾಜಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಇಬ್ಬರು ಅಥವಾ ಮೂವರು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ವಿನಂತಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅವರ ಹೆಸರುಗಳನ್ನು ಶಿಫಾರಸು ಮಾಡಿದ ನಂತರ, ಚುನಾವಣಾ ಆಯೋಗವು ಅವರನ್ನು 'ಮೇಲ್ಮನವಿ ನ್ಯಾಯಮಂಡಳಿಗಳು' ಎಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಬೇಕು.

10 ಲಕ್ಷಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಈಗಾಗಲೇ ಇತ್ಯರ್ಥಗೊಂಡಿರುವ ವ್ಯಕ್ತಿಗಳ ಪೂರಕ ಪಟ್ಟಿಗಳ ಪ್ರಕಟಣೆ ಕುರಿತು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸೂಕ್ತ ನಿರ್ದೇಶನಗಳಿಗಾಗಿ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಲು ಸುಪ್ರೀಂ ಕೋರ್ಟ್ ಎರಡೂ ಕಡೆಯವರಿಗೆ ಸ್ವಾತಂತ್ರ್ಯ ನೀಡಿದೆ.

Read More
Next Story